Home / ಭಾವನೆಗಳ ಬಾಗಿಲು ತೆರೆದು / ಅಲೆಮಾರಿಗಳ ಜಗತ್ತಿನಲ್ಲಿ ಅಪರಿಚಿತರು ಯಾರು?(ಭಾಗ 17)

ಅಲೆಮಾರಿಗಳ ಜಗತ್ತಿನಲ್ಲಿ ಅಪರಿಚಿತರು ಯಾರು?(ಭಾಗ 17)

img_0471

ಬೆಳಿಗ್ಗೆ ಎದ್ದು ಹೊರಟಾಗ ಮಳೆ ಜಿನುಗುಡುತ್ತಿತ್ತು. ಮಳೆಯ ಮಂಜಿಗೆ ಮನಾಲಿ ಮಾಯಾನಗರದಂತೆ ಮಿಂಚುತ್ತಿತ್ತು. ಬೀಸ್ ನದಿಯ ದಡದ ಮೇಲೆ ಹೊರಟು ಕುಲು ತಲುಪಲು ಹೆಚ್ಚು ಸಮಯ ಹಿಡಿಯಲಿಲ್ಲ. ಕುಲುವಿನ ಘಾಟಿನಲ್ಲಿರುವ ಹೋಟೆಲ್ ಒಂದರಲ್ಲಿ ಪರೋಟ ಹಾಗು ದಹಿ ತಿಂದಾಗ ಹಸಿವು ತಣ್ಣಗಾಯಿತು. ತಡಮಾಡದೆ ಅಲ್ಲಿಂದ ಹೊರಟು ಮಧ್ಯಾಹ್ನ ಚಂಡೀಗಡ್ ಸೇರಿದಾಗ ೩ ಘಂಟೆ.
ಹೈ ವೆ ಪಕ್ಕದ ಹೋಟೆಲ್ ನಲ್ಲಿ ಊಟ ಮುಗಿಸಿ ನೇರವಾಗಿ ದೆಹಲಿಯ ರಸ್ತೆ ಹಿಡಿಯುವ ಮುನ್ನ ಕರೋಲ್ ಬಾಗ್ ನಲ್ಲಿ ಒಂದು ಅರಿಹಂತ್ ಇನ್ ಎಂಬ ಹೋಟೆಲ್ ಬುಕ್ ಮಾಡಿದೆವು.

ಕರೋಲ್ ಬಾಗ್, ದೆಹಲಿ :

ಜನಸಂದಣಿಯ ಮಧ್ಯದಲ್ಲಿ , ಟ್ರಾಫಿಕ್ ನಲ್ಲಿ ಸುತ್ತಾಡಿ ಹರಸಾಹಸ ಪಟ್ಟು ಹೋಟೆಲ್ ಹುಡುಕುವಷ್ಟರಲ್ಲಿ ರಾತ್ರಿಯಾಗಿತ್ತು .ಚೆಕ್ ಇನ್ ಆಗಿ ಸ್ವಲ್ಪ ಫ್ರೆಶ್ ಆಗಿ ಕರೋಲ್ ಬಾಗ್ ನ ಬೀದಿಯಲ್ಲಿ ಊಟ ಮಾಡಲು ಹೊರಟೆವು. ದೆಹಲಿಯ ಪ್ರಮುಖ ವ್ಯಾಪಾರೀ ಕೇಂದ್ರಗಳಲ್ಲಿ ಒಂದಾದ ಇಲ್ಲಿ ಬಗೆ ಬಗೆಯ ತಿಂಡಿ ತಿನಿಸುಗಳುಸೆಳೆಯುತ್ತಿದ್ದವು. ಪ್ರಸಿದ್ಧ ಶವರ್ಮಾ ರೋಲ್ ಜೊತೆಗೆ ಬಿರಿಯಾನಿ ತಿಂದು ಹೋಟೆಲ್ ಗೆ ಬಂದು ಮಲಗಿದೆವು.

ಕೊನೆಯ ದಿನ :

ಬೆಳಿಗ್ಗೆ ಬೇಗ ಎದ್ದು VRL ಆಫೀಸ್ ಗೆ ಹೋಗಿ ಬುಲೆಟ್ ಗಳನ್ನು ಕಾರ್ಗೋ ಗೆ ಕಳಿಸುವುದು ಪ್ರಮುಖವಾದ ಕೆಲಸವಾಗಿತ್ತು. ಬೆಂಗಳೂರಿಗೆ ರಾತ್ರಿ ೧೦ ಘಂಟೆಗೆ ಫ್ಲೈಟ್ ಬುಕ್ ಆಗಿರುವುದರಿಂದ ಸುಮಾರು ಕಾಲಾವಕಾಶ ದೊರೆಯುವುದರಿಂದ, ಸ್ವಲ್ಪ ದೆಹಲಿಯ ಸುತ್ತ ಸುತ್ತಾಡೋಣ ಎಂದು ಕೊಂಡೆವು.

img_0464

VRL ಆಫೀಸ್ ಗೆ ಹೋಗಿ ಸುಸಜ್ಜಿತವಾದ ಬೋನಿನಲ್ಲಿ ನಮ್ಮ ಬುಲ್ಲೆಟ್ಗಳನ್ನು ಹಾಕಿ, ಬಿಗಿಗೊಳಿಸಿ ಬೆಂಗಳೂರಿನ ಅಡ್ರೆಸ್ ಬರೆದು ಅಲ್ಲಿಂದ ಹೊರಟಾಗ ಏನನ್ನೋ ಕಳೆದುಕೊಂಡಂತಹ ಅನುಭವ. ಮಧ್ಯಾಹ್ನ 1 ಘಂಟೆ ಆಗಿರುವುದರಿಂದ ಅಲ್ಲೇ ಊಟ ಮುಗಿಸಿ, ಟಾಂಗಾ ಏರಿ ಮೆಟ್ರೋ ಸ್ಟೇಷನ್ ಕಡೆಗೆ ಹೊರೆಟೆವು. ಮುಂಬೈ ನ ಲೋಕಲ್ ಟ್ರೈನ್ ಗಳನ್ನು ನಾಚಿಸುವ ನೂಕು ನುಗ್ಗಲು ದೆಹಲಿಯ ಮೆಟ್ರೋದಲ್ಲಿ , ದೆಹಲಿಯ ಪ್ರತಿಯೊಂದು ನಗರವು ಮೆಟ್ರೋ ದಿಂದ ಕನೆಕ್ಟ್ ಆಗಿದ್ದು, ಅತಿಯಾಗಿ ಜನರು ಮೆಟ್ರೋವನ್ನು ಅವಲಂಬಿಸಿದ್ದಿದ್ದು ಬಾಹ್ಯ ನೋಟಕ್ಕೆ ಕಾಣುತ್ತಿತ್ತಾದರೂ, ಟ್ರಾಫಿಕ್ ಏನು ಅಷ್ಟೊಂದು ಕಡಿಮೆ ಅನಿಸಲಿಲ್ಲ. ನೇರವಾಗಿಅಲ್ಲಿಂದ ಇಂಡಿಯಾ ಗೇಟ್ ಕಡಗೆ ಹೊರಟು , ಪಾರ್ಲಿಮೆಂಟ್ ಭವನ ಹಾಗು ಇಂಡಿಯಾ ಗೇಟ್ ಪಕ್ಕ ನಿಂತು ಫೋಟೋ ತೆಗೆಸಿಕೊಳ್ಳುವಾಗ ದೂರದರ್ಶನದಲ್ಲಿ ಎಷ್ಟೋ ಬಾರಿ ನೋಡಿದ ಸ್ಥಳಗಳ ಮೆಲುಕು.

ಮತ್ತೆ ಅದೇ ಮೆಟ್ರೋ ಹಿಡಿದು ನಮ್ಮ ಹೋಟೆಲ್ ಗೆ ಹೋಗಿ ಚೆಕ್-ಔಟ್ ಮಾಡಿ ಏರ್ಪೋರ್ಟ್ ಕಡೆಗೆ ಹೊರಟೆವು.

ಈ ಕನಸಿನ ಪ್ರವಾಸದ ಕೊನೆಯ ಸೆಲ್ಫಿ , ನಾನು ಹೊರಡುವ ಮೊದಲ ವಿಮಾನಯಾನದ ಮುಂದೆ ನಿಂತು ತೆಗೆದಾಗ ಏನೋ ಸಾದಿಸಿದ ಹುಮ್ಮಸ್ಸು. ಅದನ್ನು ಫೇಸ್ಬುಕ್ ನಲ್ಲಿ ಹಾಕಿ, ವಿಮಾನ ವನ್ನು ಏರಿ ಕುಳಿತುಕೊಂಡೆವು.

img_0455

ನಕ್ಷೆಯಲ್ಲಿ ದೂರ ಎಂದೆನಿಸಿದ ಊರುಗಳು, ಇಲ್ಲೇ ಪಕ್ಕದಲ್ಲಿವೆ ಎಂಬ ಭಾವನೆ ಇಂದು, ಯಾರೆಲ್ಲ ಅಪರಿಚಿತರು ಎಂದುಕೊಂಡವರೆಲ್ಲ ಎಲ್ಲೋ ಹತ್ತಿರದವರು ಎನಿಸುವಂತಹ ಕಲ್ಪನೆ, ಪ್ರಯಾಣ ಎಂಬುದು ನಿಜವಾಗಲೂ ಒಂದು ಪಾಠ.
ಲೇಹ್ ಲಡಾಖ್ ಹೋಗಬೇಕು ಎಂಬ ಕನಸಿನ ಕಿರೀಟಕ್ಕೆ, ಕಾಶ್ಮೀರದಿಂದಕನ್ಯಾಕುಮಾರಿ ಎಂಬ ರೆಕ್ಕೆ ಸಿಕ್ಕಿಸಿ, ಅದನ್ನು ತೊಟ್ಟು ಒಮ್ಮೆ ಹಿಂದಿರುಗಿ ನೋಡಲು, ಪಯಣಿಸಿದ ದಾರಿ ಒಂದು ಪುಟ್ಟ ಪ್ರಪಂಚ.ನಾನು ಕಂಡಂತೆ ನಮ್ಮ ದೇಶ ನಮ್ಮ ಉಹೆಗಿಂತ ಮಿಗಿಲಾಗಿ ಸುಂದರವಾಗಿದೆ. ನೈಸರ್ಗಿಕವಾಗಿ ಇದು ನಿಜಕ್ಕೂ ಸ್ವರ್ಗ.
ಜಾತ್ಯಾತೀತತೆಯಲ್ಲಿ ಏಕತೆ, ಅತಿಥಿ ದೇವೋ ಭವ ಅನ್ನೋ ಪದಗಳ ಅರ್ಥ ಹುಡುಕಿ ನೀವು ದೇಶಾಂತರ ಹೊರಟು ನೋಡಿ. 
ಅದರ ಅರಿವು ನಿಮ್ಮನ್ನು ಮಂತ್ರಮುಗ್ಧ ನಾಗಿಸಿ ಇದು ನನ್ನ ದೇಶ, ನಮ್ಮಜನ ಅನ್ನೋವಷ್ಟು ಮಟ್ಟಿಗೆ ಮೋಡಿ ಮಾಡಿ ನಿಮ್ಮಲ್ಲಿರುವ
ಇನ್ನೊಂದು ವ್ಯಕ್ತಿತ್ವವನ್ನು ಹೊರತರುತ್ತದೆ ಅನ್ನುವುದು ನನ್ನ ಭಾವನೆ.ಅಪ್ಪನಿಗೆ ಕೊನೆಯ ಬಾರಿ ಸುಳ್ಳು ಹೇಳುವುದಾಗಿ ಅಂದುಕೊಂಡು, ಫೋನ್ ಮಾಡಿ ಮನೆಯಲ್ಲಿಯೇ ಊಟ ಮುಗಿಸಿರುವುದಾಗಿ ತಿಳಿಸಿ ಗುಡ್ ನೈಟ್ ಹೇಳಿದಾಗ, ಊರಿಗೆ ಹೋಗಿ ಸತ್ಯವನ್ನು ಹೇಗೆ ಹೇಳುವುದು ? ಹೇಳಿದ ಮೇಲೆ ಅವರ ಪ್ರತಿಕ್ರಿಯೆ ಹೇಗಿರಬಹುದು ?
ಎಂದು ಊಹಿಸಿಕೊಂಡು ನನಗೆ ನಾನೆ ಸಮಾಧಾನಮಾಡಿಕೊಳ್ಳುತ್ತ, ಅವರು ನಿನ್ನ ಸಾಧನೆಗೆ ಮೆಚ್ಚುವರು ಎಂದುಕೊಂಡೆನು.

ನಮ್ಮ ಈ ಪ್ರಯಾಣಕ್ಕೆ ಶುಭಹಾರೈಸಿದ ಎಲ್ಲ ಮಿತ್ರರಿಗೂ , ದಾರಿಯುದ್ದಕ್ಕೂ ಸಹಕರಿಸಿದ ಎಲ್ಲ ಹೊಸ ಪರಿಚಯಸ್ಥರಿಗೂ ವಾಟ್ಸಾಪ್ ನಲ್ಲಿ ..ವೀ ಆರ್ ಕಮಿಂಗ್ ಬ್ಯಾಕ್ … ಎಂದು ಮೆಸೇಜ್ ಕಳಿಸಿದಾಗ ಏನೋ ಮನಸ್ಸಲ್ಲಿ ದ್ವಂಧ್ವ. ಪ್ರತಿಯೊಬ್ಬರಿಗೂ ಕನಸು ಇದ್ದೆ ಇರುತ್ತದೆ. ಅದನ್ನು ಪೂರೈಸಲು ಸರಿಯಾದ ಕ್ಷಣದಅವಶ್ಯಕತೆ ಇಲ್ಲ, ಕಾಣಸಿದ್ದರೆ ಇಂದೇ ಮಾರ್ಗ ಎಂಬ ಮುಂದಾಲೋಚನೆ ಇದ್ದಿದ್ದರೆ ಈ ಕನಸು, ಕನಸು ಎನಿಸಿಕೊಳ್ಳುವ ಮೊದಲೇ ಅನುಭವಿಸಬಹುದಾಗಿತ್ತು ಎನಿಸಿತು. ಕ್ರಮಿಸಿದ ದೂರ ಚಿಕ್ಕದು ಎನಿಸತೊಡಗಿತು.“ಅಲೆಮಾರಿಗಳ ಜಗತ್ತಿನಲ್ಲಿ ಅಪರಿಚಿತರಿಲ್ಲ.” ಅದ್ಭುತವಾದ ಹೇಳಿಕೆಯನ್ನು ಕೊಟ್ಟ ಮಹಾನುಭಾವ ಯಾರೆಂದು
ಅಲೆಮಾರಿಗಳೇ ಹುಡುಕಬೇಕು. ಕನ್ಯಾಕುಮಾರಿಯಿಂದ ಹೊರಟು ಕಾಶ್ಮೀರದ ಕಣಿವೆಯಲ್ಲಿ ಮನಸ್ಸು ಮುಗುಳ್ನಗುತ್ತಾ ಉಸಿರಾಡಿ,
ಲೇಹ್,ಲಡಾಕ್ ಮತ್ತು ಕಾರ್ಗೀಲ್ಗಳನ್ನು ಸುತ್ತಾಡಿ 22 ದಿನಗಳ ನಂತರದೆಹಲಿಯ ಏರ್‌ಫೊರ್ಟ್ನ ನಲ್ಲಿ ವಿಮಾನದ ವಿಂಡೋ ಸೀಟ್ನಲ್ಲಿ
ಕುಳಿತಾಗ ಮನಸ್ಸಿಗೆ ಏನೋ ಕಳೆದುಕೊಂಡಂತ ಕಳವಳ.ಮತ್ತೇ ಬರುವೆನು ಎಂದು ಹೇಳಿ ಕೈಬೀಸಿ ಬಂದ ಊರುಗಳು ಕರೆಯುತ್ತಿವೆ
ಅನಿಸುತ್ತಿತ್ತು. ಮೊದಲ ಬಾರಿ ನೋಡಿ, ಆಡಿದ ಹಿಮವು ಇನ್ನೂ ಅಂಗೈಯಲ್ಲಿ ಹೆಪ್ಪುಗಟ್ಟಿರುವ ಅನುಭವ. ಮೇಲಿನ ಕಣ್ಣುರೆಪ್ಪೆ
ಕುಸಿದಾಗ ಮತ್ತೆ ಕಣ್ಣ ಮುಂದೆ ಆ ಎಂದೂ ಮುಗಿಯದ ರೋಮಾಂಚಕ ರಸ್ತೆಗಳು,ನಾನು ಮತ್ತು ಆಕಾಶ್,
7450km ಓಡಿದ 2 ರಾಯಲ್ ಎನ್ಫೀಲ್ಡ್  ಬುಲೆಟ್ ಗಳು, ಅಲೆಮಾರಿಗಳಂತೆ ಕಳೆದ 22 ದಿನಗಳ ಪ್ರತಿಯೊಂದು ಕ್ಷಣಗಳು, ಲೆಕ್ಕವಿಡದಷ್ಟು ಹೊಸ ಗೆಳೆಯರು ಮತ್ತು ನೆನಪುಗಳು.

Leave a Reply

Your email address will not be published. Required fields are marked *