ಬಿಕಾನೆರ್- ಬೆಳಿಗ್ಗೆ ಎದ್ದು ಹೋಟೆಲ್ ನ ಕಿಟಕಿಯಿಂದ ಹೊರಗೆ ನೋಡಿದಾಗ ಒಂಟೆಗಳ ದಂಡು ನಮ್ಮಂತೆಯೇ ಮುಂದಿನ ಪ್ರಯಾಣಕ್ಕೆ ಸಜ್ಜಾಗುತಿತ್ತು, ಕೆಲವೊಮ್ಮೆ ಮೈಲಿಗಲ್ಲು ಗಳು ಕೈ ಬೀಸಿ ಸನ್ನೆ ಮಾಡಿಮುಂದಿನ ನಿಲ್ದಾಣದ ವಿವರಣೆ ಕೊಟ್ಟರೂ, ಹಿಂದೆ ಕಳೆದು ಹೋದ ಜಾಗಗಳ ನೆನಪುಗಳಾಗಿ ಬೇಸರ ಮೂಡಿಸುತ್ತವೆ.ಅಮೃತ್ಸರ 520km ದೂರವಿದೆ ಎಂದುಕೊಂಡು ಮುಂಜಾನೆ 6:30 ಕ್ಕೆ ನಮ್ಮಬ್ಯಾಕ್ಪ್ಯಾಕ್ ನೊಂದಿಗೆ ನಮ್ಮ ಬುಲ್ಲೆಟ್ಗಳ ಸವಾರಿ ಸಜ್ಜಾಗಿ ನಿಂತಿತ್ತು.
ಹೋಟೆಲ್ ನಲ್ಲಿಯೇ ಚಹಾ ತಿಂಡಿ ಮುಗಿಸಿ, ಗೂಗಲ್ ಮಾಪ್ಸ್ ಓಪನ್ ಮಾಡಿ ಬಿಕಾನೆರ್ ಟು ಅಮೃತ್ಸರ್ ನೋಡಿದಾಗ ಕಣ್ಣು ಕುಕ್ಕಿದ್ದು ರೋಡ್ ಮ್ಯಾಪ್ ನ ಪಕ್ಕ ಆವರಿಸಿರುವ ಪಾಕಿಸ್ತಾನಬಾರ್ಡರ್.ಎಲ್ಲೋ ಓದಿದ ನೆನಪು, ಪಾಕಿಸ್ತಾನದ ಚಹಾ ಜೀವನದಲ್ಲಿ ಒಮ್ಮೆ ಕುಡಿಯಬೇಕು ಎಂಬುದನ್ನು.ಅದು ಕೂಡ ನನ್ನ ಚೆಕ್ಲಿಸ್ಟ್ ನಲ್ಲಿ ಇದ್ದು ಅದನ್ನು ಪೂರೈಸುವ ಸನ್ನಿವೇಶವನ್ನು ಇಂದಿಗೆಕೈಗೆಟುಕದ ದ್ರಾಕ್ಷಿಯ ಕಥೆ ಗೆ ಹೋಲಿಸಿ ಆ ಮ್ಯಾಪ್ ನಾ ಸ್ಕ್ರೀನ್ಶಾಟ್ ತೆಗೆದು ವ್ಹಾಟ್ಸಪ್ಪ್ ಇಮೇಜ್ ಆಗಿ ಹಾಕಿಕೊಂಡೆ.

ಹಳೆಯ ಅರಮನೆಯಂತಹ ಚಿಕ್ಕದಾದ ಮನೆಯನ್ನು ರಾಜಸ್ಥಾನಿ ಶೈಲಿಯಲ್ಲಿ, ಕರಕುಶಲತೆಯಿಂದ ಸಮ್ರದ್ಧವಾಗಿಸಿ ಅದಕ್ಕೊಂದು ರಾಜಮನೆತನದ ರೂಪ ಕೊಟ್ಟು “ಹೋಟೆಲ್ ಭಾರತ್ ನಿವಾಸ್” ಎಂದುಮಾಡಲಾಗಿತ್ತು. ಬಿಳಿಯ ಬಣ್ಣ ಬಳಿದು ಸ್ವಚ್ಛಂದವಾಗಿ, ನೀಟಾಗಿ ಇಟ್ಟುಕೊಂಡಿದ್ದ ಆ ಹೋಟೆಲ್ ನ ವೈಭವವನ್ನು ಇನ್ನೊಮ್ಮೆ ಕಣ್ಣು ತುಂಬಿಕೊಂಡು ಅಲ್ಲಿಂದ ಹೊರಟೆವು.ಮತ್ತದೇ ಮರುಭೂಮಿಯ ಬಿಸಿಲು,ದಣಿವಿನ ಕೂಗಿಗೆ ಓಗೊಟ್ಟು ಮನ ತಣಿಸುವ ಶಿಕಂಜವಿ ನಿಂಬು ಪಾನಕದೊಂದಿಗೆ ರಾಜಸ್ಥಾನ- ಪಂಜಾಬ್ ನ ಬಾರ್ಡರ್ ಶ್ರೀ ಗಂಗಾನಗರ ತಲುಪಿದಾಗ 12 ಆಗಿತ್ತು. ಶ್ರೀ ಗಂಗಾನಗರದ ರಸ್ತೆಯುದ್ದಕ್ಕೂಕಾವಲು ಪಡೆಯ ವಾಹನಗಳು, ಸೈನಿಕರ ತುಕಡಿಗಳು.
ಅಲ್ಲಿಂದ ಹೊರಟು ಪಂಜಾಬ್ ರಾಜ್ಯ ಪ್ರವೇಶವಾದಾಗ ಎಲ್ಲೆಲ್ಲೂ ಹಸಿರು ಮತ್ತು ನೀರು. ವಿಶಾಲವಾದ ಹಸಿರು ಗದ್ದೆಯಲ್ಲಿ ನಿಂತ ನೀರು ಬಾಯಾರಿಕೆಗೆ ಆಸ್ಪದ ನೀಡಲಿಲ್ಲ. ಮರುಭೂಮಿಯ ಮುಸುಕನ್ನುಪಕ್ಕದ ರಾಜ್ಯದಲ್ಲಿ ಇಟ್ಟುಕೊಂಡು ಗಡಿಯಿಂದಲೇ ಸುಂದರವಾಗಿ ನಿಂತಿರುವ ಪಂಜಾಬ್ ಮೊದಲ ನೋಟದಲ್ಲೇ ಇಷ್ಟವಾಗಿತ್ತು. ಹಸಿರಿನ ನಡುವೆ ಹಾದುಹೋಗಿರುವ ರಾಜ್ಯ ಹೆದ್ದಾರಿಯಲ್ಲಿ ಫಿರೋಜ಼್ಪುರತಲುಪಿದ್ದು ಗೊತ್ತೇ ಆಗಲಿಲ್ಲ.ಹೊಟ್ಟೆ ಹಸಿಯುತ್ತಿತ್ತು. ಪಂಜಾಬ್ ಎಂದರೆ ನನಗೆ ಮೊದಲು ನೆನಪಾಗುವುದು ಯುವಿ, ಎರಡನೆಯದಾಗಿ ಲಸ್ಸಿ. ನೇರವಾಗಿ ಹೋಗಿ ಕುಳಿತಿದ್ದು ಪುಂಜಾಬಿ ಡಾಬಾದಲ್ಲಿ. ನಮ್ಮೂರಿನ ಹೋಟೆಲ್ಗಳಲ್ಲಿ ನೀರು ಕೊಟ್ಟು ಆರ್ಡರ್ ಕೇಳುವಂತೆ, ಅಲ್ಲಿ ಮಾಣಿ ಬಂದು ಎರಡು ಚೊಂಬಿನ ಗಾತ್ರದ ಲೋಟದಲ್ಲಿ ಲಸ್ಸಿ ಜೊತೆಗೆ ಮೆನೂ ಕಾರ್ಡ್ ಇಟ್ಟ. ಒಂದು ಫುಲ್ ಚಿಕನ್ ಮಸಾಲಾಜೊತೆಗೆ 8 ರೊಟ್ಟಿ ಆರ್ಡರ್ ಮಾಡಿ, ಲಸ್ಸಿ ಕುಡಿದಾಗ ಹೊಟ್ಟೆ ತುಂಬಿತ್ತು. ಆದರೂ ಸುಧಾರಿಸಿಕೊಂಡು ಅವರು ಕೊಟ್ಟ ಬಾಣಲೆಯ ತುಂಬಾ ಚಿಕನ್ ಮಸಾಲೆ ಹಾಗೂ ರೊಟ್ಟಿ ಮುಗಿಸಿ ,ಗೊ-ಐಬಿಬೊ ದಲ್ಲಿಹೋಟೆಲ್ ಅಮೃತ್ಸರ್ ಇನ್ನ್ ಎಂಬ ಹೋಟೆಲ್ ಬುಕ್ ಮಾಡಿ ಅಲ್ಲಿಂದ ಹೊರಟೆವು.
ಹಸಿರು ಗದ್ದೆಯ ಸುತ್ತ ಸೂರ್ಯಾಸ್ತವನ್ನು ನೋಡುತ್ತ ಅಮೃತ್ಸರ್ ತಲುಪಿದಾಗ ಸಂಜೆ 6:30. ಕಣ್ಣ ಮುಂದೆ ಕಾಣುವ ಜನರಲ್ಲಿ ಅರ್ಧ ಜನ ಸರದಾರ್ಜೀ, ಉಳಿದವರು ನಮ್ಮಂತೆಪ್ರವಾಸಿಗರಾಗಿದ್ದರು.ಹೆಸರು ಚಂದವಿದ್ದರೂ ನಗರ ಅಷ್ಟೊಂದು ಸ್ವಚ್ಛವಾಗಿರಲಿಲ್ಲ. ಹೋಟೆಲ್ ನ ವಿಳಾಸ ವಿಚಾರಿಸಿದಾಗ ಪೋಲೀಸ್ ಒಬ್ಬರು, ಅದು ತಾವು ಹೋಗುವ ದಾರಿಯಲ್ಲಿಯೇ ಇದ್ದು ತಮ್ಮನ್ನು ಹಿಂಬಾಲಿಸಿಕೊಂಡು ಬರಲು ತಿಳಿಸಿ, ದಾರಿ ತೋರಿಸಿದರು. ಹೋಟೆಲ್ ತಲುಪಿದಾಗ 7 ಘಂಟೆಯಾಗಿತ್ತು. ಹೋಟೆಲ್ ನ ರೂಮ್ ಬಾಯ್ ಭಜರಂಗಿ ಯೊಂದಿಗೆ ಸ್ವಲ್ಪ ಹೊತ್ತು ಮಾತಾಡಿ, ಅವನ ಹತ್ತಿರಫ್ರೆಂಚ್ ಫ್ರೈಸ್ ಮತ್ತು ಚಿಕನ್ ಫ್ರೈಡ್ ರೈಸ್ ತರಿಸಿ ತಿಂದು ಮಲಗಿದೆವು.
ಮರುದಿನ ಬೆಳಿಗ್ಗೆ ಬೇಗ ಎದ್ದು ಅಮೃತ್ಸರದ ರಾಯಲ್ ಎನ್ಫೀಲ್ಡ್ ಸರ್ವಿಸ್ ಸೆಂಟರ್ ಗೆ ಹೋಗಿ ಎರಡು ಬೈಕ್ ಗಳನ್ನು ಸರ್ವಿಸ್ ಗೆ ಕೊಟ್ಟು ಬಂದೆವು. ಸರ್ವಿಸ್ ಸೆಂಟರ್ ನ ಜಸ್ವೀರ್ ಸಂಜೆ ಬನ್ನಿ ನಿಮ್ಮಎರಡು ಬುಲ್ಲೆಟ್ಗಳು ರೆಡೀ ಆಗಿರುತ್ತವೆ ಎಂದು ಹೇಳಿದ. ನಾವು ಮನೆಗೆ ಹೋದಾಗ ನಮ್ಮ ಬುಲ್ಲೇಟ್ನಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗಿನ ದೂಳು ಇರಬೇಕು. ಬುಲೆಟ್ ವಾಶ್ ಮಾಡಬೇಡಿ ಎಂದುಹೇಳಿ ಟಾಂಗಾ ದಲ್ಲಿ ಅಲ್ಲಿಂದ ಹೊರಟೆವು. ಟಾಂಗಾವಾಲಾ ಸರ್ದಾರ್ಜಿ ನಮ್ಮನ್ನು ಗೋಲ್ಡನ್ ಟೆಂಪಲ್ ಮುಂದೆ ತಲುಪಿಸಿದ. ಸಿಖ್ ರ ಪುಣ್ಯಕ್ಷೇತ್ರ ಗೋಲ್ಡನ್ ಟೆಂಪಲ್ ನ ಸರದಿಯಲ್ಲಿ ನಿಂತು, ದರ್ಶನಮಾಡಿ ಅಲ್ಲಿನ ಪ್ರಸಾದ ಹಾಲನ್ನು ಕುಡಿದು ಅಲ್ಲಿಂದ ಹೊರಟೆವು. ಕುಲ್ಫಿ ತಿಂದು ಪಕ್ಕದಲ್ಲಿರುವ ಜಲಿಯನ್ ವಾಲಾ ಭಾಘ್ ನ ಬಾವಿಯನ್ನು ನೋಡಿದಾಗ ರಂಗ್ ದೆ ಬಸಂತಿ ಸಿನೆಮಾದ ದ್ರಶ್ಯ ಕಣ್ಮುಂದೆನಿಂತಿತ್ತು. ಕೆಲವು ವಿವರಗಳ ಫೋಟೋ ತೆಗೆದುಕೊಂಡು , ಆಟೋದಲ್ಲಿ ವಾಘಾ ಬಾರ್ಡರ್ ನೋಡಲು ಹೊರಟೆವು.


ಪಾಕಿಸ್ತಾನ ವನ್ನು ನೋಡುವುದನ್ನು ನೆನಪಿಸಿಕೊಂಡು ರೋಮಾಂಚನವಾಗುತ್ತಿತ್ತು. ಜಾತ್ರೆಯಂತಹ ಜನಸಂದಣಿಯಲ್ಲಿ ನುಗ್ಗಿ ಹೇಗೋ ಬಾರ್ಡರ್ ಪಕ್ಕದಲ್ಲಿ ಕಟ್ಟೆಯ ಮೇಲೆ ಕುಳಿತುಕೊಂಡೆವು. ಇನ್ನೇನುಅಲ್ಲಿ ಪೆರೇಡ್ ಗಳ ಹಗ್ಗ ಜಗ್ಗಾಟ ನಡೆಯಬೇಕು. ವೇದಿಕೆ ಸಜ್ಜಾಗಿತ್ತು. ಇಂಡಿಯಾ ಮತ್ತು ಪಾಕಿಸ್ತಾನದ ನಡುವಿನ ಕ್ರಿಕೆಟ್ ಪಂದ್ಯ ವೀಕ್ಷಿಸುತ್ತಿರುವಂತೆ ಭಾಸವಾಗುತ್ತಿತ್ತು. ಪ್ರತಿದಿನ ಸಂಜೆ ನಡೆಯುವ ಪೆರೇಡ್ವೀಕ್ಷಿಸಲು ಸಾವಿರ ಸಾವಿರ ಜನ ನಮ್ಮವರು. ಪಾಕಿಸ್ತಾನದ ಕಡೆ ಬೆರಳಣಿಕೆಯಷ್ಟು ವೀಕ್ಷಕರು. ಇಂಡಿಯಾ ಕಡೆ ಮುಖ ಮಾಡಿದ ದ್ವನಿವರ್ಧಕದಲ್ಲಿ ಪೆಟ್ರೋಟಿಕ್ ಮತ್ತು ಬಾಲಿವುಡ್ ಹಾಡುಗಳಿಗೆಹುಡುಗಿಯರು, ಮಕ್ಕಳು ಕುಣಿದು ಕುಪ್ಪಳಿಸುತ್ತಿದ್ದರು.ಮರಾಠಿ ಶೈಲಿಯ ಸೀರೆ ಉಟ್ಟ ಮುದುಕಿಯರ ಗುಂಪೊಂದು ಹಾಕುವ ಹೆಜ್ಜೆಗೆ ಎಲ್ಲರೂ ನಿಬ್ಬೆರಗಾಗಿ ನೋಡುತ್ತಿದ್ದರು. ಪಾಕಿಸ್ತಾನಾದವರೂ ಕೂಡ. ಅಲ್ಲಿಜಾತ್ಯತೀತ ಭಾರತದ ವಿಭಿನ್ನ ನ್ರತ್ಯ ಗಳು ಒಗ್ಗಟ್ಟಾಗಿ ಕುಣಿಯುತ್ತಿದ್ದವು. ಪಾಕಿಸ್ತಾನದ ಕಡೆಗೆ 10:1 ರ ಅನುಪಾತದಲ್ಲಿ ಜನರು ಬರಲಾರಂಬಿಸಿದರು. ಬಲ ಪ್ರದರ್ಶನ ಶುರುವಾಗಿತ್ತು. ಮೀಸೆಯನ್ನು ತಿರುಗಿಸುತ್ತಾ ಶಿಸ್ತುಬದ್ದವಾಗಿ, ಕಾಲನ್ನು ತಲೆಯ ಮೇಲಕ್ಕೆ ಎತ್ತಿ ನೆಲಕ್ಕೆ ಬಡಿದು ಯಾರಿಗೆ ಇಲ್ಲಿ ಯಾರು ಕಮ್ಮಿ? ಎಂಬಂತೆ ಎರಡೂ ಕಡೆಯ ಸೈನಿಕರು ಪೆರೇಡ್ ಮಾಡಿ ರಾಷ್ಟ್ರ ಧ್ವಜ ಇಳಿಸುವಾಗಯಕ್ಷಗಾನ ಯುದ್ದದ ಅನುಭವ. ತೆರೆದ ದ್ವಾರ ಮತ್ತೆ ಮುಚ್ಚಿತು. ಪಾಕಿಸ್ತಾನದ ಕಡೆ ಕುಳಿತ ವೀಕ್ಷಕರು ಮುಗುಳ್ನಗೆಯಿಂದ ಕೈಬೀಸಿ ಹೊರಟಾಗ ಅಲ್ಲೊಂದು ನಂಬಲಾಗದ ಸನ್ನಿವೇಶ ಮೂಡಿತ್ತು. ಪಾಕಿಸ್ತಾನನಿಮ್ಮ ಮುಂದಿನ ಹೆಜ್ಜೆ ಎಂದು ಹಾಕಿದ ಬೋರ್ಡ್ ಪಕ್ಕ ನಿಂತು ಫೋಟೋ ತೆಗೆಸಿಕೊಂಡಾಗ, ಲಾಹೋರ್ 23km ಎಂದು ಪಕ್ಕದಲ್ಲಿ ಬರೆದಿತ್ತು.

ಸಂಜೆ ತಡವಾಗಿದ್ದರಿಂದ, ಬುಲೆಟ್ ಸರ್ವಿಸ್ ಸ್ಟೇಶನ್ ಮುಚ್ಚಿತ್ತು. ನಾಳೆ ಬೆಳಿಗ್ಗೆ ಹೋಗಿ ಬುಲೆಟ್ ಕಲೆಕ್ಟ್ ಮಾಡೋಣವೆಂದುಕೊಂಡು, ಬಂದ ಆಟೋದಲ್ಲೇ ಹೋಟೆಲ್ ಕಡೆ ಹೊರಟೆವು.
ಮಲಗುವ ಮುನ್ನ ಆಕಾಶ್ ಹೇಳಿದ- “ನಾಳೆ ಶ್ರೀನಗರ ಹೋಗೋ ಬದಲು ವೈಷ್ಣೋದೇವಿ ಮತ್ತು ಅಮರ್ನಾಥ್ ಯಾತ್ರೆ ಮುಗಿಸಿಕೊಂಡು ಹೋಗೋದು ಒಳ್ಳೆಯದು. ಹೆಂಗೋ ಇಲ್ಲಿಯವರೆಗೆ ಬಂದಿದ್ದೇವೆ, ಟ್ರೆಕಿಂಗ್ ಮಾಡಿ ಬೇರೆ ವರ್ಷ ಕಳೆದಿದೆ, ಒಂದು ಟ್ರೆಕಿಂಗ್ ಆದಂಗೂ ಆಗತ್ತೆ.”
ನನಗೂ ಹೌದು ಎನಿಸಿತು. ಮ್ಯಾಪ್ ನಲ್ಲಿ ಆಮ್ರತ್ಸರ್ – ಕಾಟ್ರಾ ದೂರ 260 ಎಂದು ತೋರಿಸುತ್ತಿತ್ತು.
ಬೆಳಿಗ್ಗೆ ಅಪ್ಪನ ಫೋನ್ ರಿಂಗ್ ಗೆ ಎಚ್ಚರವಾಯಿತು. ಸ್ನಾನ ಮುಗಿಸಿ ಸರ್ವಿಸ್ ಸೆಂಟರ್ ಕಡೆ ಟಾಂಗಾ ಏರಿ ಹೊರಟೆವು. ಟಾಂಗಾವಾಲನಿಗೆ ವೈಷ್ಣೋದೇವಿ ಯಾತ್ರೆಯ ವಿವರಗಳನ್ನು ಕೇಳಿ ತಿಳಿದುಕೊಂಡೆವು. ನಾವು ಹೋಗುವ ಹೊತ್ತಿಗೆ ನಮ್ಮ ಎರಡೂ ಬುಲ್ಲೆಟ್ಗಳು ಸರ್ವಿಸ್ ಆಗಿ ನಿಂತಿದ್ದವು. ಅಲ್ಲಿಂದ ನೇರವಾಗಿ ಹೋಟೆಲ್ ಗೆ ಬಂದು ಪ್ಯಾಕಿಂಗ್ ಮಾಡಿ, ಕಾಟ್ರಾ ದ ದಾರಿ ಹಿಡಿದು ಹೊರಟಾಗ 10:30.
ಪಟಾನ್ಕೋಟ್ ವಾಯುನೆಲೆಯ ಮೇಲೆ ಉಗ್ರರ ದಾಳಿ ನಡೆದು ಕೆಲವೇ ದಿನಗಳಾಗಿತ್ತು. ಮೈಲಿಗಲ್ಲು ಪಟಾನ್ಕೋಟ್ ಎಂದು ತೋರಿಸುತ್ತಿತ್ತು. ಮತ್ತೆ ಅದೇ ಬಿಸಿಲು, ಮನ-ದೇಹ ತಣಿಸುವ ಶಿಖಂಜವಿ ನಿಂಬುಪಾನಿ. ದಾರಿಯಲ್ಲಿ ಸಿಕ್ಕ ಡಾಬಾ ದಲ್ಲಿ ಊಟ ಮಾಡಿ ಜಮ್ಮು ತಲುಪಿದೆವು.ಜಮ್ಮುವಿನಿಂದ 46ಕೇಯೆಮ್ ದೂರದಲ್ಲಿರುವ ಕತ್ರಾ ತಲುಪಲು ಕೇವಲ 45 ನಿಮಿಷಗಳು ಸಾಕು. ಆ ತಳಕು ಬಳುಕಿನ ವಯ್ಯಾರದರಸ್ತೆ ಯಾವುದೇ ಪ್ರಯಾಣಿಕನನ್ನು ಮಂತ್ರಮುಗ್ಧನನ್ನಾಗಿಸುತ್ತದೆ.

ದಾರಿಯಲ್ಲಿ ನಿಂತು ನೋಡಿದಾಗ ದೂರದಲ್ಲಿ, ಗುಡ್ಡದಮೇಲೆ ವೈಷ್ಣೋದೇವಿಯ ದೇವಸ್ಥಾನಕ್ಕೆ ಹೋಗುವ ದಾರಿ ಕಾಣಿಸುತ್ತಿತ್ತು. ಮೋಡಗಳ ಮೇಲೆ, ಎತ್ತರದಲ್ಲಿ, ಹಸಿರನ್ನು ಹೊದ್ದುನಿಂತ ದುರ್ಗ ಮಾತೆಯದರ್ಶನ ಮಾಡಲು 14km ದೂರ ಕಾಲ್ನಡಿಗೆ. ಹೋಗಿ ಗುಪ್ತಾ ಪ್ಯಾಲೇಸ್ ಹೋಟೆಲ್ ನಲ್ಲಿ ಚೆಕ್-ಇನ್ ಆದೆವು. ಹೋಟೆಲ್ ನ ಮ್ಯಾನೇಜರ್ ಸಲಹೆಯ ಮೇರೆಗೆ, ನಮ್ಮ ಮೊಬೈಲ್ ಫೋನ್ ಹಾಗೂ ವಾಲೆಟ್ಗಳನ್ನು ಹೋಟೆಲ್ ನಾ ಕೌಂಟರ್ ನಲ್ಲಿ ಡೆಪಾಸಿಟ್ ಮಾಡಿ ಸಂಜೆ 7 ಘಂಟೆಗೆ ನಮ್ಮ ಪಾದಯಾತ್ರೆಯನ್ನು ಆರಂಭಿಸಿದೆವು.
ದಾರಿಯುದ್ದಕ್ಕೂ ಅಂಗಡಿಗಳ ಸಾಲುಗಳು, ಊರಿನ ಬಂಡಿ ಹಬ್ಬವನ್ನು ನೆನಪಿಸುತ್ತಿದ್ದವು. ನಾವು ಅಂದುಕೊಂಡಿದ್ದಂತೆ ಅದು ಟ್ರೆಕಿಂಗ್ ಆಗಿರಲಿಲ್ಲ. ಸುಸಜ್ಜಿತವಾಗಿ ಕಾಂಕ್ರೀಟ್ ಹಾಕಿ ಮಾಡಿದ ರಸ್ತೆ, ಆಚೆ-ಈಚೆಎಲ್ಲ ಅಂಗಡಿ ಮುಂಗಟ್ಟುಗಳು, ದೂರ ಕಡಿಮೆ ಮಾಡಲು ದಾರಿಗಳ ಮಧ್ಯೆ ಜಿಗ್-ಜ್ಯಾಗ್ ರೀತಿಯಲ್ಲಿ ಹಾದುಹೋಗುವ ಮೆಟ್ಟಿಲುಗಳ ದಾರಿ. ವಿಧ್ಯುದ್ದೀಪದ ಅಲಂಕಾರ. 700 ರೂಪಾಯಿ ಕೊಟ್ಟರೆ ಕುದುರೆಯಮೇಲೆ ಕರೆದುಕೊಂಡು ಹೋಗುವ ಪೌನಿವಾಲಾ ಗಳ ಸಂಖ್ಯೆ, ಪ್ರವಾಸಿಗರ ಸಂಖ್ಯೆಯನ್ನು ಮೀರಿತ್ತು. ಮಧ್ಯದಲ್ಲಿ ಸ್ವಚ್ಛ ಶೌಚಾಲಯಗಳ ವ್ಯವಸ್ಥೆ, 700-800 ರೂಪಾಯಿಗಳಿಗೆ ವಯಸ್ಸಾದವರನ್ನು ಹಾಗೂಇತರರನ್ನು ಪಲ್ಲಕ್ಕಿಯಲ್ಲಿ ಎತ್ತಿಕೊಂಡು ಹೋಗುವ ದಿನಗೂಲಿ ಯುವಕರು, ದೇಶದ ಹಲವು ಮೂಲೆ ಮೂಲೆಗಳಿಂದ ಬಂದ ಸಾವಿರಾರು ಯಾತ್ರಿಗಳ ಬಾಯಲ್ಲಿ ಒಂದೇ ನುಡಿ.. “ಜೈ ಮಾತಾ ದೀ”.
1100 ರೂಪಾಯಿಗಳಿಗೆ ಹೆಲಿಕಾಪ್ಟರ್ ವ್ಯವಸ್ಥೆಯು ಇತ್ತು. ಅದು ಪ್ರವಾಸಿಗರನ್ನು ದೇವಸ್ಥಾನದಿಂದ 1km ದೂರ ಹೋಗಿ ತಲುಪಿಸುತ್ತದೆ.ಇವೆಲ್ಲದರ ನಡುವೆ 14km ದೂರ ನಡೆದಿದ್ದು ಗೊತ್ತೇ ಆಗಲಿಲ್ಲ. ಸರದಿಯಲ್ಲಿ ನಿಂತು, ಗುಹೇಯ ಒಳಗಡೆ ಹೋಗಿ , ಮಾತೆಯ ದರ್ಶನ ಪಡೆದಾಗ ಮುಂಜಾನೆ 1:30. ತಡಮಾಡದೆ, ಅಲ್ಲೇ ಇರುವ ಒಂದು ಹೋಟೆಲ್ ನಲ್ಲಿ ಊಟ ಮುಗಿಸಿ, ಪ್ರಸಾದ ಹಾಗೂ ಮಾತಾಜಿ ಯರಿಬ್ಬನ್ ಖರೀದಿಸಿ ಕೆಳಗಡೆ ಇಳಿಯತೊಡಗಿದೆವು. ಮತ್ತೆ ಅದೇ 14km ದೂರ ನಡೆದು, ಹೋಟೆಲ್ ತಲುಪಿದಾಗ ಬೆಳಿಗ್ಗೆ 5 ಘಂಟೆಯಾಗಿತ್ತು. ಇನ್ನೇನು ಸ್ವಲ್ಪ ಹೊತ್ತಿನಲ್ಲಿ ಹೊರಡಬೇಕು, ಎಂದುಕೊಂಡು ಸ್ವಲ್ಪ ಹೊತ್ತು ನಿದ್ದೆ ಮಾಡಿ, ಸ್ನಾನ ಮುಗಿಸಿ ಬ್ಯಾಗ್ ಪ್ಯಾಕ್ ಮಾಡಿಕೊಂಡು, ಚಹಾ ಕುಡಿದು ಅಲ್ಲಿಂದ ಹೊರಟೆವು.

ಹೊಟ್ಟೆ ಹಸಿಯುತ್ತಿತ್ತು. ಹಸಿರು ತುಂಬಿದ ಕಣಿವೆಯಲ್ಲಿ ಒಂಟಿ ರಸ್ತೆ. ನಡು ಮಧ್ಯಾಹ್ನದಲ್ಲಿ ಮೈ ಕೊರೆಯುವ ಚಳಿ, ಮಂಜುಗಳಿಂದ ತುಂಬಿಕೊಂಡು ಬುಲೆಟ್ ನಾ ಫಾಗ್ ಲ್ಯಾಂಪ್ ಗೆ ಅಷ್ಟೋ-ಇಷ್ಟೋ ದೂರದಲ್ಲಿಕಾಣಿಸುವ ಮನೆಗಳು. ಆ ಊರಿನ ಹೆಸರು ಪತ್ನಿಟಾಪ್. ಮಾತಾ ಜಿ ದರ್ಶನಕ್ಕಾಗಿ ನಿನ್ನೆಯಿಂದ ಕೇವಲ ಸಸ್ಯಾಹಾರ ಸೇವನೆ ಮಾಡಿ ಕಂಗೆಟ್ಟಿದ್ದ ನಾಲಿಗೆ, ಚಳಿಯ ತಾಳದೆ ಮಾಂಸಹಾರ ಕ್ಕಾಗಿಹಂಬಲಿಸುತ್ತಿತ್ತು. ಊಟ ಮಾಡುವಾಗ ಯುವ ಜೋಡಿಯ ಪರಿಚಯ ವಾಯಿತು. ಈಗ ತಾನೇ ಮದುವೆಯಾಗಿದ್ದ ಅವರು ಹೊಸ ಬಜಾಜ್ – ಅವೆಂಜರ್ ಖರೀದಿಸಿ ಲೇಹ್ ಗೆ ರೈಡ್ ಹೊರಟಿದ್ದಾರೆ. ಆ ಪ್ರಯಾಣಮುಗಿದ ಮೇಲೆ ಅಲ್ಲೇ ಆ ಬೈಕ್ ಮಾರಿ ಫ್ಲೈಟ್ ಅಲ್ಲಿ ಬರುತ್ತೇವೆ ಎಂದು ಹೇಳಿದರು. ಅಬ್ಬಾ ದಾಂಪತ್ಯ ಜೀವನ ಎಂದರೆ ಹೀಗಿರಬೇಕು. ನಾವು ಮುಂದೆ ನಿಮ್ಮನ್ನು ಅನುಸರಿಸುತ್ತೇವೆ ಎಂದು ಹೇಳಿದಾಗಮುಗುಳ್ನಕ್ಕರು. ನಮ್ಮ ಜರ್ನೀ ಬಗ್ಗೆ ಕೇಳಿದರು. ಅಲ್ಲಿ ಮಾತುಗಳ ವಿಲೇವಾರಿಯಾಗಿತ್ತು. ಹೊಸದಾಗಿ ನಮಗೆ ದೊರೆತ ಮತ್ತಿಬ್ಬರು ಸ್ನೇಹಿತರು ಅವರು. ಮತ್ತೆ ಬೇಟಿಯಾಗೋಣ ಎಂದು ಹೇಳಿ ಅಲ್ಲಿಂದ ಹೊರಟು ಸುಮಾರು 2.5km ದೂರದ ಜವಾಹರ್ ಸುರಂಗ ಮಾರ್ಘವನ್ನು ದಾಟಿ, ಕಣಿವೆಯಂಚಿನ ರೋಮಾಂಚಕ ರಸ್ತೆಗಳನ್ನು ಅನುಭವಿಸಿ , ರಾಂಬನ್,ಅನಂತ್ನಾಗ್ ಜಿಲ್ಲೆಗಳನ್ನು ಹಿಂದಿಕ್ಕಿ ನಾವು ಶ್ರೀನಗರ ಹತ್ತಿರಬಂದು ತಲುಪಿದ್ದೆವು.

ಕಾಶ್ಮೀರಿ ಖೇವಾ ಹಾಗೂ ಸಮೋಸದೊಂದಿಗೆ ಕಾಶ್ಮೀರ ನಮ್ಮನ್ನು ಸ್ವಾಗತಿಸಿತ್ತು. ಚಹಾವಾಲನೊಂದಿಗೆ ಸೆಲ್ಫಿ ತಗೊಳ್ಳಲು ಮರೆಯಲಿಲ್ಲ. ಇನ್ನೇನು ಶ್ರೀನಗರ 5km ಇದೆ ಅನ್ನೋವಷ್ಟರಲ್ಲಿ ಯಾರೋ ಕಾರ್ನಲ್ಲಿ ಬಂದು ಬುಲೆಟ್ ಸೈಡ್ ಗೆ ಹಾಕಲು ಹೇಳಿದರು. ಒಂದು ಕ್ಷಣ ನಮಗೆ ಏನೆಂದು ಅರ್ಥವಾಗದ ಕಾರಣ ಇಬ್ಬರು ಬುಲ್ಲೇಟನ್ನು ಸೈಡ್ ಗೆ ನಿಲ್ಲಿಸಿದೆವು. ಸ್ವಲ್ಪ ಮುಂದೆ ನಿಂತ ಕಾರ್ ನಿಂದ ಒಬ್ಬ ಗಡ್ಡದಾರಿಯುವಕ ನಮ್ಮನ್ನು ಕೈ ಬೀಸಿ ಕರೆದ. ನಾನು ಹೋಗಿ.. ಏನಾಯಿತು? ಎಂದು ಕೇಳಿದೆ. ಅದಕ್ಕೆ ಅವನು.. “ಮೊದಲು ನಿಮ್ಮ ಬುಲೆಟ್ ಹಿಂದೆ ಹಾಕಿರುವ ತಿರಂಗಾ ತೆಗೆಯಿರಿ. ಜನರು ಕಲ್ಲು ಹೊಡೆಯಬಹುದು.” ಎಂದು ಹೇಳಿ ಹೊರಟುಹೋದ. ನಾನು ಮೂಕ ಪ್ರೇಕ್ಷಕನಂತೆ ಒಂದು ಕ್ಷಣ ಏನು ಅರ್ಥವಾಗದೇ ಬುಲೆಟ್ ಸ್ಟಾರ್ಟ್ ಮಾಡಿ ಹೊರಟೆ. ನಮ್ಮ ಕಲ್ಪನೆಯಲ್ಲಿ ಏನೋ ವಿಚಿತ್ರ ಕಾಶ್ಮೀರದ ಚಿತ್ರಣ ಮೂಡಿಮರೆಯಾಗಿತ್ತು. ಆಗಿದ್ದು ಆಗಲಿ ಎಂದುಕೊಂಡು ತಿರಂಗಾ ತೆಗೆಯದೆ ಶ್ರೀನಗರ ತಲುಪಿದೆವು. ಅಷ್ಟರಲ್ಲಿ ನಮ್ಮ ಹಿಂದೆ ಸ್ಕೂಟರ್ ನಲ್ಲಿ ಬಂದ ಹುಡುಗ..(ಮುಂದುವರೆಯುವುದು)

