ಬರಹ ಅನ್ನೋದು ಒಂದು ಗೀಳು ನನಗೂ ಆಗಿದ್ದರೆ ಇಷ್ಟೋತ್ತಿಗೆ ಎಷ್ಟೋ ಪುಸ್ತಕಗಳನ್ನು ಬರೆದಿರುತ್ತಿದ್ದೆ ಏನೋ ಎಂದುಕೊಂಡು ಚಹಾ ದ ಇನ್ನೊಂದು ಸಿಪ್ ಕುಡಿದಾಗ ರಾತ್ರಿ ೧ ಘಂಟೆ. ಅದ್ಯಾಕೋ ಕಳೆದ ಏಪ್ರಿಲ್ ನಲ್ಲಿ ಮಾಡಿದ ತವಾಂಗ್ ಬೈಕ್ ರೈಡ್ ನೆನಪಾಗಿ “ಅಯ್ಯೋ ಇದನ್ನು ಡಾಕ್ಯುಮೆಂಟ್ ಮಾಡಿ ಬರೆದಿದ್ದರೆ ನನ್ನ ಅಲೆಮಾರಿಗಳ ಜಗತ್ತಿನಲ್ಲಿ…… ಮುಂದುವರೆಸಬಹುದಿತ್ತಲ್ಲ” ಎಂದು ನಿದ್ದೆಯಿಂದ ಎದ್ದು ಟೈಪ್ ಮಾಡಲು ಕುಳಿತಾಗ ಬರವಣಿಗೆಯಿಂದ ದೂರ , ನನ್ನ ಪಯಣಗಳನ್ನು ಕೆಲವು ದಿನಗಳಿಗೆ ಮ್ಯೂಟ್ ಮಾಡಿ ಈ ವರ್ತಮಾನ , ಭವಿಷ್ಯ ಎಂಬ ಜೀವನದ ಜಂಜಾಟಗಳಲ್ಲಿ ಕುಂಟುತ್ತಾ ಸಾಗುತ್ತಿರುವುದು ಅದೇ ಕನಸಿನ ಪರ್ವತಕ್ಕೋ ? ಅಥವಾ ಕೊನೆಯಲ್ಲಿರುವ ಶೂನ್ಯ ವನ್ನು ಹುಡುಕುವುದೂ ಒಂದು ಪಯಣವೇ … ಅದಕ್ಕೆ ಹೊರಟಿರುವ ದಾರಿಯೇ ಒಂದು ಹೊಸ ಅನುಭವ ಆಗಿರಲೂ ಬಹುದು ಎಂದುಕೊಂಡು ತೋಚಿದ್ದು ಗೀಚೋಣ. ಮುಂದೆ ಒಂದು ದಿನ ಮರೆವು ಆವರಿಸಿ ಮೆಹಬೂಬ (ಕ್ಲಾಸಿಕ್ 350) ನೋಡಿ ನನ್ನವಳಿಗೆ ಮತ್ತೆ ನಮ್ಮ ಕಥೆ ನೆನಪಿಸಲು ನೆರವಾಗಬಹುದು ಎನ್ನುತ್ತಾ “ಅಲೆಮಾರಿಗಳ ಜಗತ್ತಿನಲ್ಲಿ ಅಪರಿಚಿತರು ಯಾರು? ಭಾಗ-18” ರಲ್ಲಿ ನಮ್ಮ ಬೆಂಗಳೂರು – ತವಾಂಗ್ – ಝೀರೋ ಬೈಕ್ ಜರ್ನಿ ಯ ರೋಚಕ ಕಥೆಯನ್ನು ನಿಮಗೆ ಅರ್ಪಿಸುತ್ತಿದ್ದೇನೆ.
ಅದೊಂದು ನನ್ನ ಜೀವನದ ತಿರುವು. ಸುಮಾರು 7 ವರ್ಷಗಳ ವೃತ್ತಿ ಜೀವನಕ್ಕೆ ವಿದಾಯ ಹೇಳುವುದಕ್ಕೆ ಕುತೂಹಲದ ಎಲ್ಲೇ ಮೀರಿ ಕಾಲ ಕೂಡಿ ಬಂದಿತ್ತು. ಏಪ್ರಿಲ್ 2 2019 ನನ್ನ ಆಫೀಸ್ ನ ಕೊನೆಯ ದಿನ. ಬಿಟ್ಟು ಹೊರಟಾಗ ಮಳೆ ಬಂದಿತ್ತು. ನಮ್ಮ ಮಧ್ಯಾಹ್ನ ಊಟದ ಗ್ಯಾಂಗ್ ಕೇಕು ಕತ್ತರಿಸಿ ಬಿಳ್ಕೊಟ್ಟಾಗ ಅವರನ್ನೆಲ್ಲ ಅಷ್ಟು ಮಿಸ್ ಮಾಡ್ಕೋತೀನಿ ಅನಿಸಿರಲಿಲ್ಲ. ಕೆಲವು ದಿನಗಳ ಕಾಲ ನಮ್ಮ ವಾಟ್ಸಪ್ಪ್ ಗ್ರೂಪ್ “ಇಂದಿರಾ ಕ್ಯಾಂಟೀನ್ “ನಲ್ಲಿ ಊಟದ ಸಮಯಕ್ಕೆ ಬರುವ ಮೆಸೇಜ್ ಗಳನ್ನೂ ನೋಡಿ ತಡೆಯಲಾರದೆ
“I can’t stay in this group anymore” ಎಂದು ಹೇಳಿ ಗ್ರೂಪ್ ನಿಂದ ಆಚೆ ಬಂದಿದ್ದೆ.
ಇನ್ನೇನು 3 ದಿನಗಳಲ್ಲಿ ನಾನು ಮತ್ತು ವಿಗ್ನೇಶ್ ಆಚಾರ್ಯ ಜೊತೆಗೆ ಇನ್ನೊಂದು ಕಾಲ್ಪನಿಕ ಛಾಯಾಗ್ರಾಹಕ ಬೆಂಗಳೂರಿಂದ ಅಸ್ಸಾಂ ಗೆ ಬೈಕ್ ಅಲ್ಲಿ ಹೊರಡಬೇಕಿತ್ತು. ಥಟ್ ವಾಸ್ ದಿ ಪ್ಲಾನ್.
ಕೆ ೨ ಕೆ ಯಂತೆ ಇದು ಅಚಾನಕ್ ನಿರ್ಧಾರವಲ್ಲ. ಕೆ ೨ ಕೆ ಯ ನಂತರ ನಾವು ನಮ್ಮದೇ ಆದ ಒಂದು ಟ್ರಾವೆಲ್ ಕಂಪನಿ ಸ್ಥಾಪಿಸಿದೆವು .
ಹೆಸರು –“HASH ITINERARY PVT LTD.”

ಒಂದು ಪ್ರವಾಸಿಗ ಪ್ರವಾಸ ಕೈಗೊಳ್ಳಲು ಏನೇನು ಅನುಕೂಲತೆಗಳು ಬೇಕು ? ಎಂಬ ಪ್ರಶ್ನೆಗೆ ನಮ್ಮ ಕಂಪನಿ ಉತ್ತರವಾಗಿರಬೇಕು ಎಂಬ ಸದುದ್ದೇಶದಿಂದ ಈ ಪ್ರಯತ್ನಕ್ಕೆ ಕೈ ಹಾಕಿದ್ದು ಎಂಬುದು ದಿಟ್ಟ ಸತ್ಯ. ಬಾಡಿಗೆಗೆ ಟೆಂಟ್ , ಕ್ಯಾಮೆರಾ , ಬ್ಯಾಗ್ ನಿಂದ ಹಿಡಿದು ಬೈಕ್ , ೪ ಚಕ್ರದ ಬಾಡಿಗೆ ವಾಹನಗಳು , ಹೋಂಸ್ಟೇ / ರೆಸಾರ್ಟ್ ಬುಕಿಂಗ್ , ಟಿಕೆಟ್ , ಪ್ಯಾಕೇಜ್ , ಟೀಮ್ ಔಟಿಂಗ್ , ಗೈಡ್ , ಟ್ರಾವೆಲ್ ಚೆಫ್ ಹೀಗೆ ಹಲವಾರು ಟ್ರಾವೆಲ್ ಸಂಬಂದಿತ ಸೌಕರ್ಯವನ್ನು ಅಂಗಡಿಯಂತೆ ಗ್ರಾಹಕರಿಗೆ ಒದಗಿಸುವುದು ನಮ್ಮ ಗುರಿ .
ನನ್ನ ಫ್ರೆಂಡ್ ಸ್ವಾತಿ ಹೇಳುವಂತೆ – “ನಾವು ಒಂದು ಥರ ಸೆಕೆಂಡ್ ಒಪೀನಿಯನ್ ಇನ್ ಟ್ರಾವೆಲ್ ಸೆಕ್ಟರ್”.
ಅದರ ಭಾಗವಾಗಿ ಪ್ರತಿ ೨ ತಿಂಗಳಿಗೊಮ್ಮೆ ಬೈಕ್ ರೈಡ್ ಆಯೋಜಿಸಲಾಗುತ್ತದೆ ನಮ್ಮ ರೈಡರ್ ದಂಪತಿಗಳಾದ ಹೇಮಂತ್ & ಆಶಿತಾ (insta: journey2destination) ಅದರ ಪೂರ್ಣ ಜವಾಬ್ದಾರಿ ಹೊತ್ತು – ಮುಂದಾಳತ್ವ ಜೊತೆಗೆ ಆಯೋಜನೆಯ ಪ್ರತಿಯೊಂದು ಹಂತವನ್ನು ನಾಜೂಕಿನಿಂದ ನಿಭಾಯಿಸುತ್ತಿದ್ದಾರೆ .
ಪ್ರತಿ ಏಪ್ರಿಲ್ – ಅರುಣಾಚಲ ಪ್ರದೇಶ
ಮೇ – ಲಡಾಖ್
ನವೆಂಬರ್ – ಗೋವಾ ರೈಡರ್ ಮೇನಿಯಾ
ಡಿಸೆಂಬರ್ – ನಾಗಾಲ್ಯಾಂಡ್
ಹೀಗೆ ಹತ್ತು ಹಲವು ಮುಂದಿನ ಹಲವು ವರ್ಷಗಳ ರೈಡ್ ಕ್ಯಾಲೆಂಡರ್ ನಲ್ಲಿ ಎಂಟ್ರಿ ಆಗಿವೆ.13/04/2019 ರಿಂದ 22/04/2019 ವರೆಗೂ “ಅರುಣಾಚಲ ಡೈರೀಸ್” ಎಂಬ ಪ್ರವಾಸ ಆಯೋಜಿಸಲಾಗಿತ್ತು. ನಮ್ಮ ರೈಡ್ ನ ವಿಶೇಷತೆ ಎಂದರೆ ಬೈಕರ್ ಗಳೊಂದಿಗೆ ಪ್ರವಾಸಿಗರು ಸಹ ಇನ್ನೋವಾ / ಟೆಂಪೋ ಟ್ರಾವೆಲ್ಲರ್ ಗಳಲ್ಲಿ ಜೊತೆಯಾಗಿ ಪ್ರಯಾಣಿಸುತ್ತಾರೆ. ಎಲ್ಲರು 13/04/2019 ರ ಬೆಳಿಗ್ಗೆ ಗುವಾಹಟಿ ಗೆ ಬಂದು ಸೇರಿ ಅಲ್ಲಿಂದ ಪ್ರಯಾಣ ಆರಂಭಿಸುವುದು ನಿಯಮವಾಗಿತ್ತು.
ತಿರುವು :
ಕಳೆದ ವರ್ಷ ಮಂಗಳೂರಿನಿಂದ ಕಾಶ್ಮೀರ ದ ವರೆಗೂ ಬಜಾಜ್ ಅವೆಂಜರ್ ಸುನಿಲ್ ಬಾಯ್ ಜೊತೆ ಯಮಹ R15 ನಲ್ಲಿ ಹೋಗಿ ಬಂದ ಅಮಲಿನಲ್ಲಿದ್ದ ವಿಘ್ನೇಶ್ (viggu) ಬೆಂಗಳೂರಿನಿಂದ ತವಾಂಗ್ ವರೆಗೂ ಬೈಕ್ ನಲ್ಲೆ ಹೋಗೋಣ ಎಂದು ಪಟ್ಟು ಹಿಡಿದು ಕುಳಿತಾಗ ಈಗ ತಾನೇ ನಿರುದ್ಯೋಗಿ ಯಾದ ನನಗೆ ಬೇಡ ಎನ್ನಲು ಕಾರಣ ಗಳು ಇರಲಿಲ್ಲ. ಈ ಬೈಕ್ ರೈಡ್ ಅನ್ನೋದು ಒಂದು ತರಹದ ನಶೆ ಇದ್ದ ಹಾಗೆ. ಸೆಳೆದಷ್ಟು ಉತ್ಸಾಹ ಹೆಚ್ಚು . 05/04/2019 ಬೆಂಗಳೂರು ಬಿಡುವುದು ನಿರ್ಧಾರವಾಯಿತು .
ಈ ಜರ್ನಿ ತವಾಂಗ್ ಪ್ರಯಾಣದ ಮೊದಲ ಭಾಗ. ನಾನು, ವಿಗ್ಗು , ನಮ್ಮ ಫೋಟೋಗ್ರಾಫರ್ , ಒಂದು ಮೆಹಬೂಬ (RE CLASSIC 350/KA01EY2108) ಜೊತೆಗೆ ಯಮಹಾ R15.
(ಮುಂದುವರೆಯುವುದು…….)

