Home / ಭಾವನೆಗಳ ಬಾಗಿಲು ತೆರೆದು / ಒಂಬತ್ತು ಗುಡ್ಡ : ಕಾಡ್ ಬಾಯ್ಸ್ ಡೈರೀಸ್

ಒಂಬತ್ತು ಗುಡ್ಡ : ಕಾಡ್ ಬಾಯ್ಸ್ ಡೈರೀಸ್

ಕಿರಿಕ್ ಪಾರ್ಟೀ ಸಿನಿಮಾ  ನೋಡುವಾಗ ಬರೀ ಇಂಜಿನಿಯರಿಂಗ್ ಕಾಲೇಜ್ ದಿನಗಳದೆ ನೆನಪು. ವಿಪರ್ಯಾಸವೆಂದರೆ ನಮಗೆ ಎಲ್ಲಕ್ಕಿಂತ ಹೆಚ್ಚಾಗಿ ಆಕರ್ಷಿಸಿದ್ದು ಅಂದರೆ ಚಾರಣ. ನಾವು ಏನಾದರೂ ಈ ಸಿನಿಮಾ ಮಾಡಿದ್ದಾರೆ ಸೆಮಿಸ್ಟೆರ್ ಗೆ ಕನಿಷ್ಟ ಒಂದಾದರೂ ಚಾರಣ ಮಾಡಿಸಿ, ನಮ್ಮ ಪಶ್ಚಿಮ ಗಟ್ಟದ ಅಂದ ಕಣ್ಣಿನಲ್ಲಿ ಹೆಪ್ಪುಗಟ್ಟುವ ತನಕ ತೋರಿಸ ಬಹುದಿತ್ತು ಅಂದುಕೊಂಡೆ.
ಪಶ್ಚಿಮ ಘಟ್ಟದಲ್ಲೇ ಹುಟ್ಟಿ ಬೆಳೆದಿದ್ದರೂ, ಕಾಡು ಮೇಡುಗಳನ್ನು ಸುತ್ತಿ ಕಣ್ಣಾ ಮುಚ್ಚಾಲೆ ಆಡಿದ್ದರೂ, ಕಾಡು-ಬೆಟ್ಟ ಅಳೆಯುವುದನ್ನೇ ಚಾರಣ ಎನ್ನುತ್ತಾರೆ ಎಂದು ತಿಳಿದಿದ್ದು ಎರಡನೆಯ ಸೆಮಿಸ್ಟೆರ್ ನಲ್ಲಿ ಸಿಂಹ ಮತ್ತು ಸಂಗಡಿಗರು ಕೊಡಚಾದ್ರಿಗೆ ಕರೆದುಕೊಂಡು ಹೋದಾಗಲೇ.
ಅದಾದ ಮೇಲೆ ಸೆಮಿಸ್ಟೆರ್ ಗೆ ಒಮ್ಮೆಯಂತೆ , ಅಥವಾ ಯಾವಾಗ ಬೇಸರವಾಗತ್ತೋ ಆವಾಗ ಪಶ್ಚಿಮ ಘಟ್ಟದ ಕಡೆಗೆ ಚಾರಣ ಹೋಗುವುದು ಹವ್ಯಾಸವಾಗಿ ಹೋಯಿತು. ಹೊಸ ಹೊಸ ಗೆಳೆಯರು ದೊರೆತರು. ನಮ್ಮದೇ ಒಂದು ಗುಂಪಿಗೆ ಚಾರಣಿಗರು ಎಂದು ಹೆಸರಿಟ್ಟು, ಆದಷ್ಟು ಜನರನ್ನು ಕೂಡಿಸಿ ಚರಣದ ರುಚಿ ಎಲ್ಲರಿಗೂ ಹಂಚಲು ಪ್ರಾರಂಭಿಸಿದೆವು. ಕೊನೆಗೆ ಹೆಸರನ್ನು ಬದಲಾಯಿಸಿ ಇಟ್ಟ ಹೆಸರೇ ಕಾಡ್ ಬಾಯ್ಸ್ .
ಚಾರಣ ಎಂದರೆ ಎಲ್ಲರೂ ಒಂದಲ್ಲ ಒಂದು ಸಲ ಅದನ್ನು ಅನುಭವಿಸಿಯೇ ಇರುತ್ತಾರೆ. ನಮ್ಮ ಪುಟ್ಟ ಸ್ಕಂದಗಿರಿ ಇಂದ ಹಿಡಿದು ಅತ್ಯಂತ ಕಠಿಣವಾದ ಆಮೆಡಿಕಲ್ಲು ತನಕ ಚಾರಣ ಹೋದವರೇ. ಕರ್ನಾಟಕದ ಎಲ್ಲ ಪ್ರಮುಖ ಚಾರಣ ಮುಗಿಸಬೇಕು ಅಂದುಕೊಂಡು ಮಾಡಿದ ಚೆಕ್ ಲಿಸ್ಟ್ ಅಲ್ಲಿ ಮಧ್ಯದಲ್ಲಿ ಇರುವ ಒಂದು ಹೆಸರು ಒಂಬತ್ತು ಗುಡ್ಡ. ಆ ರೋಮಾಂಚಿತ ಚಾರಣ ಇಲ್ಲಿದೆ ನೋಡಿ……
ಅದು 22nd ಜನವರಿ 2010.ಎಂದಿನಂತೆ ಅದೇ ಬೋರಿಂಗ್ ಕ್ಲಾಸ್, ಅದೇ ಲಾಸ್ಟ್ ಬೆಂಚ್. ಅದೇ ಬೆಂಗಳೂರು ಮಿರರ್ ನ ಸ್ಪೆಶಲ್ ಪೇಜ್. ಸಿಂಹ ತಂದಿದ್ದ ಚಿತ್ರಾನ್ನ ಇದು ನಮ್ಮ ಪ್ರತಿದಿನದ ಕ್ಲಾಸ್ಗಳಲ್ಲಿನ ದೈನಂದಿನ ಅಭ್ಯಾಸ.
ಇದ್ದಕ್ಕಿದ್ದಂತೆ ಸಿಂಹ ಏನನ್ನೋ ನೆನಸಿಕೊಂಡು ವಿಶ್ವಾ…!!! ಕಳೆದ ತಿಂಗಳು ಅರವಿಂದನ ಫ್ರೆಂಡ್ಸ್ ಟ್ರೆಕಿಂಗ್ ಹೋಗಿ ಕಾಡಲ್ಲಿ ಕಳೆದು ಹೋಗಿ, 1 ತಿಂಗಳ ನಂತರ ಅವರ ಅಸ್ಥಿಪಂಜರ ಕಾಡಲ್ಲಿ ಸಿಕ್ತಂತೆ. ಕತ್ತಲ್ಲಿರೋ ಗೋಲ್ಡ್ ಚೈನ್ ನೋಡಿ ಅವರ ಗುರುತು ಸಿಕ್ಕಿತಂತೆ ಮಗಾ!!!”
ಹೌದಾ??? ಎಲ್ಲಿರೋದು ಆ ಜಾಗ??? ನಾವ್ಯಾವಾಗ ಹೋಗೋದು????”….ನಾನು ಕುತೂಹಲದಿಂದ ಕೇಳಿದೆ.
“ಗುಂಡ್ಯ ಹತ್ತಿರ “ವೈ ನಾಟ್ ಟುನೈಟ್?????”… ಅಂದ
ಅದು ಸೀರೀಯಸ್ ಆಗಿ ಹೋಗಿತ್ತು.
ಸಿಂಹ : ”ನಾನು ಬೇಗ ಮನೆಗೆ ಹೋಗಿ bag ಮತ್ತು ಟೆಂಟ್ ತಗೊಂಡ್ ಬರ್ತೀನಿ .. ಎಲ್ಲರಿಗೂ ಹೇಳಿಬಿಡು ಮಜೆಸ್ಟಿಕ್ ಬರಕ್ಕೆ.”
ಫ್ರೆಂಡ್ಸ್ ಎಲ್ಲರಿಗೂ ಟ್ರೆಕಿಂಗ್ ಹೋಗ್ತಿದೀವಿ ಅಂತ ಹೇಳಿದ್ವಿ. 6 ಜನ ರೆಡೀ ಆದ್ರು. ಎಲ್ಲಿಗೆ ಹೊರಟಿದೀವಿ ಅಂತ ಯಾರೂ ಕೇಳಲಿಲ್ಲ. ನಾವು ಹೋಗಲಿರುವ ದಿಕ್ಕು ನನಗೆ & ಸಿಂಹನಿಗೆ ಬಿಟ್ಟರೆ ಯಾರಿಗೂ ಗೊತ್ತಿರಲಿಲ್ಲ.
ಕ್ಲಾಸ್ನಲ್ಲಿ ಸಿಂಹ “ವಿಶ್ವಾ…!! ಬೀಜ(ಬಿಜಾಪುರದ ಹುಡುಗ) ಕೈ ಕೊಟ್ಟ. ಇವಾಗ ಇರೋದು 5 ಜನ. ಏನ್ಮಾಡೋದೊ????”
ನನ್ನ ಬಳಿ ಉತ್ತರವಿರಲಿಲ್ಲ. ನೋಡೋಣ ಅಂದೆ.
ಕೊನೆಗೆ ವತ್ಸ(ಶ್ರೀವತ್ಸ) ಬರ್ತೀನಿ ಅಂದಾಗ ನಮ್ಮ ಪ್ಲಾನ್ ರೆಡೀ ಆಗಿತ್ತು.
ಎಲ್ಲರಿಗೂ ರಾತ್ರಿ ಮಜೆಸ್ಟಿಕ್ ಗೆ ಬರಲು ಹೆಳಿದ್ದಾಯಿತು.
ಯಲಹಂಕದ ನಮ್ಮ hostel ನಿಂದ ನಾವು ಹೊರಟು ಮಜೆಸ್ಟಿಕ್ ಸೇರಿದಾಗ ಸಮಯ 10 ಘಂಟೆ.
ನಾನು, ನರಸಿಂಹ ,ವೆಂಕ, ವತ್ಸ, ಶಿವು, ವಿಜಯ್ ಜೊತೆಗೆ 150 ಚಪಾತಿ ಗ್ಲೂಕೋಸ್ , ಚಟ್ನಿ ಪುಡಿ ಪ್ಯಾಕೆಟ್-4 , 1 ಟೆಂಟ್.
ಊಟ ಮಾಡಿ ಎಲ್ಲರೂ ಮೆಜೆಸ್ಟಿಕ್ ನ ಚಿಕ್ಕಮಗಳೂರು ಪ್ಲ್ಯಾಟ್ಫಾರ್ಮ್ನಲ್ಲಿ ಸೇರಿದ್ವಿ.
ಸಿಂಹ -”ನೋಡಿ ನಮ್ಮ ಹತ್ತಿರ ಎರಡು ದಾರಿ ಇದೆ.
1.ಒಂಬತ್ತು ಗುಡ್ಡ- ದಾರಿ ಇಲ್ಲ. ರಿಸ್ಟ್ರಿಕ್ಟೆಡ್ ಫಾರೆಸ್ಟ್. ಮ್ಯಾಪ್, ಕಂಪಾಸ್ ಜೊತೆ ಉತ್ತರ ದಿಕ್ಕಿನೆಡೆಗೆ ನದಿಯ ಮೂಲ ಹುಡುಕಿಕೊಂಡು ನಡೆಯಬೇಕು.
2.ಎತ್ತಿನ ಭುಜ – ಆರಾಮಾಗಿರತ್ತೆ
ಏನು ಮಾಡೋದು????” ಎಲ್ಲರ ನಿರ್ಧಾರ .ಒಂಬತ್ತು ಗುಡ್ಡ ಆಗಿತ್ತು. ಅದೇ ಪ್ಲ್ಯಾಟ್ಫಾರ್ಮ್ ನಲ್ಲಿದ್ದ ಕೆಂಪು ಬಣ್ಣದ ಬಸ್ ಹತ್ತಿ ಕುಳಿತಾಗ ಸಮಯ ರಾತ್ರಿ 11:38……
ಕಾಡಿನ ಅಂತರಾಳ ಅರಿಯದ ನಾವು , ಅವಲಂಬಿತರಾಗಿದ್ದು ಕೀ ಚೈನ್ ನ ದಿಕ್ಸೂಚಿ, ಒಂದು ಹಳೆಯ ಮೇಲೆ ಪ್ರಿಂಟ್ ಔಟ್ ತೆಗೆದ ನಕ್ಷೆಯ ಮೇಲೆ. ಮೇಲ್ನೋಟಕ್ಕೆ ಯಾವುದೋ ರಿಯಾಲಿಟೀ ಶೋ ತರ ಅನಿಸುತ್ತಿದೆ ಇಂದು ಬರೆಯುವಾಗ. 6-5=2 ಎಂಬ ಕಾಲ್ಪನಿಕ ಕಥೆಯ ಸಿನಿಮಾ ಮಾಡಿ ಜನರಲ್ಲಿ ಗುಂಡ್ಯ ಮತ್ತು ಅಕ್ಕ ಪಕ್ಕದ ಸ್ಥಳಗಳ ಚಾರಣಗಳ ಬಗ್ಗೆ ಕುತೂಹಲ ಹಾಗೂ ಭಯ ಒಟ್ಟಿಗೆ ಮೂಡಿಸಿದ್ದ ನೆನಪಿದೆಯಾ?
[ಒಂಬತ್ತು ಗುಡ್ಡ – ಇದು ಮೂರು ಜಿಲ್ಲೆಗಳು ಅಂದರೆ ಹಾಸನ್, ಚಿಕ್ಕ ಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಹಂಚಿಕೊಂಡಿದೆ.]
ಆಗ ಇನ್ನೂ ಶಿರಾಡಿ ಘಾಟ್ ಗೆ ಕಾಂಕ್ರೀಟ್ ಹಾಕಿರಲಿಲ್ಲ. ಅದೇ ತಿರುವು ಮಾರುವಾದ ರಸ್ತೆಯಲ್ಲಿ ಕೆಂಪು ಬಸ್ ನ ಚಾಲಕರ ಚಾಲನಾ ಕೌಶಲ್ಯವನ್ನು ನೋಡಿ ಅವರ ಅಭಿಮಾನಿಯಾಗಿದ್ದೆ.
ಮುಂಜಾನೆ ಕೋಳಿ ಕೂಗುವ ಮುಂಚೆ ಗುಂಡ್ಯ ಚೆಕ್ ಪೋಸ್ಟ್ ಮುಂದೆ ಕುಳಿತಿದ್ದೆವು. ಅಲ್ಲೇ ಅಂಗಡಿಯಲ್ಲಿ ಚಹಾ ಕುಡಿದು, ಬೋಟಿ (ಎಣ್ಣೆಯಲ್ಲಿ ಕರಿದ ಹಳದಿ ಬಣ್ಣದ ಪದಾರ್ಥ) ತಿನ್ನುತ್ತಾ ಬೆಳಕು ಹರಿಯುವುದನ್ನು ಕಾಯುತ್ತಿರುವಾಗ ಶಿವು ಮಾಡಿದ ಘೋರ ಅಪರಾಧ ಎಂದರೆ ಅಲ್ಲಿನ ಬೀದಿನಾಯಿಗಳಿಗೆ ತಿನ್ನಲು ಬೋಟಿ ಹಾಕಿದ್ದು.

ದಿನ 1: 19 ಜನವರಿ 2009

dogiie3

ಕಬ್ಬಿನಾಲೆ ಕಾಡನ್ನು ಪ್ರವೇಶಿಸುವ ಮುನ್ನ ದೊರೆತ ಹಲವು ಮಂದಿಯ ಬಾಯಲ್ಲಿ ಕೇಳಿದ ಮಾತುಗಳೆಲ್ಲ ಕಳೆದು ತಿಂಗಳು ಬಂದು ಪ್ರಾಣ ಕಳೆದುಕೊಂಡ ಬೆಂಗಳೂರು ಹುಡುಗರ ಬಗ್ಗೆಯೇ. ಆದರೂ ಯಾವುದೇ ಅನುಮಾನಗಳಿಗೆ ಎಡೆ ಮಾಡಿ ಕೊಡದೆ ಕಬ್ಬಿನಾಲೆಯ ಮೊದಲ ಜರಿ ದಾಟುವಾಗ ನಾಯಿ ಕೂಡ ನಮ್ಮ ಜೊತೆ ಪ್ರಯಾಣ ಆರಂಭಿಸಿತ್ತು. ಅಲ್ಲೇ ಹೊಳೆಯ ಪಕ್ಕ ವಿರಾಮ ತೆಗೆದುಕೊಂಡು ತಿಂಡಿ ತಿನ್ನುತ್ತಿರುವಾಗ ಯಾರದೋ ದ್ವನಿ ಕೇಳಿಸಿತು. 4 ಜನ ಚಾರಣಿಗರು ಅದೇ ದಾರಿಯಲ್ಲಿ ನಮ್ಮಂತೆಯೇ ಮ್ಯಾಪ್ ಮತ್ತು ದಿಕ್ಸೂಚಿ ಹಿಡಿದು ಒಂಬತ್ತು ಗುಡ್ಡಕ್ಕೆ ಹೊರಟಿದ್ದರು. ಪರಸ್ಪರ ಪರಿಚಯ ಮಾಡಿಕೊಂಡು ಜೊತೆಯಲ್ಲಿ ಹೊರಟೆವು.

ಅವರು ವೆಂಕಿ, ಅಭಿ, ಜಗ್ಗಾ ಮತ್ತು ಪ್ರಶಾಂತ್. ಎಲ್ಲರಿಗೂ ಅದು ಮೊದಲನೆಯ ಚಾರಣ. ಬ್ಲೋಗ್ ಓದಿಕೊಂಡು ಒಬ್ಬೊಬ್ಬರು 40ಕಿಲೋ ಬ್ಯಾಗ್ ಹೊತ್ತುಕೊಂಡು, ಅದರಲ್ಲಿ ಮಿನರಲ್ ವಾಟರ್ ಬಾಟಲ್ ಗಳನ್ನು ತುಂಬಿಕೊಂಡು ಬಂದಿರುವುದನ್ನು ನೋಡಿ ನಮಗೆ ನಗು ಬಂದರೂ ತೋರಿಸಿಕೊಳ್ಳಲಿಲ್ಲ. ಹೀಗೆ ನಡೆಯುತ್ತಾ ಮುಂದೆ ಸಾಗಿದಾಗ ಮೊದಲು ಕಾಣಿಸಿದ್ದು ಕಾಳಿಂಗ ಸರ್ಪ. ವಿಚಲಿತಗೊಳ್ಳದೆ ಕೆಂಪು ಹೊಳೆಯ ಮೂಲ ಹುಡುಕುತ್ತಾ ಸಾಗಿದಾಗ ನಾಡು ನಡುವೆ ಹಸಿವಾದಾಗ ತಂದ ತಿಂಡಿಗಳನ್ನು ತಿನ್ನುತ್ತಾ… ನಮ್ಮ ಮತ್ತು ಅವರ ಮ್ಯಾಪ್ ರೀಡಿಂಗ್ ಗಳನ್ನು ಟ್ಯಾಲೀ ಮಾಡುತ್ತಾ ನಡೆದು ಸಂಜೆಯಾಗಿದ್ದು ಗೊತ್ತೇ ಆಗಲಿಲ್ಲ. ನಮ್ಮ ಕೀ ಚೈನ್ ದಿಕ್ಸೂಚಿಯಂತೂ ಕೆಲವೊಮ್ಮೆ ನಾರ್ತ್ ಡೈರೆಕ್ಶನ್ ಗುಂಡ್ಯ ಕಡೆಗೆ ತೋರಿಸುತ್ತಿತ್ತು. ಇವರು ಕಂಪಾಸ್ ತರದಿದ್ದರೆ ನಮಗೆ ದೇವರೇ ಗತಿ ಆಗಿದ್ದ ಅಂದುಕೊಂಡೆವು.

sunrays4

ಹಳ್ಳ ಕೊಳ್ಳಗಳನ್ನು ದಾಟುತ್ತಾ, ಕಲ್ಲಿನಿಂದ ಕಲ್ಲಿಗೆ ಹಾರುತ್ತಾ ನೀರಿನ ಮಧ್ಯದಲ್ಲೇ ಸಾಗುತ್ತಾ, ಆಗಾಗ ನೀರು ಕುಡಿಯುತ್ತಾ ಸಾಗಿದ್ದರಿಂದ ಅಷ್ಟು ಆಯಾಸ ಎನಿಸಲಿಲ್ಲ. ಕೆಲವೊಂದು ಕಡೆ ನಮ್ಮ ಜೊತೆ ಬಂದ ನಾಯಿಯನ್ನು ದಾಟಿಸಲು ಪಟ್ಟ ಹರಸಾಹಸ ಹೇಳ ತೀರದು.
ಸಂಜೆ ೫:೪೫ ರ ಹೊತ್ತಿಗೆ ಕೆಂಪುಹೊಳೆ ಕವಲೊಡೆದು ಕೂಡಿತ್ತು. ಯಾವಕಡೆಗೆ ಹೋಗುವುದು ಎಂದು ತಿಳಿಯದೆ, ಎಲ್ಲ ಲಗೇಜ್ ಗಳನ್ನು ಅಲ್ಲೇ ಇಟ್ಟು, ಎಲ್ಲರನ್ನೂ ಅಲ್ಲಿಯೇ ಇರಲು ಹೇಳಿ, ನಾನು ಮತ್ತು ವತ್ಸ ಬಲಬದಿಯ ಕವಲೆಡೆಗೆ ಹೋಗಿ ದಾರಿ ಹುಡುಕಿಕೊಂಡು ಬರುತ್ತೇವೆ ಎಂದು ಹೇಳಿ ಹೊರಟೆವು. ಸ್ವಲ್ಪ ದೂರ ಹೋಗಿ ಅಲ್ಲಿ ದಾರಿಯೇ ಇಲ್ಲ ಎಂದು ಹಿಂದಿರುಗಿ ಬಂದು ರಾತ್ರಿ ಅಲ್ಲೇ ಉಳಿದುಕೊಳ್ಳೋಣ ಎಂದು ನಿರ್ಧರಿಸಿದೆವು.

ನಾವು ದಾರಿ ಕಳೆದುಕೊಂಡಿದ್ದೇವೆ ಅನ್ನಿಸಲು ಶುರುವಾಯಿತು. ಆ ಕಲ್ಲಿನ ಸುತ್ತ ನೀರು. ಕಲ್ಲಿನ ಮೇಲೆ 3 ಟೆಂಟ್ ಗಳು. ಪಕ್ಕದಲ್ಲಿ ಕ್ಯಾಂಪ್ ಫೈರ್. ಚಪಾತಿ ಮತ್ತು ಚಟ್ನೀ ಪುಡಿ. ಅಂದು ಮಾಡಿ ತಿಂದ ಮ್ಯಾಗಿ ಇಂದಿಗೂ ಬಾಯಲ್ಲಿ ನೀರು ತರಿಸುತ್ತದೆ. ಮ್ಯಾಗಿ ಸ್ಟೋರೀ ಅಂತ ಜಾಹೀರಾತು ಬರುವಾಗಲೆಲ್ಲ ನಮ್ಮ ಈ ಸ್ಟೋರೀ ಕಳಿಸಬಹುದು ಅಂದುಕೊಳ್ಳುತ್ತಿದ್ದೆ . ಪರ್ಫೆಕ್ಟ್ ಟ್ರೆಕಿಂಗ್ ಕನಸು ಅಲ್ವಾ? ಚೆನ್ನಾಗಿ ತಿಂದು ಸೆಂಟ್ರಿ ಸಿಸ್ಟಮ್ ಅಂದರೆ ನಮ್ಮಲ್ಲಿ ಇರುವುದು ೧ ಟೆಂಟ್ನಲ್ಲಿ ಮೂರು ಜನ ಮಾತ್ರ ಮಲಗಲು ಸಾಧ್ಯ. 3 ಜನ ಮಲಗುವುದು ಇನ್ನೂ ಮೂರು ಜನ ಬೆಂಕಿಯ ಹತ್ತಿರ ಕುಳಿತು ಪಹರೆ ಕಾಯುವುದು ಎಂದು ನಿರ್ಧರಿಸಿ 3-3 ಘಂಟೆಯ ಅವಧಿ ನಿಶ್ಚಯಿಸಿದೆವು. ಅವರು ಮಾತ್ರ ೨ ಟೆಂಟಲ್ಲಿ 4 ಜನ ಮಲಗಿ ನಿದ್ರೆಗೆ ಜಾರಿದ್ದರು. ನಾವು ದಾರಿ ತಪ್ಪಿದ್ದೆವು, ನಾಳಿನ ಬಗ್ಗೆ ಚಿಂತೆಯಿರಲಿಲ್ಲ. ದಟ್ಟ ಕಾಡು, ಕತ್ತಲು, ಬೆಂಕಿ, 10 ಜನ ಜೊತೆಗೆ ನಾಯಿ, ಉಳಿದ ಕೆಲವು ಆಹಾರ.

ದಿನ 2 ಜನವರಿ 25 2009:

ಮರುದಿನ ಬೆಳಿಗ್ಗೆ ಎದ್ದು ಹೊರಟಾಗ ಸಮಯ 7 ಘಂಟೆ. ಎಡ ಬದಿಯ ಕವಲು ಹಿಡಿದು ಹೊರಟೆವು. ಕೇವಲ 1 ಘಂಟೆಯ ಅವಧಿಗೆ ನಮ್ಮ ಎಲ್ಲ ನೀರಿನ ಬಾಟಲಿ ಗಳು ಖಾಲಿ ಆಗಿದ್ದವು. ನಮ್ಮ ಮುಂದಿನ ಗುರಿ ನೀರು ಹುಡುಕುವುದಾಗಿತ್ತು. ಅದೇ ಉತ್ತರ ದಿಕ್ಕಿನೆಡೇಕೆ ಕಂಡ ಕಂಡ ಗುಡ್ಡಗಳಲ್ಲಿ ದಾರಿ ಮಾಡಿಕೊಂಡು ಹತ್ತಿ ಇಳಿದು ನೀರಿಗಾಗಿ ಹಾತೊರೆಯುತ್ತಿದ್ದಾಗ ನಮ್ಮ ಹ್ರದಯ ಬಡಿತ ,ಕಂಪನದ ಅನುಭವವಾಗುತ್ತಿತ್ತು.  ಪ್ರತಿ 20-25 ಹೆಜ್ಜೆಗಳಿಗೆ ವಿರಾಮ ತೆಗೆದುಕೊಂಡು ನಡೆಯುತ್ತಿದ್ದೆವು. ಅದು ಕೊನೆಗೆ 10-15 ಹೆಜ್ಜೆಗಳಿಗಾಯಿತು. ಒಂದು ಗುಡ್ಡ ಇಳಿದು ಇನ್ನೊಂದು ಹತ್ತಿದಾಗ ದೂರದಲ್ಲಿ ನವ್ವು ಕುಳಿತುಕೊಂಡು,ಜಾರಿಕೊಂಡು ಬಂದ ಹುಲ್ಲುಗಳು, ಕಾಲುದಾರಿಯಂತೆ ಗೋಚರಿಸುತ್ತಿತ್ತು. ಮತ್ತೆ ಮತ್ತೆ ತಿರುಗಿ ಅಲ್ಲಿಗೆ ಬಂದು ಚಕ್ರವ್ಯೂಹ ದಲ್ಲಿ ಸಿಲುಕಿಕೊಂಡಿದ್ದೇವಾ? ಎಂಬ ಭಯವಾಯಿತು. ಅವುಗಳು ಎಂದು ಮುಗಿಯದ ಪಶ್ಚಿಮ ಘಟ್ಟಗಳು. ಟ್ರೆಕಿಂಗ್ ನ ಅಸಲಿ ಥ್ರಿಲ್ ಇವಾಗ ಶುರುವಾಗಿತ್ತು.

ಅದು ಸರಿಯಾಗಿ 12 ಘಂಟೆ ಮಧ್ಯಾಹ್ನ. 4 ಘಂಟೆಗಳಿಂದ ತೊಟ್ಟು ನೀರಿಗಾಗಿ ಅಲೆದಾಡುತ್ತಿರುವಾಗ ಎಲ್ಲೋ ಕೆಳಗಡೆ ಜರಿಯ ನಾದ. ನೀರಿನ ಶಬ್ದಕ್ಕೆ ಅರ್ಧ ದಣಿವು, ಬಾಯಾರಿಕೆ ಕಡಿಮೆಯಾಗಿತ್ತು. ಆಳವಾದ ಪ್ರಪಾತ. ಕಾಡು ಗತ್ತಲು. ಆ ಭಯಾನಕ ಸನ್ನಿವೇಶ ನೆನೆಸಿಕೊಂಡರೆ ಕೆಲವೊಮ್ಮೆ ಈಗಲೂ ಮೈ ಬೆವರುತ್ತದೆ. ಬೇರೆ ದಾರಿ ಇರಲಿಲ್ಲ. ನೀರಿಗಾಗಿ ದಾರಿ ಮಾಡಿಕೊಂಡು ಆ ಕಣಿವೆಯೊಳಗೆ ಇಳಿಯಲೇ ಬೇಕಾಯಿತು. ಯಾವ ದಿಕ್ಕು ಎಂದು ನೋಡುವ ಸಹನೆ ಯಾರಿಗೂ ಇರಲಿಲ್ಲ.

ಜಾರಿಕೊಂಡು, ಗಿಡ ಗಂಟಿಗಳ ಮೇಲೆ ಬಿದ್ದು, ತೆವಳಿಕೊಂಡು, ನಿಧಾನವಾಗಿ ಒಬ್ಬರ ಹಿಂದೆ ಒಬ್ಬರಂತೆ ಇಳಿಯ ತೊಡಗಿದೆವು. ಕೊನೆಗೂ 20 ನಿಮಿಷಗಳ ಸಾಹಸದ ಬಳಿಕ ಜಾರಿಯನ್ನು ತಲುಪಿದಾಗ ನೀಂರನ್ನು ನೋಡಿ, ಏನೋ ಅಮ್ರತ ದೊರೆತ ಅನುಭವ. ಆ ಖುಷಿಗೆ ಪಾರವೇ ಇರಲಿಲ್ಲ. ಇನ್ನೇನು ನೀರು ಕುಡಿಯ ಬೇಕು ಅನ್ನುವಷ್ಟರಲ್ಲಿ ಸರದಿಯ ಕೊನೆಗೆ ಬರುತ್ತಿದ್ದ ಜಗದೀಶ.. “ಮಗಾ..!! ತಲೆಗೆ ಏನೋ ಕಚ್ಚಿದಂತಾಯಿತು. ಆ ಮರದಲ್ಲಿ ನೋಡಿಕೊಂಡು ಬನ್ರೋ..” ಎಂದ. ವೆಂಕಟೇಶ ಎದ್ದು ಹೋಗಿ “ಮಗಾ..!! ಹಾವು ಕಣೋ” ಎಂದ. ಅಷ್ಟರಲ್ಲೇ ನಮ್ಮೆಲ್ಲರ ಜೀವ ಬಾಯಿಗೆ ಬಂದಿತ್ತು. ನಾವೆಲ್ಲರೂ ಜಾರಿಕೊಂಡು ಬಂದರೆ ಜಗದೀಶ ಮಾತ್ರ ಕೊನೆಯಲ್ಲಿ, ಖುಷಿಗೆ ಎದ್ದು ನಿಂತು ಬರುತ್ತಿದ್ದ. ಅದೇ ದೊಡ್ಡ ತಪ್ಪಾಗಿತ್ತು.

snake

ಆ ಕ್ಷಣದಲ್ಲಿ ಮೆದುಳು ಖಾಲಿ ಹಾಳೆ. ತಿನ್ನಲು ಊಟವಿಲ್ಲ. ಮುಂದಿನ ದಾರಿಯಿಲ್ಲ. ಎಲ್ಲೋ ಕಳೆದು ಹೋಗಿ ದಾರಿ ಹುಡುಕುವುದೇ ಒಂದು ಸಾಹಸವಾಗಿರುವಾಗ ಈ ದೇಹ ಹೊತ್ತು ಎಲ್ಲಿ ಅಲೆಯುವುದು? ಎಂದುಕೊಂಡು ಎಲ್ಲರೂ ಚಿಂತಾಕ್ರಾಂತ ವಾಗಿ ಕುಳಿತಿದ್ದೆವು. ಹಾಳಾದ್ದು ನೆಟ್‌ವರ್ಕ್ ಹುಡುಕಿದರೂ ಸಿಗಲಿಲ್ಲ. ಜಗದೀಶ ಮಾತ್ರ “ನಾನು ಸಾಯುತ್ತಿದ್ದೆನೆನಾಮ್ಮ ಮನೆಯವ್ರಿಗೆ ಹೇಳಿಬಿಡಿ” ಎಂದು ಸಾರಿ ಸಾರಿ ಗುನುಗುವಾಗ ನಮಗೇ ಜೀವ ಹೋದ ಹಾಗೆ. ಸೂರ್ಯ ನೆತ್ತಿಯ ಮೇಲೆ ರಾರಾಜಿಸುತ್ತಿದ್ದ. ಸಂಜೆಯ ಹೊತ್ತಿಗೆ ಯಾವುದಾದರೂ ಜಾಗ ಸೇರಬೇಕು. ಉಪವಾಸ ಮಲಗಿದರೆ ಕಷ್ಟ ಎಂದು, ಅವನಿಗೆ ಏನು ಆಗದು ಎಂದು ಧೈರ್ಯ ತುಂಬಿ, ಅವನ ಬ್ಯಾಗ್ ಖಾಲಿ ಮಾಡಿ, ಯಾವುದೋ ಬಿದಿರಿಗೆ ಅವನನ್ನು ವನ್ಯ ಮ್ರಘದಂತೆ ನೇತು ಹಾಕಿಕೊಂಡು ಹೋಗುವಾಗ ಎಲ್ಲಿಗೆ ಹೊರಟಿದ್ದೇವೆ ಎಂದು ಗೊತ್ತಿರಲಿಲ್ಲ.

ಹಾಸ್ಯ ಪ್ರಜ್ಞೆಯೋ.. ಏನೋ ತಿಳಿಯದು. ಅಂದು ನಾನು ಹೇಳಿದ ಒಂದು ಅನಾವಶ್ಯಕವಾದ ಮಾತು, ಆ ಕಠಿಣ ಪರಿಸ್ತಿತಿಯಲ್ಲೂ ಎಲ್ಲರೂ ನಗುವಂತೆ ಮಾಡಿತ್ತು.
“ಹೋಗ್ಲಿ ಬಿಡು ಮಗಾ… ಅದಕ್ಕೂ ಕೂಡ ಲೈಫ್ ಅಲ್ಲಿ ಇದು ಮೊದಲನೆಯ ಎಕ್ಸ್‌ಪೀರಿಯೆನ್ಸ್…”
11
ನಾವು ಹಾಗೆಯೇ ನಡೆಯತೊಡಗಿದೆವು. ಯಾವುದೋ ಎಂದು ಮುಗಿಯದ ಕಾಲ್ಪನಿಕ ಮರುಭೂಮಿಯಂತಹ ಕಾಡಿನಲ್ಲಿ ಕಳೆದು ಹೋದ ಅನುಭವ. ಮತ್ತೆ ಮನೆ ಸೇರಿದರೆ ಸಾಕು. ಇನ್ನೂ ಎಂದಿಗೂ ಟ್ರೆಕಿಂಗ್ ಅನ್ನೋ ಮಾತೆ ಎತ್ತಲ್ಲ ಎಂದು ದೇವರಿಗೆ ಬೇಡಿಕೊಂಡಿದ್ದೆವೋ ಏನೋ? ಆ ತರಹದ ಪರಿಸ್ತಿತಿ. ನಮ್ಮ ಅಡ್ರಷ್ಟವೋ.. ದುರಾದ್ರಷ್ಟವೋ…ಎಂಬಂತೆ ಸುಮಾರು 3 ಘಂಟೆಯ ಹೊತ್ತಿಗೆ ಅಭಿಯ ನೋಕಿಯಾ 1100 ಮೊಬೈಲ್ ನಲ್ಲಿ ಕವರೇಜ್ ಸಿಕ್ಕಿತು. ಪಂಜಾ ಊರಿನ ನೆಟ್‌ವರ್ಕ್ ಎಂದು ತೋರಿಸಿದಾಗ ಹೋದ ಜೀವ ಮತ್ತೆ ಬಂದಂತಾಯಿತು. ಜಗದೀಶ ಮಾತನಾಡುತ್ತಿದ್ದ. ನಾವು ಮಲಗಲು ಬಿಟ್ಟಿರಲಿಲ್ಲ.
ಅಭಿ ತಡ ಮಾಡದೆ, ಹೇಳಿದರೂ ಕೇಳದೆ 100 ಡೈಯಲ್ ಮಾಡಿ, ನಮ್ಮಲ್ಲಿ ಒಬ್ಬರಿಗೆ ಹಾವು ಕಚ್ಚಿದೆ, ಆದಷ್ಟು ಬೇಗ ರಕ್ಷಣೆಗೆ ಹೆಲಿಕ್ಯಾಪ್‌ಟರ್ ಕಳಿಸಿ ಎಂದಾಗ ನಮಗೂ ನಗು ಬಂತು.
 ಅವರು ನಾಲ್ಕು ಜನ ನಾವು ಇಲ್ಲೆ ಟೆಂಟ್ ಹಾಕುತ್ತೇವೆ. ನೀವು ಹೋಗಿ ಯಾರನ್ನಾದರೂ ಕಳಿಸಿ ಎಂದಾಗ, ನಾವು ಹೊರಟು, ಅಧ್ರಷ್ಟಕ್ಕೆ ಸರಸ್ವತಿ ಎಸ್ಟೇಟ್ ತಲುಪಿದಾಗ ಸಂಜೆ 5 ಘಂಟೆ. ಅಲ್ಲಿ ಕೆಲಸ ಮಾಡುತ್ತಿದ್ದ ಒಬ್ಬನೇ ಒಬ್ಬ ಆಳಿಗೆ ವಿಷಯ ತಿಳಿಸಿ, ಹಾವಿನ ಫೋಟೋ ತೋರಿಸಿದಾಗ ಆತ….
“ಈ ಹಾವು ಕಚ್ಚಿದರೆ ಎಂತ ಆಗುದಿಲ್ಲ ಮಾರಾಯ್ರೆ… ಮಲ್ಕೋ ಬಾರ್ದು ಅಷ್ಟೇ…” ಎಂದಾಗ

ಅದನ್ನು ಕೇಳಿ ಸ್ವಲ್ಪ ಮಟ್ಟಿಗೆ ಸಮಾಧಾನವಂತೂ ಆಯಿತು. ಇನ್ನೇನು ಮರಳಿ ಹೋಗಿ ಅವರನ್ನು ಕರೆದುಕೊಂಡು ಬರಬೇಕು ಅನ್ನುವಷ್ಟರಲ್ಲಿ ಅಭಿ ಮತ್ತು ಸಂಗಡಿಗರು ನಮ್ಮನ್ನು ತಲುಪಿದ್ದರು.

12

ತಡ ಮಾಡದೆ ಆ 4 ಜನರನ್ನು ಜೀಪ್ ನಲ್ಲಿ ಹೊಸಕೆರೆ ಗೆ ಕಳುಹಿಸಿ ನಾವು ಸೂರ್ಯಾಸ್ತ ಆಗುವ ತನಕ ಫೋಟೋ ಸೆಶನ್ ಮಾಡಿ ಇನ್ನೂ 8 ಕಿ ಮೀ ದೂರ ಇರುವ ಲಕ್ಷ್ಮಿ ಎಸ್ಟೇಟ್ ಕಡೆ ಹೊರಟೆವು. ಅಲ್ಲಿಗೆ ಹೋಗಿ ಯಾವುದಾದರೂ ಜೀಪ್ ಕರೆಸಿ ಮೂಡಿಗೆರೆ ತಲುಪಬೇಕು ಎನ್ನುವುದು ನಮ್ಮ ಗುರಿಯಾಗಿತ್ತು.ಸುಮಾರು 2-3 ಕಿ ಮೀ ನಡೆದಿರಬೇಕು ಆ ಜೀಪ್ ಟ್ರ್ಯಾಕ್ ನಲ್ಲಿ. ಯಾವುದೋ ಒಂದು ಮಾಡಿಫೈ ಮಾಡಿರೋ ಮುಂದೆ ರ್ಯಾಂಗ್ಲರ್ ಎಂದು ಬರೆದುಕೊಂಡಿರುವ 4X4 ಓಪನ್ ಜೀಪ್ ಬರುತ್ತಿದೆ. ನಾವು ನಿಲ್ಲಿಸಿ ಎಸ್ಟೇಟ್ ಇನ್ನೂ ಎಷ್ಟು ದೂರ ಇದೆ ? ಎಂದು ಸುಸ್ತಾಗಿ ಕೇಳಿದಾಗ ಆ ವಯ್ಯ “ನಿಮ್ಮನ್ನ ಕರೆದುಕೊಂಡು ಹೋಗಿರುವುದಕ್ಕೆ ಬಂದಿರುವುದು. ಇರಿ ಮುಂದೆ ಹೋಗಿ ತಿರುಗಿಸಿಕೊಂಡು ಬರುತ್ತೇನೆ” ಎಂದಾಗ ಏನೋ ಒಂದು ತರಹದ ಕುಶಿ. ಅಬ್ಬಾ ನಮ್ಮ ವೆಂಕಿ ಅಭಿ ಎಲ್ಲರೂ ನಮಗೋಸ್ಕರ ಜ಼ೀಪ್ ಕಳುಹಿಸಿದ್ದಾರೆ ಎಂದು ಮಾತನಾಡಿಕೊಂಡೆವು.
ಎಲ್ಲರೂ ಕುಣಿದು ಕುಪ್ಪಳಿಸಿ ಜ಼ೀಪ್ ಏರಿದೆವು. ಮಾತು ಶುರುಮಾಡಿದ ಆತ- “ನಾನು ವಿಕ್ರಮ ಗೌಡ. ಈ ಕಾಡಿನ ಎಲ್ಲವೂ ಗೊತ್ತಿದೆ ನನಗೆ. ಇಲ್ಲಿಗೆಲ್ಲ ಯಾಕೆ ಬರುತ್ತೀರಿ? ಕೊನೆಯ ಬಾರಿ ಬೆಂಗಳೂರಿನ  ಕಳೆದುಹೋದ ಹುಡುಗರ ಮ್ರತ ದೇಹಗಳನ್ನು ಹುಡುಕಿ ಕೊಟ್ಟಿದ್ದು ನಾವೇ” ಎಂದಾಗ ಏನೋ ಸರಿಯಿಲ್ಲ ಎನಿಸಿತು.
ಇದು ಅಭಿ ಮಾಡಿದ 100 ಡೈಯಲ್ ಪ್ರಭಾವ ಎಂದು ತಿಳಿದದ್ದು ಆತ ಹೇಳಿದಾಗ-“ನಿಮ್ಮನ್ನು 3 ಜಿಲ್ಲೆಗಳ ಪೊಲೀಸರು ಕಾಯುತ್ತಿದ್ದಾರೆ”.
ಅದೇನೋ ಸ್ಪೈನಲ್ ಖೊರ್ಡ್ ಅಂತಾರಲ್ಲ… ಒಂತರಾ ಕರೆಂಟ್ ಪಾಸ್ ಆಯಿತು ಅನ್ನೋ ಅನುಭವ ಇರಬೇಕು. ಸರಿಯಾಗಿ ನೆನಪಿಲ್ಲ. ಯಾರು ಏನು ಮಾತನಾಡಲಿಲ್ಲ.
11 ನಿಮಿಷಗಳ ಸವಾರಿಯ ನಂತರ ಎಸ್ಟೇಟ್ ತಲುಪಿದಾಗ 20-25 ಪೊಲೀಸರು ನಮಗೆ ಗೌರವ ಸಲ್ಲಿಸಲು ಸಜ್ಜಾಗಿದ್ದರು.
ಮುಂದೆ ನಡೆದದ್ದು ಇತಿಹಾಸ. ನನಗನ್ನಿಸುವ ಹಾಗೆ ನಮಗೆ ಯಾರಿಗೂ ಸರಿಯಾಗಿ ನೆನಪು ಇರ್ಲಿಕ್ಕಿಲ್ಲ. ಆದರೂ ಅವರು ಹೇಳಿದ ಕೆಲವು ಮಾತುಗಳು ಇಲ್ಲಿವೆ.
-ಇದು ಸಂರಕ್ಷಿತ ಅರಣ್ಯ. ಪರ್ಮಿಶನ್ ಲೆಟರ್ ಯಾರು ಕೊಟ್ಟಿದ್ದು ನಿಮಗೆ?
– ಆಕ್ಟಿವ್ ನಕ್ಷಲ್ ಬೆಲ್ಟ್ ಇದು.
-ಅಪ್ಪ ಅಮ್ಮ ನಿಮ್ಮನ್ನ ಇದಕ್ಕೇನಾ ಓದಕ್ಕೆ ಕಳ್ಸೋದು?
-ಎನ್‌ಕೌಂಟರ್ ಮಾಡಿ ಬಿಸಾಕಿ ಇವ್ರನ್ನ
– ಎಲ್ಲರೂ ನಿಮ್ಮ ವಿಳಾಸ ಹಾಗೂ ಫೋನ್ ನಂಬರ್ ಬರೆಯಿರಿ ಇದರಲ್ಲಿ.
ನಮ್ಮ ಶಿವು ಗೆ ಇದನ್ನೆಲ್ಲ ಕೇಳಿ ನಗು ತಡೆಯಲಾಗದೆ ನಕ್ಕು ಬಿಟ್ಟ. ಇನ್ನೊಂದು ರೌಂಡ್ ಮತ್ತೆ…
ಅದಕ್ಕಿಂತ ಮಿಗಿಲಾಗಿ ಊರಲ್ಲೆಲ್ಲ ಹಬ್ಬಿದ ಸುದ್ದಿಯೆಂದರೆ- ಬೆಂಗಳೂರಿನಿಂದ ಬಂದ ಹುಡುಗರು ಕಾಡಿನಲ್ಲಿ ಯಾವುದೋ ಹುಡುಗಿಯ ರೇಪ್ ಮಾಡಿ ತಲೆತಪ್ಪಿಸಿಕೊಂಡಿದ್ದಾರೆ ಎಂದು. ಅದು ಪರಿಸ್ತಿತಿಯನ್ನು ಇನ್ನಷ್ಟು ಬಿಗಡಾಯಿಸಿತ್ತು. ನಮ್ಮ ಸ್ವಾಗತ ಮಾಡಲು ಹಳ್ಳಿಯ ಜನರೆಲ್ಲ ಬೇರೆ ಸೇರಿದ್ದರು. ಏನೋ ಯಕ್ಷಪ್ರಶ್ನೆಯೇ ಉತ್ತರವಾದಂತೆ.
ಸರಿ.. ಆಗಿದ್ದು ಆಯಿತು. ಮೂಡಿಗೆರೆ ಸೇರಿಕೊಳ್ಳೋಣ ಎಂದು ಜ಼ೀಪ್ ಡ್ರೈವರ್ ಗೆ ಕಾಲ್ ಮಾಡಿದರೆ ಆನೆ ಕಾಟ ಇವಾಗ ಬರಕ್ಕೆ ಆಗಲ್ಲ. ನಾಳೆ ಬೆಳಿಗ್ಗೆ ಬರುತ್ತೇನೆ ಎಂದ. ಅಷ್ಟರಲ್ಲಿ ಆ ಎಸ್ಟೇಟ್ ನ ಸೂಪೆರ್ವಿಸೆರ್ ಶಾಂತರಾಜು ಎನ್ನುವವರು ಇವತ್ತು ನಮ್ಮ ರೂಮ್ ನಲ್ಲಿ ಇದ್ದು ಬೆಳಿಗ್ಗೆ ಹೋಗಿ ಎಂದಾಗ ಒಪ್ಪಿಕೊಳ್ಳುವುದು ಅನಿವಾರ್ಯಕ್ಕಿಂತ ಇಷ್ಟವಾಗಿತ್ತು. ಇದ್ದ ಸಾಮಾನುಗಳಲ್ಲಿಯೇ ಚಿತ್ರಾನ್ನ ಮಾಡಿ ಬಡಿಸಿದ ಶಾಂತರಾಜು ಆತ್ಮೀಯನಾಗಿಬಿಟ್ಟಿದ್ದ.ಹಂಡೆ ನೀರಿನ ಸ್ನಾನ, ಎರಡು ದಿನಗಳ ನಂತರ ತಿಂದ ಅಣ್ಣಾ ಆ ನಿದ್ದೆ ನೆನೆಸಿಕೊಂಡಾಗಲೆಲ್ಲಾ ಏನೋ ಖುಷಿಯಾಗತ್ತೆ. ಬೆಳಿಗ್ಗೆ ಎದ್ದು ಶಾಂತರಾಜು ಜೊತೆಗೆ ಫೋಟೋ ತೆಗೆಸಿಕೊಂಡು, 2 ಕಿ ಮೀ ನಡೆದು ಮೂಡಿಗೆರೆಯ ಬಸ್ ಹಿಡಿದಾಗ.. ಜನರೆಲ್ಲ ನಾವೇ ನಕ್ಷಲ್ ಕಡೆಯವರು ಎಂಬಂತೆ ನೋಡುತ್ತಿದ್ದರು. ಮತ್ತೆ ಬಸ್ ನಲ್ಲಿ ಜನರದ್ದು ಹುಡುಗಿಯ ರೇಪ್ ಬಗ್ಗೆಯೇ ಮಾತುಕತೆ.
13
ಕೊನೆಗೂ ನಾವು ಮೂಡಿಗೆರೆ ಯಲ್ಲಿ ಆ 4 ಜನರನ್ನು ಬೇಟಿಯಾಗಿ ಬದುಕಿ ಬೆಂಗಳೂರು ತಲುಪಿದೆವು. ಜಗದೀಶ ಕುಶಿಯಾಗಿದ್ದ.
ಇದೊಂದು ನಮ್ಮ ಜೀವನದಲ್ಲಿ ಮರೆಯಲಾಗದ ಅನುಭವ. ಆ ಚಾರಣದ ಕೊನೆಯಲ್ಲಿ ನಾವು ಹವ್ಯಾಸಿ ಚಾರಣಿಗರು ಎಂದು ಗರ್ವ ಪಡುವಂತಾಗಿತ್ತು. ಈ ಸನ್ನಿವೇಶವೇ ನಮ್ಮೊಳಗಿರುವ  ಕಾಡ್ಬೋಯ್ಸ್ ನ ಕಂಡುಕೊಳ್ಳಲು ನೆರವಾಗಿತ್ತು. 
For English translation CLICK ME

Leave a Reply

Your email address will not be published. Required fields are marked *