ಯಾವಾಗ ?: ಜೂನ್ ೧೯ ೨೦೧೯
ಅಯ್ಯೋ ಮತ್ತೆ ಅದೇ ಹಳೆಯ ಚಟ….!! ರಾತ್ರಿ ೧೦ ಘಂಟೆ, ಮೆಜೆಸ್ಟಿಕ್ ನ ಚಿಕ್ಕಮಗಳೂರು ಬಸ್ ಪ್ಲಾಟ್ಫಾರ್ಮ್ . ಮುಂಚೆ ಮೆಟ್ರೋ ಇರಲಿಲ್ಲ , ಈಗ ಮೆಟ್ರೋ ಕ್ಷಣಾರ್ಧದಲ್ಲಿ ನೇರವಾಗಿ ಮೆಜೆಸ್ಟಿಕ್ ತಲುಪಿಸತ್ತೆ. ಸಿಂಹ ಮುಂಚಿತವಾಗಿ ಅಲ್ಲಿ ಹೋಗಿ ಕಾಯುತ್ತಿದ್ದ. ಈ ಸನ್ನಿವೇಶ ಸಾಕು ನಮ್ಮ ಇಂಜಿನಿಯರಿಂಗ್ ದಿನಗಳನ್ನು ಮೆಲುಕು ಹಾಕಲು .. ನಮ್ಮ ಟ್ರೆಕಿಂಗ್ ಪ್ರಯಾಣಗಳು ಶುರುವಾಗಿದ್ದು ಹೀಗೆ ಅಲ್ಲವೇ ?
ಗುರುತಿರದ ಜಾಗ , ಮೆಜೆಸ್ಟಿಕ್ ನ ಮಲೆನಾಡು ಪ್ಲಾಟಫಾರ್ಮ್ , ಕೆಂಪು ಡಬ್ಬಿ ಬಸ್ , ಟಾಸ್ , ಜೋಳದ ರೊಟ್ಟಿ ಚಟ್ನಿ ಪುಡಿ….ಮತ್ತೆ ಕರೆದಿತ್ತು ಆ ಹಳೆಯ ನೆನಪು ಗಳು ….
ಏನೋ ಇದು ಇಷ್ಟು ದಪ್ಪ ಆಗಿಬಿಟ್ಟಿದಿಯ ? ತುಂಬಾ ದಿನಗಳ ನಂತರ ನೋಡಿದವನಂತೆ ಸಿಂಹ …. ಅದೂ ಹೌದು. ಮದುವೆ ಆದಮೇಲೆ ಆಸಾಮಿಗೆ ಟೈಮ್ ಎಲ್ಲಿದೆ ?
ಹೊರನಾಡ? ಶೃಂಗೇರಿ ನ? ಸಿಂಹ ಕೇಳಿದ .ಎಲ್ಲಿಗಾದರೂ ಸರಿ ಹತ್ತು ಬಸ್ ಅಂದೇ ನಾನು .ಆಗುಂಬೆ ಹೋಗಣ , ಅಲ್ಲಿಂದ ಒನಕೆ ಅಬ್ಬಿ ಟ್ರೆಕ್ ಮಾಡೋಣ ಮತ್ತೆ ನೋಡಿದರಾಯಿತು ಎಂದ ಸಿಂಹ .

ಕೆಂಪು ಬಸ್ ಹತ್ತಿ ಟಿಕೆಟ್ ತೆಗಿಸಿ ಆಯಿತು. ಆ ಬಸ್ ನ ಪುಣ್ಯಾತ್ಮ ಮೊದಲಿಗೆ ಜಾಲಹಳ್ಳಿ ಬಸ್ ಸ್ಟಾಂಡ್ ತೋರಿಸಿದ ಎಂದು ಕಂಡದ್ದು …
ನಮ್ಮ ದುರಾದ್ರಷ್ಟಕ್ಕೆ ಯಾವುದೊ L ಬೋರ್ಡ್ ಡ್ರೈವರ್ ನ ಕಳಿಸಿದ್ದು,
“ಪಾಪ ಇವರು ದೊಡ್ಡ ಗಾಡಿ ಮಲ್ಟಿ ಎಕ್ಸೆಲ್ ಓಡಿಸಿ ಅಭ್ಯಾಸ” , ಅದು ಇದು ಕಂತೆ ಪುರಾಣ ಹೇಳಿ ಕ್ಲಚ್ ಹಿಡಿದು ಗೇರ್ ಚೇಂಜ್ ಮಾಡಬೇಕು ಎಂಬ ಅರಿವಿರದ ಡ್ರೈವರ್ ನ ಎಷ್ಟೇ ಸಮರ್ಥಿಸಿಕೊಂಡರೂ ಕೊನೆಗೆ ತಾನೇ ಬಸ್ ನಡೆಸಬೇಕಾದ ಪರೀಸ್ಥಿತಿ ಬಂದಿದ್ದು ಕಂಡಕ್ಟರ್ ಗೆ .
ಬೆಳಿಗ್ಗೆ ಶೃಂಗೇರಿಯಲ್ಲಿ ಇಳಿದು ಬಸ್ ಸ್ಟಾಂಡ್ ನ ಕ್ಯಾಂಟೀನ್ ನಲ್ಲಿ ತಿಂಡಿ ಮುಗಿಸಿ ಆಗುಂಬೆ ಬಸ್ ಹಿಡಿದು ಹೊರಟಾಗ ೮ ಘಂಟೆ.
ಆಗುಂಬೆ ಅಂದ ಕ್ಷಣ ಅದು ಶಂಕರಣ್ಣ ನ ಮಾಲ್ಗುಡಿ ಪರಿಮಳ. ಕಪ್ಪು ಬಿಳುಪು ಚಿತ್ರದ ಮೇಲೆ ಆ ಅದ್ಬುತ ಹಿನ್ನೆಲೆ ಸಂಗೀತದೊಂದಿಗೆ ಒಂದು ಹಳ್ಳಿ ರಸ್ತೆಯ ಆಚೆ ಈಚೆ ದ್ರಷ್ಟಿ ನೆಟ್ಟಷ್ಟು ದೂರದವರೆಗೆ ಹೂಬಳ್ಳಿ ಹಾಗೆ ಹಬ್ಬಿರುವ ಒಂದು ಮಾದರಿ ಹಳ್ಳಿ.
ಅದಕ್ಕೆ ಲಂಬಕೋನವಾಗಿ ಬೆಳೆದ ರಸ್ತೆ ಸ್ವಲ್ಪ ರಂಗು ರಂಜಿತ. ಹೊಸದಾಗಿ ಆಗಿರುವ ಮಲ್ಯ ರೆಸಿಡೆನ್ಸಿ ಎಂಬ ಲಾಡ್ಜ್ , ಒಂದು ಬಸ್ ಸ್ಟಾಂಡ್.ಇನ್ನು ಲೈಸೆನ್ಸ್ ಬಂದು ತೆರೆಯಬೇಕಾದ ಒಂದು ಬಾರು , ಆಟೋ ಲೈನ್ ನಲ್ಲಿ ನಿಲ್ಲಿಸಿ ೪-೫ ಘಂಟೆ ಊಟಕ್ಕೆ ಹೋಗುವ ಚಾಲಕರು.ಅಲ್ಲಿ ತಲುಪಿ ಮೊದಲು ಮಾಡಿದ ಕೆಲಸ ಮಲ್ಯ ಲಾಡ್ಜ್ ನ ಒಂದು ರೂಮ್ ಪಡೆದು ವಿಶ್ರಾಂತಿ ತೆಗೆದುಕೊಂಡಿದ್ದು.
ಹೋಗಿದ್ದು ಮಳೆ ನೋಡಲು …!! ಈ ವಿಹಂಗಮ ನೋಡ ಮಳೆಯ ಹನಿಗಳೊಂದಿಗೆ ನಮ್ಮನ್ನು ಸ್ವಾಗತಿಸಿತ್ತು . ಇನ್ನೇನು ಕೇಳಲು ಸಾಧ್ಯ?

ಆಗುಂಬೆ – ಅಲ್ಲಿ ಕಿಂಗ್ ಕೋಬ್ರಾ ರಿಸರ್ಚ್ ಸೆಂಟರ್ ಇದೆ . ನ್ಯಾಷನಲ್ ಜಿಯೋಗ್ರಾಫಿಕ್ ಚಾನೆಲ್ ನಲ್ಲಿ ಕಿಂಗ್ ಕೋಬ್ರಾ ಶೋ ನೋಡಿದಾಗೆಲ್ಲ ಅಯ್ಯೋ ಇದು ನಮ್ಮ ಆಗುಂಬೆ , ಒಮ್ಮೆ ಹೋಗಿ ಆ ರಿಸರ್ಚ್ ಸೆಂಟರ್ ನಲ್ಲಿ ಇರುವ ಹಾವನ್ನು ಹಿಡಿದು ಆಟವಾಡಿ ಆ ಇಂಗ್ಲಿಷ್ ಕ್ಯಾಮೆರಾ ಮ್ಯಾನ್ ಇರಬೇಕು , ಅವನಂತೆ ಸ್ವಲ್ಪ ಸಾಹಸಮಯ ಫೋಟೋಗ್ರಫಿ ಮಾಡಬೇಕು ಎಂಬುದು ಸೀರಿಯಲ್ ಕನಸು.
ಆ ಕನಸನ್ನು ನನಸು ಮಾಡುವ ಸಮಯ ಇವತ್ತು ಗೊತ್ತಿಲ್ಲದಂತೆ ಕೂಡಿ ಬಂದಿದೆ ಎಂದು ಮಳೆಯಲ್ಲಿ ಬಿಸಿ ಬಿಸಿ ಚಹಾ ಸವೆದು , ಮಧ್ಯಾಹ್ನ ಊಟದ ನಂತರ ಅಲ್ಲಿಗೆ ಹೋಗುವುದಾಗಿ ನಿರ್ಧರಿಸಿ ಆಟೋ ಡ್ರೈವರ್ ಹತ್ತಿರ ಎಲ್ಲ ವಿಚಾರಿಸಿಕೊಂಡೆವು.
ಆಗುಂಬೆಯ ಮಳೆ ….. ನಿಂತು ಬಿಸಿಲಿನ ಸೆರಗು ಹಾಸಿತ್ತು .
ಮಧ್ಯಾಹ್ನ ಊಟ ಮುಗಿಸಿ ಹೋರಾಡಲು ರೆಡಿ ಆಗಿ ಆಟೋ ಗೆ ವೇಟ್ ಮಾಡಿದರೆ, ಅರ್ಧ ಘಂಟೆ ಕಾದರು ಒಬ್ಬೇ ಒಬ್ಬ ಡ್ರೈವರ್ ಪತ್ತೆ ಇಲ್ಲ.ಈ ಶ್ರೀಮಂತ ಆಟೋ ಡ್ರೈವರ್ ಗಳಿಗೆ ಗಿರಾಕಿಗಳೇಕೆ ಎಂದುಕೊಂಡು ಕೊನೆಗೆ ನಡೆದುಕೊಂಡೇ ಹೋಗಲು ನಿರ್ಧರಿಸಿ ಆಯಿತು .
ಇಲ್ಲಿಂದ ಎರಡು ವರೆ ಕಿಲೋಮೀಟರು ಅಷ್ಟೇ ಎಂಬ ಹಳ್ಳಿಗರ ದೂರ ಸುಮಾರು ಅಲೆದಿದ್ದೇವೆ ಜೀವನದಲ್ಲಿ. (ಇದು ನೆನಪಿರಲಿ ಶಹರದ ಜಾಗಿಂಗ್ ಟ್ರ್ಯಾಕ್ ದೂರ ಮತ್ತು ಹಳ್ಳಿಗರು ಹೇಳುವ ದೂರಕ್ಕೆ ಅಜಗಜಾಂತರ ವ್ಯತ್ಯಾಸ ಇರುತ್ತದೆ. ಅನುಭವಿಸಿ ನೋಡಿ ಒಮ್ಮೆ.)
ಏನೋ ಆದದ್ದು ಆಯಿತು, ಹಾವು ನೋಡಣ ನಡಿ ಯಪ್ಪಾ ಎಂದು ಹೊರಟೆವು . ಒಂದು ಸುಮಾರು ಹತ್ತು ನಿಮಿಷ ಹಾದಿಯ ಬಳಿಕ ಒಂದು ಮಣ್ಣಿನ ರಸ್ತೆಯ ಎಡ ತಿರುವು . ಮತ್ತೆ ಆ ಮಣ್ಣಿನ ರಸ್ತೆಯಲ್ಲಿ ಸುಮಾರು ಎರಡು ಕಿಲೋಮೀಟರು ನಡೆದ ತಕ್ಷಣ ಆ ಆಗುಂಬೆ ರೈನ್ ಫಾರೆಸ್ಟ್ ರಿಸರ್ಚ್ ಸೆಂಟರ್ ಸಿಕ್ಕಿತು.
(ಮುಂದುವರೆಯುವುದು )



