
ಆಧುನೀಕರಣ ಎಂಬ ಹೊದಿಕೆಯಿಂದ ನಮ್ಮ ಹಳ್ಳಿಗಳೆಲ್ಲ ಇಂದು ನಗರಗಳಾಗುವತ್ತ ಹೆಜ್ಜೆ ಇಟ್ಟಿವೆ. ನಾನು ಬಾಲ್ಯವನ್ನು ಕಳೆದಿದ್ದು ಕುಂಬಾರವಾಡ ಎಂಬ ಪುಟ್ಟ ಮಾದರಿ ಹಳ್ಳಿಯಲ್ಲಿ. ಆಗಿನ ಕಾಲದಲ್ಲಿ ಅಂದರೆ 90 ರ ದಶಕದಲ್ಲಿ ನಮಗೆ ಮೂಲಭೂತ ಸೌಕರ್ಯಗಳಿಗೇನೂ ಕಡಿಮೆ ಇರಲಿಲ್ಲ. ಆದರೆ ಆದುನಿಕ ತಂತ್ರಜ್ಞಾನಗಳು ತಲುಪಲು ಕೆಲವು ವರ್ಷಗಳೇ ಬೇಕಾಗಿತ್ತು. ಬೇಸಿಗೆ ರಜೆಗೆ ಊರಿಗೆ ಹೋದಾಗ ನಮ್ಮ ವಯಸ್ಸಿನ ಮಕ್ಕಳು WWF, ಟಾಮ್ & ಜೆರ್ರೀ, ಸೋನೀ ಟೀವೀ , ಸೀ ಐ ಡೀ , ಫ್ಯಾಶನ್ ಟೀವೀ ಅಂತೆಲ್ಲ ಮಾತಾಡುತ್ತಿದ್ದರೆ ನಮಗೆ ದೂರದರ್ಶನದ ರಂಗೋಲಿ , ಚಿತ್ರಹಾರ ,ಆಲೀಫ್ ಲೈಲಾ , ಚಂದ್ರಕಾಂತ,ಭಾನುವಾರ 4 ಘಂಟೆಗೆ ಬರುವಹಳೆಯ ಕನ್ನಡ ಸಿನಿಮಾ , ಬಾಲಮಂಗಳದ ಡಿಂಗ ಮತ್ತು ಲಂಬೋದರ ಬಿಟ್ಟರೆ ಬೇರೆ ಏನು ಗೊತ್ತಿರುತ್ತಿರಲಿಲ್ಲ. ಆ ಕ್ಷಣಗಳಲ್ಲಿ ಎಷ್ಟೋ ಸಲ ಊರಿನ (ನಗರದ ) ಶಾಲೆಗಳಿಗೆ ಸೇರಿಕೊಂಡು ಇಲ್ಲೆ ಇದ್ದು ಇವೆಲ್ಲ ಅನುಭವಿಸಬೇಕು ಅನಿಸುತ್ತಿತ್ತು. ಮನುಷ್ಯನ ಆಸೆಗಳೆ ಹೀಗೆ ಅಲ್ಲವೇ ? ಕೇಳಿದ್ದು ಅನಿಸಿದ್ದು ಗಳಿಗೆ ನಮ್ಮತನದ ಅನುಭವವನ್ನು ತೂಕಮಾಡಿದಾಗ ನಮ್ಮ ತಕ್ಕಡಿ ಯಾವಾಗಲೂ ಕೆಳಗೆಯೇ. ತೂಕದ ಮಹತ್ವ ತಿಳಿಯುವುದು ಅದರ ಅರಿವು ಆದಾಗಲೇ … ಭಾರವಿರುವುದೆಲ್ಲ ನಮಗಲ್ಲ ಅಂತ ಮನವರಿಕೆ ಅದಾಗಲೇ.
ಹಳ್ಳಿಯಿಂದ ನಗರಗಳಿಗೆ ಮಾರುಹೋಗಿ ಬದುಕು ಹೊಂದಿಸಿಕೊಳ್ಳುತ್ತಾ ದಿನ ರಾತ್ರಿ ಮಲಗುವಾಗ ಹಳ್ಳಿಯ ನೆನಪಾಗಿ ಮತ್ತೆ ಅಲ್ಲಿ ಹೋಗಿ ಆ ಗಾಳಿಯ ಉಸಿರಾಡಬೇಕು, ಆ ಹಸಿರ ಕಣ್ಣು ತುಂಬಿ ಆಹ್ಲಾದಿಸಬೇಕು, ಆ ನೀರಿನ ರುಚಿಯನ್ನ ಅನುಭವಿಸಬೇಕು ಅಂದುಕೊಂಡಾಗ ಅನಿಸುತ್ತೆ ನಾವೆಷ್ಟು ಅದೃಷ್ಟವಂತರು ಅಂದು. ನಿಸರ್ಗ ಕೊನೆಯ ಗುರು.ಅದರ ಮಡಿಲಲ್ಲಿ ಕಲಿತ ಪಾಟಗಳು ನಮ್ಮ ಜೀವನದ ಅಳವಡಿಕೆಯ ಅವಿಭಾಜ್ಯ ಅಂಗಗಳಾಗಿರುತ್ತವೆ ನಮಗೆ ಗೊತ್ತಿರದೇ…
ಈ ಹಳ್ಳಿಯ ಹುಡಗರು ಇರುತ್ತಾರಲ್ಲಾ… ಅವರು ಎಷ್ಟೇ ಬೆಳೆದು ಯಾವ ಊರಿಗೆ , ದೇಶಕ್ಕೆ ಹೋದರೂ ಅವರ ಕರುಳ ಬಳ್ಳಿ ಆ ಹಳ್ಳಿಯಲ್ಲಿಯೇ ಇರುತ್ತೆ ಅಂತ ನನ್ನ ಅನಿಸಿಕೆ. ಬೆಳವಣಿಗೆ ಪ್ರಕ್ರತಿಯ ನಿಯಮ, ಸ್ಥಾನ ಪಲ್ಲಟ ಅದರ ಕುರುಹು. ಲಾಜಿಕಲೀ ಕಾಲದ ಪರಿವೆಯಿಲ್ಲದೆ ಮನುಷ್ಯ ಎಷ್ಟೇ ಮುಂದೆ ಸಾಗಿದರೂ ಬಂದು ತಲುಪುವುದು ಹೊರಟಲ್ಲಿಗೇ. ಭೂಮಿ ಗೋಳವಾಗಿದೆ ಅಲ್ವಾ ?
ನೇರವಾಗಿ ಸರಿ ದಾರಿಯಲ್ಲಿ ನಡೆಯಬೇಕು ಅಷ್ಟೇ.
ಶೀರ್ಷಿಕೆ ಗೆ ಮತ್ತು ಪೀಟಿಕೆಗೆ ಎತ್ತಣ ಸಂಬಂದವಯ್ಯಾ ಎಂದು ಕೆಲವರಿಗೆ ಅನಿಸಬಹುದು. ಆದರೆ ಒಂದು ಪಾತ್ರದ ಪರಿಚಯ ಶುರುವಾಗಾವುದು ಅದರ ಬಾಲ್ಯದಿಂದ. ಪಾತ್ರಕ್ಕೆ ಬೆಂಗಳೂರು ಎಂಬ ಶಬ್ದ ಮೊದಲು ಕೇಳಿಸಿರುವುದು ಅವರ ಗುರು ರವಿಬೆಳಗೆರೆ ಅವರ ಪತ್ರಿಕೆ ‘ಹಾಯ್ ಬೆಂಗಳೂರು’ ಎಂಬ ಪತ್ರಿಕೆಯಿಂದ. ಅದಾದ ಮೇಲೆ ಪೋಲೀಸ್ ನ್ಯೂಸ್ ಎಂಬ ಪತ್ರಿಕೆಯಲ್ಲೂ ಹಲವು ಬಾರಿ ಓದಿ ಋಣಾತ್ಮಕವಾಗಿ ಚಿಂತಿಸಿದ ಕ್ಷಣಗಳಿವೆ. ಈ ಹಳ್ಳಿ ಹುಡುಗರಿಗೆಲ್ಲ ಬೆಂಗಳೂರು ಅನ್ನುವುದು ಒಂದು ಜಾತ್ರೆ. ಚಿಕ್ಕ ಮಕ್ಕಳಿಗೆಲ್ಲ ಆವಾಗ ತಪೊಕಲ್ಪಿತ ಮಾಯಾ ಬಜ಼ಾರು. ಈ ಪಾತ್ರಕ್ಕೆ ಬೆಂಗಳೂರಿಗೆ ಹೋಗುವ ಅವಕಾಶ ಸಿಕ್ಕಿದ್ದು ಹದಿನೆಂಟರ ವಯಸ್ಸಿನಲ್ಲಿ. ಆ ಪಾತ್ರ ಸ್ವಯಂ ನಾನೇ.
ಈ ಬೆಂಗಳೂರು ಮೊದಲ ಬಾರಿಗೆ ನನ್ನ ಬರಮಾಡಿಕೊಂಡಿದ್ದು, ಬೆಂಗಳೂರಿನಲ್ಲಿ ಕಳೆದ ಮೊದಲ 2 ಘಂಟೆಗಳ ಅನುಭವದ ಕುರಿತು ಬರೆಯುವ ಹಂಬಲ ತುಂಬಾ ದಿನಗಳ ನಂತರ ಈಡೇರಿದೆ. ಅದೇ ಕುಷಿ.
ನನ್ನ ಸೆಕೆಂಡ್ ಪಿಯುಸಿ ಓದುತ್ತಿರುವ ಸಮಯ, ತಮಿಳುನಾಡಿನ ಕಾಂಚೀಪುರಂ ಗೆ 15 ದಿನಗಳ NCC ಕ್ಯಾಂಪ್ ಗೆ ಹೋಗಲು ನಾವೆಲ್ಲ ಕಾತುರರಾಗಿರುವ ಸಮಯ. ನಮ್ಮ ಕಾಲೇಜ್ ಇಂದ ನಾನು, ಸಚಿನ್ , ರಾಜು, ರಂಜು ಹಾಗೂ ಪ್ರತೀಕ್. ಕುಮಟಾದ ಕಾಲೇಜಿನ ಕೆಲವು ವಿಧ್ಯಾರ್ಥಿ ಗಳು ಮತ್ತು ಸಿರಸಿಯ ಹೊಸಮನಿ ಎಂಬ ಅಧ್ಯಾಪಕರೊಂದಿಗೆ ಅಲ್ಲಿಯ ಕೆಲವು ವಿಧ್ಯಾರ್ಥಿಗಳು ನಮ್ಮ ರಾಜ್ಯದ ಪರವಾಗಿ ಅಲ್ಲಿ ನಡೆಯುವ NIC ಕ್ಯಾಂಪ್ ಗೆ ಕರ್ನಾಟಕವನ್ನು ಪ್ರತಿನಿಧಿಸಬೇಕಿತ್ತು. ದಿನಾಂಕವನ್ನು ನಿಗದಿಗೊಳಿಸಿ ನಮಗೆಲ್ಲ ಒಂದು ದಿನ ಸಂಜೆ ಹುಬ್ಬಳ್ಳಿ ರೇಲ್ವೇ ಸ್ಟೇಶನ್ ಅಲ್ಲಿ ಬಂದು ತಲುಪಲು ಹೊಸಮನಿ ಸರ್ ಅವರ ಆಜ್ಞೆಯಾಗಿತ್ತು. ನಾವೆಲ್ಲ ಒಂದು ದಿನ ಮುಂಚಿತವಾಗಿ ಹುಬ್ಬಳ್ಳಿಗೆ ತೆರಳಿ ರೇಲ್ವೇ ಸ್ಟೇಶನ್ ಮುಂದಿನ ಮಾಡರ್ನ್ ಲಾಡ್ಜ್ ನಲ್ಲಿ ರೂಮ್ ಮಾಡಿ ಹುಬ್ಬಳ್ಳಿ ಸುತ್ತಾಡಿ ಮಾಡಿದ್ದು ಜೀವನದ ಮೊದಲ ಸಾಹಸ. ಮರುದಿನ ಹೇಳಿದ ವೇಳೆಗೆ ನಾವೆಲ್ಲ ರೇಲ್ವೇ ಸ್ಟೇಶನ್ ಹೊರಗೆ ಇತರ ವಿಧ್ಯಾರ್ಥಿಗಳು ಹಾಗೂ ಹೊಸಮನಿ ಸರ್ ಬೇಟಿ ಮಾಡಿ ಪರಸ್ಪರ ಪರಿಚಯ ಮಾಡಿಕೊಂಡೆವು. ರಾತ್ರಿ ರಾಣಿ ಚೆನ್ನಮ್ಮ ರೈಲಿನಲ್ಲಿ ಬೆಂಗಳೂರು ಹೋಗಿ ಮರುದಿನ ಸಂಜೆ 7 ಘಂಟೆಗೆ ಬೆಂಗಳೂರಿಂದ ಕಾಂಚೀಪುರಂ ರೈಲಿಗೆ ಹೋಗಬೇಕು ಎಂಬುದು ನಮಗೆ ಆವಾಗಲೇ ಗೊತ್ತಾಗಿದ್ದು ಬೆಂಗಳೂರು ಕಾದಿತ್ತು,ಕರೆದಿತ್ತು ತನ್ನೊಡಲಿಗೆ ಮೊದಲ ಬಾರಿ….
ಅದು ನನ್ನ ಜೀವನದ ಮೊದಲ ರೈಲು ಪ್ರಯಾಣ. ಬೆಂಗಳೂರು ತಲುಪಿದಾಗ ಬೆಳಗಾಗಿತ್ತು. ಹೊಸಮನಿ ಸರ್ ಎಲ್ಲರನ್ನೂ ಕರೆದು ನೀವು ಎಲ್ಲಿ ಬೇಕಾದರೂ ಹೋಗಬಹುದು ಸಂಜೆ 6 ಘಂಟೆಗೆ ಸರಿಯಾಗಿ 1 ನಂಬರ್ ಪ್ಲ್ಯಾಟ್ಫಾರ್ಮ್ ಗೆ ಬನ್ನಿ ಎಂದು ಆದೇಶ ನೀಡಿದಾಗ ನಾವು ಸೂತ್ರವಿರದ ಗಾಳಿಪಟಗಳಾಗಿದ್ದೆವು. ಸಂಜೆ 6 ಘಂಟೆ ಯವರೆಗೆ ಏನು ಮಾಡುವುದು ಎಂದು ಯೋಚಿಸುತ್ತಾ ನಮ್ಮ ಗಾಳಿಪಟಗಳು ಹಾರಾಡಿದ್ದು ಲಾಲ್ ಭಾಗ್ ವರೆಗೆ ಮಾತ್ರ.
ಅನುಭವ ೧:
ಹಾಗೆ ಸುತ್ತಾಡುತ್ತಾ ರೈಲು ನಿಲ್ದಾಣದ ಹೊರಗೆ ಬಂದು ಭವ್ಯ ಮೆಜೆಸ್ಟೀಕ್ ಮೇಲ್ಸೇತುವೆ ಮೇಲೆ ನಿಂತು ಸಚಿನ್ ‘ಈ ದಾಸ ಕೊಟ್ಟರೆ ವರ ಇಟ್ಟರೆ ಶಾಪ‘ ಎಂಬ ಡೈಲಾಗ್ ಹೊಡೆಯುತ್ತಿದ್ದರೆ ನಾನು ಅಲ್ಲಿ ಮಾರುತ್ತಿರುವ ಪ್ರತಿಯೊಂದು ವಸ್ತುಗಳ ನೋಡುತ್ತಿದ್ದೆ. ದರ್ಶನ ಅಭಿನಯದ ಮೊದಲ ಸಿನಿಮಾ ನೋಡಿ ಮೆಜೆಸ್ಟೀಕ್ ನಮಗೆ ಚಿರಪರಿಚಿತ ಅನಿಸುತ್ತಿತ್ತು. ಆಗ ನಮಗೆ ಆಕಾಶವಾಣಿ ಬಿಟ್ಟರೆ ಬೇರೆ ರೇಡಿಯೋ ಚ್ಯಾನೆಲ್ ಗಳು ಇರಲಿಲ್ಲ. ಆದರೆ ಬೆಂಗಳೂರಿನಲ್ಲಿ FM Radio ಅಬ್ಬರ ನಡೆಯುತ್ತಿತ್ತು. ಎಲ್ಲಿ ನೋಡಿದರೂ ಜನರು ಕಿವಿಗೆ ಇಯರ್ ಫೋನ್ ಹಾಕಿ FM ಕೇಳುತ್ತಿದ್ದರು.ಅದನ್ನು ಕೊಂಡುಕೊಂಡರೆ ಅದು ನಮ್ಮ ಊರಿನಲ್ಲಿ ಉಪಯೋಗವೂ ಆಗಲ್ಲ ಎಂಬ ಪರಿಜ್ಞಾನವೂ ಇರಲಿಲ್ಲ. ಹಾಗೆ ನೋಡುತ್ತಾ ಒಂದು ಅಂಗಡಿಯಲ್ಲಿ (ಮೇಲ್ಸೇತುವೆ ಮೇಲಿನ ಪೂಟ್ಪಾತ್ ಅಂಗಡಿ) ಒಂದು ಪುಟ್ಟ ರೇಡಿಯೋ ಬೆಲೆ ವಿಚಾರಿಸಿದೆ. ಅಂಗಡಿಯವ 300 ರೂಪಾಯಿಗಳು ಅಂದ. ಆಗಿನ ಕಾಲಕ್ಕೆ 300 ರೂಪಾಯಿ ನಮ್ಮ ಒಂದು ತಿಂಗಳ ಖರ್ಚು. ನಾನು ಹಾಗೆ ಬೇರೆ ವಸ್ತುಗಳ ಮೇಲೆ ಕಣ್ಣಾಡಿಸುತ್ತಿದ್ದರೆ ಸಚಿನ್ ಮತ್ತು ರಾಜು ಪಕ್ಕದ ಶಾಪ್ ನಲ್ಲಿ ಮ್ಯಾಜಿಕ್ ಯೋಯೋ ಮತ್ತು ಟಾರ್ಚ್ ನೋಡುತ್ತಿದ್ದರು.
ಅದೇ ಸಮಯಕ್ಕೆ ಇನ್ನೊಬ್ಬ ವ್ಯಕ್ತಿ ಬಂದು ನಾನು ನೋಡುತ್ತಿದ್ದ ರೇಡಿಯೋ ದ ಬೆಲೆ ವಿಚಾರಿಸಿದ.
ಅಂಗಡಿಯವನು 300 ಅಂದ… ಸ್ವಲ್ಪ ಚೌಕಾಸಿ ಮಾಡಿದ ವ್ಯಕ್ತಿ 250 ಕೊಡ್ತೀನಿ ಗುರು ಕೊಡೋದಿದ್ರೆ ಕೊಡು ಇಲ್ಲ ಅಂದ್ರೆ ಇಲ್ಲ ಎಂದಾಗ ಅಂಗಡಿಯವನು ಆಗಲ್ಲ ಸರ್ ನಮಗೆ ಅಸಲೇ ಬರಲ್ಲ. ಬೋಣಿ ಅಂತ 280 ಕೊಡ್ತೀನಿ ಅಂದ ವ್ಯಕ್ತಿ ಬೇಡ ಬಿಡಿ ಎಂದು ಅಲ್ಲಿಂದ ಹೊರಟುಹೋದ.
ನಾನು ಅಲ್ಲೇ ನಿಂತಿದ್ದೆ. ಅಂಗಡಿಯವ ನೋಡಿ ಸರ್ ಚೆನ್ನಾಗಿದೆ ರೇಡಿಯೋ, ನೀವು ಒಂದು ರೇಟ್ ಹೇಳಿ, ಆದ್ರೆ ತಗೋಳಿ ಇಲ್ಲ ಅಂದ್ರೆ ಬೇಡ ಎಂದು 2-3 ಸಾರಿ ಒತ್ತಾಯ ಮಾಡಿದ. ನಾನು ಎಷ್ಟು ನಿರಾಕರಿಸಿದರೂ, ಕೊನೆಗೆ – ‘ಅವನು 250 ಕೇಳಿದಾಗಲೇ ಕೊಟ್ಟಿಲ್ಲ ಇನ್ನ ನಾನು 200 ಕೇಳಿದರೆ ಕೊಡ್ತಾನ?‘ ಎಂದು ಯೋಚಿಸಿ 200 ಅಂದೆ. ಅಂಗಡಿಯವ ಕೊಡಿ ಸರ್ ಮಾತು ಮಾತೇ ಎಂದು ರೇಡಿಯೋ ನನ್ನ ಜೇಬಿಗಿಟ್ಟ. ನಾನು ಒಂದು ಕ್ಷಣ ಮೂಕ ಸ್ತಬ್ದನಾಗಿ ಅವನಿಗೆ 200 ರೂಪಾಯಿ ಕೊಟ್ಟು ಸಚಿನ್ ಇರುವ ಅಂಗಡಿಗೆ ಬಂದು ನನ್ನ ಪರಿಸ್ಥಿತಿ ವಿವರಿಸುತ್ತಿರುವಾಗ 250 ರುಪಾಯಿಗೆ ಕೇಳಿ ಹೋದ ವ್ಯಕ್ತಿ ಬಂದು ಅಂಗಡಿಯವನ ಪಕ್ಕ ಕುಳಿತುಕೊಂಡ.
ಬೆಂಗಳೂರು ನನ್ನ ಮಂಗ ಮಾಡಿತ್ತು…ಮೊದಲ ದಿನವೇ
ಆ ರೇಡಿಯೋ ಬೆಲೆ ಕೇವಲ 80 ರೂಪಾಯಿ ಎಂದು ಆಮೇಲೆ ತಿಳಿಯಿತು.
ಅನುಭವ ೨:
ಹಾಗೇ ಸ್ವಲ್ಪ ಮುಂದೆ ನಡೆದುಕೊಂಡು ಹೋಗಿ ಕಪಾಲಿ ಥೇಟರ್ ರೋಡಿನಲ್ಲಿ ಒಬ್ಬ ಸುಮಾರು ನಲವತ್ತು ವಯಸ್ಸಿನವನಿರಬಹುದು, ನನ್ನನ್ನು ಸೈಡ್ ಗೆ ಕರೆದು ಸರ್ ನನ್ನ ಹತ್ತಿರ ಫ್ಯಾಸ್ಟ್ರ್ಯಾಕ್ ದು ಎರಡು ಗ್ಲಾಸ್ ಗಳಿವೆ. ಕಸ್ಟಮ್ಸ್ ಇಂದ ಶಾಪ್ ಗೆ ತರುವಾಗ ಎತ್ತಿರೋದು. ಕೊನೆಯ 2 ಪೀಸ್ ಉಳಿದಿದೆ. ನೀವ್ ಬೇಕಿದ್ರೆ ತಗೋಳಿ 800 ರುಪಾಯಿಗೆ ಕೊಡ್ತೀನಿ ಎರಡೂ ಅಂದ. ಆವಾಗ ಬ್ರ್ಯಾಂಡ್ ಗಳಿಗೆ ಮಾರು ಹೋಗುತ್ತಿದ್ದ ಸಮಯ. ನನಗೊಂದು ನನ್ನ ಅಣ್ಣನಿಗೊಂದು ಎಂದು ಚೌಕಾಸಿ ಮಾಡಿ 500 ರೂಪಾಯಿ ಕೊಟ್ಟು ಎರಡನ್ನೂ ತಗೊಂಡೆ. ಏನನ್ನೋ ಸಾದಿಸಿದ ಹುಮ್ಮಸ್ಸು. FM ಅಲ್ಲಿ ಹೋದ ದುಡ್ಡು ಫ್ಯಾಸ್ಟ್ರ್ಯಾಕ್ನಲ್ಲಿ ಬಂದಿದೆ ಅಂದುಕೊಂಡು ನನ್ನನ್ನು ನಾನೇ ಸಮಾಧಾನ ಮಾಡಿಕೊಂಡೆ.
ಆಮೇಲೆ 8 ತಿಂಗಳ ನಂತರ ಇಂಜಿನಿಯರಿಂಗ್ ಓದಲು ಪುನಹ ಬೆಂಗಳೂರಿಗೆ ಬಂದಮೇಲೆ ಗೊತ್ತಾಗಿದ್ದು ನಾನು ಖರೀದಿಸಿದ ಗ್ಲಾಸ್ Fast-Track ಅದು Fastrack ಅಲ್ಲ ಎಂದು.
ಆಮೇಲೆ ಲಾಲ್ ಬಾಗ್ ಸುತ್ತಾಡಿ ಎಲ್ಲರೂ ಸರಿಯಾದ ಸಮಯಕ್ಕೆ ರೇಲ್ವೇ ಸ್ಟೇಶನ್ ಸೇರಿದೆವು. ಅಲ್ಲಿಂದ ನಮ್ಮ ಮುಂದಿನ ಪ್ರಯಾಣ….
ಬೆಂಗಳೂರು ಹೊಟ್ಟೆ ಪಾಡಿಗೆ ಕೆಲಸ ಹುಡುಕಿಕೊಂಡು ಬರುವವರಿಗೆ ತಾಯಿಯ ಮಡಿಲಂತೆ. ಮುಗ್ಧರಿಗೆ , ಮೂರ್ಕರಿಗೆ ಕೆಲವೊಮ್ಮೆ ಕಾದ ತವೆಯಂತೆ. ಎಲ್ಲರೂ ಒಂದು ರೀತಿಯಲ್ಲಿ ಬೇಯಲೇಬೇಕು. ಪುಡಿ ಮಸಾಲೆ ದೋಸೆಯಾಗುವದಾ? ಹಾಫ್ ಬಾಯ್ಲ್ ಆಗುವುದಾ ಅವರವರಿಗೆ ಬಿಟ್ಟಿದ್ದು.
ಇದು ನನಗೆ ಬೆಂಗಳೂರು ಮೊದಲ ಬಾರಿಗೆ ಹಾಯ್ ಹೇಳಿದ ಕಥೆ. ನಿಮಗೂ ಈ ತರಹದ ಅನುಭವ ಗಳಾದಲ್ಲಿ ಹಂಚಿಕೊಳ್ಳಿ.


