Home / ಭಾವನೆಗಳ ಬಾಗಿಲು ತೆರೆದು / ಅಲೆಮಾರಿಗಳ ಜಗತ್ತಿನಲ್ಲಿ ಅಪರಿಚಿತರು ಯಾರು?(ಭಾಗ 1-6)

ಅಲೆಮಾರಿಗಳ ಜಗತ್ತಿನಲ್ಲಿ ಅಪರಿಚಿತರು ಯಾರು?(ಭಾಗ 1-6)

ವಿಶು… ಬುಲೆಟ್ ಚೈನ್, ಆಯಿಲ್ ಎಲ್ಲಾ ಸರಿಯಾಗಿ ಚೆಕ್ ಮಾಡಿಸಿಕೊಂಡಿದ್ದೀಯಲ್ವಾ? ನಾವು ಸರಿಯಾಗಿದ್ದರೂ ಎದುರಿಗೆ ಬರುವವರು ಸರಿಯಾಗಿ ಓಡಿಸುತ್ತಾರೋಇಲ್ಲವೋ? ಹುಷಾರಾಗಿ ಓಡಿಸು ಎಂದು ಪ್ರತೀಸಾರಿ ಆಕ್ಸಿಡೆಂಟ್ ಗಳ ಪೇಪರ್ ಕಟ್ಟಿಂಗ್ಸ್ ತೋರಿಸುವ ಅಪ್ಪನ ಪ್ರೀತಿ ಒಂದು ಕಡೆ. ನಿನಗ್ ಬೈಕ್ ಹುಚ್ಚುಹುಟ್ಟಿದಾಗಿಂದಲೇ ಇದೆ. ಅಪ್ಪ, ಅಣ್ಣನ ಬುಲೆಟ್ ಮೇಲೆ ಹತ್ತಿ ಕೂತರೆ ಕೆಳಗೆ ಇಳಿಯುತ್ತಿರಲಿಲ್ಲ ನೀನು ಅನ್ನುತ್ತಾ, ಕೆಂಪು ಬಣ್ಣದ ಮೂರು ಚಕ್ರದ ಸೈಕಲ್ ಬಗ್ಗೆಯಾವಾಗಲೂ ನೆನಪಿಸುವ ಅಮ್ಮನ ಮಮಕಾರ ಇನ್ನೊಂದೆಡೆ. ಹೀಗೆ ಬೈಕ್ ಗಳು, ರೈಡ್ ಗಳು ಹಾಗೂ ಅದರ ಕನಸುಗಳ ಜೊತೆಗೆ ಬೆಳೆದು ನನ್ನದು ಎಂಬಬುಲೆಟ್ ತಗೊಂಡು, ಓಡಿಸಿದಾಗ ನನಗೆ 19 ವರ್ಷ. ನನ್ನ ಹಿಂದೆ ಕುಳಿತು ಓಡಿಸಲು ಕಳಿಸಿದ ಅಣ್ಣನಿಗೆ ಮೊದಲು ಥ್ಯಾಂಕ್ಸ್ ಹೇಳಬೇಕು.

ಬೈಕರ್ ಗಳು ಅನ್ನುವುದು ಒಂದು ಬೇರೆಯದೇ ಲೋಕವಿದೆ. ಅವರ ದೂರದ್ರಷ್ಟಿ, ವಿಚಾರಗಳಿಗೆ ಬೌಂಡರಿ ಇಲ್ಲ. ಅವರ ಪ್ರಪಂಚ ಅವರು ಕಾಣುವಕನಸು,ಉಹೆಗಳಿಗೂ ಮೀರಿ ವಿಶಾಲವಾದದ್ದು. ಅವರು ಖುಷಿಯನ್ನು ಅವರ ಬೈಕ್ ನ ಸ್ಪಿಡೋಮೀಟರ್ ನಲ್ಲಿ, ಅದು ತೋರಿಸುವ ದೂರಗಳಲ್ಲಿ ಅಳೆಯುತ್ತಾರೆ. ಅವರಜಗತ್ತಿನಲ್ಲಿ ಅಪರಿಚಿತರು ಇರುವುದಿಲ್ಲ. ನೀವು ಯಾವುದೇ ಹವ್ಯಾಸಿ ಬೈಕರ್ ನಾ ಕೇಳಿ ನೋಡಿ. ಅವರಿಗೆ ಅವರದೇ ಆದ ಒಂದು ಸ್ಟೋರೀ ಇರತ್ತೆ ಹೇಳಲು. ಅವರುಅದನ್ನು ಹೇಳುವಾಗ ಇನ್ನೊಮ್ಮೆ ಅದನ್ನು ಅನುಭವಿಸುತ್ತಿರುತ್ತಾರೆ. ಕೇಳಿ ನೋಡಿ.

ಅವಳು ಒಂದು ದಿನ ಕೇಳಿದ್ದಳು. ನೀನು ಬುಲೆಟ್ ನಾ ನನಗಿಂತ ಹೆಚ್ಚಾಗಿ ಪ್ರೀತಿಸುತ್ತೀಯಾ? ಎಂದು…

ಇದು ಸುಮಾರು 25 ವರ್ಷಗಳ ಹಿಂದೆ. ಆಗಿನ ಕಾಲಕ್ಕೆ ಊರಲ್ಲಿ ಬೈಕ್ ಗಳು ತುಂಬಾ ವಿರಳ. ಯಜ಼ಡಿ , ರಾಜಧುತ್ , ಬುಲೆಟ್ ಗಳು ಪೋಲೀಸ್ನವರ ಹತ್ತಿರಇರುತ್ತಿತ್ತು. ಫಾರೆಸ್ಟ್ ಕಾಂಟ್ರ್ಯಾಕ್ಟರ್ ಆಗಿದ್ದ ನಮ್ಮ ಅಪ್ಪ ( ಅವರನ್ನು ನಾನು ಬಾಬಾ ಎಂದು ಕರೆಯುವುದು) ಕೂಡ ಒಂದು ಕಪ್ಪು ಬಣ್ಣದ ಬುಲೆಟ್ ಇಟ್ಟುಕೊಂಡಿದ್ದರು.ಅದು ಮಲೆನಾಡಿನ, ಈಗಿನ ಹುಲಿ ಸಂರಕ್ಷಿತ ಅಭಯಾರಣ್ಯದಲ್ಲಿ ಒಂದು ಪುಟ್ಟ ಹಳ್ಳಿ. ಬಾಬಾ ನನ್ನನ್ನು ಹಾಗೂ ನನ್ನ ಗೆಳೆಯರನ್ನೆಲ್ಲಾ ಬೈಕ್ ಮೇಲೆ  ಕುಳಿಸಿಕೊಂಡುನಮ್ಮ ಕಾಲೊನೀ ಯ ಸುತ್ತ ರೌಂಡ್ ಹೊಡೆಸಿ ಎಲ್ಲರಿಗೂ ಚಾಕ್ಲೇಟ್ ಕೊಡಿಸುತ್ತಿದ್ದರು. ಒಂದೊಂದು ದಿನ ಅವರು ಕೆಲಸ ಮುಗಿಸಿ, ಅಥವಾ ಊರಿಂದ ಬರುವಾಗಮಧ್ಯರಾತ್ರಿ ಯಾಗಿರುತ್ತಿತ್ತು. ಫೋನ್,ಮೊಬೈಲ್,ನೆಟ್‌ವರ್ಕ್ ಇಲ್ಲದ  ಆ ಕಾಲಕ್ಕೆ ನಾನು ಅವರು ಬರುವ ದಾರಿಯನ್ನೇ ಕಾಯುತ್ತಾ ಇರುತ್ತಿದ್ದೆ. ಊಟವನ್ನುಮಾಡದೆ….

ಆ ದಟ್ಟ ಕಾನನದಲ್ಲಿ,ಘಟ್ಟದ ರಸ್ತೆಯಲ್ಲಿ ಬರುವಾಗ ಸುಮಾರು ಒಂದು ಮೈಲಿ ದೂರದಲ್ಲ್ಲಿ ಇರುವಾಗಲೇ ಆ ಬುಲೆಟ್ ನ ಡಘ್ ಡಘ್ ಸೌಂಡ್ ಕೇಳಿಸುತ್ತಿತ್ತು. ಅದೇಶಬ್ದ ಆ ರಾತ್ರಿಗಳಲ್ಲಿ ನನ್ನಲ್ಲಿ ಏನೋ ರೋಮಾಂಚನ ತರುತ್ತಿತ್ತು. ಮನಸು ದೇಹಗಳು ಖುಷಿಗೆ ಕುಣಿದು ಕುಪ್ಪಳಿಸುತ್ತಿದ್ದವು.ಅಂದಿನಿಂದ ಎಲ್ಲೇ ಆ ಡಘ್ ಡಘ್ ಸೌಂಡ್ಕೇಳಿದರೂ ಬಾಬಾ ನೆನಪಾಗುತ್ತಾರೆ. ಅದಕ್ಕೆ ಐ ಲವ್ ಮೈ ಡ್ಯಾಡ್. ಐ ಲವ್ ಬುಲೆಟ್ಸ್ ಎಂದುಕೊಂಡು ಹಾಗೆ ಮಳೆಯನು ನೋಡಿದ ನೆನಪು.

ಪ್ರತಿಯೊಬ್ಬ ಸಾಹಸಿಗ ಬೈಕರ್ ಗೂ ಬೈಕ್ ಖರೀದಿಸಿದ ಕ್ಷಣದಿಂದ  NH1 ಅಲ್ಲಿ ಬೈಕ್  ಓಡಿಸಬೇಕು ಎಂಬ ಕನಸು ಹುಟ್ಟಿರುತ್ತದೆ. ನನಗೂ, ಬುಲೆಟ್ ಗಳ ಕಾಶಿ ಎಂದುಕರೆಸಿಕೊಳ್ಳುವ ಕಾಶ್ಮೀರದ  ಕಣಿವೆಗಳಾಚೆ  ಹಿಮಗಳ ಸೀರೆಯನ್ನುಟ್ಟು ಮೈತುಂಬಿ ನಿಂತು  NH1 ಅನ್ನು ಸೆರಗಿನಂತೆ ಹೊದ್ದುಕೊಂಡಿರುವ ಲಡಾಖ್ ಒಂದು ಈಡೇರದಕನಸಾಗಿತ್ತು. ಕಳೆದ ಬಾರಿ ರೈಡರ್ ಮೇನಿಯಾದಲ್ಲಿ ಆಕಾಶ್, ಮುಂದಿನ ವರ್ಷ K2K  ಮುಗಿಸಬೇಕು ಅಂದಾಗ ಮೊದಲ ವಿಚಾರದಲ್ಲೇ ಮನಸ್ಸು ಓಕೇ ಎಂದಾಗಿತ್ತು.ಪ್ರತಿಯೊಂದಕ್ಕೂ ಕಾಲ ಕೂಡಿ ಬರಬೇಕು ಅನ್ನುವುದು ನಿಜ. ಹಲವಾರು ಅಡಚಣೆಗಳ ಹೊರತಾಗಿಯೂ ನಮ್ಮ ಮ್ಯಾನೇಜರ್  ಕ್ರಪೆಯಿಂದಾಗಿ  ಆಫೀಸ್ ನ ಟೈಮ್ಶೀಟ್ ಅಲ್ಲಿ 25-06-2016 ರಿಂದ 17-08-2016  ರಜೆ ಮಂಜೂರಾದಾಗ ಹ್ರದಯ ಡಘ್ ಡಘ್ ಅನ್ನಲು ಶುರು ಮಾಡಿತ್ತು.

ತಂಗಿಗೆ ಸೆಮಿಸ್ಟೆರ್ ರಜೆ ಇರುವುದರಿಂದ ಅಮ್ಮ ಜೊತೆಯಲ್ಲಿ ಊರಿಗೆ ಹೋಗುವರು. ಅಪ್ಪನಿಗೆ ಗೊತ್ತಾದರೆ ದೊಡ್ಡ ರಂಪ ಮಾಡಿ ಹೋಗಲು ಬಿಡುವುದುಅಸಾಧ್ಯವಾದ ಮಾತು. ಕಳೆದ ಬಾರಿ ನಾನು ಹೋಗಬೇಕು ಒಂದು ಸಾರಿ ಅಂದಾಗ , ಈ ಜನ್ಮದಲ್ಲಿ ಹೋಗಬೇಡ ಅಂದಿದ್ದರು. ಟ್ವಿಸ್ಟ್ ಅಂದರೆ ಅಮ್ಮ, ಅಣ್ಣಾ,ಸ್ನೇಹಿತರ ಸಹಕಾರದೊಂದಿಗೆ  20-25  ದಿನ ಅವರಿಗೆ ಹೇಳದೇ ಬೆಂಗಳೂರಿನಲ್ಲಿಯೇ ಇರುವಂತೆ ನಾಟಕ ಮಾಡುವುದು ನನ್ನ ಮುಂದಿರುವ ದೊಡ್ಡ ಸವಾಲಾಗಿತ್ತು.

ಜೂನ್ 10, 2015:

೧೫ ದಿನಗಳು ಉಳಿದಿವೆ. ಚೆಕ್‌ಲಿಸ್ಟ್ ರೆಡೀ ಮಾಡಬೇಕು. ನಕ್ಷೆ ಹಾಕಬೇಕು, JC ರೋಡ್ ಗೆ ಹೋಗಿ ಲಡಾಖ್ ಕ್ಯಾರಿಯರ್ ಹಾಕಿಸಬೇಕು, ಫಾಗ್ ಲ್ಯಾಂಪ್ಸ್ ಬೇಕು,ಮೆಕ್ಯಾನಿಕ್ ನವೀನ್ ಹತ್ತಿರ ಹೋಗಿ ಕ್ಲಚ್ ಕೇಬಲ್ ಮತ್ತಿತರ ಸಾಮಾನ್ಯ ರೆಪೇರಿ ಗಳ ತರಬೇತಿ ಪಡೆಯಬೇಕು. ಡೆಮೋ ವೀಡಿಯೋ ಮಾಡಿದರಾಯಿತು ಬಿಡಿ.ಜಿಮ್ನಲ್ಲಿ ಬೆನ್ನು ನೋವು ಬಾರದಿರಲು ಕೆಲವೊಂದು ವ್ಯಾಯಾಮ ಮಾಡಬೇಕು. ಮೆಡಿಸಿನ್ ಗಳ ಲಿಸ್ಟ್ ಇದೆ ಎಂದು ಆಕಾಶ್ ನಾ ಜೊತೆ ಚರ್ಚೆ ಮಾಡಿ, ಎಲ್ಲದಕ್ಕೂಒಂದೊಂದು ಟೈಮ್ ಲೈನ್ ಹಾಕಿಕೊಂಡೆವು.

ಜೂನ್ 24 2015:

ಎಲ್ಲವೂ ರೆಡೀ. ಹೊಸದಾಗಿ ತಂದ ಕ್ರಾಂಸ್ಟೇರ್ ಜಾಕೆಟ್ ಅನ್ನು ಅಮ್ಮನಿಗೆ ತೊಡಿಸಿ,ಜೊತೆಗೆ ಸೆಲ್ಫಿ ತಗೊಂಡು ನನ್ನ ಫೋನಿನ ವಾಲ್‌ಪೇಪರ್ ಆಗಿ ಹಾಕಿಕೊಂಡಾಗಮುಂದಿನ ಕೆಲವು ದಿನಗಳಲ್ಲಿ ನಾನು ಅಮ್ಮನನ್ನು ತುಂಬಾ ಮಿಸ್ ಮಾಡಿಕೊಳ್ಳಲಿದ್ದೇನೆ ಅನ್ನಿಸಿತು .ಅಮ್ಮ ಮಾತ್ರ , ನನ್ನ ಮಗ ಅಲೆಮಾರಿ, ಕನ್ಯಾಕುಮಾರಿಯಿಂದಕಾಶ್ಮೀರದವರೆಗೂ ಬೈಕ್ನಲ್ಲಿ ಹೋಗುತ್ತಿದ್ದಾನೆ. ಅವನು ಮತ್ತು ಆಕಾಶ್ ಇಬ್ಬರೇ ಎಂದು ಸಂಬದಿಕರಿಗೆಲ್ಲ ಹೇಳುತ್ತಾ, ತಾವೇ ಹೋಗುವಷ್ಟು ಖುಷಿಯಾಗಿದ್ದರು.

ಕ್ಯಾರಿಯರ್ ಹಿಂದೆ ಬೋರ್ಡ್ ಗೆ “ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ… ಈ 7500kms ಗಳು ನಮ್ಮ ದೇಶದ ಗಡಿ ಕಾಯುತ್ತಿರುವ ಸೈನಿಕರಿಗೆ ಅರ್ಪಣೆ” ಎಂದು ಬರೆಸಿ, ಅದರ ಮೇಲೆ ನಮ್ಮ ತ್ರಿವರ್ಣ ಧ್ವಜ ಹಾರಾಡಲಿತ್ತು.

ನಾಳೆ ಮುಂಜಾನೆ ಶುರುವಾಗಲಿದೆ ನಮ್ಮ ಪಯಣ. ಮೊದಲು ಕನ್ಯಾಕುಮಾರಿಗೆ ಹೋಗಬೇಕು. ನಾನು ಮತ್ತು ಆಕಾಶ್, ಫುಲ್ ಟ್ಯಾಂಕ್ ಆಗಿರೋ 2 ಬುಲ್ಲೆಟ್‌ಗಳು ,ನೀಲಿ ಬಣ್ಣದ ಟಾರ್‌ಫಾಲ್ ನಿಂದ ಮುಚ್ಚಿದ ಬ್ಯಾಗ್ ಗಳು, ಪ್ಲಾನ್ A, ಪ್ಲಾನ್ B ಎಂದು ಹಾಕಿದ ಎರಡು ನಕ್ಷೆಯ ಚಿತ್ರ ,ಮನಸಿನ ಕಲ್ಪನೆಗಳಿಗೆ ರೆಕ್ಕೆ ಬಂದಾಗ ಮೂಡಿದ ಅಗೋಚರ ಆಕಾಂಕ್ಷೆಗಳು ನಿದ್ದೆಯನ್ನು ಕೇಳುತ್ತಿದ್ದವು. ಫ್ಲ್ಯಾಗ್ ಆಫ್ ಮಾಡಲು ಕನ್ಯಾಕುಮಾರಿಗೆ ಬರಲಿರುವ ಮಯ್ಯಾ, ಗಣು, ಬಾಬಾ, ಸಿಂಹ ಹಾಗೂ ಸ್ನೇಹಿತರಿಗೆಲ್ಲಾ ಗುಡ್ ನೈಟ್ ಅಂತ SMS ಮಾಡಿ 4AM ಗೆ ಅಲಾರ್ಮ್ ಇಟ್ಟು ಮಲಗಿದಾಗ ರಾತ್ರಿ 11.

startk2k.png

ಮೊದಲು ಬುಲೆಟ್ ಸರ್ವಿಸ್ ಮಾಡಿದ ಸುಬ್ರಮಣ್ಯ ಗೌಡರನ್ನು ನೆನೆಯಲೇಬೇಕು. ಸರ್ವಿಸ್ ಮಾಡಿದ ದಿನ.. “ಗೌಡ್ರೆ, ನಾಳೆ ಹೊರಟಿದೀನಿ. ಕನ್ಯಾಕುಮಾರಿಯಿಂದ ಕಾಶ್ಮೀರ ತಲುಪುವವರೆಗೂ ಬುಲೆಟ್ ಕೈ ಕೊಡದಿರಲಿ ಎಂದು ಆಶೀರ್ವಾದ ಮಾಡಿ..” ಎಂದಾಗ…
” ದೇವರ ಮೇಲೆ, ನಮ್ಮ ಹುಟ್ಟಿಸಿದ ತಾಯಿಯ ಮೇಲೆ ನಂಬಿಕೆಯಿಡಬೇಕು. ಹೋಗಿ ಬನ್ನಿ ಬಾಸು…. ” ಅಂದಿದ್ದರು.  ನಿಮ್ಮ ಹತ್ತಿರ ಬುಲೆಟ್ ಇದ್ದರೆ, ಯಾವುದಾದರೂ ಒಳ್ಳೆಯ ಮೆಕ್ಯಾನಿಕ್ ಹುಡುಕುತ್ತಿದ್ದಾರೆ, ಕನಕಪುರ ರೋಡ್‌ನಲ್ಲಿ ಇರುವ ರಾಯಲ್ ಎನ್‌ಫೀಲ್ಡ್ ಸರ್ವಿಸ್
ಸೆಂಟರ್ ಗೆ ಹೋಗಿ ಅಲ್ಲಿ ಗೌಡ್ರು ಅಂತ ಕೇಳಿ. ಸ್ವಲ್ಪ ನಿಧಾನವಾದರೂ ಅಚ್ಚುಕಟ್ಟಾಗಿ ನಿಮ್ಮ ಬುಲೆಟ್ ಹೂವಿನಂತೆ ಮಾಡಿ ಕೊಡುತ್ತಾರೆ.
ಎದ್ದು ಸ್ನಾನ ಮಾಡಿ, ದೇವರ ಪೂಜೆ ಮುಗಿಸಿ ದೋಸೆ ತಿಂದು, ಹೊರಡಲು ಸಿದ್ದನಾದಾಗ….ಅಮ್ಮ,ತಂಗಿ ಮತ್ತು ತಮ್ಮ ಬಾಗಿಲಲಿ ನಿಂತು ಕೈ ಬೀಸಿ ಬೀಳ್ಕೊಟ್ಟರು. ಶುರುವಾಗಿತ್ತು ಕನಸಿನ ಪಯಣ. ಆಕಾಶ್ ಡೇರೀಸರ್ಕಲ್  ಹತ್ತಿರ ಕಾಯುತ್ತಿದ್ದ.
 ಸಮಯ ಮುಂಜಾನೆ 6 ಘಂಟೆ.
ಬೆಂಗಳೂರು – ಕನ್ಯಾಕುಮಾರಿ : ದೂರ 680kms
ಹೊಸೂರು ದಾಟುತ್ತಿದ್ದಂತೆ ತಮಿಳುನಾಡಿನ ಚಹಾ ಕುಡಿಯುವ ಮನಸಾಯಿತು. ಇನ್ನೊಂದು ವಿಷಯ ಇಲ್ಲಿ ಹೇಳಲೇಬೇಕು. ನಾವು ಹೋಗಲಿರುವ ಉದ್ದಗಲಕ್ಕೂ ಬೇರೆ ಬೇರೆ ಚಹಾ ಹಾಗೂ ನಾನ್ ವೆಜ್ ಟ್ರೈ ಮಾಡುವುದು ನಮ್ಮ ಉದ್ದೇಶಗಳಲ್ಲಿ ಒಂದಾಗಿತ್ತು.
ತಮಿಳುನಾಡಿನ  ರಸ್ತೆಗಳ ಬಗ್ಗೆ ಹೇಳುವುದು ಅನಿವಾರ್ಯ. ಯಾವುದೇ ಅಡೆತಡೆಗಳು, ಹಂಪ್ಗಳು ಇರದ ಸೊಗಸಾದ ರಸ್ತೆಗಳಲ್ಲಿ ಸ್ಪಿಡೋ ಮೀಟರ್ 130kms  ತೋರಿಸುತ್ತಿರುವುದು ಗೊತ್ತಾಗುವುದೇ ಇಲ್ಲ.
ಹೊಟ್ಟೆ ಹಸಿಯುತ್ತಿತ್ತು. ಸೇಲಂ ಸಮೀಪ ಸರವಣ ಭವನದಲ್ಲಿ ಮಸಾಲೆ ದೋಸೆ, ಇಡ್ಲಿ ಸಾಂಬಾರ್ ತಿನ್ನುವಾಗ ಅಪ್ಪನ ಕಾಲ್ ಬಂತು. ಎಲ್ಲಿದ್ದೀಯಾ? ಅಂದರು. ಇಲ್ಲೆ ಹತ್ತಿರದ ಫ್ರೆಂಡ್ ಮನೆಲಿ ಇದೇನೇ ಅಂದೆ. ಮಧುರೈ ನಲ್ಲಿ ಊಟ ಮುಗಿಸಿ, ಕನ್ಯಾಕುಮಾರಿಗೆ ಹೋಗೋ ದಾರಿಯುದ್ದಕ್ಕೂ ಗಾಳಿಗಿರಣಿಗಳ ಅಲಂಕಾರ. ಆ ಲ್ಯಾಂಡ್‌ಸ್ಕೇಪ್ ಮನಮೋಹಕ. ಲೆಕ್ಕ ಮಾಡಿದರು ಮುಗಿಯಾದಷ್ಟು ಅಪರಿಮಿತ. ಕನ್ಯಾಕುಮಾರಿ ತಲುಪಿತಾಗ ಸಂಜೆ 5 ಘಂಟೆ.
fullsizerender
ಮೋಡ ಕವಿದ ವಾತಾವರಣ. ಸೂರ್ಯಾಸ್ತ ನೋಡಲಾಗಲಿಲ್ಲ. ಸ್ನೇಹಿತರೆಲ್ಲ ಕಾರಲ್ಲಿ ತಲುಪಿ ನಮಗಾಗಿ ಕಾಯುತ್ತಿದ್ದರು. ವಿಶೇಷವೆಂದರೆ ಮರುದಿನ ರಂಜಿತ್ ಬರ್ತ್‌ಡೇ ಆಗಿರುವುದರಿಂದ ನಾವು ಇರಲಿರುವ ಹೋಟೆಲ್ ನಲ್ಲಿ ಪಾರ್ಟೀ ಸೆಲೆಬ್ರೇಶನ್ ವಾತಾವರಣ ನಿರ್ಮಾಣವಾಗಿತ್ತು.
ರಾತ್ರಿಯಿಡೀ ಪಾರ್ಟೀ,ಕಾರ್ಡ್ಸ್, ಪಿಲ್ಲೊ ಫೈಟ್ಸ್ , ಕೇಕ್ ಕಟಿಂಗ್. ಬೆಳಿಗ್ಗೆ 7 ಘಂಟೆಗೆ ಎದ್ದು ಫೆರೀ ಟಿಕೆಟ್ ಗೆ ಕ್ಯೂ ನಿಂತಾಗ ನಮ್ಮ ಭಾಷಾ ಅನುವಾದಕ ಮಯ್ಯಾ ಹಾಸ್ಯ ಮಾಡುತ್ತಾ ಸರದಿಯಲ್ಲಿ ನಿಲ್ಲಬೇಕು ಅನ್ನುವುದನ್ನು ಸರದಿ ಸ್ಟೊಪಾಣಾ.. ಎಂದಾಗ ಎಲ್ಲರೂ ಬಿದ್ದು ಬಿದ್ದು ನಕ್ಕಿದ್ದು ಪಕ್ಕದಲ್ಲಿ ನಿಂತ ಕೆಲವು ಮಲಯಾಳಿಗಳಿಗೆ ಮುಜುಗರ ಉಂಟು ಮಾಡಿತ್ತು.
ಫೆರೀ ಯಲ್ಲಿ ಹೋಗಿ ಸ್ವಾಮಿ ವಿವೇಕಾನಂದರ ಪ್ರತಿಮೆ ದರ್ಶನ ಮಾಡಿ, ಹೋಟೆಲ್ ಗೆ ಬಂದು ಹೊರಡಲು ರೆಡೀ ಆದೆವು. ಸ್ನೇಹಿತರೆಲ್ಲ ಫ್ಲ್ಯಾಗ್ ಆಫ್ ಸೆಲೆಬ್ರೇಶನ್ ಮಾಡಿ, ಜಾದೂ ಕಿ ಜಪ್ಪಿ ಕೊಟ್ಟು ಕೊಡೈಕೆನಾಲ್ ಕಡೆ ಹೊರಟರು.
fullsizerender-1
ನಾನು ಹಾಗೂ ಆಕಾಶ್ ಬೆಂಗಳೂರಿನ ಕಡೆಗೆ……
ನಮ್ಮದು ಯಾವುದೇ ನಿರ್ಧಿಷ್ಟವಾದ ಪ್ಲಾನ್ ಇರಲಿಲ್ಲ. ಈ ಒಂದು ಕನಸಿನ ಪಯಣಕ್ಕೆ ತನ್ನ ಕೆಲಸಕ್ಕೆ ಗುಡ್ ಬೈ ಹೇಳಿ ಬಂದ ಆಕಾಶ್ ಗೆ ಸಮಯದ ಅಭಾವ ಇರಲಿಲ್ಲ. ನನಗೆ ಕೆಲಸದ ಬಗ್ಗೆ ಮುಂದಾಲೋಚನೆಯೇ ಇರಲಿಲ್ಲ.
ಅಲೆಮಾರಿಗಳಾಗಿದ್ದೆವು ನಾವು. ಕನ್ಯಾಕುಮಾರಿಯಿಂದ ಕಾಶ್ಮೀರ…. ಸುಮಾರು 2 ತಿಂಗಳುಗಳಿಗೆ ಸಾಲುವಷ್ಟು ಎಲ್ಲ ಸಾಮಗ್ರಿಗಳು ನಮ್ಮ ಜೊತೆ ಇದ್ದವು. ನಾವು ಹೋಗುವ ರೂಟ್ ಯಾವ  k2K ಮಾಡಿದವರು ಬಳಸಿರಬಾರದು ಎಂಬುವುದು ಸ್ಪಷ್ಟವಾಗಿತ್ತು.
ತುಂಬಾ ಬ್ಲಾಗ್ ಗಳನ್ನ ಫಾಲೊ ಮಾಡಿದ್ದೆವು. ಲಡಾಖ್ ಗೆ ಹೋಗಿ ಬಂದವರ ಜೊತೆ ಮಾತಾಡಿದ್ದೇವೆ. ಎಲ್ಲರೂ ಲೇಹ್-ಮನಾಲಿ ಹೈವೇ ಬಗ್ಗೆ ಹೇಳುವಾಗ ರೋಮಾಂಚನವಾಗುತ್ತಿತ್ತು.
ಅಲ್ಲಿ ಹೋಗುವವರಿಗೆಲ್ಲ ನಮ್ಮ ಆರ್ಮಿಯವರೇ ದೇವರಂತೇ. ಅವರೊಂದಿಗೆ ರಾತ್ರಿ ಟೆಂಟ್ ನಲ್ಲಿ ಉಳಿಯಬೇಕು. ಅವರ ಕೈ ಅಡುಗೆ ತಿಂದು ಅವರ ಕಥೆ ಕೇಳಬೇಕು ಎಂಬ ಬಾಲಿವುಡ್ ನ ರೊಮ್ಯಾಂಟಿಕ್ ಸೀನ್ ತರಹ ಅನೇಕ ಕನಸುಗಳು ಹುಟ್ಟಿಕೊಂಡಿದ್ದವು.
ಸಮಯ 8:45 30kms ದೂರದಲ್ಲಿ ಧರ್ಮಪುರಿ:
ಸೇಲಂ ಹತ್ತಿರ ಊಟ ಮುಗಿಸಿ ಹೊರಟಿದ್ದೆವು.  ದಾರಿಯಲ್ಲಿ ಸಿಕ್ಕ ಕೆಲವರು ಲೆಡ್ ಲೈಟ್ ಅನ್ನು ವಿಚಿತ್ರವಾಗಿ ನೋಡಿ ಅದರ ಬಗ್ಗೆ ವಿಚಾರಿಸಿದರು.
ಇನ್ನೇನು ಬೆಂಗಳೂರಿಗೆ ಹೋಗಿ ಶೆಟ್ಟಿ ಗಾರ್ಡೆನಿಯಾ ಹೋಟೆಲ್ ನಲ್ಲಿ ಊಟ ಮಾಡಬೇಕು ಅಂದುಕೊಳ್ಳುವಷ್ಟರಲ್ಲಿ,ಮಿರರ್ ನೋಡಿದೆ. ಆಕಾಶ್ ಕಾಣಿಸಲೇ ಇಲ್ಲ. 5 ನಿಮಿಷ ಕಾದರೂ ಸುಳಿವಿಲ್ಲ.
ಕಾಲ್ ಮಾಡಿದರೆ ಬಿಸೀಯಾಗಿದ್ದಾರೆ ಅಂತ ಬರುತ್ತಿದೆ. ಮತ್ತೆ ತಿರುಗಿಸಿಕೊಂಡು ಹೊರಟೆ.
ಸ್ವಲ್ಪ ದೂರದಲ್ಲಿ ಅವನು ಸೈಡ್ ಅಲ್ಲಿ ನೀತು ಬುಲೆಟ್ ಕಿಕ್ ಹೊಡೆಯುತ್ತಿದ್ದ. ಪಕ್ಕದಲ್ಲಿ ತುಪ್ಪೂರು ಪೋಲೀಸ್ ಚೆಕ್ಕ್ಪೋಸ್ಟ್ ಇತ್ತು.
ಅಲ್ಲಿಗೆ ನಮ್ಮ ಮೊದಲ ಬ್ರೇಕ್ ಡೌನ್. ಕಲಿತ ಯಾವ ಮೆಕ್ಯಾನಿಕ್ ವಿಧ್ಯೆಗಳೂ ಪ್ರಯೋಜನವಾಗಲಿಲ್ಲ,  ದುರಾದ್ರಷ್ಟಕ್ಕೆ ಭಾನುವಾರ ಆಗಿರುವುದರಿಂದ ಎಲ್ಲ ಮೆಕ್ಯಾನಿಕ್ ಶಾಪ್ಗಳು ಮುಚ್ಚಿವೆ.
ನಿನ್ನೆ ಮೊನ್ನೆ ರಿಜಿಸ್ಟರ್ ಮಾಡಿಸಿದ ರಾಯಲ್ ಎನ್‌ಫೀಲ್ಡ್ 24ಜೇ7 ಸಪೋರ್ಟ್ ಕೂಡ ವ್ಯರ್ಥವಾಗಿ,
ನಾಳೆ ಹೋಗಿ ಮೊದಲು ಅವರಿಂದ ರಿಜಿಸ್ಟರ್ ಮಾಡಿಸಿದ 1000Rs ಇಸ್ಕೊಂಡು ಬರಬೇಕು ಎಂದುಕೊಳ್ಳುವಷ್ಟರಲ್ಲಿ
 ಚೌಕಿಯಲ್ಲಿದ್ದ ತಮಿಳು ಪೊಲೀಸರು ನಮ್ಮನ್ನು ಕರೆದು ಕುಡಿಯಲು ತಮಗೆ ತಂದಿದ್ದ ಚಹಾ ಬಿಸ್ಕೆಟ್ ನೀಡಿ, ಯಾವುದೋ ಮೆಕ್ಯಾನಿಕ್ ಗೆ ಬರಲು ಹೇಳಿರುವದಾಗಿ ತಿಳಿಸಿದರು.
ಅವರ ಭಾಷೆ ನಮಗೆ ಬರಲ್ಲ. ನಮ್ಮ ಭಾಷೆಗಳು ಅವರಿಗೆ ಅರ್ಥವಾಗಲ್ಲ. ಭಾಷೆಗಳ ಗಡಿಯನ್ನು ದಾಟಿ ಮಾನವೀಯತೆ ಮಾತಾಡಿತ್ತು. ನಿಜವಾಗಲೂ ಜನರು ತುಂಬಾ ಒಳ್ಳೆಯವರು. ಪೊಲೀಸರು ಕೂಡ.
ಕೊನೆಗೂ 20KM ದೂರದಿಂದ 20 ನಿಮಿಷಗಳ ಬಳಿಕ ಒಬ್ಬ ಮೆಕ್ಯಾನಿಕ್ ಬಂದು 200 ಮೀಟರ್   ದೂರ ಇರುವ ತನ್ನ ಶಾಪ್ ಗೆ ಟೋ ಮಾಡಿಕೊಂಡು ಬುಲೆಟ್ ಒಯ್ದ.  ಪೊಲೀಸರು ನಮ್ಮ ಬಳಿ ಹಣ ತೆಗೆದುಕೊಳ್ಳದೆ ಇರಲು ಹೇಳಿ ಕಳಿಸಿದ್ದು ನಮಗೆ ಅರ್ಥವಾಗಿತ್ತು.
 ಒಬ್ಬ ತಮಿಳು ಸ್ನೇಹಿತನಿಗೆ ಕಾಲ್ ಮಾಡಿ ಅವನನ್ನು ಅನುವಾದಿತ ನನ್ನಾಗಿಸಿ ಮೆಕ್ಯಾನಿಕ್ ಜೊತೆ ಮಾತಾಡಿದಾಗ ಬ್ಯಾಟರಿಯಲ್ಲಿ ದೋಷವಿದ್ದು , ಸದ್ಯಕ್ಕೆ ಡೈರೆಕ್ಟ್ ಮಾಡುವುದಾಗಿ, ಬೆಂಗಳೂರಿಗೆ ಹೋಗಿ ನಾಳೆ ಹೊಸ ಬ್ಯಾಟರೀ ಹಾಕಿಸಬೇಕಾಗಿ ಅವನು ಹೇಳಿದ.
 ಮತ್ತೆ ಹೀಗೆ ಆದರೆ ಏನು ಮಾಡಬೇಕೆಂದು ಕೇಳಿ ತಿಳಿದು, ಅವನು ಬೇಡ ಎಂದರೂ 200Rs  ಕೊಟ್ಟು,  ಪೊಲೀಸರಿಗೆ ಥ್ಯಾಂಕ್ಸ್ ಹೇಳಿ ಹೊರಟಾಗ ರಾತ್ರಿ 10:15.
ಸಮಯ 10:45  ಧರ್ಮಪುರಿ ಬೈಪಾಸ್:
ಆಕಾಶ್ ಬುಲೆಟ್ ಮತ್ತೆ ನಿಲ್ಲಿಸಿದ. ಕಗ್ಗತ್ತಲಲ್ಲಿ ಹೆಡ್‌ಲೈಟ್ ಹಾಗೂ ಇತರೆ ಲೈಟ್ ಗಳು ಆಫ್ ಆದವು..ಮತ್ತೆ ಬ್ರೇಕ್‌ಡೌನ್ . ಎಲ್ಲೆಡೆ ಕತ್ತಲು. ಏನೇ ಹರಸಾಹಸ ಮಾಡಿದರೂ ಸ್ಟಾರ್ಟ್ ಆಗುತ್ತಿಲ್ಲ.
ರಾಯಲ್ ಎನ್‌ಫೀಲ್ಡ್ 24X7 ಗೆ ಕರೆ ಮಾಡಿದ್ದು ಮತ್ತೆ ವ್ಯರ್ಥ ವಾಗಿತ್ತು. ದಾರಿಯಲ್ಲಿ ಹೋಗುತ್ತಿದ್ದ ಟ್ರಕ್ ಗಳನ್ನ ನಿಲ್ಲಿಸಲು ಪ್ರಯತ್ನಿಸಿದರು ಪ್ರಯೋಜನವಾಗಲಿಲ್ಲ.. ಅಷ್ಟರಲ್ಲಿ ಹೈವೇ ಪೆಟ್ರೋಲ್ ವಾಹನ ಒಂದು ನಮ್ಮಿಂದ
200 ಮೀಟರ್  ದೂರದಲ್ಲಿ ಹೋಗಿ ನಿಂತಿತು.

ವಿಷಯ ತಿಳಿದ ಅವರು ಯಾವುದೋ ಮೆಕ್ಯಾನಿಕ್ ಗೆ ಕಾಲ್ ಮಾಡಿದರೂ ಪ್ರಯೋಜನವಾಗಲಿಲ್ಲ. ಪಕ್ಕದಲ್ಲಿರುವ ಮೈಲಿಗಲ್ಲು ಹೊಸೂರು 93 km ಎಂದು ತೋರಿಸುತ್ತಿತ್ತು.ಯಾವುದಾದರೂ ಟಾಟಾ ಏಸ್ ಅಥವಾ ಡೀಸಲ್ ಆಟೋ ಮಾಡಿಕೊಡಿ ಎಂದು ಹೇಳಿದಾಗ ಅವರು ಯಾರಿಗೋ ಕಾಲ್ ಮಾಡಿ ಬರಲು ಹೇಳಿ, ಡ್ರೈವರ್ ನಂಬರ್ ಕೊಟ್ಟು,ಹೈವೇ ಲಿ ಇನ್ನೊಂದು ವಾಹನ ಬ್ರೇಕ್ ಡೌನ್ ಆಗಿದ್ದು, ಹೋಗುವುದು ಅನಿವಾರ್ಯವಾಗಿದೆ. ಟಾಟಾ ಏಸ್ ನವನು ಬಂದು ನಿಮ್ಮನ್ನು ಹೊಸೂರು ತಲುಪಿಸುತ್ತಾನೆ. ನಿಮ್ಮ ಪ್ರಯಾಣ ಸುಖಕರವಾಗಿರಲಿ ಎಂದು ಹೇಳಿ ಹೊರಟರು.

15 ನಿಮಿಷಗಳ ನಂತರ ಟಾಟಾ ಏಸ್ ಆಟೋ ನಮ್ಮ ಮುಂದೆ ಬಂದು ನಿಂತಿತ್ತು. ಬುಲ್ಲೇಟನ್ನು ಅದರ ಹಿಂದೆ ಹಾಕಿ ಕಟ್ಟಿ ಹೊಸೂರಿಗೆ ಹೊರಟೆವು.ಹೊಸೂರಿನಲ್ಲಿರುವ ಗೆಳೆಯ ಅಶೋಕ್ ಅಲ್ಲಿ ಕಾಯುತ್ತಿದ್ದ. ಅವನ ಮನೆಯಲ್ಲಿ ಬ್ರೇಕ್‌ಡೌನ್ ಆದ ಬುಲೆಟ್ ಪಾರ್ಕ್ ಮಾಡಿ, ಆಟೋ ಡ್ರೈವರ್ ಗೆ ಥ್ಯಾಂಕ್ಸ್ ಹೇಳಿ ಮನೆಗೆ ಬಂದು ಮಲಗಿದಾಗ ರಾತ್ರಿ 3 ಘಂಟೆ. ಮರುದಿನ ವಿಶ್ರಾಂತಿ. ಆಕಾಶ್ ಬೆಳಿಗ್ಗೆ ಎದ್ದು ಹೊಸೂರಿಗೆ ಹೋಗಿ, ಅಲ್ಲೇ ಪಕ್ಕದಲ್ಲಿದ್ದ ರಾಯಲ್ ಎನ್‌ಫೀಲ್ಡ್ ಸರ್ವಿಸ್ ಸೆಂಟರ್ ನಲ್ಲಿ ಬೈಕ್ ರಿಪೇರ್ ಮಾಡಿಸಿಕೊಂಡು ಬಂದ.

img_1056

29 june 2016: ಬೆಂಗಳೂರು – ಕೊಲ್ಹಾಪುರ್ : 630 km

ಅಮ್ಮನ ಆಶೀರ್ವಾದ ತಗೊಂಡು, ಅಪ್ಪನಿಗೆ ಗೊತ್ತಾಗದಂತೆ ನೋಡಿಕೋ ಎಂದು ಹೇಳಿ, ಕುಮಾರ ಸ್ವಾಮಿ ಲೇಯೌಟ್ ನಿಂದ ಹೊರಟಾಗ ಬೆಳಿಗ್ಗೆ 6 ಘಂಟೆ.ಆಕಾಶ್, ಕತ್ರಿಗುಪ್ಪೆ ಪೆಟ್ರೋಲ್ ಬಂಕ್ ಬಳಿ ಕಾಯುತ್ತಿದ್ದ. ಮಳೆ ಮಂಜಿನ ತರ ನಾನು ನಿಮ್ಮ ಜೊತೆಗಿದ್ದೇನೆ ಎಂಬ ಮುನ್ಸೂಚನೆ ಕೊಡುತ್ತಿತ್ತು.ಗುರುಗುಂಟೆ ಪಾಳ್ಯದಿಂದ ಎಡಕ್ಕೆ ತಿರುಗಿ ಎಂದಿನಂತೆ  ನೆಲಮಂಗಲದ ಟೋಲ್ ಆದಮೇಲೆ ಸಿಗುವ ಖಾಖಾ ಅಂಗಡಿಯಲ್ಲಿ ಚಹಾ ಕುಡಿದು, ಹಿಂದೆ ತಿರುಗಿ- ಬೆಂಗಳೂರಿಗೆ “ಮತ್ತೆ ಸಿಗೋಣ..” ಎಂದು ಹೇಳಿ ಹೊರಟೆವು. ನ್4 ನಮಗೆ ಹೊಸತೇನಲ್ಲ. ಅದೆಷ್ಟು ಸಲ ಇಲ್ಲಿ ನಮ್ಮ ಟೈಯರ್ ನಾ ರಬ್ಬರ್ ಸವೆದಿವೆ. ಆದರೂ ಇಂದೇಕೋ ಹೊಸತು ಅನುಭವ. ಮಳೆಯ ಜೊತೆಗೆ ಭೂಮಿ ಬೆರೆತು ಸೂಸುತ್ತಿದೆ ಆ ಘಮ. ಕಣ್ಣುಮುಚ್ಚಿ ಕನಸು ಕಂಡು ಬಾಲ್ಯಕ್ಕೆ ಮತ್ತೆ ಹೋಗಬೇಕೆನ್ನುವ ಆಸೆ.ತುಂತುರು ಮಳೆಯಲಿ ತುಮುಕೂರು ಕಳೆದು ಹೋಯಿತು.

ಚಿತ್ರದುರ್ಗದ ನಂತರ ಸಿಗುವ ನಿಜಲಿಂಗಪ್ಪನವರ ಸಮಾಧಿ ಪಕ್ಕದಲ್ಲಿರುವ ಹೋಟೆಲ್ ನಲ್ಲಿ ತಿಂಡಿ ಮುಗಿಸಿ ಹೊರೆಟೆವು.ಮಳೆ ಶುರುವಾಯಿತು. ನಿಲ್ಲುವ ಲಕ್ಷಣವಂತೂ ಇರಲಿಲ್ಲ. ಹುಬ್ಬಳ್ಳಿಯ ವರೆಗೆ ಮಳೆಯಲಿ ಸ್ವಲ್ಪ ಸ್ವಲ್ಪ ದೂರಕ್ಕೆ ಬ್ರೇಕ್ ತೆಗೆದುಕೊಂಡು ಹೋಗಿ ತಲುಪಿದೆವು.ಜ್ಯಾಕೆಟ್, ರೇನ್ಕೋಟ್ ಧರಿಸಿದರು ಮಯ್ಯೆಲ್ಲಾ ತೇವವಾಗಿತ್ತು. ಊಟ ಮಾಡುವ ಮನಸ್ಸಾಗಲಿಲ್ಲ. ಇನ್ನೊಮ್ಮೆ ಬೈಕ್ ನಾ ಚೆಕ್ ಅಪ್ ಮಾಡಿಸುವುದು ಒಳ್ಳೆಯದು ಅನಿಸಿ ಹುಬ್ಬಳ್ಳಿಯ ರಾಯಲ್ ಎನ್‌ಫೀಲ್ಡ್ ಸರ್ವಿಸ್ ಸೆಂಟರ್ ಕಡೆ ಹೊರಟೆವು. ತುಂಬಾ ಜನರು ಬಂದು ಬೈಕ್ ಹಿಂದೆ ಬರೆದ ಬೋರ್ಡ್ ಓದಿ, ನಮ್ಮ ಪರಿಚಯವ ಕೇಳಿ, ಆಲ್ ಡಾ ಬೆಸ್ಟ್ ಎಂದು ಹೇಳಿ ಹೋಗುತ್ತಿದ್ದರು..ಅಮನ್ ಎಂಬ ಗೆಳೆಯನ ಪರಿಚಯವಾಯಿತು. ಅವನು 99 ಕ್ಯಾನನ್ಸ್ ಬುಲೆಟ್ ಕ್ಲಬ್ ನ ಸದಸ್ಯನಾಗಿದ್ದು, ಹಲವು ಬಾರಿ ರೈಡರ್ ಮೇನಿಯಾ ಹಾಗೂ ಬೇರೆ ರೈಡ್ ಗಳಲ್ಲಿ ಭಾಗವಹಿಸಿದ ಕಥೆ ಹೇಳಿದ. ಮುಂದೆ ಹೋಗುವ ದಾರಿಯಲ್ಲಿ ಇರುವ ಕೆಲವು ಕ್ಲಬ್ ಮೆಂಬರ್ಸ್ ಗಳ ನಂಬರ್ ಕೊಟ್ಟು, ಅವಶ್ಯಕತೆ ಇದ್ದರೆ ಅವರಿಗೆ ಕರೆ ಮಾಡಿ ಎಂದು, ಈ ಸಾರಿಯ ರೈಡರ್ ಮೇನಿಯಾ ದಲ್ಲಿ ನಿಮ್ಮ ಕಥೆ ಕೇಳುವುದಾಗಿ  ಹೇಳಿ ಹೊರಟ.ನಾವು ಕುಂದಾ ನಗರಿ ಬೆಳಗಾವಿ ಕಡೆ ಹೊರಟೆವು.ಮಳೆ ಇನ್ನೂ ತನ್ನ ಪಾಡಿಗೆ ಮತ್ತೆ ಸುರಿಯುತ್ತಲಿತ್ತು.

ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಹೊರಟು ಬೆಳಗಾವಿ ತಲುಪಿ,  ಬೈಪ್ಯಾಸ್ ನಲ್ಲಿರುವ ರುಚಿ2 ಎಂಬ ದಾಭಾ ದಲ್ಲಿ ಚಿಕನ್ ಮಾಸಲಾ, ರೊಟ್ಟಿ ತಿನ್ನುವಾಗ ನಮ್ಮ ಬಟ್ಟೆಗಳನ್ನೆಲ್ಲ ಒಣಗಿಸಿದೆವು. ಕೋಲ್ಹಾಪುರ ಇನ್ನೂ 130km  ದೂರವಿತ್ತು.ಮಳೆ ಸ್ವಲ್ಪ ಹಗುರವಾಗಿತ್ತು. ಸಂಕೇಶ್ವರ, ಕಾಗಲ್ ಮೂಲಕ ಹಾಡು ಹೋಗುವ 48 ಹಿಡಿದು ಹೊರಟಾಗ, ಅತ್ತ ಬಯಲು ಸೀಮೆಯೂ ಅಲ್ಲ, ಇತ್ತ ಮಲೆನಾಡೂ ಅಲ್ಲ ಎಂಬಂತೆ ಉದ್ದವಾಗಿ ಹಸಿರು ಚಾಚಿ ಹರಡಿತ್ತು ಭೂಪಟ. ಮರಾಠಿ ಭಾಷೆಯು ಕಿವಿಗೆ ಬೀಳುವಮೊದಲೇ, ಏರ್ ಟೆಲ್ ನಿಮ್ಮನ್ನು ಮಹಾರಾಷ್ಟ್ರ- ಗೋವಾ ಗೆ ಸ್ವಾಗತಿಸುತ್ತಿದೆ ಎಂಬ ಮೆಸೇಜ್ ಬಂದಿತ್ತು. ಕೋಲ್ಹಾಪುರ ತಲುಪಿದಾಗ ಸಂಜೆ ೬ ಘಂಟೆ.

img_1110

ಯಾವುದೇ ನಿರ್ಧಿಷ್ಟವಾದ ಸ್ಥಳಕ್ಕೆ ಹೋಗುವುದು ನಿರ್ಧಾರವಾಗಿರದ ಕಾರಣದಿಂದಾಗಿ ಹೋಟೆಲ್ ಬುಕ್ ಮಾಡಿರಲಿಲ್ಲ.  ಕೋಲ್ಹಾಪುರ ಮಾರ್ಕೆಟಲ್ಲಿ  ಅಲೆಯುತ್ತಾ ಹೋಟೆಲ್ ಹುಡುಕುತ್ತಿದ್ದೆವು. ಸುಮಾರು 60-65 ವರ್ಷದಮಹಿಳೆಯೊಬ್ಬರು ನಮ್ಮ ಬೈಕ್ ಹಿಂದೆ ಬರೆದ ಬೋರ್ಡ್ ಓದಿ ನಮ್ಮ ಹತ್ತಿರ ಬಂದು, ನನ್ನ ಮಗನು ಸೈನಿಕ. ನಿಮ್ಮನ್ನು ನೋಡಿದರೆ ನಮ್ಮ ಮಗನ ನೆನಪಾಗುತ್ತದೆ. ಅವನ ಹತ್ತಿರವೂ ಬುಲೆಟ್ ಇದೆ. ಇಲ್ಲೇ ಇಟ್ಟು ಹೋಗಿದ್ದಾನೆ,ಊರಿಗೆ ಬಂದಾಗ ಓಡಿಸುತ್ತಾನೆ. ಹುಷಾರಾಗಿ ಹೋಗಿ ಬನ್ನಿ. ಒಳ್ಳೆಯದಾಗಲಿ. ಎಂದು ಹೇಳುವಾಗ ಅವರ ಕಣ್ಣಲ್ಲಿ ಅವರ ಮಕ್ಕಳನ್ನೇ ನೋಡಿದಷ್ಟು ಆನಂದವಿತ್ತು.

ಹೀಗೆ ಸುತ್ತುತ್ತಾ ಹೋಟೆಲ್ ಹುಡುಕುತ್ತಿರುವಾಗ ದೂರದಿಂದ ಯಾರೋ ನಮ್ಮನ್ನು ಫಾಲೊ ಮಾಡಿಕೊಂಡು ಬರುತ್ತಿರುವುದನ್ನು ನೋಡಿ ಬೈಕ್ ನಿಲ್ಲಿಸಿದೆವು. ಬೈಕ್ ನಲ್ಲಿ ಬಂದ ಇಬ್ಬರಲ್ಲಿ ಒಬ್ಬ ಕೈ ಕುಲುಕಿ, ವೆಲ್‌ಕಮ್ ಟುಕೊಲ್ಹಾಪೂರ್. ನನ್ನ ಹೆಸರು ಸಚಿನ್. ಕೋಲ್ಹಾಪುರ ಬುಲೆಟ್ ಕ್ಲಬ್ ನ ಬೋರ್ಡ್ ಆಫ್ ಡೈರೆಕ್ಟರ್ಸ್ ಗಳಲ್ಲಿ ಒಬ್ಬ, ನಮ್ಮಿಂದ ನಿಮಗೆ ಏನು ಸಹಾಯವಾಗಬೇಕು ಕೇಳಿ ಅಂದಾಗ, ನಾವು ಇಲ್ಲಿ ಅಪರಿಚಿತರಲ್ಲ ಎನಿಸಿತು. ನಾವುಹೋಟೆಲ್ ಹುಡುಕುತ್ತಿರುವುದನ್ನು ತಿಳಿದ ಅವರು ತಮ್ಮ ಪರಿಚಯಸ್ತರ ಹೋಟೆಲ್ ಒಂದಕ್ಕೇನಮ್ಮನ್ನು ಕರೆದೊಯ್ದರು. ಕಾಮರ್ಸ್ ಕಾಲೇಜ್ ನ ಪಕ್ಕದಲ್ಲಿರುವ “ಸೋಲಂಕಿ ಗೆಸ್ಟ್ ಹೌಸ್” ಚೆಕ್-ಇನ್ ಆದ ಬಳಿಕ ಒಟ್ಟಿಗೆ ಕರೆದೊಯ್ದುಚಹಾ ಕುಡಿಸಿದರು. ತಮ್ಮ ರೈಡ್ ಗಳ ಬಗ್ಗೆ ಹೇಳಿದರು. ಮದುವೆಯ ನಂತರ ಬೈಕ್ ಓಡಿಸಲು ಸಮಯವಿಲ್ಲ, ಆದರೆ ಯಾವತ್ತೂ ಗೋವಾ ರೈಡರ್ ಮೇನಿಯಾ ಮಿಸ್ ಮಾಡಿಲ್ಲ. ಎಂದರು. ಹೋಗಿ ಬನ್ನಿ… ರೈಡರ್ ಮೇನಿಯಾದಲ್ಲಿ ಸಿಗೋಣ ಎಂದು ಹೇಳಿ ಹೊರಟರು. ಚಹಾ ಮತ್ತು ಅವರ ಕಥೆಗಳ ಮತ್ತಿನಲ್ಲಿ, ಸೆಲ್ಫಿ ತಗೊಳೋದು ಮರೆತು ಹೋಗಿತ್ತು.

ಗೀಜರ್ ನ ನೀರನ್ನೇ ಹಂಡೆಯ ಬಿಸಿ ನೀರು ಎಂದುಕೊಂಡು ಸ್ನಾನ ಮಾಡಿದಾಗ ದಣಿವು ಎಂಬುದು ಇರಲಿಲ್ಲ.ಹತ್ತಿರದಲ್ಲೇ ಇರುವ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಹೋಗಿ ದರ್ಶನ ಪಡೆದು ಬಂದೆವು.ಒಂದು ಪ್ರದೇಶದ ಅಥವಾ ಊರಿನತಿಂಡಿಗಳ ಅಸಲಿ ರುಚಿ ಸಿಗುವುದು ರಸ್ತೆ ಬದಿಯ ಅಂಗಡಿಗಳು ಅಥವಾ ತಾತನ್ದಿರು ಬಿಟ್ಟು ಹೋದ ಹೋಟೆಲ್ಗಳಲ್ಲಿಯೇ ಹೊರತು ಐಷಾರಾಮಿ ಹೋಟೆಲ್ ಗಳಲ್ಲಿ ಅಲ್ಲ. ಬೀದಿಗಳಲ್ಲಿ ಬಿಸಿ ಬಿಸಿಯಾದ ಚಹದೊಂದಿಗೆ , ವಡಾ ಪಾವ್,ಮಿರ್ಚಿ ಬಜ್ಜಿ ತಿಂದು ಸುತ್ತಾಡಿ ಹೋಟೆಲ್ ಗೆ ಬಂದೆವು.

img_1117

ಅಪರಿಚಿತರು ಬಂದು ಮಾತನಾಡಿಸಿದಾಗ, ಜರ್ನೀ ಯ ಬಗ್ಗೆ ಕೇಳಿದಾಗ, ತಾವು ಒಂದು ದಿನ ಕೇ2ಕೇ ಮಾಡಬೇಕು ಎಂದಾಗ, ನಿಮ್ಮ ಪಯಣ ಸುಖಕರವಾಗಿರಲಿ ಎಂದು ಹರಸಿದಾಗ ಮನಸ್ಸಿಗೆ ಏನೋ ಒಂದು ನೆಮ್ಮದಿ ಸಿಗುತ್ತದೆಎಲ್ಲದಕ್ಕೂ ಕಾಲ ಕೂಡಿ ಬರಬೇಕು. ನನ್ನ ಜೀವನದಲ್ಲಿ ಮೊದಲ ಬಾರಿ  ಈ ಅಕ್ಷಾಂಶ- ರೇಖಾಂಶ ಗಳು ಬಂದಿದ್ದವು, ಮುಂದಿನ ಕೆಲವು ದಿನಗಳಲ್ಲಿ ಬರುವ ಎಲ್ಲವೂ ನನಗೆ ಹೊಸತು.ಜನರು ನಿಜವಾಗಲೂ ಒಳ್ಳೆಯಸ್ನೇಹಿತರು.ನಮ್ಮ ಪಯಣ ಎಷ್ಟೋ ಜನರ ಹೊಸ ಕನಸಾಗಿತ್ತು. ” ಅಲೆಮಾರಿಗಳ ಜಗತ್ತಲ್ಲಿ ಅಪರಿಚಿತರು ಇಲ್ಲ” ಎಂಬ ಮಾತು ಮತ್ತೆ ನೆನಪಾಯಿತು. ಇಂದಿಗೆ ಅಲೆಮಾರಿಗಳು c/o  ಕೋಲ್ಹಾಪುರ.

img_1137

ಬೆಳಿಗ್ಗೆ ಬೇಗ ಎದ್ದು ಹೊರಡಬೇಕು ಎಂದು ಅಲಾರ್ಮ್ ಇಟ್ಟು ಮಲಗಿದಾಗ 11:15.

ಅಲಾರ್ಮ್ ಆಗುವ ಮೊದಲೇ ಫೋನ್ ರಿಂಗ್ ಆಗುತ್ತಿತ್ತು. ಎದ್ದು ಅಪ್ಪನ ಜೊತೆ ಮಾತನಾಡಿ ಸ್ನಾನ ಎಲ್ಲ ಮುಗಿಸಿ ಹೊರಡಲು ತಯಾರಾದೇವು. ಶಿರಡಿ ಏನೂ ತುಂಬಾ ದೂರ ಇರಲಿಲ್ಲ. ಹತ್ತಿರ ಹತ್ತಿರ ಅಂದರೆ 400km ಇರಬಹುದೇನೋ. ಸ್ವಲ್ಪ ತಡವಾಗೇ ಹೊರಟೆವು. ಮಹಾರಾಷ್ಟ್ರಕ್ಕೆ ಹೋಗಿ ಅವಲಕ್ಕಿ ಹಾಗೂಮಿಸಳ್ ಪಾವ್ ತಿನ್ನದೆ ಬಂದರೆ ಅದು ತಿರುಪತಿಗೆ ಹೋಗಿ ದರ್ಶನ ಮಾಡದೆ ಬಂದ ಹಾಗೆ ಅನ್ನೋ ವಾಡಿಕೆ ಇದೆ. ಮುಂಜಾನೆಯ ಉಪಹಾರ ಹೈವೇ ಲಿ ಇರುವ  ಸರ್ವಸ್ವ ಎಂಬ ಹೋಟೆಲಲ್ಲಿ ಎರಡನ್ನೂ ಭರ್ತಿ ತಿಂದಾಗ ಮತ್ತೆ ನಿದ್ದೆ ಮಾಡಬೇಕು ಎನಿಸುತ್ತಿತ್ತು. ಮುಂದಿನ ನಿಲ್ದಾಣ ಪುಣೆ.

ದುರದ್ರಷ್ಟ ಎಂಬಂತೆ ಪುಣೆ ಸಿಟೀ ಟ್ರಾಫಿಕ್ ನಲ್ಲಿ ಎರಡು ಘಂಟೆ ಕಳೆಯಬೇಕಾಗಿ ಬಂತು. ಸೇವಾನಿರತ ಪೋಲೀಸ್ ಗಳಿಬ್ಬರು ನಮ್ಮ ಪಾಡು ನೋಡಲಾಗದೆ ಒಂದು ಹಾಳೆ ಹಾಗೂ ಪೆನ್ನಿನಲ್ಲಿ ಗೂಗಲ್ ಮ್ಯಾಪ್ ತರಹದ ದಿಕ್ಕುಗಳನ್ನು ವಿವರಿಸಿ ಒಂದು ಮ್ಯಾಪ್ ಬರೆದು ಕೊಟ್ಟರು. ಅಹಮದ್ ನಗರ ರೋಡ್ ಹುಡುಕುವುದುನಮ್ಮ ಮುಂದಿನ ಸವಾಲಾಗಿತ್ತು. ಅದೇನೋ ದೇವಿಯ ಮೆರವಣಿಗೆ. ಅದೆಷ್ಟೋ ಸಾವಿರ ಹೆಂಗಸರೆಲ್ಲರೂ ಸೀರೆಯುಟ್ಟು, ಕಲಶ ಹೊತ್ತು ಶಿಸ್ತಿನಿಂದ ಸರದಿಯಲ್ಲಿ ನಡೆದು ಹೋಗುತ್ತಿದ್ದರಿಂದ ಎಲ್ಲ ರಸ್ತೆ ಗಳೂ ನೋ ಎಂಟ್ರೀ ಎಂಬ ಫಲಕಗಳಿಂದ ಕಂಗೊಳಿಸುತ್ತಿದ್ದವು. ಶೋಧಿತ್ ಭಾವೆ ಎಂಬ ಮಹಾನುಭಾವರೊಬ್ಬರು ಕಷ್ಟಕಾಲಕ್ಕೆ ಕೃಷ್ಣ ಬಂದಂತೆ ಬಂದು ಯಾವುದೋ ಸಂದಿ-ಗೊಂದಿಯ ರಸ್ತೆಯ ದಾರಿ ತೋರಿಸಿ ನಮ್ಮನ್ನು ಅಹ್ಮದ್ ನಗರ ರೋಡ್ ಗೆ ತಲುಪಿಸಿದರು. ಆ ಹಿಂಸಾತ್ಮಕ 2 ತಾಸುಗಳ ಟ್ರಾಫಿಕ್ ನಮ್ಮ ಬೆಂಗಳೂರಿನ ಪ್ರಸಿದ್ದ ಸಿಲ್ಕ್ ಬೋರ್ಡ್ ಸಿಗ್ನಲ್ ಟ್ರಾಫಿಕ್ ನಾ ನೆನೆಸಿತ್ತು.

ಯಾವುದೋ ಸಾಧು ಸನ್ಯಾಸಿಗಳ ಹೋಟೆಲ್ ನಲ್ಲಿ ಬಿಸಿಬಿಸಿಯಾದ ಅನ್ನ-ಧಾಲ್ ತಿಂದು ಹೊರಟು ಅಹಮದಾಬಾದ್ ಮಾರ್ಗವಾಗಿ ಶಿರಡಿ ತಲುಪಿದಾಗ ರಾತ್ರಿ 7 ಘಂಟೆ. ದೇವಸ್ತಾನದ ಹತ್ತಿರದ ಸಾಯಿ ಕಮಲ್ ಎಂಬ ಹೋಟೆಲ್ ನಲ್ಲಿ ಚೆಕ್-ಇನ್ ಆಗಿ ತರಾತುರಿಯಲ್ಲಿ ಸ್ನಾನ ಮುಗಿಸಿ, ಸಾಯಿ ದರ್ಶನಕ್ಕೆ ಹೊರಟೆವು.ಗುರುವಾರ ಆಗಿದ್ದರಿಂದ ಭಕ್ತರ ಒಳಹರಿವು ಸ್ವಲ್ಪ ಹೆಚ್ಚಾಗಿಯೇ ಇತ್ತು. ಆರತಿ ಮುಗಿಸಿ, ದರ್ಶನ ಮಾಡಿ ಬಂದು, ಪಾದರಕ್ಷೆ ಗಳನ್ನು ಇಡುವ ಅಂಗಡಿಗಳಲ್ಲಿ ಪ್ರಸಾದ ಖರೀದಿಸಿ ಅಲ್ಲೇ ಪಕ್ಕದಲ್ಲಿರುವ ಪಂಜಾಬಿ ಡಾಬಾದಲ್ಲಿ ಊಟ ಮಾಡಿ, ಲಸ್ಸಿ ಕುಡಿದು ಹೋಟೆಲ್ ಗೆ ಹೋಗಿ ಮಲಗಿದೆವು.

ಮರುದಿನ ಅಹಮದಾಬಾದ್ ಗೆ ಹೊರಡಬೇಕು. ಮೋದಿಯವರ ನಗರ. ಗುಜರಾತಿನ ರಸ್ತೆಗಳ ಬಗ್ಗೆ ತುಂಬಾ ಕೇಳಿದ್ದೆವು. ಗೂಗಲ್ ಮಾಪ್ಸ್ ನಾಸಿಕ್-ಸಾಪೂತಾರ-ವಾಘೈ-ಸೂರತ್-ಅಹಮದಾಬಾದ್ 630kms ಎಂದು ತೋರಿಸುತ್ತಿತ್ತು. ಹೋಟೆಲ್ ನ ಹೊರಗಡೆ ಬಂದು ನಮ್ಮ ಲಗೇಜುಗಳನ್ನೆಲ್ಲ ಬುಲೆಟ್ ಗೆ ಟಾರ್ಫಾಲ್ಹಾಗೂ ಬಂಗೀ ಕಾರ್ಡ್ ಹಾಕಿ ಕಟ್ಟಿ, ಇನ್ನೇನು ರಾಷ್ಟ್ರದ್ವಜ ವನ್ನು ಹಿಂದೆ ಅಂಟೆನ್ನಾಗೆ ಹಾಕಬೇಕು, ಅಷ್ಟರಲ್ಲಿ ಒಬ್ಬ ಹಿರಿಯ ವ್ಯಕ್ತಿಗಳು ಬಂದು, ನಿಮ್ಮ ಬೋರ್ಡ್ ಓದಿ ನಿಮ್ಮ ಪ್ರವಾಸದ ಬಗ್ಗೆ ತಿಳಿಯಿತು. ನಾನು ಇಂಡಿಯನ್ ಏರ್‌ಫೋರ್ಸ್ ರಿಟೈರ್ಡ್ ಆಫೀಸರ್ ಎಂಬುದಾಗಿ ತಿಳಿಸಿದರು. ನಮ್ಮ ರಾಷ್ಟ್ರದ್ವಜ ಹಿಂದೆ ಹಾಕುವಬದಲು ನೀವು ಮುಂದೆ ಹಾಕಿದ್ದಿದ್ದರೆ ಅದಕ್ಕೆ ಕೊಡುತ್ತಿರುವ ಗೌರವ ಇನ್ನೂ ಹೆಚ್ಚಾಗಿರುತ್ತಿತ್ತು ಎಂದರು. ಲೇಹ್ ಏರ್‌ಫೋರ್ಸ್ ಬೇಸ್ ಕ್ಯಾಂಪ್ ಅಲ್ಲಿ ಸರ್ವಿಸ್ ಮಾಡಿದ್ದು, ಏನೇ ಸಹಾಯ ಬೇಕಾದರೂ ಅಲ್ಲಿ ಹೋಗಿ ಅವರು ಸಹಾಯ ಮಾಡುತ್ತಾರೆ ಎಂದರು. ನಮ್ಮಿಬ್ಬರ ಹೆಸರು ವಿಚಾರಿಸಿದರು. ನಾನು ವಿಶ್ವಜೀತ್ ಎಂದಾಗಯಾವುದೋ ಅವರ ಫೈಟರ್ ಪೈಲಟ್ ಆಗಿದ್ದ ವಿಶ್ವಜೀತ್ ನಾ ನೆನೆಸಿಕೊಂಡರು. ಅವರು ಕಂಡ ಶ್ರೇಷ್ಟ ಪೈಲಟ್ ಅಂತೇ, ಯಾವುದೋ ಆಂಗಲ್ ಹೇಳಿ, ಯುದ್ದದ ಸಮಯದಲ್ಲಿ ಸೇಫ್ ಲ್ಯಾಂಡಿಂಗ್ ಮಾಡಿದ್ದಾಗಿ, ಪರಮವೀರ ಚಕ್ರ ದೊರೆತಿರುವುದಾಗಿ ಹೇಳಿ, ಹೋಗಿ ಬಾ ಮಗನೆ…  ನಿನ್ನ ಹೆಸರು ನಿನ್ನ ಜೊತೆಗಿದೆ.ಇನ್ನೇನು ಬೇಕು? ನಿಮಗೆ ತಾನು ಫ್ಲೈ ಓಕೇ ಸಿಗ್ನಲ್ ಕೊಡುತ್ತಿರುವುದಾಗಿ ಹೇಳಿ ನಮ್ಮ ಚಹಾದ ಬಿಲ್ ನಮಗೆ ಕೊಡಲು ಬಿಡದೆ ಕಳಿಸಿದರು. ಅವರ ಮಾತು ಕೇಳಿ ಆತ್ಮವಿಶ್ವಾಸ ಇಮ್ಮಡಿಗೊಂಡಿತ್ತು.

ಶಾಲೆಯಲ್ಲಿ ಇರುವಾಗ ಯಾರಾದರೂ ದೊಡ್ಡೋನಾದಮೇಲೆ ಏನಾಗ್ತೀಯ ವಿಶು? ಎಂದು ಕೇಳಿದರೆ ಫೈಟರ್ ಪೈಲಟ್ ಅನ್ನುತಿದ್ದೆ. ಕನಸು ಆಗಿತ್ತೇನೋ ಎಂಬ ಬ್ರಮೆ. ಆದರೂ ಕೊಂಡಿ ಬಿಚ್ಚಿ, ಹಳಿ ತಪ್ಪಿ ಇಷ್ಟವಿಲ್ಲದಿದ್ದರೂ, ಅಪ್ಪ ನೆಟ್ಟ ಆಲದಮರ ಎಂಬಂತೆ ಸಾಫ್ಟ್‌ವೇರ್ ಸಾಗರದಲ್ಲಿ ಯಾಕೆ ಸೇರಿಕೊಂಡೆ? ಎಂದು ನನಗೆನಾನೇ ಕೇಳಿಕೊಡೆ.. ಉತ್ತರ ಸಿಗಲಿಲ್ಲ. ಮೀಟರ್ 90km/Hr ತೋರಿಸುತ್ತಿತ್ತು. ಹೊಟ್ಟೆ ಹಸಿಯುತ್ತಿತ್ತು. ನಾಸಿಕ್ ಹಿಂದೆ ಕಳೆದಿತ್ತು. ಪರೋಟ ತಿಂದು ಸಾಪೂತಾರ ಕಡೆ ಹೊರಟೆವು. ಗುಜರಾತ್ ನಮ್ಮನ್ನು ಹಸಿರು ಹಾಗೂ ಮಳೆಯಿಂದ ಸ್ವಾಗತಿಸಿತ್ತು. ಬಾರ್ಡರ್ ಸಾಪೂತಾರ ಲಿ ನಿಂತು ಮಳೆಯೊಂದಿಗೆ ಟೀ ಕುಡಿದೆವು.ನಮ್ಮ ಮಲೆನಾಡ ಟೀ ಟೇಸ್ಟ್ ಬರಲಿಲ್ಲ.

img_1155

ಸಾಪೂತಾರ ದಿಂದ ವಾಘೈ ಕಡೆ ಹೊರಟೆವು. ತುಂತುರು ಮಳೆ ಒಂದುಕಡೆ, ನಮ್ಮ ಶಿರಾಡಿ ಘಾಟ್ ತರಹದ ತಿರುವು-ಮರುವಾದ ರಸ್ತೆ. ಒಂಬತ್ತು ಗುಡ್ಡದ ಸೌಂದರ್ಯದಲ್ಲಿ ಮತ್ತೆ ದಾರಿ ತಪ್ಪಿದ ಅನುಭವ.  ಒದ್ದೆಯಾದ ರಸ್ತೆಯಲ್ಲಿ.. ಮಳೆಯನ್ನು ಅನುಭವಿಸುತ್ತಾ ಹೋಗುವಾಗ ಇಯರ್‌ಫೋನ್ ನಲ್ಲಿ ಮೈನಾ ಮೂವೀ ಯಮೊದಲ ಮಳೆಯಂತೆ ಹಾಡು ಬರುತ್ತಿದ್ದುದು ನೆನಪಿದೆ.

ಯಾವನೋ ಸೈಕಲ್ ಸವಾರ ಕೈ ತೋರಿಸಿದ. ಸ್ವಲ್ಪ ದೂರ ಹೋಗಿ ನಿಂತೆವು. ಆ ಮಹಾ ವ್ಯಕ್ತಿ ದಾಖಲೆಗಳ ವೀರ. ತನ್ನ ಬಗ್ಗೆ ಹೇಳಿಕೊಂಡ.ನಾನು ಮಂತ್ರ ಮುಗ್ಧನಾಗಿ 20-25 ನಿಮಿಷಗಳ ಕಾಲ ಅದನ್ನು ಫೋನ್ ನಲ್ಲಿ ವಿಡಿಯೋ  ಮಾಡಿಕೊಂಡೆ.

img_1150

ದೀಪಕ್ ಭಾಯ್ ಬಗ್ಗೆ ಸಂಕ್ಷಿಪ್ತ ವಿವರ:

*ಅವರು ಈಗ ಶಿರಡಿಇಂದ ಅಮರ್‌ನಾಥ್ ವರೆಗೂ ಸೈಕಲ್ ನಲ್ಲಿ ಹೊರಟಿದ್ದಾರೆ. ಮಗಳ ಬಗ್ಗೆ ಕೇಳಿಕೊಂಡ ಯಾವುದೋ ಹರಕೆ ತೀರಿಸಲು,…

*ವ್ರತ್ತಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರ್. 60 ವಯಸ್ಸಾದರೂ ಇನ್ನುವರೆಗೆ ಆಸ್ಪತ್ರೆಗೆ ಹೋಗಿಲ್ಲ. ಇಲ್ಲಿಯವರೆಗೆ ಯಾವುದೇ ಇಂಜೆಕ್ಶನ್ ತಗೊಂಡಿಲ್ಲ.

* ಅವರ ಮಕ್ಕಳು ಐಷಾರಾಮಿ ಕಾರು ಗಳಲ್ಲಿ ಓಡಾಡಿದರೆ, ಅಪ್ಪ ಸೈಕಲ್ ತುಳಿಯುತ್ತಾರೆ ಎಂದು ಜನ ಲೇವಡಿ ಮಾಡುತ್ತಾರೆ. ಅದಕ್ಕೆ ಅವರು ಡೊಂಟ್ ಕೇರ್. ಬೇರೆಯವರು ಅಂದುಕೊಂಡರೆ ತಮಗೇನು ನಷ್ಟ ಎಂಬ ಖಡಕ್ ಪಾಸಿಟಿವ್ ಆಟಿಟ್ಯೂಡ್ ಅವರದು.

*ದಿನಕ್ಕೆ 30 km ಸೈಕಲ್ ಸವಾರಿ, ಧರ್ಮಶಾಲೆ ಗಳಲ್ಲಿ ವಾಸ್ತವ್ಯ, ವೈಷ್ಣೋ ಹೋಟೆಲ್ ಅಂದರೆ ಶುದ್ದ ಸಸ್ಯಾಹಾರಿ ಹೋಟೆಲ್‌ಗಳಲ್ಲಿ ಊಟ.

*30 ವರ್ಷ ಗಳಿಂದ ಸೈಕಲ್ ತುಳಿಯುತ್ತಿದ್ದು, ಕನ್ಯಾಕುಮಾರಿಯಿಂದ ಕಾಶ್ಮೀರ, ಅಮರನಾಥ್ 9-10 ಬಾರಿ, ಗುಜರಾತ್ ನಿಂದ ಅಸ್ಸಾಂ ಅರುಣಾಚಲದವರೆಗೂ 2-3 ಬಾರಿ, ಭಾರತದ ಪ್ರತಿಯೊಂದು ಹಿಂದೂ ಪುಣ್ಯಕ್ಷೇತ್ರಗಳಿಗೂ , ಲೇಹ್-ಲಡಾಖ್ ವರೆಗೂ, ಅಷ್ಟೇ ಅಲ್ಲದೆ ಪಾಕಿಸ್ತಾನಕ್ಕೂ ಕೂಡ ಅದೇ ಅಟ್ಲಸ್ ಸೈಕಲ್ ನಲ್ಲಿಹೋಗಿ ಬಂದ ದಾಖಲೆ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿದೆ.

*ನೆಲಮಂಗಲ-ತುಮಕೂರು-ಶಿರಾದಿಂದ ಹಿಡಿದು ಹುಬ್ಬಳ್ಳಿ ಬೈಪಾಸ್ – ಬೇಡ ಹೊಸಪೇಟೆ-ಸೋಲಾಪುರ ಮಾತ್ರವಲ್ಲ..ಪ್ರತಿಯೊಂದು ಒಳ ರಸ್ತೆಗಳು, ಅವರು ಹೋದ ಎಲ್ಲ ರಸ್ತೆಗಳ ಪ್ರತಿ ಹಳ್ಳಿಗಳು ಅವರಿಗೆ ಕಂಠಪಾಟ. ಕೇಳಿದ ನಮಗೆ ಆಶ್ಚರ್ಯ.

* ತಿರುಪತಿಯಲ್ಲಿ ಸೈಕಲ್ ಕಳ್ಳತನವಾದ ಕಥೆ ಹಾಗೂ ಗುಜರಾತಿ ಬುದ್ದಿ ಉಪಯೋಗಿಸಿ ತಾವು ಅದನ್ನು ಪಡೆದ ಕತೆ ಹೇಳಿದರು.

ನಮಗೆ ಕೆಲವು ಸಲಹೆಗಳನ್ನು ಪಡೆದು, ಮತ್ತೆ ಸಿಗೋಣ ಎಂದು ಹೇಳಿ ಅಲ್ಲಿಂದ ಹೊರಟೆವು.(ದೀಪಕ್ ಭಾಯ್ ಅವರ ವೀಡಿಯೋ ಬೇಕಿದ್ದಲ್ಲಿ email ಮಾಡಿ: vishwajeet.nayak@gmail.com)

ಸೂರತ್ ದಾಟಿ ಅಹಮದಾಬಾದ್ ತಲುಪಿದಾಗ ಕತ್ತಲೆಯಾಗಿತ್ತು. ಸಾರಾಯಿ ನಿಷೇದವಾದ ಗುಜರಾತ್ ನಲ್ಲಿ ಪಾನಮತ್ತರಾದ ಇಬ್ಬರು ಯುವಕರು ದಾರಿ ಹೇಳಿದ ಮಾತುಗಳು ನಮಗೆ ಅರ್ಥವಾಗಲಿಲ್ಲ. ಯಾವುದೋ ಮುಸ್ಲಿಂ ವ್ಯಕ್ತಿಯೊಬ್ಬನಿಗೆ “ಬಯ್ಯಾ, ಕರ್ಣಾವತಿ ಕ್ಲಬ್ ಕಹಾ ಆತ ಹೈ?” ಎಂದು ಕೇಳಿದ್ದಕ್ಕೆ ಅವನೇನಮ್ಮನ್ನು ಅಲ್ಲಿಯವರೆಗೂ ಸುಮಾರು 7-8km ಕರೆದುಕೊಂಡು ಹೋಗಿ ಬಿಟ್ಟ. “ಆಪ್ ಕಾ ಸಫರ್ ಅಚ್ಚಾ ರಹೇ, ಜೈಹಿಂದ್” ಎಂದು ಹೇಳಿ ನಗುವಿನೊಂದಿಗೆ ಹೊರಟುಹೋದ.

ಸಹೋದರ ವಿನೀತ್, ತನ್ನ R15, ಕ್ಯಾಮರ ಹಾಗೂ ಬಿರಿಯಾನಿ ಪಾರ್ಸೆಲ್ ನೊಂದಿಗೆ ಅಲ್ಲಿ ಕಾಯುತ್ತಿದ್ದ.

ಅಂದು ನಮ್ಮ ವಾಸ್ತವ್ಯ ವಿನೀತ್ನ ರೂಮಿನಲ್ಲಿ. ನಮಗಾಗಿ ತಂದಿದ್ದ ಗುಜರಾತಿ ಬಿರಿಯಾನಿ ತಿಂದು ಮದ್ಯ ರಾತ್ರಿಯವರೆಗೆ ಹರಟೆ ಹೊಡೆದು ಮಲಗಿದಾಗ ರಾತ್ರಿ ೧೨ ಘಂಟೆ. ಬೆಳಿಗ್ಗೆ ಎದ್ದು ಸ್ನಾನ ಮಾಡಿ ರೆಡೀಆಗಿ ಜೊತೆಯಲ್ಲಿ ದಹಿ-ಪೋಹಾ ತಿಂದು ಚಹಾ ಕುಡಿದು, ವಿನೀತ್ ಗೆ ಬೈ ಹೇಳಿ, ಮೌಂಟ್ ಆಬು ರಸ್ತೆ ಹಿಡಿದು ಹೊರಟೆವು.

img_6545

ಪಲಂಪುರ್ ಮಾರ್ಘವಾಗಿ ಆಬು ರೋಡ್ ತಲುಪಿದಾಗ ಹನ್ನೆರಡಾಗಿತ್ತು. ದಾರಿಯಲ್ಲಿ ಬಿಸಿಲಿನ ಬೇಗೆಗೆ ಒಂದೆರಡು ಬಾರಿ ನಿಂಬೂ ಪಾನಿ ಹಾಗೂ ಮಜ್ಜಿಗೆ ಸಾಥ್ ಕೊಟ್ಟಿದ್ದವು. ರಾಜಸ್ತಾನದ ಬಿಸಿಲುಶುರುವಾದರೂ ಮರಳು ಕಾಣಿಸಲಿಲ್ಲ.ಅರಾವಳಿ ಘಟ್ಟಗಳಲ್ಲಿ ಎದ್ದು ಕಂಗೊಳಿಸುವ ಮೌಂಟ್ ಆಬು ನೋಡಲು ಆಬು ರೋಡ್ ಎಂಬ ಜಂಕ್ಶನ್ ನಿಂದ ಸುಮಾರು 23 ಕೇಯೆಮ್ ಅಷ್ಟು ದೂರ ತಿರುವುಮಾರುವಾದ ಸಿಂಗಲ್ ರಸ್ತೆಯಲ್ಲಿ ಹೋಗುವುದೇ ಒಂದು ರೋಮಾಂಚನ. ತಿರುಪತಿ ಇಂದ ತಿರುಮಲ ಹೋಗುವ ರಸ್ತೆಯನ್ನು ನೆನಪಿಸುವ ಆ ದಾರಿ ಸುತ್ತಲಿನ ನಯನಮನೋಹರ ಹಸಿರು ಹಾಗೂ ಬೆಳಕಿನಿಂದಇನ್ನಷ್ಟು ಸುಂದರವಾಗಿದೆ. 20 ನಿಮಿಷಗಳ ಟ್ರ್ಯಾಫಿಕ್ ಸಹಿತ ಪ್ರಯಾಣದಿಂದ ಮೇಲೆ ತಲುಪಿದೆವು.

ಸುಮಾರು ಹತ್ತಾರು ಹಿಂದೂ ದೇವಾಲಯಗಳನ್ನು ಹೊಂದಿರುವ ಆ ಗುಡ್ಡದಲ್ಲಿ  ಕೆಲವೊಮ್ಮೆ    ಕನಿಷ್ಟ ತಾಪಮಾನ ದಾಖಲಾಗುತ್ತದೆ ಎಂದು ಕೇಳಿ ವಿಚಿತ್ರವೆನಿಸಿತು. ಅನೇಕ ಬ್ರಹ್ಮಕುಮಾರಿ ಭಕ್ತರು ಬಿಳಿಯಸೀರೆಯಲ್ಲಿ ಸಾಲು ಸಾಲಾಗಿ ನಡೆಯುತ್ತಾ ಭಕ್ತಿಯಲ್ಲಿ ಮೊಳಗಿರುವುದು ಎಲ್ಲೆಡೆ ರಾರಾಜಿಸುತ್ತಿತ್ತು. ಹೊಟ್ಟೆ ಹಸಿಯುತ್ತಿದ್ದರಿಂದ ನೇರವಾಗಿ ಮತ್ತೆ ಆಬು ರೋಡ್ ಕಡೆ ಹೊರಟೆವು.

ಆಬು ರೋಡ್ ನಾ ಹೋಟೆಲ್ ಒಂದರಲ್ಲಿ ಊಟ ಮಾಡುತ್ತಿರುವಾಗ ಧಾರ್ಮಿಕ ಪ್ರವಾಸಕ್ಕೆ ಬಂದ ವ್ರಾದ್ಧಾಶ್ರಮದ ಗುಂಪೊಂದು ಪರಿಚಯವಾಯಿತು. ಸುಮಾರು 15-20 ಜನರಿರುವ ಗುಂಪು. ವರ್ಷಕ್ಕೊಮ್ಮೆಹಲವರು ಮಾಡುವ ದಾನ ಧರ್ಮದ ಫಲವಾಗಿ ಒಂದೊಂದು ಪುಣ್ಯ ಕ್ಷೇತ್ರಗಳಿಗೆ ಬೇಟಿ ಕೊಡುತ್ತಾರಂತೆ. ಅವರಲ್ಲಿ ಯಾವುದೇ ತರಹದ ನೆಗೇಟಿವ್ ಎನರ್ಜೀ ಇರಲಿಲ್ಲ. ಎಲ್ಲರೂ ಸ್ನೇಹಿತರಂತೆ ಖುಷಿ ಖುಷಿಯಾಗಿಎಲ್ಲ ನೋವನ್ನು ಮರೆತು ಹಾಡಿಕೊಂಡು,ಕೂಗಿಕೊಂಡು ಸಮಯ ಕಳೆಯುತ್ತಿದ್ದರು. ನಮ್ಮನ್ನು ನೋಡಿ, ನಮ್ಮ ಪ್ರವಾಸದ ಬಗ್ಗೆ ಕೇಳಿ ಖುಷಿ ಪಟ್ಟರು. ಎಷ್ಟೊಂದು ಖರ್ಚಾಗುತ್ತದೆ. ನಿಮಗೆ ನೀವು ಕೆಲಸ ಮಾಡುವಕಂಪನೀ ವತಿಯಿಂದ ಹಣ ಕೊಡುತ್ತಾರ ಎಂದು ಕೇಳಿದಾಗ, ನಾನು ನಮ್ಮ ಮ್ಯಾನೇಜರ್ ನನಗೆ ರಜೆ ನೀಡಿರುವುದೇ ದೊಡ್ಡದು ಇನ್ನೇನು ಬೇಕು ಹೇಳಿ ಎಂದು ತಮಾಷೆ ಮಾಡಿದಾಗ, ಅದು ನಿಜ ಎಂದುನಕ್ಕರು. ಅವರೊಂದಿಗೆ ಕಳೆದ ಕೆಲವು ಕ್ಷಣದಲ್ಲಿ ಮುಪ್ಪು ದೇಹಕ್ಕೆ ಮಾತ್ರ , ನಗುವ ಮನಸ್ಸಿಗಲ್ಲ ಎಂದು ಅನಿಸಿತ್ತು.

ಆಬು ರೋಡ್ ನಾ ಪೆಟ್ರೋಲ್ ಬಂಕ್ ಒಂದರಲ್ಲಿ ಫುಲ್ ಟ್ಯಾಂಕ್ ಮಾಡಿಸಿ ಹೊರಟೆವು. ಸಂಜೆಯ ವರೆಗೆ ಜೋಧ್‌ಪುರ್ ತಲುಪುವುದು ನಮ್ಮ ಗುರಿಯಾಗಿತ್ತು. ಖತರ್‍ಘಂಜ್ ಎಂಬಲ್ಲಿ ಬುಲೆಟ್ ಮೆಕ್ಯಾನಿಕ್ಹತ್ತಿರ ಬುಲೆಟ್ ನಾ ಚೈನ್ ಟೈಟ್ ಮಾಡಿಸಿ ಹೊರಟಾಗ,

img_1195

ಒಬ್ಬ ಇನ್ನೋವಾ ಡ್ರೈವರ್ ಹತ್ತಿರ ಜೋಧ್‌ಪುರ್ ಹೋಗುವ ರಸ್ತೆ ಕೇಳಿದೆವು. ಅವನು ಇಲ್ಲಿಂದ ಎರಡು ದಾರಿಯಿದ್ದು, ಉದಯಪುರ್ ಮೇಲೆ ಹೋಗುವುದಾದರೆ ನಿಮಗೆ ಹತ್ತಿರ, ಹೀಗೆ ನೇರವಾಗಿ ಹೋದರೆ ಕೂಡಹೋಗಬಹುದು ಎಂದ.  ತಾನು ಕೂಡ ಜೋಧ್‌ಪುರ್ ರೇಲ್‌ವೇ ಸ್ಟೇಶನ್ ಕಡೆ ಹೊರಟಿದ್ದಾಗಿ ತಿಳಿಸಿದ. ಉದಯಪುರ್ ಇನ್ಯಾಕೆ? ನಾವು ಹೊಸ ದಾರಿಯನ್ನು ಟ್ರೈ ಮಾಡೋಣ ಎಂದುಕೊಂಡು ಅದೇ ರಸ್ತೆಯಲ್ಲಿಹೊರಟೆವು. ದಾರಿಯುದ್ದಕ್ಕೂ ಅವನು ಸಿಗುತ್ತಿದ್ದುದು ಒಂದು ರೀತಿಯ ಅನುಮಾನ ಶುರುವಾಯಿತು.

ಇನ್ನೇನು ಕತ್ತಲಾಗಬೇಕು ಅನ್ನುವಷ್ಟರಲ್ಲಿ ಎಲ್ಲೋ ಮುಂದೆ ಇನ್ನೋವಾ ನಿಲ್ಲಿಸಿ ರಸ್ತೆಯ ಮೇಲೆ ನಿಂತು ಕೈ ತೋರಿಸಿದ. ನೀವು ಇಷ್ಟು ದೂರ ಬಂದಿದ್ದೀರಾ, ಬುಲೆಟ್ ಬಾಬ ದರ್ಶನ ಮಾಡಿ ಹೋಗಿ ಎಂದುಹೇಳಿದ. ಮುಂದೆ 8ಕೇಯೆಮ್ ಹೋಗಿ ಎಡಕ್ಕೆ ತಿರುಗಿದರೆ ದೊಡ್ಡ ದೇವಸ್ಥಾನವಿದೆ. ಬನ್ನಿ ನಾನು ತೋರಿಸುತ್ತೇನೆ ಎಂದ. ನಾವು ಕೂಡ ಆಗಿದ್ದಾಗಲಿ ಎಂದು ಫಾಲೊ ಮಾಡಿಕೊಂಡು ಹೊರಟೆವು. ರಾತ್ರಿ ಎಂಟುಘಂಟೆಯಾಗಿತ್ತು. ಅವನು ನಮ್ಮನ್ನು ಬುಲೆಟ್ ಬಾಬಾ ಎಂಬ ಪಾಲಿ ಯ ಹತ್ತಿರ ವಿರುವ ದೇವಸ್ಥಾನಕ್ಕೆ ಕರೆದುಕೊಂಡು ಹೋದ. ಬುಲೆಟ್ ಪಾರ್ಕ್ ಮಾಡಿ ಲಗ್ಗೇಜ್ ಅನ್ನು ಅಲ್ಲೇ ಬಿಟ್ಟು ಬರಲು ಹಿಂದೆ ಮುಂದೆನೋಡುತ್ತಿರುವಾಗ, ಇಲ್ಲಿ ಕಳ್ಳತನವೆಂಬುದು ಏನಂದೇ ಜನರಿಗೆ ಗೊತ್ತಿಲ್ಲ. ಧಾರಾಳವಾಗಿ ಬನ್ನಿ, ಇದು ಬಾಬಾ ನ ಕ್ಷೇತ್ರ ಎಂದು ಒಳಗೆ ಕರೆದುಕೊಂಡು ಹೋಗಿ ಬುಲೆಟ್ ಬಾಬ ನ ಕಥೆ ಹೇಳಿದ.

ಇದು ಸುಮಾರು ವರ್ಷಗಳ ಹಿಂದಿನ ಕಥೆ, ಓಂ ಬನ್ನ ಎಂಬ ರಾಜಮನೆತನದ ವ್ಯಕ್ತಿಯ ಹತ್ತಿರ ಒಂದು 350ಸೀಸೀ ಯ ಬುಲೆಟ್ ಇತ್ತು. ದುರದ್ರಷ್ಟಾವತ್ ಒಂದು ದಿನ ಆ ದೇವಸ್ಥಾನವಿರುವ ಸ್ಥಳದಲ್ಲಿ ಆಕ್ಸಿಡೆಂಟ್ಆಗಿ ಅವರ ಮ್ರಥ್ಯು ಆಯಿತಂತೆ. ಅದಾದ ನಂತರ ಆ ಬುಲೆಟ್ ಅನ್ನು ಪೋಲೀಸ್ ಸ್ಟೇಶನ್ ನಲ್ಲಿ ನಿಲ್ಲಿಸಲಾಯಿತಂತೆ. ಯಾವುದೋ ಕಾನ್ಸ್ಟೇಬಲ್ ಒಂದು ದಿನ ಅದನ್ನು ತನ್ನ ಮನೆಗೆ ಓಡಿಸಿಕೊಂಡುಹೋಗಿದ್ದಾನೆ. ರಾತ್ರಿ ಆ ಬುಲೆಟ್ ತಾನಾಗಿ ಬಂದು ಓಂ ಬನ್ನ ನಾ ಮನೆಯ ಮುಂದೆ  ನಿಂತಿದೆ. ಮನೆಯವರೆಲ್ಲ ಅದನ್ನು ಯಾರಿಗೋ ಮಾರಿದ್ದಾರೆ. ಮತ್ತೆ ಆ ಬುಲೆಟ್ ತಾನಾಗಿ ಬಂದು ಆಕ್ಸಿಡೆಂಟ್ ಆದ ಸ್ಥಳದಲ್ಲಿನಿಂತಿದೆ. ಮುಜುಗರಗೊಂಡ ಮನೆಯವರು ಹಾಗೂ ಊರಿನವರು ಸೇರಿ ಪರಿಹಾರಾರ್ಥವಾಗಿ ಯಾರೋ ಹಿರಿಯರ ಮಾತು ಕೇಳಿ ಆ ಬುಲೆಟ್ ಗೆ ಆ ಆಕ್ಸಿಡೆಂಟ್ ಆದ ಸ್ಥಳದಲ್ಲಿ ದೇವಾಲಯ ಕಟ್ಟಿಸಿದ್ದಾರೆ. ವಿಚಿತ್ರವೆಂದರೆ ವರ್ಷಕ್ಕೊಮ್ಮೆ ಆ ಬುಲೆಟ್ ತಾನಾಗಿ ಸ್ಟಾರ್ಟ್ ಆಗುತ್ತದಂತೆ.

ಇಷ್ಟೆಲ್ಲ ಕಥೆ ಕೇಳಿದ ನಂತರ ನಮ್ಮ ದೇಶದಲ್ಲಿ ನೋಡಲೇಬೇಕಾದ 10 ಸ್ಥಳಗಳಲ್ಲಿ ಇದನ್ನು ಎಲ್ಲೋ, ಯಾವುದೋ ಬ್ಲೋಗ್ ನಲ್ಲಿ ಓದಿದ ನೆನಪಾಯಿತು.

ಅಲ್ಲಿ ದಿನದ 24 ಗಂಟೆ ಭಜನೆ ನಡೆಯುತ್ತದೆ. ಪೂಜೆ, ಹವನ , ಜನಸಂದಣಿ , ತಮ್ಮ ಇಷ್ಟಾರ್ಥ ಸಿದ್ದಿಗಾಗಿ 4 ಮರಗಳ ಸುತ್ತ ದಾರ ಸುತ್ತುವುದು, ಎಲ್ಲವನ್ನೂ ನೋಡಿ,ಆ ಇನ್ನೋವಾ ಡ್ರೈವರ್ ಸಿಗದಿದ್ದರೆ ನಾವು ಇದನ್ನು ನೋಡುತ್ತಿರಲಿಲ್ಲ ಎಂದು ಅವನಿಗೆ ಕ್ರತಜ್ಞತೆ ಸಲ್ಲಿಸಿ ಅಲ್ಲೇ ಪಕ್ಕದಲ್ಲಿರುವ ಹೋಟೆಲ್ ಗೆ ಕರೆದುಕೊಂಡು ಹೋಗಿ ಕೂಲ್ ಡ್ರಿಂಕ್ಸ್ ಕುಡಿದೆವು. ಜೋಧ್‌ಪುರ್ ರೈಲ್ವೆ ಸ್ಟೇಶನ್ ನಿಂದ  ರಾತ್ರಿ 2 ಗಂಟೆಗೆ ಪಾಕಿಸ್ತಾನದಿಂದ ಬರುವ ಯಾತ್ರಿಗಳನ್ನು ಕರೆದುಕೊಂಡು ಮುಂಬೈ ಮತ್ತಿತರ ಸ್ತಳಗಳಲ್ಲಿರುವ ಅವರ  ಪುಣ್ಯ ಸ್ತಳಗಳ ದರ್ಶನ ಮಾಡಿಸುವುದು ಅವನಿಗೆ ವಹಿಸಿರುವ ಜವಾಬ್ದಾರಿಯಾಗಿತ್ತು. ಪ್ರತಿದಿನ ಜೋಧ್ಪುರಕ್ಕೆ ಪಾಕಿಸ್ತಾನದಿಂದ ರೈಲು ಅನೇಕ ಯಾತ್ರಿಗಳನ್ನು ಹೊತ್ತು ತರುತ್ತದೆ. ಜೊತೆಗೆ ಗುಣಮಟ್ಟದ ಭತ್ತ , ಮತ್ತಿತರ ವಸ್ತುಗಳನ್ನು ಭಾರತಕ್ಕೆ ರಫ್ತು ಮಾಡುತ್ತದೆ ಎಂದೆಲ್ಲ ತಿಳಿಸಿದ…ಸಮಯ 9 ಆಗಿತ್ತು. ಜೋಡ್ಪರ್ ಇನ್ನೂ 60ಕೇಯೆಮ್ ದೂರವಿಟ್ಟು. ಅವನಿಗೆ ಥ್ಯಾಂಕ್ಸ್ ಹೇಳಿ ಸೆಲ್ಫಿ ತಗೊಂಡು ಅಲ್ಲಿಂದ ಹೊರಟೆವು.

6883c885-755e-4147-9e0e-c65b68d875f7

ಜೋಧ್ಪುರ ತಲುಪಿದಾಗ 10:30. ಮೂರು ದಾರಿಗಳ ಮದ್ಯೆ ತಪ್ಪಿಸಿಕೊಂಡು ಎತ್ತ ಹೋಗುವುದು ಎಂದು ಯೋಚಿಸುತ್ತಿರುವಾಗ  ನಮಗೆ ಸಿಕ್ಕಿದ್ದು ಹೊಸ ಸ್ನೇಹಿತ ಅಜಯ್ ಚೌಧರಿ. ನಮ್ಮನ್ನು ಅವರ ಪರಿಚಯಸ್ಥರ ಹೋಟೆಲ್ ಗೆ ಕರೆದುಕೊಂಡು ಹೋಗಿ, ಗುರು ಇಂಟರ್‌ನ್ಯಾಶನಲ್ ಹೋಟೆಲ್ ನಲ್ಲಿ ಉಳಿಯುವ ವ್ಯವಸ್ಥೆ ಮಾಡಿಸಿ, ನಮ್ಮ ಪ್ರಯಾಣ ಸುಖಕರವಾಗಿರಲಿ ಎಂದು ಆಶಿಸಿ ಗುಡ್ ನೈಟ್ ಹೇಳಿ ಹೊರಟು ಹೋದರು. ಆಕಾಶ್ ರಿಸೆಪ್ಶನ್ ಗೆ ಕಾಲ್ ಮಾಡಿ 2 ಮಟನ್ ಬಿರಿಯಾನಿ ಆರ್ಡರ್ ಮಾಡಿದ್ದ.

img_1077

ಬೆಳಿಗ್ಗೆ ಎದ್ದಾಗ ಸೂರ್ಯ ನಗರಿ ಬಿಸಿಲಿನ ಬೇಗೆಗೆ ಮಧ್ಯಾಹ್ನದಫೀಲ್ ಕೊಡುತ್ತಿತ್ತು. ರಾತ್ರಿ ತಡವಾಗಿ ಬಂದದ್ದರಿಂದ ಜೋಧ್ಪುರ ಎಕ್ಸ್‌ಪ್ಲೋರ್ ಮಾಡುವುದು ಇನ್ನೂ ಬಾಕಿ.  ಪಕ್ಕದಲ್ಲೇ ಇರುವ ಹೋಟೆಲ್ ನಲ್ಲಿ ಆಲೂ ಪರೋಟ ಜೊತೆಗೆ ದಹಿ ಹಾಗೂ ಚನ್ನ ಬತೋರ ತಿಂದುಚಹಾ ಕುಡಿದು ಜೋಧ್ಪುರ ನೋಡಿ ಬರಲು ಹೊರಟೆವು. ಆ ದಿನ ಕೇವಲ 250km ಪ್ರವಾಸ ಇರುವುದರಿಂದ ಬೇಗ ಹೊರಡುವ ಅನಿವಾರ್ಯತೆ ಇರಲಿಲ್ಲ.  ಜ಼ೋಧ್ಪುರ.1459 ರಲ್ಲಿ ರಾಥೋಡ್ ವಂಶಸ್ಥ ರಾವ್ಜೋಧಾ ಎಂಬ ರಾಜನಿಂದ ಈ ಪಟ್ಟಣಕ್ಕೆ  ಜೋಧ್ಪುರ ಎಂಬ ಹೆಸರು ಬಂದಿದೆ.ಇರುವ ಎಲ್ಲ ಮನೆಗಳ ಬಣ್ಣ ನೀಲಿ.

ಸೂರ್ಯನ ಶಾಖಕ್ಕೆ ಕಂಗೊಳಿಸುತ್ತಿರುವ ನೀಲಿ ಸಾಗರದಂತೆ ಉದ್ದನೆ ಹರಡಿಕೊಂಡಿರುವ ಹಳೆಯ ಜೋಧ್ಪುರ ನೀಲಿ ನಗರ ಎಂದು ಪ್ರಖ್ಯಾತಿಯಾಗಿದೆ. ಹತ್ತಿರದಲ್ಲಿ ಇರುವ ಮೆಹ್ರಂಘದ ಕೋಟೆ ನೋಡಿಮರಳಿ ಹೋಟೆಲ್ ಗೆ ಬಂದೆವು.ಎಲ್ಲ ಪ್ಯಾಕ್ ಮಾಡಿ ಹೋಟೆಲ್‌ನಿಂದ ಹೊರಟಾಗ 12 ಆಗಿತ್ತು. ದಾರಿಯುದ್ದಕ್ಕೂ ಶಿಖಂಜವಿ ಎಂಬ ನಿಂಬೂ ಪಾನಿ ಹೊಸ ಅಡಿಕ್ಶನ್ . ಸರಾಸರಿಯಂತೆ 25km ಗೆ ಒಂದುಶಿಖಂಜ್ವಿ ಡೀಹೈಡ್ರೇಶನ್ ನಾ ದೂರ ಮಾಡುತ್ತಿತ್ತು. ಮೊದಲ ಬಾರಿಗೆ ಮರುಭೂಮಿಯನ್ನು ನೋಡಿದ ಪುಳಕ. ದಾರಿಯುದ್ದಕ್ಕೂ ಒಂಟೆಗಳ ಸವಾರಿ. ಮರವಂತೆಯಲ್ಲಿ ಎರಡು ಕಡೆ ನೀರಿನಿಂದ ಅವ್ರತವಾಗಿಮಧ್ಯದಲ್ಲಿ ರಾಜಾರೋಷವಾಗಿ ಹರಿದುಹೋಗುವ ರಾಷ್ಟ್ರಿಯ ಹೆದ್ದಾರಿ 17/66 ಗೆ ಸೆಡ್ಡು ಹೊಡೆಯುವಂತೆ ಮರಳಿನಿಂದ ಅವ್ರತವಾಗಿ ಮಧ್ಯದಲ್ಲಿ ಬೂದಿ ಬಣ್ಣದ ಮೇಲೆ ಮಣ್ಣು ಸೋಕಿದ ಹಾಗೆ ನೂರಾರು ಮೈಲಿದೂರ ಸಾಗುವ ರಸ್ತೆ ಯಾವುದೋ ಕುಂಚಗಾರನ ಚಿತ್ರಗಳ ಕರಕುಶಲತೆಯಂತೆ ಕಾಣುತ್ತಿತ್ತು. ನಾಗ್ವೋರ್ ತಲುಪಿ ಅಲ್ಲಿನ ಬ್ರಹತ್ ಗೋಶಾಲೆಯನ್ನು ಹಾಗೆ ಹೊರಗಿನಿಂದ ಕಣ್ಣಾಡಿಸಿ ರಾಜಸ್ಥಾನಿ ಡಾಬಾ ದಸ್ಪೆಶಲ್ ತಾಲಿ ಊಟ ಮಾಡಿ ಅಲ್ಲಿಂದ ಹೊರಟೆವು.

img_1073

ಮತ್ತೆ ದಾರಿಯುದ್ದಕ್ಕೂ ಅದೇ ಮರಳುಗಾಡು. ಅಲ್ಲಲ್ಲಿ ದೂರದಲ್ಲಿ ಬರುವ ಚಿಕ್ಕ ಹಳ್ಳಿಗಳು. ಪ್ಯಾಚ್ ವರ್ಕ್ ಮಾಡಿರುವ ಸ್ವಚ್ಛವಾದ ರಸ್ತೆಯಲ್ಲಿ ಒಂಟೆಗಳ ಶಿಸ್ತುಬದ್ದ ಸವಾರಿ ಅವುಗಳ ಮಾಲೀಕರೊಂದಿಗೆ.ಹೀಗೆಇವೆಲ್ಲವನ್ನೂ ದಾಟಿಕೊಂಡು ಬಿಕಾನೆರ್ 3KM ಎಂಬ ಬೋರ್ಡ್ ನೋಡಿದಾಗ ಮೊಬೈಲ್ 4:30PM ಎಂಬ ಟೈಮ್ ತೋರಿಸುತ್ತಿತ್ತು. ಅಲ್ಲಿಂದ ಘೊಈಬಿಬೊ ಅಪ್ ನಿಂದ ಹೋಟೆಲ್ ಭಾರತ್ ನಿವಾಸ್ ಎಂಬಹೋಟೆಲ್ ಬುಕ್ ಮಾಡಿದೆವು.ಬಿಕಾನೆರ್ ಶಹಾರದೊಳಗೆ ಬಂದಾಗ ಮತ್ತೆ ಬಾಯಾರಿಕೆಯಾಗಿತ್ತು. ಪಕ್ಕದಲ್ಲೇ ಇರುವ ಪುಟ್ಪಾತ್ ನಾ “ದೆಹಲಿ ಸ್ಪೆಶಲ್ ಶಿಖಂಜವಿ” ಎಂಬ ನಿಂಬು ಪಾನಿ ಗೆ ಹೋಗಿ ತಲಾ 3-4  ಶಿಖಂಜ್ವಿ ಕೂಡಿದಾಗ 7-8 ಜನರ ಗುಂಪೊಂದು ಬಂದು ನಮ್ಮ ಪ್ರವಾಸದ ಬಗ್ಗೆ ವಿಚಾರಿಸಿದರು.

ಬೆಂಗಳೂರು ಎಲ್ಲರಿಗೂ ಗೊತ್ತಿರುವುದು ತಿಳಿದು ಅಭಿಮಾನವಾಯಿತು. ಎಲ್ಲರೂ ನಮ್ಮನ್ನು ಏನೋ ದೊಡ್ಡ ಸಾಧನೆ ಮಾಡಿರುವಂತೆ ನೋಡತೊಡಗಿದ್ದು ಸ್ವಲ್ಪ ಮುಜುಗರವಾಗಿದ್ದೆನೋ ನಿಜ,ಅವರೆಲ್ಲ ನಮ್ಮಪ್ರವಾಸದ ಬಗ್ಗೆ ತಿಳಿದು ಹುಷಾರಾಗಿ ಹೋಗಿಬನ್ನಿ ಎಂದು ಶುಭ ಹಾರೈಸಿದರು. ಎಲ್ಲಿಂದ ಬಂದಿದ್ದೀರಾ ? ಎಂದು ಕೇಳಿದವರು ಕೆಲವರು. KA ರೆಜಿಸ್ಟ್ರೇಶನ್ ಜೊತೆಗೆ ಸ್ಕಿನ್ ಟೋನ್ ನೋಡಿ ಕೇರಳಎಂದುಕೊಂಡವರು ಹಲವರು. ಯಾವ ಜಾತಿ, ಧರ್ಮ ಎಂದು ಒಬ್ಬರು ಕೇಳಲಿಲ್ಲ. ವಿಶಾಲವಾದ ನಮ್ಮ ದೇಶದಲ್ಲಿ ಜಾತ್ಯತೀತತೆಯಲ್ಲಿ ಏಕತೆ ಎಂಬ ಭಾವ ಸಹಜವಾಗಿಯೇ ಇದೆ ಎಂಬುದಕ್ಕೆ ಇಲ್ಲಿಯವರೆಗೆ ಕ್ರಮಿಸಿದ ದೂರ ನಿದರ್ಶನವಾಗಿತ್ತು. “ಬಯ್ಯಾ.. ನಿಂಬು ಪಾನಿ ಕಾ ಕಿತನಾ ಹುವಾ?” ಎಂದಾಗ ಆ ಫೂಟ್ಪಾತ್ ಅಂಗಡಿಯವನು “ಆಪ್ ತೋ ಹಮಾರೆ ಮೆಹ್ಮಾನ್ ಹೈ ಸಾಬ್, ಕ್ಯಾ ಪೈಸಾ ಲೇಂಗೇ ಆಪ್ಸೆ?”ಎಂದು ನಕ್ಕಾಗ ನನ್ನ ಬಳಿ ಉತ್ತರವಿರಲಿಲ್ಲ. ಜೇಬಿನಿಂದ ತೆಗೆದ 100 ರ ನೋಟು ಮತ್ತೆ ಜೇಬಿಗಿಳಿಸಿ. “ಫಿರ್ ಸೆ ಮಿಲೇಂಗೆ ಬಯ್ಯಾ..” ಎಂದು ಹೇಳಿ ಬುಲೆಟ್ ಸ್ಟಾರ್ಟ್ ಮಾಡಿದಾಗ ಅವನು ಪ್ರೀತಿಯಿಂದ ಕೈಬೀಸಿದ. ಮುಗುಳ್ನಗೆ ಹಾಗೂ ಎಂದು ಮರೆಯದ ಮಾತಿಗೆ ಮನಸ್ಸಿನಲ್ಲಿ ಒಂದು ಜಾಗ ನೀಡಿ ಅಲ್ಲಿಂದ ಹೊರಟು ಗೂಗಲ್ ಮ್ಯಾಪ್ ನಲ್ಲಿ ಹುಡುಕಿದ ಹೋಟೆಲ್ ಸೇರಿ  ಮೊದಲು ತಣ್ಣೀರಿನ ಸ್ನಾನ ಮುಗಿಸಿದೆವು.

img_1045

ಜೋಧ್ಪುರ ಕಂಡಿಹಿಡಿದ ರಾಜನ ಹಿರಿಯ ಮಗನಾದ ರಾವ್ ಬಿಕಾ ಕಂಡುಹಿಡಿದ ಈ ನಗರದ ಹೆಸರು ಕೇಳಿದಾಗ ನನಗೆ ನೆನಪಾಗಿದ್ದು ಹಲ್ದಿರಾಮ್ಸ್ ಅವರ ಆಲೂ ಬೂಜಿಯ. ನೇರವಾಗಿ ಮೊದಲು ಹೊರಟಿದ್ದುಚಾಟ್ ಸ್ಟ್ರೀಟ್. ಆಲೂ ಚಾಟ್, ಸಮೋಸ, ಮೇವಡ್ ಐಸ್ ಕ್ರೀಮ್ ಜೊತೆಗೆ ಲಾಲ್ಗಡ್ ಅರಮನೆ ಹಾಗೂ ಜುನಾಗಡ್ ಕೋಟೆ ನೋಡಿ ಬಂದಾಗ, ನಾನು ಡೈಯೆಟ್ ಮಾಡುತ್ತಿಲ್ಲ, ಈಗ ನಡೆಯುತ್ತಿರುವುದೆಲ್ಲಾಚೀಟ್ ಡೇಸ್, ಏನು ಬೇಕು ಎಲ್ಲವನ್ನೂ ತಿನ್ನು ವಿಶ್ವಾ… ಎಂದು ನನ್ನನ್ನು ನಾನೇ ಬೆನ್ನು ತಟ್ಟಿಕೊಂಡೆ. ಕೋಟೆಯ ಹೊರಗೆ ಕಾವಲು ನಿಂತಿರುವ ಮೀಸೆ ಮಾವನಿಗೆ, ಸರ್, ನಿಮ್ಮ ಜೊತೆ  ಒಂದು ಸೆಲ್ಫಿತಗೋಬಹುದಾ? ಎಂದಾಗ ಆತ ಬೇಡ ಅನ್ನಲಿಲ್ಲ. ಎವರ್‌ಗ್ರೀನ್ ಎಂಬ ಹೋಟೆಲ್ ಗೆ ಹೋಗಿ, ಬಿಕಾನೆರ್ ನಲ್ಲಿ ಪ್ರಸಿದ್ದವಾದ ನಾನ್-ವೆಜ್ ಆಹಾರ ಯಾವುದಿದೆ ? ತೆಗೆದುಕೊಂಡು ಬನ್ನಿ ಅಂದಾಗ  ಮ್ಯಾನೇಜರ್ ಬಂದು, ಸಾಬ್ ಆಪ್ಕೊ ಲಾಲ್ ಮಾಸ್ ಟ್ರೈ ಕರನಾ ಹಿ ಹೈ, ಅಂದು ಅದನ್ನು 6 ರೋಟಿಯ ಜೊತೆ ತಂದುಕೊಟ್ಟ.

(to be continued……)

Leave a Reply

Your email address will not be published. Required fields are marked *