ಜೀವನದಲ್ಲಿ ಏನನ್ನಾದರೂ ಕಳೆದುಕೊಂಡಾಗಲೇ ಅದರ ಬೆಲೆ ಗೊತ್ತಾಗುವುದು. ನಿಜ.
ಸಾಕುಪ್ರಾಣಿಗಳು ಅಷ್ಟೇ. ನಮ್ಮಿಂದ ದೂರವಾದಾಗ, ಇಹಲೋಕ ತೊರೆದಾಗ ಆಗುವ ನಷ್ಟ ತುಂಬುವುದು ಅಸಾಧ್ಯವಾದದ್ದು.
ಏನೋ… ಹಲವು ದಿನಗಳಿಂದ ನಮ್ಮ ಮನೆಯ ಅತಿಥಿಯಾಗಿದ್ದ, ಬೆಕ್ಕಿನ ಮರಿಗೆ ನಾನು ಹೆಸರಿಟ್ಟಿದ್ದು ಅನಾನಿಮಸ್ ಎಂದು.
ದಿನಾಲೂ ಬೆಳಿಗ್ಗೆ ಬಾಗಿಲು ತೆರೆದಾಗ ಮನೆಯ ಒಳಗೆ ಬಂದು ರಾತ್ರಿಯ ವರೆಗೂ ನಮ್ಮ ಮನೆಯಲ್ಲೇ ಆಟವಾಡಿಕೊಂಡು ಇರುತ್ತಿತ್ತು. ಅಮ್ಮನಿಗೆ ಸಂಗತಿಯಾಗಿತ್ತು.
ಬೆಳಿಗ್ಗೆ ನಮ್ಮ ಅಮ್ಮ ಹಾಲನ್ನು ಕಾಯಿಸಿ ಕೊಡುವವರೆಗೂ ಕಿರುಚುತ್ತಲೆ ಇರುತ್ತಿತ್ತು.ಅದೊಂದು ದೈನಂದಿನ ಅಭ್ಯಾಸವಾಗಿತ್ತು ಅಮ್ಮನಿಗೆ.
ಮನೆಯಲ್ಲಿ ಎಲ್ಲೆಂದರಲ್ಲಿ ರಾಜಾರೋಷವಾಗಿ ಓಡಾಡುವುದು, ಕುರ್ಚಿಯ ಮೇಲೆ ಮಲಗುವುದು, ಸೋಫಾದ ಮೇಲೆ ಹತ್ತಿ ಆಟ ಆಡುವುದು.. ನೋಡಲು ಖುಷಿಯಾಗುತ್ತಿತ್ತು.
ಕೇವಲ 2 ತಿಂಗಳ ಮರಿಯಷ್ಟೆ ಅದು. ಇತ್ತೆಚಿಗೆ ಮೀನು ತಿನ್ನುವುದನ್ನು ರೂಡಿ ಮಾಡಿಸಿದ್ದರು ಅಮ್ಮ. ದಿನ ಬೆಳಿಗ್ಗೆ ಬಂದು ಮೀನು ಕೇಳುವುದು, ಮೀನಿನ ಡಬ್ಬಿಯಲ್ಲಿ ತಲೆಹಾಕಿ ಮೀನು ತಿನ್ನುವುದು.. ಏನೇನೋ…
ಮನೆಯ ಬಾಗಿಲಿಗೆ ಹಾಕಿದ ಹೂವನ್ನು ತಂದು ಮನೆಯೊಳಗೆ ಆಟವಾಡಿ ಚಲ್ಲಾಪಿಲ್ಲಿ ಮಾಡಿ ಕಸ ಮಾಡುತ್ತಿತ್ತು.ಕೆಲವು ದಿನಗಳಿಂದ ನಮ್ಮ ಮನೆಯಲ್ಲೇ ಮಲಗಿಸುವ ಅಭ್ಯಾಸ ಮಾಡಿಸಿದ್ದೆವು. ಬುದ್ದಿವಂತ ಬೆಕ್ಕು ಟಾಯ್ಲೆಟ್ ಒಳಗೆ ಹೋಗಿ ಸೂಸು ಎಲ್ಲ ಮಾಡಿ ಬರುತ್ತಿತ್ತು.
ನಿನ್ನೆ ರಾತ್ರಿ ಎಲ್ಲಿಗೆ ಹೋಗಿತ್ತೋ ಗೊತ್ತಿಲ್ಲ. ಬೆಳಿಗ್ಗೆ ಬಂದು ಅಮ್ಮ ಹಾಲು ಹಾಕಿದರೂ ಕುಡಿಯದೆ ಬಂದು ನನ್ನ ಕಾಲಿನ ಮೇಲೆ ಮಲಗಿಕೊಂಡಿತ್ತು. ನಂತರ ಅಮ್ಮನ ಕಾಲಿನ ಮೇಲೆ ಸ್ವಲ್ಪ ಹೊತ್ತು ಮಲಗಿ ಹೊರಗೆ ಹೋಯಿತು. ಮತ್ತೆ ಬರಲೇ ಇಲ್ಲ. ಮನೆಯ ಹೊರಗೆ ಹೋಗಿ ಆ ಪುಟ್ಟ ಬೆಕ್ಕು ಪ್ರಾಣ ಬಿಟ್ಟಿತ್ತು.
ಯಾರಾ ಕೆಟ್ಟ ದ್ರಷ್ಟಿಯೋ ಏನೋ..ಅದೇನೋ ಹೇಳುತ್ತಿತ್ತೋ ನಮಗೆ ಅರ್ಥವಾಗದ ಭಾಷೆಯಲ್ಲಿ. ಅದನ್ನು ಉಳಿಸಿಕೊಳ್ಳಲಾಗಲಿಲ್ಲ.
ಮನೆಯ ಕಾಂಪೌಂಡ್ ಪಕ್ಕ ಅದನ್ನು ಮಣ್ಣು ಮಾಡುವಾಗ ಅಳು ತಡೆಯಲಾಗಲಿಲ್ಲ.
ಏನೋ ಇಷ್ಟಪಟ್ಟು ಪದೆದದ್ದನ್ನ ಕಳೆದುಕೊಂಡ ಅನುಭವ.ನಮಗೆ ನಿನ್ನ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಆ ಕ್ರೂರಿ ದೇವರು ನೀಡಲಿ.
ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ ಗೆಳೆಯ.ಸಾದ್ಯವಾದರೆ ಮರಳಿ ಬಾ…


