ಒಬ್ಬ ಹಿರಿಯರು ಇನ್ನೊಂದೆರಡು ಲಾಡ್ಜ್ ಗಳು ಇರುವುದಾಗಿ ಹೇಳಿ ಅಲ್ಲಿಗೆ ಹೋಗುವ ದಾರಿ ತೋರಿಸಿದರು.ಕೊನೆಗೆ ತುಂಬಾ ಚೌಕಾಶಿ ಮಾಡಿದ ಬಳಿಕ ಚಿಕ್ಕ ಲಾಡ್ಜ್ ನಲ್ಲಿ 800 ರೂಪಾಯಿಗಳಿಗೆ ನಮ್ಮ ವಸತಿ ನಿಗದಿಯಾಯಿತು. ನೆಲ ಮಹಡಿಯಲ್ಲೇ ಇರುವ ಹೋಟೆಲ್‌ನಲ್ಲಿ ರೋಟಿ ಮತ್ತು ಚಿಕನ್ ಕರೀ ತಿಂದು ವಾಯುವಿಹಾರಕ್ಕೆ ಹೊರಟೆವು. ನಮ್ಮ ಬೆಂಗಳೂರಿನ ತರಹದ ಚಳಿ. ದಾರಿಯಲ್ಲಿ ಸಿಹಿತಿಂಡಿಗಳ ಅಂಗಡಿಯನ್ನು ಮುಚ್ಚುತ್ತಿದ್ದ ಅಂಕಲ್ ಗೆ ಒತ್ತಾಯ ಪೂರ್ವಕವಾಗಿ ಅಂಗಡಿಯನ್ನು ಪುನಃ ತೆರೆಯಿಸಿ ಲಡ್ದೂ ಮತ್ತು ರಸಗುಲ್ಲ ಪಾರ್ಸಲ್ ಮಾಡಿಸಿಕೊಂಡು ತಿನ್ನುತ್ತಾ ಊರಿನ ಸುತ್ತಲೂ ಸುತ್ತಾಡಿಕೊಂಡು ಬಂದು ಮಲಗಿದಾಗ 12 ಆಗಿತ್ತು.
ನಮ್ಮ ಮುಂದಿನ ನಿಲ್ದಾಣ ಮನಾಲಿ ಕೇವಲ 40km ದೂರವಿದ್ದ ಕಾರಣ ನಮಗೆ ಬೇಗ ಎದ್ದು ಹೊರಡುವ ಅಗತ್ಯವಿರಲಿಲ್ಲ. ಆದರೆ ರೋಚಕವಾದ ರೋತಂಗ್ ಪಾಸ್ ನೋಡಲು ಕಾತುರರಾಗಿದ್ದೆವು. ಬೆಳಿಗ್ಗೆ ತಡವಾಗಿ ಎದ್ದು ಉಪಹಾರ ಹಾಗೂ ಮಧ್ಯಾಹ್ನದ ಊಟವನ್ನು ಒಟ್ಟಿಗೆ ಮುಗಿಸಿ (ತಲಾ ಎರಡೆರಡು ಡುಬ್ಲೆ ಬ್ರೆಡ್ ಒಮ್ಲೆಟ್) ಬ್ಯಾಗ್ ಪ್ಯಾಕ್ ಮಾಡಿಕೊಂಡು ಅಲ್ಲಿಂದ ಹೊರಟಾಗ ಮಧ್ಯಾಹ್ನ 1 ಘಂಟೆ.

ಹಸಿರು ಬಣ್ಣದ ಗುಡ್ಡಗಳ ಮೇಲೆ ಹರಡಿರುವ ಶ್ವೇತ ಹಿಮರಾಶಿ. ಸರಾಸರಿ 100 ಮೀಟರ್ ಗಳಲ್ಲಿ ಒಬ್ಬರಂತೆ ನಮ್ಮನ್ನು ದಾಟಿ, ಕೈಬೀಸಿ ಹೋಗುವ ರೈಡರ್ಗಳು. ಬಳ್ಳಿಗಳಂತೆ ಬಳುಕುವ ರಸ್ತೆ ಅಲ್ಲಲ್ಲಿ ನವೀಕರಣ. ಇನ್ನೊಂದೆಡೆ ಪ್ರಪಾತ, ಪ್ರಕ್ರತಿಯ ಸೌಂದರ್ಯಕ್ಕೆ ಎಲ್ಲವೂ ವಶೀಕರಣ. ಸ್ವಲ್ಪ ದೂರ ಹೋಗುತ್ತಿದ್ದಂತೆ ಬಾರಿ ಟ್ರಾಫಿಕ್ ಜಾಮ್. ಸಿಗ್ನಲ್ ಏನಾದರೂ ಇರಬಹುದಾ? ಎಂದು ಹುಡುಕುತ್ತಾ, ಸಂದಿ ಗೊಂದಿಯಲ್ಲಿ ನುಸುಳುತ್ತಾ ಮುಂದೆ ತಲುಪಿದರೆ, ರಸ್ತೆ ಕಾಮಗಾರಿಗಾಗಿ ಗುಡ್ಡಗಳನ್ನು ಡೈನಮೈಟ್ ಬಳಸಿ ಸ್ಪೋಟಿಸುತ್ತಿದ್ದಾರೆ. ದೊಡ್ಡ ದೊಡ್ಡ ಗಾತ್ರದ ಬಂಡೆಗಳು ಉರುಳಿ ಪ್ರಪಟವನ್ನು ಸೇರುವುದನ್ನು ನೋಡುವಾಗ, ನಮ್ಮ ಹಳ್ಳಿಯ ನದಿಯಲ್ಲಿ ಡೈನಮೈಟ್ ಬಳಸಿ, ಸತ್ತು ತೇಲುವ ಮೀನುಗಳನ್ನು ಈಜಾಡಿ, ಹಿಡಿದು ದಡದಲ್ಲಿ ಬೆಂಕಿ ಮಾಡಿ, ಅಡಿಗೆ ಮಾಡಿ ಊಟ ಮಾಡುತ್ತಿದ್ದ ಪ್ರಾಥಮಿಕ ಶಾಲಾ ದಿನಗಳು ನೆನಪಿಗೆ ಬಂದವು.
ಯುದ್ದದ ಸನ್ನಿವೇಶದಂತೆ 1 ಘಂಟೆ ಅಲ್ಲೇ ಕಳೆದು, ಕೊನೆಗೆ ಅಲ್ಲಿಂದ ಹೊರಟಾಗ ಧಾರಾಕಾರ ಮಳೆ ಶುರುವಾಯಿತು. ಬ್ಯಾಗ್ ಗಳೆಲ್ಲ ಟಾರ್ಪಾಲ್ಗಳಿಂದ ಸುತ್ತಿ ಬಂದೋಬಸ್ತ್ ಮಾಡಿದ್ದರಿಂದ, ಮಳೆಯಲ್ಲೇ ನೆನೆಯುತ್ತಾ ರೋತಂಗ್ ಪಾಸ್ ಪ್ರವೇಶಿಸಿದ್ದೆವು. ಮತ್ತೆ ಆಫ್ ರೋಡಿಂಗ್. ಮಳೆಯ ನೀರಿಗೆ ಗೊಚ್ಚೆ ಯಾಗಿರುವ ದೂಳಿನ ರಸ್ತೆ, ಮಳೆಯೊಂದಿಗೆ ಮಂಜು ಸೇರಿ, ಫಾಗ್ ಲೈಟ್ ಹಾಕಿಕೊಂಡರೂ ಸುಮಾರು 5 ಮೀಟರ್ ದೂರವಷ್ಟೇ ಕಾಣುವ ರಸ್ತೆಯಲ್ಲಿ 10km ಪ್ರತಿ ಘಂಟೆ ವೇಗದಲ್ಲಿ ಚಲಿಸಿದರೂ, ಹಿಂದೆ ಬಂಗೀ ರೋಪ್ ಗೆ ಕಟ್ಟಿದ್ದ ಸ್ಪೇರ್ ಹೆಲ್ಮೆಟ್ ಕಳೆದು ಹೋಗಿರುವುದು ಗಮನಕ್ಕೆ ಬಂದಿದ್ದು ನಿಂತು ಹಿಂದೆ ನೋಡಿದಾಗಲೇ. ತುಂಬಾ ಇಷ್ಟವಾದ ಹೆಲ್ಮೆಟ್ ಕಳೆದುಕೊಂಡಿದ್ದಕ್ಕೆ ಮರುಕವಾಗುತ್ತಿತ್ತು. ಹಿಂದಿರುಗಿ ಹೋಗುವುದೋ ಬೇಡವೋ ಎಂದುಕೊಳ್ಳುತ್ತಿರುವಾಗಲೇ, ಕಾರ್ ನಲ್ಲಿ ನಮ್ಮ ಹಿಂದೆ ಬರುತ್ತಿದ್ದ ಯಾರೋ ಹೆಲ್ಮೆಟ್ ಕೊಟ್ಟು ಹೊದರು. ಅವರಿಗೆ ಮುಗುಳ್ನಗೆಯೊಂದಿಗೆ ಒಂದು ಥ್ಯಾಂಕ್ಸ್ ಹೇಳಿ ನೇರವಾಗಿ ರೋತಂಗ್ ಪಾಸ್ ಹೈ ಟಾಪ್ ತಲುಪಿದಾಗ ಮಳೆ ಬೆಚ್ಚನೆ ಕಡಿಮೆಯಾಗಿತ್ತು. ನಮ್ಮ ದುರದ್ರಷ್ಟಕ್ಕೆ ಸುತ್ತಲೂ ಮೋಡ ಕವಿದ ವಾತಾವರಣ ಇರುವುದರಿಂದ ರೋತಂಗ್ ಪಾಸ್ ನಾ ಸೌಂದರ್ಯವನ್ನು ನೋಡಲಾಗುತ್ತಿಲ್ಲ ಎಂದುಕೊಳ್ಳುವಷ್ಟರಲ್ಲಿ, ಸೂರ್ಯನ ಕಿರಣಗಳು ಬೆನ್ನಟ್ಟಿ ಬಂದು ಕ್ಷಣಾರ್ಧದಲ್ಲಿ ಮಂಜನ್ನು ಆರಿಸಿ, ರೋತಂಗ್ ಪಾಸ್ ಅನ್ನು ಶುದ್ದಗೊಳಿಸಿತ್ತು.
ಫೋಟೋ ತೆಗೆಸಿಕೊಂಡು ಅಲ್ಲಿಂದ ಹೊರಡಲು ಮತ್ತೆ ಮಳೆ ಒಕ್ಕರಿಸಿತ್ತು. ರೋತಂಗ್ ಪಾಸ್ ದಾಟಿ ರೋಡ್ ಬದಿಯಲ್ಲಿರುವ ಹೋಟೆಲ್‌ನಲ್ಲಿ ಫ್ಯಾನ್ ಕೆಳಗಡೆ ಕುಳಿತು ಬಟ್ಟೆ ಒಣಗಿಸಿಕೊಳ್ಳುತ್ತಾ ಮೊದಲು ಚಹಾ ಕುಡಿದು, ಹಸಿವೆಗೆ ರೋಟಿ ಚಿಕನ್ ಕರೀ ಆರ್ಡರ್ ಮಾಡಿದೆವು. ಹೋಟೆಲ್ ನಾ ಮಾಣಿ ಬಂದು “ಈ ಚಳಿಗೆ, ಮನಾಲಿಗೆ ಬಂದು ಮನಾಲಿ ಮಾಲ್ ಟ್ರೈ ಮಾಡದಿದ್ದರೆ ಹೇಗೆ?…ಜಾಯಂಟ್ ಮಾಡಿ ಕೊಡಲಾ..?” ಎಂದು ಕೇಳಿದ. ನಾವು ಬೇಡ ಗುರು ಎಂದು ಸನ್ನೆಯಲ್ಲೇ ಹೇಳಬೇಕಾಯಿತು. ಊಟ ಮುಗಿಸಿ ಅಲ್ಲಿಂದ ಹೊರಟು ಮನಾಲಿ ಹೋಟೆಲ್ ತಲುಪಿದೆವು. ಗುಡ್ಡದ ತಪ್ಪಲಲ್ಲಿರುವ ಹಿಮಾಲಯನ್ ರೀಜೆನ್ಸೀ ಎಂಬ ಹೋಟೆಲ್ ನಮ್ಮ ಉಹೆಗೆ ಮೀರಿ ಸುಂದರವಾಗಿತ್ತು.
ಬಿಸಿ ನೀರಿನಲ್ಲಿ ಸ್ನಾನ ಮಾಡಿ ಹೋಟೆಲ್ ನ ಸನಿಹದಲ್ಲೇ ಇರುವ ಪ್ರಸಿದ್ದ ಹಡಿಂಬಾ ದೇವಸ್ಥಾನ ನೋಡಲು ಹೊರಟೆವು. ಸುಮಾರು ಕ್ರೀ. ಶ 1553 ರಲ್ಲಿ ನಿರ್ಮಿಸಲಾಗಿದೆ ಎನ್ನಲಾದ ಈ ದೇವಸ್ಥಾನಕ್ಕೆ ಅದರದೇ ಆದ ಅಸ್ತಿತ್ವ ಹಾಗೂ ಪೌರಾಣಿಕ ಕಥೆಯಿದೆ. ರಾಕ್ಷಸ ಕುಲದ ಹಡಿಂಬಾ ದೇವಿ , ಪಂಚ ಪಾಂಡವರಲ್ಲಿ ಒಬ್ಬನಾದ ಭೀಮ ನನ್ನು ವರಿಸಿದ ಕಥೆಯನ್ನು ಅಲ್ಲಿ ಬರೆಯಲಾಗಿತ್ತು. ಅವರಿಬ್ಬರಿಗೆ ಜನಿಸಿದ ಘಟೋದ್ಗಜ ಹೆಸರಲ್ಲಿ ಒಂದು ಬ್ರಹತ್ ಆಕಾರದ ಮರ ಅಲ್ಲೇ ಸ್ವಲ್ಪ ದೂರದಲ್ಲಿ ಪೂಜಾ ಸ್ಥಾನವಾಗಿದ್ದು. ವಿಶೇಷವೆಂದರೆ ಬುರ್ಖಾ ಧರಿಸಿದ ಮಹಿಳೆಯರು ಬಂದು ದೇವಿಗೆ ನಮಸ್ಕರಿಸುತ್ತಿದ್ದುದು ನೋಡಿ, ಹೀಗೂ ಉಂಟೆ? ಎನಿಸಿತು.

ಪಕ್ಕದಲ್ಲೇ ಇರುವ ಅಂಗಡಿಗಳಲ್ಲಿ ಚಿಕ್ಕ ಪುಟ್ಟ ಶಾಪಿಂಗ್ ಮಾಡಿ, ಹೋಟೆಲ್ ಸೇರಿಕೊಂಡೆವು. ರಾತ್ರಿ 10 ಘಂಟೆಗೆ ಹೊಸದಾಗಿ ಬಿಡುಗಡೆಯಾಗಿರುವ ಭಾಯಿ ಸಲ್ಮಾನ್ ನ “ಸುಲ್ತಾನ್” ಚಿತ್ರ ಬುಕ್ ಮೈ ಶೋ ನಲ್ಲಿ ಬುಕ್ ಮಾಡಿದೆವು. ಸರಿಯಾದ ಸಮಯಕೆ ಪಿಕ್ಕಾಡೆಲ್ಲಿ ಥಿಯೇಟರ್ ಗೆ ಹೋಗಿ, ಹೊರಗಡೆ ಪ್ರದರ್ಶನಕ್ಕೆ ಇಟ್ಟಿರುವ ಹಳೆಯ ಬಾಬ್ಬೀ ಮೂವೀ ಯಲ್ಲಿ ಬಳಸಲಾಗಿದೆ ಎನ್ನಲಾದ ಸ್ಕೂಟರ್ ಹಾಗೂ ಕಾರ್ ನೊಂದಿಗೆ ಫೋಟೋ ತೆಗೆಸಿಕೊಂಡು ಸುಲ್ತಾನ್ ಮೂವೀ ನೋಡಲು ಕುಳಿತುಕೊಂಡೆವು.
ಮೂವೀ ಮುಗಿಸಿ, ರಾತ್ರಿ 1 ಘಂಟೆಗೆ ರಸ್ತೆ ಬದಿಯಲ್ಲಿರುವ ಫುಟ್ಪಾತ್ ಹೋಟೆಲ್ನಲ್ಲಿ ಜೀರ ರೈಸ್ ಜೊತೆಗೆ ತವಾ ಚಿಕನ್ ತಿಂದು ಹೋಟೆಲ್ ತಲುಪಿದಾಗ ರಾತ್ರಿ 2 ಘಂಟೆಯಾಗಿತ್ತು. ಚಿಕ್ಕದಾಗಿ ಜಿನುಗು ಮಳೆ ಮನಲಿಯಲ್ಲಿ ಹನಿ ನೀರಾವರಿ ಮಾಡುತ್ತಿತ್ತು. ಬೇಲಿಗೆ ಬೇಗ ಎದ್ದು ದೆಹಲಿ ತಲುಪಬೇಕು. ಮಲಗಿದರೂ ನಿದ್ದೆ ಬರಲಿಲ್ಲ. ಎಲ್ಲೋ ಮನಸ್ಸಿನ ಒಂದು ಕಡೆ ಸ್ಪಿತಿ ವ್ಯಾಲೀ ನೋಡಲಾಗದ ಕೊರಗು ಕಾಡುತ್ತಿತ್ತು. ಗೂಗಲ್ ಮ್ಯಾಪ್ ಓಪನ್ ಮಾಡಿ ನೋಡಿದಾಗ ದೆಹಲಿ 540km ದೂರವಿದೆ ಎಂದು ತೋರಿಸಿತು.
. (ಮುಂದುವರೆಯುವುದು……ಕೊನೆಯ ಬಾರಿ….)



5 Comments
ಸರ್ ನಿಮ್ಮ ಈ “ಸಾಹಸಯಾತ್ರೆ”ಗೆ ಒಟ್ಟು ಹಣ ಖರ್ಚಾಯಿತು ??
ತಿಳಿಸಲು ಸಾಧ್ಯವೇ?
ಅದರ ವಿವರಗಳನ್ನು ನಿಮಗೆ ಮೇಲ್ ಮಾಡುತ್ತಿದ್ದೇನೆ . ಧನ್ಯವಾದಗಳು 🙂
Sir nangu details kodtira
Hey VJ. Congrats. I love the title. ondu autograph kottu bidi Sir
Haha…LObo ma’am 🙂 ella nimma aashirvada….