Home / ಭಾವನೆಗಳ ಬಾಗಿಲು ತೆರೆದು / ಅಲೆಮಾರಿಗಳ ಜಗತ್ತಿನಲ್ಲಿ ಅಪರಿಚಿತರು ಯಾರು?(ಭಾಗ 12)

ಅಲೆಮಾರಿಗಳ ಜಗತ್ತಿನಲ್ಲಿ ಅಪರಿಚಿತರು ಯಾರು?(ಭಾಗ 12)

img_1804

ಹೊಟ್ಟೆ ಹಸಿಯುತ್ತಿದ್ದರಿಂದ ಕಾರ್ಗಿಲ್ ನಿಂದ ಆಚೆ ರಸ್ತೆ ಬದಿಯ ಚಿಕ್ಕ ಗುಡಿಸಿಲಿನಂತಹ ಹೋಟೆಲ್ ನಲ್ಲಿ ಊಟ ಮಾಡಿದೆವು.ಕಾರ್ಗೀಲ್‌ನಿಂದ ಲಮಾಯೂರು ಹೋಗುವ ದಾರಿಯಲ್ಲಿ ಸುಮಾರು 8km ವರೆಗೂ ರಸ್ತೆ ಕಾಮಗಾರಿ ನಡೆಯುತ್ತಿದ್ದುಅಲ್ಲಿಯವರೆಗೆ ಕಚ್ಚಾ ರಸ್ತೆ ಇರುವುದು.ಅಲ್ಲಿಂದ ಮುಂದೆ ಲೇಹ್ ವರೆಗೂ ಹೋಗುವುದೇ ಗೊತ್ತಾಗುವುದಿಲ್ಲ ಅಷ್ಟು ಸುಂದರವಾಗಿದೆ ಎಂದು ಕೇಳಿದವರು ಹೇಳಿದರು.

img_1770

ಬೆಳಿಗ್ಗೆ ಬೇಗ ಎದ್ದಿದ್ದರಿಂದ ಒಂದೆಡೆ ನಿದ್ದೆ ಎಳೆಯುತ್ತಿತ್ತು.ಇಲ್ಲೆ ಇದ್ದು ಚೆನ್ನಾಗಿ ನಿದ್ದೆ ಮಾಡಿ ನಾಳೆ ಬೆಳಿಗ್ಗೆ ಹೊರಡುವುದೋ ಅಥವಾ ಇಂದೇ ಹೋಗಿ ತಲುಪುವುದೋ ಎಂಬ ಧ್ವಂದ್ವದಲ್ಲಿ ಕೊನೆಗೂ ಲೇಹ್ ಹೋಗಿಬಿಡೋಣ ಎಂದು ನಿರ್ಧರಿಸಿದೆವು.

ಆ 7-8 km ಕಚ್ಚಾ ರಸ್ತೆಯ ನಂತರ ಆ ಕನಸಿನ ರಸ್ತೆ ದೊರೆಯಿತು. ಮಣ್ಣಿನ ಹುತ್ತಗಳಂತಿರುವ ಬ್ರಹತ್ ಆಕಾರದ ಗುಡ್ಡಗಳು  ಇಕ್ಕೆಲಗಳಲ್ಲಿ. ಮಧ್ಯದಲ್ಲಿ ಶಾಂತವಾಗಿ ಹಾವಿನಂತೆ ಮಲಗಿರುವ ಕಪ್ಪು ಬಣ್ಣದ ರಸ್ತೆ. ಗುಡ್ಡಗಳಿಗೆ ಪ್ರದಕ್ಷಿಣೆ ಹಾಕುವಂತೆಸುತ್ತುವ ರಸ್ತೆಯಲ್ಲಿ ವ್ಯತ್ಯಾಸಗಳಿರಲಿಲ್ಲ. ಸುತ್ತಿದಷ್ಟು ಮತ್ತೆ ಬರುವ ಒಂದೇ ತರಹದ ಆ ಲ್ಯಾಂಡ್ ಸ್ಕೇಪ್. ಎಂದೋ ಇಮಾರ್ಟಲ್ಸ್ ಆಫ್ ಮೇಲುಹ ಕಾದಂಬರಿಯ ಮೊದಲ ಅಧ್ಯಾಯದಲ್ಲಿ ಶಿವನು ಆಚೆ ಬಂದು, ಭಂಗಿಯನ್ನು ಎಳೆದು ಸುತ್ತ ಒಮ್ಮೆಕಣ್ಣಾಡಿಸಿದ ಎಂದಾಗ ಮನದಲ್ಲಿ ಬಂದ ಮಾನಸ ಸರೋವರದ ಕಲ್ಪನೆ ಇದೇ ಎಂಬ  ನಿಲುವು ಮನದಲ್ಲಿ. ಆ ತಿರುವು ಮರುವಿನ ಮತ್ತೆ ಮತ್ತೆ ಬಂದು, ನಾವು ಅದೇ ಬೆಟ್ಟವನ್ನು ಸುತ್ತುತ್ತಿದ್ದೇವೆ ಎಂಬ ಭ್ರಮೆಯನ್ನು ಮೂಡಿಸುವ ಆ ಮಾಯಾ ರಸ್ತೆಯುಎಂಥವರನ್ನೂ ಮಂತ್ರ ಮುಗ್ಧವಾಗಿಸಬಲ್ಲದು. ಕೆಲವು ಹೊತ್ತಿನ ಬಳಿಕ ಲಮಾಯೂರು ತಲುಪಿ, ಹೋಟೆಲ್ ಒಂದರಲ್ಲಿ ಚಹಾ ಕುಡಿದಾಗ ಇನ್ನೂ ಕಣ್ಣಲ್ಲಿ ನಿದ್ದೆ ಕಾಡುತ್ತಿತ್ತು.

ಹೋಟೆಲ್ ಮಾಲಿಕನು ನಮ್ಮ ಪ್ರಯಾಣದ ಬೋರ್ಡ್ ನೋಡಿ, ನಮ್ಮ ಲಡಾಖ್ ಭಾರತದ ತುದಿ ಹಾಗೂ ಎತ್ತರದ ಪ್ರದೇಶ. ನೀವು ಕನ್ಯಾಕುಮಾರಿಯಿಂದ ಲಡಾಖ್ ವರೆಗೆ ಎಂದು ಹಾಕಿಕೊಳ್ಳಬೇಕಿತ್ತು ಎಂದಾಗ ತಿಳಿದದ್ದು ಅಲ್ಲಿ ಜಮ್ಮು, ಕಾಶ್ಮೀರ ಮತ್ತುಲಡಾಖ್ ಎಂಬ 3 ಪ್ರಾಂತ್ಯಗಳನ್ನು ಒಳಗೊಂಡಿದ್ದು, ಅವರಲ್ಲಿ ತಮ್ಮದೇ ಆದ ಬೇರೆ ಬೇರೆ ತತ್ವಗಳಿವೆ. ಲಡಾಖ್ ನವರು ತಮ್ಮದೇ ಆದ ಬೇರೆ ಪ್ರಾಂತ್ಯವನ್ನು ಕೇಳುತ್ತಿದ್ದಾರೆ, ಆದರೆ ಹಿಮಾಚಲದವರು ಸ್ಪಿತಿಯನ್ನು ಕೊಡಲು ಒಪ್ಪುತ್ತಿಲ್ಲ. ಎಂದು ಆಕಾಶ್ಹೇಳಿದಾಗ ತಿಳಿಯಿತು. ಲೇಹ್ ಮೇಲೆ ಟಿಬೇಟ್ನ ಪ್ರಭಾವವಿದೆ. ಅಲ್ಲಿನ ಜನರ ಭಾಷೆ, ಸಂಸ್ಕ್ರತಿ ಮತ್ತು ದಿನಾಚಾರಿಗಳೆಲ್ಲವೂ ಟಿಬೇಟ್ನಿಂದ ಧಾರೆ ಪಡೆದುಕೊಂಡಿರುವುದು. ನೂರ್ಳಾ, ಆಲ್ಚಿ , ಲೀಕಿರ್ ಗಳನ್ನು ದಾಟಿ, ಅಲ್ಲಲ್ಲಿ ಮಧ್ಯದಲ್ಲಿ ಸಿಗುವ ಸ್ಥೂಪಗಳನ್ನುನೋಡಿಕೊಂಡು, ಕತ್ತಲಾಗುವ ಮುಂಚೆ ಮ್ಯಾಗ್ನೆಟಿಕ್ ಹಿಲ್ಸ್ ಅನ್ನು ನೋಡಬೇಕು ಎಂದುಕೊಂಡು ಗಾಡಿಯ ವೇಗವನ್ನು ಹೆಚ್ಚಿಸಿದೆವು.

img_1821

ಅಲ್ಲಲ್ಲಿ ಕಾಣುವ ರಾಷ್ಟ್ರೀಯ ಹೆದ್ದಾರಿ 1 ಎಂಬ ಫಲಕವು ರೋಮಾಂಚನವನ್ನು ಉಂಟುಮಾಡುತ್ತಿತ್ತು. ಸೂರ್ಯನಬೆಳಗಿಗೆ ಗುಡ್ಡದ ನೆರಳು ಕಣ್ಣ ಮುಚ್ಚಾಲೆ ಆಟ ಆಡುತ್ತಾ ಹೊಸ ಅನುಭವ ನೀಡುತ್ತಿತ್ತು.

img_1852

ಸಂಜೆ 5 ಘಂಟೆಯ ಸುಮಾರಿಗೆ ಮ್ಯಾಗ್ನೆಟಿಕ್ ಹಿಲ್ ತಲುಪಿದಾಗ ಸುಮಾರು ಜನರು ಅಲ್ಲಿ ನೆರೆದಿದ್ದರು. ಇತ್ತೀಚಿಗೆ ಅದರ ಪ್ರಭಾವ ಕಡಿಮೆಯಾದರೂ ಮ್ಯಾಗ್ನೆಟಿಕ್ ಶಕ್ತಿಯ ಅನುಭವ ಅಲ್ಲಿ ಗೊತ್ತಾಗುತ್ತದೆ. ನೋಡಲು ಸುಲಭವಾಗಿ ಹೋಗಬಹುದು ಎಂದುಕಾಣುವ ಆ ಗುಡ್ಡದ ಮೇಲಿನ ದಾರಿಯಲ್ಲಿ ಅರ್ಧದಷ್ಟು ಹತ್ತಿದಾಗ ಅಗೋಚರ ಶಕ್ತಿಯು ನಮ್ಮನ್ನು ಹಾಗೂ ನಮ್ಮ ವಾಹನವನ್ನು ಹಿಂದಕ್ಕೆ ತಳ್ಳಿದ ಅನುಭವವಾಗುತ್ತದೆ, ಏನೋ ತಡೆದಂತೆ ಅನಿಸುತ್ತದೆ. ಸುಮಾರು ವರ್ಷಗಳ ಹಿಂದೆ ಅದರ ಬಲ ಇನ್ನೂಹೆಚ್ಚು ಇತ್ತಂತೆ. ಇಂದಿಗೆ ತನ್ನ ಪ್ರಭಾವ ಕಳೆದುಕೊಂಡು, ತಾನು ಇದ್ದೇನೆ ಎಂದಷ್ಟೇ ಸೂಚಿಸುವ ಆ ಆಯಸ್ಕಾಂತದ ಶಕ್ತಿ ಮುಂದೊಂದು ದಿನ ಬಾರಿ ಇತಿಹಾಸವಾಗಲಿದೆ.

ನಮ್ಮಂತೆಯೇ ಮುಂಬೈ ನಿಂದ ಬಂದ ಹವ್ಯಾಸಿ ಬೈಕರ್ ಶ್ಯಾಮ್ ಹೇಳಿದ ಪ್ರಕಾರ, ಈ ರಾಷ್ಟ್ರೀಯ ಹೆದ್ದಾರಿ ಯಲ್ಲಿ ಇಲ್ಲಿಯವರೆಗೆ ಪ್ರತಿವರ್ಷ ಆಫ್-ರೋಡಿಂಗ್ ಅನುಭವ ಪಡೆಯಲು ನಾವು ಬರುತ್ತಿದ್ದೆವು. ಆ ಮಧ್ಯದಲ್ಲಿ ಸಿಗುವ ಮಣ್ಣಿನ ದಾರಿ, ಕಲ್ಲುಗಳನ್ನು ದಾಟಿ ಸಂಜೆ ಹೋಗಿ ಕಣ್ಣು ಮುಚ್ಚಿದಾಗ ಏನೋ ಸಾಧನೆ ಮಾಡಿದ, ವಿಶೇಷವಾದದ್ದನ್ನು ಸಾಧಿಸಿದ ಖುಷಿ ಸಿಗುತ್ತದೆ. ಈಗ ಎಲ್ಲೆಡೆ ರಸ್ತೆ ಕಾಮಗಾರಿ ನಡೆಯುತ್ತಿದೆ. ಮುಂದಿನ ಸೀಸನ್ ನಿಂದ ಇದು ಕೂಡ ನಮ್ಮ ಮುಂಬೈ-ಪುಣೆ ಹೈವೇ ತರಆಗಿ ಆಟೋ ಗಳೆಲ್ಲ ಬಂದು ಬಿಡುತ್ತವೆ. ಈ ಬೈಕರ್ ಗಳ ಕಾಶಿ ಮುಂದೆ ಜಾತ್ರಾಸ್ಥಳವಾಗುವುದರಲ್ಲಿ ಸಂದೇಹವಿಲ್ಲ ಎಂದಾಗ ಪಕ್ಕದಲ್ಲಿ ಒಂದು ಟಾಟಾ-ನಾನೋ ಹಾದು ಹೋಯಿತು.

img_1842

ನಮ್ಮ ಮುಂದಿನ ಪೀಳಿಗೆಯವರಿಗೆ ಎಲ್ಲಿದೆ ಈ ಆಫ್-ರೋಡಿಂಗ್ ಸೌಭಾಗ್ಯ ಎಂದು ಹೇಳಿ ನಕ್ಕು, ಅವರು ಇನ್ನೊಮ್ಮೆ ಮ್ಯಾಗ್ನೆಟಿಕ್ ಹಿಲ್ ಕಡೆ ನಡೆದರು. ನಾವು ನಮ್ಮ ಫೋಟೋಗ್ರಫೀ ಮುಂದುವರೆಸಿ, ಸೆಲ್ಫಿ ತೆಗೆದುಕೊಂಡು ಲೇಹ್ ಕಡೆ ಹೊರಟೆವು. ಸುಮಾರು  30km ದೂರವಿದ್ದ ಲೇಹ್ ನಗರ ತಲುಪಿ ಹೋಟೆಲ್ ಬುಕ್ ಮಾಡಲು ಪ್ರಯತ್ನಿಸಿದರೆ ಮೊಬೈಲ್ ನಲ್ಲಿ  ಆಗಲಿಲ್ಲ.

ಹಳೆಯ ಬಸ್ ಸ್ಟ್ಯಾಂಡ್ ಪಕ್ಕದ ಹಳೆಯ ಗುಜರಿ ಹೋಟೆಲ್ ಒಂದರಲ್ಲಿ ಹೋಗಿ ಕೇಳಿದಾಗ ಅವನು ಹೇಳಿದ ಬೆಲೆ ನಮ್ಮ ಬಜೆಟ್ ಗೆ ಮೀರಿತ್ತು. ಸುಮಾರು ಹೋಟೆಲ್‌ಗಳಲ್ಲಿ ವಿಚಾರಿಸಿದರೂ ಎಲ್ಲೂ ಖಾಲಿ ರೂಮ್ ಸಿಗಲಿಲ್ಲ. ಇಷ್ಟು ದಿನಗಳಲ್ಲಿ ಮೊದಲಬಾರಿಗೆ ಹೋಟೆಲ್ ಹುಡುಕುವುದು ತೊಂದರೆಯಾಗಿತ್ತು.

ಕೊನೆಗೂ ಬೇರೆ ದಾರಿಯಿಲ್ಲದೆ ಅದೇ ಬಸ್  ಸ್ಟ್ಯಾಂಡ್ ಪಕ್ಕದ ಜಬ್ ವೀ ಮೆಟ್ ಮಾದರಿಯ ಹೋಟೆಲ್ ಗೆ ಹೋಗಿ ವಿಚಾರಿಸಿದಾಗ ಆತ ಕೊನೆಯ ಮಳಿಗೆಯಲ್ಲಿ ನಮ್ಮ ಸಾಹುಕಾರರ ಪರ್ಸನಲ್ ರೂಮ್ ಇದೆ. ಅಲ್ಲಿ ಬೇಕಾದರೆ ಉಳಿದುಕೊಳ್ಳಬಹುದು. ಬೇರೆ ಯಾವುದೇ ರೂಮ್ ಗಳು ಖಾಲಿ ಇಲ್ಲ. ಒಂದು ರಾತ್ರಿಗೆ ಸಾವಿರದ ಐದುನೂರು ಆಗುತ್ತದೆ ಎಂದ. ಬೇರೆ ದಾರಿಯಿರಲಿಲ್ಲ. ನಮ್ಮ ಎಲ್ಲ ಲಗೇಜ್ ಗಳನ್ನು ಅಲ್ಲಿ ಡಂಪ್ ಮಾಡಿ, ಕಿಡಕಿಯೂ ಸಹ ಇರದ ಆ ಕೊಟ್ಟಿಗೆಯಂತ ರೂಮ್ ನಲ್ಲಿ ಇಂದುನಿದ್ದೆಯಂತೂ ಬರುತ್ತದೆ ಎಂದುಕೊಂಡು ಊಟ ಹುಡುಕುತ್ತಾ ಹೊರಟಾಗ ಮೊಘಲ್ ದರ್ಬಾರ್ ಹೋಟೆಲ್ ದೊರೆಯಿತು. ಮೈ ಕೊರೆಯುವ ಚಳಿಯಲ್ಲಿ ಚೆನ್ನಾಗಿ ತಿಂದು, ನಾಳೆ ಬೆಳಿಗ್ಗೆ ಮೊದಲು ಇಲ್ಲಿಂದ ಬೇರೆ ಹೋಟೆಲ್ ಗೆ ಶಿಫ್ಟ್ ಆಗಬೇಕುಎಂದುಕೊಂಡು, ಬೆಂಗಳೂರಿನಲ್ಲಿರುವ ಗೆಳೆಯ ಗಣರಾಜನಿಗೆ ಹೋಟೆಲ್ ಬುಕ್ ಮಾಡಲು ತಿಳಿಸಿದೆವು.

(ಮುಂದುವರೆಯುವುದು)

Leave a Reply

Your email address will not be published. Required fields are marked *