(ಚಿತ್ರ ಕ್ರಪೆ ಹಾಗೂ ವಿನ್ಯಾಸ : ಸ್ವಾತಿ )
ಇಲ್ಲಿ ಬರುವ ಪಾತ್ರಗಳು ಹಾಗೂ ಸನ್ನಿವೇಶಗಳು ಕಾಲ್ಪನಿಕವಲ್ಲ. ಒಂದು ಸನ್ನಿವೇಶ ಅಥವಾ ಒಂದು ದಿನದ ದಿನಚರಿಯನ್ನು ನಾನು ಕಂಡಂತೆ ನಾನು ಅಪರೂಪಕ್ಕೆ ಬರೆಯುವ ಡೈರಿಯಂತೆ ಬರೆದು ನಾನು ಬರೆಯಲು ಇರುವ ಪ್ರೇರಣೆಗಳಲ್ಲಿ ಒಂದಾದ, ನನ್ನ ಬರವಣಿಗೆಯ ಮೇಲೆ ಪ್ರಭಾವ ಬೀರಿದ ಕನ್ನಡದ ಶ್ರೇಷ್ಟ ಬರಹಗಾರರಲ್ಲಿ ಒಂದಾದ ದಿವಂಗತ ರವಿ ಬೆಳಗೆರೆ ಸರ್ ಗೆ ಈ ಲೇಖನವನ್ನು ಅರ್ಪಿಸುತ್ತಿದ್ದೇನೆ ಮತ್ತು ನಿಮ್ಮೊಂದಿಗಿಡುತ್ತಿದ್ದೇನೆ.
ಅವರ ಜನ್ಮ ದಿನದಂದು …….
ಆ ದಿನ ಅರಬೈಲ್ ಘಾಟಿಯಲ್ಲಿ ಕಾರು ಓಡಿಸುವಾಗ ಈ ಕೆಳಗಿನ ಸ್ಲೋಗನನ್ನು ರಸ್ತೆ ಪಕ್ಕ ನೋಡಿದಾಗ ಆಕ್ಸಿಲರೇಟರ್ ಮೇಲಿಂದ ಕಾಲು ತೆಗೆದೆ.
“It’s Better to Be Mr. Late Than Late, Mr.”
ಆಗ ಅವನು ನೆನಪಾದ.
ಅಸ್ತಿತ್ವ : ಒಂದು ಪರಿಚಯದಲ್ಲೋ , ಒಂದು ರೀತಿಯ ಮುಕ್ತ ಮನಸ್ಸಿನ ಗೆಳೆತನದಲ್ಲೋ ಒಬ್ಬ ವ್ಯಕ್ತಿ ನಮ್ಮ ಮೇಲೆ ಬೀರುವ ಪ್ರಭಾವವನ್ನ, ಅವರ ಅನುಪಸ್ಥಿತಿಯಲ್ಲಿ ಕಾಣುವ, ಕಾಡುವ ಆ ಒಂದು ಶೂನ್ಯವನ್ನ ಬಿಂಬಿಸುವ ಒಂದು ಬಾಂಧವ್ಯದ ಮೂಲಮಾಪನಕ್ಕೆ ನಾನು ನನ್ನ ಗಮನ, ಅನುಭವ ಹಾಗೂ ಅರಿವನ್ನು ಅರಿತು ಇಟ್ಟಿರುವ ಹೆಸರು, ಅಸ್ತಿತ್ವ.
ಯಾವುದೇ ವ್ಯಕ್ತಿಗಳಾಗಲಿ , ಸನ್ನಿವೇಶವಾಗಲಿ ನಮ್ಮ ಜೀವನದಲ್ಲಿ ಕಾರಣಗಳಿರದೇ ಬರಲಾರರು/ದು ಎಂದು ಹಿರಿಯರು ಹೇಳಿರುವಂತೆ – ನನ್ನ ಅನುಭವಗಳಿಂದ ನಾನು ಕಲಿತಿರುವ ಪಾಠ ಅಂದರೆ- “ನಿಮಗೆ ಸಮಯವಿದ್ದಲ್ಲಿ ಆದಷ್ಟು ಕಥೆಗಳಿಗೆ ಕಿವಿಯಾಗಿ , ಪ್ರತಿಯೊಬ್ಬ ಆಗಂತುಕನ ಸ್ನೇಹಿತನಾಗಿ, ಇಂದು ನಮ್ಮೊಂದಿಗೆ ಇರುವವರು ನಾಳೆ ಇರುವರೋ ಇಲ್ಲವೋ , ತೆರೆದ ಖಾತೆಗಳೆಲ್ಲಾ ಮುಚ್ಚಲೇಬೇಕೆನ್ನುವ ನಿಯಮವಿಲ್ಲ. ಯಾರನ್ನು ದೂರದೇ, ಯಾರನ್ನು ದ್ವೇಷಿಸದೆ, ನಾವಿರುವಷ್ಟು ದಿನ, ನಮ್ಮೊಂದಿಗೆ ಎಂದಿಗೂ ಇರುವವರೊಂದಿಗೆ ಸಂತೋಷವಾಗಿರೋಣ.”
Nov 3 2023
ಶಿವಣ್ಣ ನನಗೆ ಸುಮಾರು ಆರು ತಿಂಗಳಿನಿಂದ ಪರಿಚಯ 50 ರ ಆಸುಪಾಸಿನ ಸ್ನೇಹಜೀವಿ, ನಮ್ಮ ಕ್ರಿಕೆಟ್ ಮೈದಾನದ ಶ್ರಮಜೀವಿ. ಫಿಟ್ನೆಸ್ ಮೆಂಟೈನ್ ಮಾಡಲು ದಿನಾಲೂ ಬೆಳಿಗ್ಗೆ 2 ಘಂಟೆ ಬೌಲಿಂಗ್ ಮಾಡಿ ನಮಗೆ ಬ್ಯಾಟಿಂಗ್ ಅಭ್ಯಾಸ ಮಾಡಿಸುವ ಗೆಳೆಯ. ಮೊಬೈಲ್ ನಲ್ಲಿ ತಮಿಳು ಹಾಡು ಹಾಕಿ ಎಂದಿಗೂ ಒಂದು ನಗುವೊಂದಿಗೆ ಹಾಯ್ ಹೇಳುವ ಸ್ನೇಹಿತ. ಆ ದಿನ ಫೋನಿನಲ್ಲಿ ಅವನ ಧ್ವನಿ ಕಣ್ಣೀರಿನೊಂದಿಗೆ ಬೆರೆತಿತ್ತು.
ಕಗ್ಗಲೀಪುರ ಪೊಲೀಸ್ ಠಾಣೆಯ ಹೊರಗೆ ಇನ್ಸ್ಪೆಕ್ಟರ್ ಕಾಯುತ್ತ ಕುಳಿತ ನನಗೂ, ಸುಶೀಲ್ ಗೂ ಶಿವಣ್ಣನ ಮಾತುಗಳು ಇನೊಮ್ಮೆ ಕಣ್ಣನ್ನು ತೇವಗೊಳಿಸಿದ್ದವು.
” ವಾಟ್ ರಾ ವಿಶ್ವಾ? ಮಾರ್ನಿಂಗ್ ಓನ್ಲಿ ವೀ ವರ್ ಪ್ಲೇಯಿಂಗ್ ಟುಗೆದರ್ ನಾ…ವಾಟ್ XXXX ಗಾಡ್ ರಾ ?”
ನಮ್ಮ ಬಳಿ ಉತ್ತರವಿರಲಿಲ್ಲ.
6:45 AM
ಎಂದಿನಂತೆ ನಾನು ಬ್ಯಾಟ್ ಹಿಡಿದು ನಮ್ಮ ಕ್ರಿಕೆಟ್ ಆಡುವ ನೆಟ್ಸ್ ಗೆ ಹೋದೆ. ದಿನವೂ ನನಗಿಂತ ಮುಂಚೆ ಬರುತ್ತಿದ್ದ ಶಿವಣ್ಣ ಆ ದಿನ ಬಂದಿರಲಿಲ್ಲ.
ಅಭಿಷೇಕ್
ಅಪರೂಪಕ್ಕೆ ಬರುವ ನಮ್ಮ ಎಡಗೈ ಆಟಗಾರ ಆ ದಿನ ಬೇಗ ಬಂದು ಕೋರ್ಟ್ ಅಲ್ಲಿ ಕುಳಿತುಕೊಂಡಿದ್ದ. ಅಭಿಷೇಕ್ ನನಗೆ ನಾಪಾ ವ್ಯಾಲಿ ಯಲ್ಲಿ ಕ್ರಿಕೆಟ್ ಆಡಲು ಶುರು ಮಾಡಿದಾಗಿಂದ ಪರಿಚಯ. ಒಟ್ಟಿಗೆ ಸುಮಾರು ಕ್ರಿಕೆಟ್ ಆಡಿದ್ದೇವೆ ಈ ಒಂದು ವರ್ಷದಲ್ಲಿ .
ಎಷ್ಟೋ ಸಾರಿ ಅವನು ನನ್ನ ಬಗ್ಗೆ ಆಡಿದ ಮಾತಿನ ನೆನಪಿದೆ. ಕ್ರಿಕೆಟ್ ಆಡುವಾಗ ಬೌಂಡರಿ ದೂರ ಇದ್ದಾಗ..
” ಯೆಹ್ ಸ್ಟ್ರೈಟ್ ತೋ ಸಿರ್ಫ್ ವಿಶ್ವಾ ಕ್ಲಿಯರ್ ಕರ್ ಸಕ್ತಾ ಹೈ.”
ಇಬ್ಬರು ಸೆಂಟರ್ ಪಿಚ್ ಅಲ್ಲಿ ಕುಳಿತು ಶಿವಣ್ಣನಿಗೆ ಕಿಟ್ ತರಲು ಹೇಳಿದಾಗ 15 ನಿಮಿಷದಲ್ಲಿ ಬರುವುದಾಗಿ ಹೇಳಿದ.
ಆ 15 ನಿಮಿಷದಲ್ಲಿ ನಾವು ತುಂಬಾ ಮಾತನಾಡಿದೆವು. ಪ್ರತಿಯೊಂದು ಮಾತು ಸಹ 17 ತಿಂಗಳುಗಳ ನಂತರ ಬರೆಯುವಾಗ ನನಗೆ ಇನ್ನೂ ಅಕ್ಷರಶಃ ನೆನಪಿದೆ.
ಮೊದಲು ನನ್ನ ಮತ್ತು ಸ್ವಾತಿಯ ವೃತ್ತಿಯ ಬಗ್ಗೆ ವಿಚಾರಿಸಿದ. ಸ್ವಾತಿ ಕೆಮಿಸ್ಟ್ರಿ ಟೀಚರ್ ಅಂದಾಗ That was my toughest subject ಎಂದು ನಕ್ಕ. ಅವನ ವೃತ್ತಿಯ ಬಗ್ಗೆ ಕೇಳಿದಾಗ ನಾನು ಮತ್ತು ನನ್ನ ಪಾರ್ಟ್ನರ್ ಸೇರಿ ಹಾರೋಹಳ್ಳಿಯಲ್ಲಿ ಹೊಸ ಪ್ರಾಜೆಕ್ಟ್ ಮಾಡುತ್ತಿರುವುದಾಗಿ ಸೈಟ್ ಏನಾದರು ಇನ್ವೆಸ್ಟ್ ಮಾಡುವುದಿದ್ದರೆ ಮಾಡು ಎಂದು ಸಜೆಶನ್ ಕೊಟ್ಟ. ತಾನು ದೇವನಹಳ್ಳಿಯಲ್ಲಿ ತನ್ನದೇ ಪ್ರಾಜೆಕ್ಟ್ ನಾ ಒಂದು ಸೈಟ್ ತೆಗೆದುಕೊಂಡಿದ್ದು , ಒಂದು ಫಾರ್ಮ್ ಹೌಸ್ ಕಟ್ಟಿಸಿ ಆಗಾಗ ಅಲ್ಲಿಗೆ ಹೋಗಿ ಬರುವ ತನ್ನ ಕನಸನ್ನು ಹೇಳಿಕೊಂಡಿದ್ದ.
ಅವನ ಟಾಟಾ ಹ್ಯಾರಿಯರ್ ಕಾರನ್ನು ಸರ್ವಿಸ್ ಸೆಂಟರ್ ನವರು ಕೊಡದೆ ಸುಮಾರು ದಿನಗಳಿಂದ ಮುಂದೂಡುತ್ತಿದ್ದಾರೆ ಎಂದು ಹೇಳುವಾಗ ಶಿವಣ್ಣ ಕಿಟ್ ನೊಂದಿಗೆ ಪ್ರತ್ಯಕ್ಷನಾದ.
ಮೊದಲು ನಾನು ಸುಮಾರು ಅರ್ಧ ಘಂಟೆ ಬ್ಯಾಟಿಂಗ್ ಮಾಡಿದೆ. ಶಿವಣ್ಣ & ಅಭಿಶೇಕ್ ನನಗೆ ಬೌಲಿಂಗ್ ಮಾಡಿದರು. ನಂತರ ಅಭಿಷೇಕ್ ಬ್ಯಾಟಿಂಗ್ ಮಾಡಿದ. ಅವನ ಆ ದಿನದ ಮಾತಿನಲ್ಲಿ ಹೇಳಬೇಕಾದರೆ 80% ಬೌಲ್ ಗಳನ್ನು middle ಮಾಡಿದ.
ಕಳೆದ ಎರಡು ಮೂರು ಮ್ಯಾಚ್ ಗಳಲ್ಲಿ ಸಾಧಾರಣವಾಗಿ ಔಟ್ ಆಗಿದ್ದ ಫಾರ್ಮ್ ಮರಳಿ ಬಂದ ಸೂಚನೆಯಿತ್ತು. ಮತ್ತೆ ಬ್ಯಾಟ್ ನನಗೆ ನೀಡಿ ಬೌಲಿಂಗ್ ಮಾಡಲು ಹೊರಟ. ಶಿವಣ್ಣನೊಂದಿಗೆ ಒಂದೆರಡು ಬೌಲ್ ಮಾಡಿ ತನಗೆ ಮೀಟಿಂಗ್ ಇರುವುದಾಗಿ ಹೇಳಿ ಹೊರಟ.
ಹೊರಡುವಾಗ ನನಗೆ ಹೇಳಿದ
” ಮೈ ತೋಡಿ ದೇರ್ ಟಿಕ್ ಕೆ ಖೇಲಾ ಥೋ ಅಚ್ಚಾ ಖೇಲತಾ ಹುಂ.. ಚಲೋ ಬೈ..”
ನಾನು ಶಿವಣ್ಣ ಆಡುವುದನ್ನು ಮುಂದುವರೆಸಿದೆವು. ಅಭಿಷೇಕ್ ಮೊಬೈಲ್ ಮರೆತು ಹೋಗಿದ್ದ. ಅವನ ಬಾಮೈದ ಬಂದು ತೆಗೆದುಕೊಂಡು ಹೋದ.
10:00 AM
ನಮ್ಮ ವಾಟ್ಸಪ್ಪ್ ಗ್ರೂಪ್ ಅಲ್ಲಿ ಮೆಸೇಜ್ ನೋಡಿ ಶಾಕ್ ಆಯಿತು
“Abhishek met with an accident in Kanakpura road and He is serious ”
ಆಫೀಸ್ ನಾ ಆನ್ಲೈನ್ ಮೀಟಿಂಗ್ ನಲ್ಲಿದ್ದ ನನಗೆ ಏನು ಮಾಡಲು ತೋಚದೆ
“If anyone going to hospital, I will Join…”
ಎಂದು ಮೆಸೇಜ್ ಹಾಕಿದೆ. ಅಷ್ಟರಲ್ಲಿ ಸುಶೀಲ್ ಮೆಸೇಜ್ ನೋಡಿ ಮನೆಯ ಮುಂದೆ ಕಾರು ನಿಲ್ಲಿಸಿದ್ದ.
ನಾನು ಮ್ಯಾನೇಜರ್ ಗೆ ಐ ನೀಡ್ ಎಮರ್ಜೆನ್ಸಿ ಲೀವ್ ಎಂದು ಮೇಲ್ ಮಾಡಿ, ಎದ್ದು ಹೊರಟೆ.
ಅಲ್ಲಿ ಏನಾಗಿದೆ ? ಅಭಿಷೇಕ್ ನಾ ಸ್ಥಿತಿ ಹೇಗಿದೆ? ಎಂದು ಯಾರಿಗೂ ಸರಿಯಾದ ಮಾಹಿತಿ ಇರಲಿಲ್ಲ. ರಸ್ತೆಯುದ್ದಕ್ಕೂ ಏನಾದರು ಆಗಲಿ ಅಭಿಷೇಕ್ ಹುಷಾರಾಗಿದ್ದರೆ ಸಾಕು ಎಂಬ ಪ್ರಾರ್ಥನೆಯೊಂದಿಗೆ 30 ನಿಮಿಷದಲ್ಲಿ ಹಾಸ್ಪಿಟಲ್ ತಲುಪಿದಾಗ ಅಲ್ಲಿ ನೋಡಿದ ಘಟನೆ ಹೃದಯ ವಿದ್ರಾವಕವಾಗಿತ್ತು.
“Abhishek was no more…!! He was brought dead” ಇದನ್ನೇ ನಾನು ನಮ್ಮ ವಾಟ್ಸಪ್ಪ್ ಗ್ರೂಪ್ ಅಲ್ಲಿ ಹಾಕಿದೆ ವಿಥ್ “Sorry to say….”
ಮರೆತ ಮಾನವೀಯತೆಯೋ ? ನಿಯಮಾವಳಿಗಳ ನಿರ್ಬಂಧಗಳ ದುಶ್ಚಟವೋ ಆಸ್ಪತ್ರೆಯವರು ಅವನನ್ನು ಒಳಗಡೆ ಅಡ್ಮಿಶನ್ ಮಾಡದೆ ಹೊರಗೆ ವರಾಂಡದಲ್ಲಿ medical ಬೆಡ್ ಮೇಲೆ ಮಲಗಿಸಿದ್ದರು. ಅವನ ಸಂಬಂದಿಕರು ಹಾಗು ಹೆಂಡತಿಯ ಆಕ್ರಂದನ ಹೃದಯ ವಿಧ್ರಾವಕವಾಗಿತ್ತು. ಜೊತೆಗೆ ನಾಪಾದ ಕೆಲವು ಸ್ನೇಹಿತರು ಅಡ್ಮಿನ್ ರೊಂದಿಗೆ ಅಲ್ಲಿದ್ದರು.
ಸುಮಾರು 2 ಘಂಟೆ ಅಲ್ಲಿ ಏನು ಜರುಗಲಿಲ್ಲ. ಕೊನೆಗೆ ಯಾವುದೋ ಬೀಟ್ ನ ಪೊಲೀಸ್ ರು ಬಂದು ಆಸ್ಪತ್ರೆಯವರೊಂದಿಗೆ ಮಾತಾಡಿ (ನಮ್ಮ ಹಾಗು ಆಸ್ಪತ್ರೆಯವರ ನಡುವೆ ನಡೆದ ಸಂಭಾಷಣೆಗಳು , ವ್ಯರ್ಥವಾದ ೨-೩ ಘಂಟೆಗಳ ಬಗ್ಗೆ ಹೆಚ್ಚು ಬರೆಯುವುದಿಲ್ಲ. ನಮ್ಮ ಸಮಾಜ , ಕಾನೂನು, ವ್ಯವಸ್ಥೆ ನಿಯಮಾವಳಿಗಳು ಎಲ್ಲರಿಗೂ ಪರಿಚಿತವೇ) ನಾವು ಯಾರಾದರೂ ಕಗ್ಗಲೀಪುರ ಪೊಲೀಸ್ ಠಾಣೆಗೆ ಹೋಗಿ FIR ಮಾಡಿಸಿ ಪೊಲೀಸ್ ರು ಅಪಘಾತವಾದ ಸ್ಥಳಕ್ಕೆ ಬಂದು ಪಂಚನಾಮೆ ಮಾಡಿ , ರಿಪೋರ್ಟ್ ಕೊಟ್ಟಮೇಲೆ ಬಾಡಿ( ಕ್ಷಮೆ ಇರಲಿ) ಪೋಸ್ಟ್ ಮೊರ್ಟರ್ಮ್ ಗೆ ಕಳುಹಿಸಿ ಆಮೇಲೆ ಮನೆಯವರಿಗೆ ನೀಡಲಾಗುವುದು ಎಂದರು.
(ಈ ಪೊಲೀಸ್ ವಿಷಯದಲ್ಲಿ ನನ್ನ ಗೆಳೆಯನಾದ ಉಡುಪಿಯ ಇನ್ಸ್ಪೆಕ್ಟರ್ ಆದರ್ಶ ನಾಯಕ್ ನಮಗೆ ಸಹಾಯ ಮಾಡಿದ್ದನ್ನು ನೆನೆಯಬೇಕು. )
ಅವೆಲ್ಲವೂ ಅದೇ ರೀತಿ ನಡೆಯಿತು. ಸಂಜೆ ಸೂರ್ಯಾಸ್ಥದ ಕೆಲವು ನಿಮಿಷಗಳ ಮುಂಚೆ ಅಭಿಷೇಕ್ ನಾ ಪೋಸ್ಟ್ ಮೊರ್ಟರ್ಮ್ ಮಾಡಿದ ಮೃತ ದೇಹಕ್ಕೆ ಗೆ ನಾವು ಅವನ ಮನೆಯಲ್ಲಿ ಕೊನೆಯ ನಮನ ಸಲ್ಲಿಸಿದೆವು. ಯಾವುದೋ ಅಲಂಕಾರ ಮಾಡುವ ಹೂವಿನವರು ಬಿದಿರು ಮರೆತು ಬಂದಿದ್ದರು. & ತಡವಾಗಿ ಬಂದಿದ್ದರು. ಆದರೂ ಎಲ್ಲರ ಸಹಕಾರದಿಂದ ಸಮಯಕ್ಕೆ ಸರಿಯಾಗಿ ಮೃತದೇಹವನ್ನು ಚಿತಾಗಾರಕ್ಕೆ ಸಾಗಿಸಲಾಯಿತು.
12:30 PM
ಪೊಲೀಸರು ಹೇಳಿದ ಹಾಗೆ ನಾನು ಹಾಗೂ ಸುಶೀಲ್ ಕಗ್ಗಲೀಪುರ ಪೊಲೀಸ್ ಸ್ಟೇಷನ್ ಗೆ ಬಂದೆವು. ಇನ್ಸ್ಪೆಕ್ಟರ್ ಇರಲಿಲ್ಲ. ಅವರು ಬರುವುದನ್ನೇ ಕಾಯುತ್ತ ಕುಳಿತಾಗಲೇ ಶಿವಣ್ಣನ ಫೋನ್ ಬಂದಿದ್ದು.
ಹೊರಗಡೆ ಆಕ್ಸಿಡೆಂಟ್ ಮಾಡಿದ KSRTC ಬಸ್ ತಂದು ನಿಲ್ಲಿಸಲಾಗಿತ್ತು. ಡ್ರೈವರ್ ಹಾಗು ಕಂಡಕ್ಟರ್ ಆಕ್ಸಿಡೆಂಟ್ ಆಗಿದ್ದೆ ನೇರವಾಗಿ ಬಂದು ಪೊಲೀಸ್ ಸ್ಟೇಷನ್ ತಲುಪಿ ತಮ್ಮ ಜಾಣ್ಮೆ ಮೆರೆದಿದ್ದರು .
ಈ ತರಹದ ಮುಂದಾಲೋಚನೆ ಬಸ್ ಚಾಲನೆ ಮಾಡುವಾಗ ಇದ್ದಿದ್ದರೆ…!!
ಉಳಿದವರು ಕಂಡಂದೆ ಎಂಬಂತೆ, ಅವರೊಂದಿಗೆ ಮಾತನಾಡಿದಾಗ ಅವರು ಕಂಡಂತೆ ವಿವರಿಸಿದರು-
ಆಶ್ರಮದ ನಂತರ ಹೊಸದಾಗಿ ಮಾಡಿದ ರೋಡ್ ನಲ್ಲಿ ಎದುರುಗಡೆಯಿನ ಅಭಿಷೇಕ್ ವೇಗವಾಗಿ ಬೈಕ್ ಓಡಿಸಿಕೊಂಡು ಯಾವುದೋ ಕಾರ್ ನಾ ಓವರ್ಟೇಕ್ ಮಾಡಲು ಹೋಗಿ , ಬಂದು ನಮ್ಮ ಬಸ್ ನ ಮುಂಭಾಗಕ್ಕೆ ಗುದ್ದಿದ. ಅವನು ಹೆಲ್ಮೆಟ್ ಹಾಕಿರಲಿಲ್ಲ, ಕಯ್ಯಲ್ಲಿ ಹಿಡಿದುಕೊಂಡು ಓಡಿಸುತ್ತಿದ್ದ.
ಅಷ್ಟೇ …….
ಕನಕಪುರ ರೋಡ್ ನಲ್ಲಿ KSRTC ಬಸ್ ಓಡಾಡುವ ವೇಗ ನೋಡಿದವರಿಗೆ ಗೊತ್ತಾಗಬೇಕು ಅವರ ಜಾಗರೂಕತೆ. ಆದರೂ ಒಮ್ಮೆ ಅನಿಸುತ್ತದೆ. ಎದುರುಗಡೆಯಿಂದ ಅದರ ವೇಗ judge ಮಾಡುವುದು ಕಷ್ಟವೇ… atleast ಹೆಲ್ಮೆಟ್ ಹಾಕಿರಬೇಕಿತ್ತು….!!
ಕೊನೆಗೆ ಅಲ್ಲಿನ ಕಾನ್ಸ್ಟೇಬಲ್ ಒಬ್ಬರು ನನಗೆ ಕನ್ನಡ ಬರೆಯಲು ಬರುತ್ತಾ? ಎಂದು ಕೇಳಿದಾಗ , ಬರತ್ತೆ ಆದರೆ ಬರೆದು ತುಂಬಾ ದಿನಗಳಾಯ್ತು ಅಂದೇ.
ಅದಕ್ಕೆ ಅವ್ರು ಅಭಿಷೇಕ್ ನಾ ಸಂಬಂದಿ ಒಬ್ಬರನ್ನು ಕರೆಸಿ ಅವರ ಸಮ್ಮುಖದಲ್ಲಿ ಅರ್ಜಿಯನ್ನು ನನ್ನಿಂದ ಬರೆಸಿ ಸಂಬಂಧಿಯ ಹಸ್ತಾಕ್ಷರ ತೆಗೆದುಕೊಂಡು FIR ಮಾಡಿದರು. ಯಾಕೋ ತುಂಬಾ ದಿನದ ನಂತರ ಬರೆದ ಪ್ರಯುಕ್ತ ಅದರ ಫೋಟೋ ತೆಗೆದುಕೊಂಡೆ. ಅದನ್ನು ಇಲ್ಲಿ ಲಗತ್ತಿಸಿದ್ದೇನೆ. (ನಾನು ಬರೆದಿರುವೆ ಎಂಬ ಒಂದು ಸ್ವ – ಇಚ್ಛೆಯಿಂದ)


ನನ್ನ ಬರವಣಿಗೆ ನೋಡಿದ ಕಾನ್ಸ್ಟೇಬಲ್ ನನ್ನ ನಂಬರ್ ತಗೊಂಡು ವಾರಾಂತ್ಯದಲ್ಲಿ ಸಮಯವಿದ್ದರೆ ಬನ್ನಿ ಈ ಕಡೆ… ನಮಗೆ ಕನ್ನಡ ಬರೆದು ಕೊಡಲು ಎಂದು ತಮಾಷೆ ಮಾಡಿದರು.
ನಿಯಮಗಳು, ಷರತ್ತುಗಳು , ಕಾನೂನು ನಮಗೆ ಅಸಹನೀಯ ಅನಿಸಿದರೂ ಕೂಡ ಅದರ ಹಿಂದೆ ಬಲವಾದ ಕಾರಣಗಳಿರುತ್ತವೆ. ಆ ಕಾರಣಗಳು ಒಂದಲ್ಲ ಒಂದು ರೀತಿಯಲ್ಲಿ ನಮಗೆ ಪರೋಕ್ಷವಾಗಿ ಸಹಾಯವಾಗುತ್ತವೆ ಎಂಬುದು ಪ್ರತಿಯೊಬ್ಬರಿಗೂ ಅರಿವಾಗುವುದು ಅವರವರ ಅನುಭವಕ್ಕೆ ಬಂದಾಗಲೇ .
ನನ್ನ ಎಲ್ಲ ಬಂದು ಮಿತ್ರರಲ್ಲಿ ಪ್ರಾರ್ಥಿಸುವುದೇನೆಂದರೆ – ಆದಷ್ಟು ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸೋಣ, ಬೈಕ್ ಓಡಿಸುವಾಗ ಹೆಲ್ಮೆಟ್ , ಕಾರ್ ಓಡಿಸುವಾಗ ಸೀಟ್ ಬೆಲ್ಟ್ ಈ ತರಹದ ನಿಯಮಗಳನ್ನು ಪಾಲಿಸೋಣ. ನಮಗೋಸ್ಕರ ಮನೆಯಲ್ಲಿ ಪ್ರೀತಿಸುವ ಜೀವಗಳಿವೆ, ಅದಕ್ಕಿಂದ ಮಿಗಿಲಾದ ಸ್ನೇಹಿತರಿದ್ದಾರೆ. “ಓಡುತ್ತಿರುವ ಕಾಲ ನಿಲ್ಲುವುದಿಲ್ಲ ನಿಜ ಆದರೆ ನಮ್ಮವರನ್ನು ನೆನಪಿಸಿಕೊಳ್ಳುವ ಒಂದು ಔಧಾರ್ಯ ನಮಗೆ ಕಾಲವೇ ನೀಡುತ್ತಿದೆ”. ನಿಯಮಗಳನ್ನು ಪಾಲಿಸಿ ಸಮಾಜಕ್ಕೆ ಮಾದರಿಯಾಗೋಣ. ಏನಂತೀರಾ ? ಇದರೊಂದಿಗೆ ಒಂದಕ್ಕೊಂದು ಸಂಬಂಧವಿಲ್ಲದ ಜಾಹಿರಾತಿನಂದೆ ಬರೆದ ಅಸ್ತಿತ್ವ ಎಂಬ ಸಾರಾಂಶ ಇನ್ನೊಮ್ಮೆ ಓದಿ… ಮೇಲಿದೆ.
ಉಪಸಂಹಾರ :
ಪೊಲೀಸ್ ಸ್ಟೇಷನ್ ಇಂದ ಪೊಲೀಸರೊಂದಿಗೆ ಅಪಘಾತ ಸ್ಥಳಕ್ಕೆ ಹೋಗಿ ಪಂಚನಾಮೆ ಮಾಡಿಸಿ ಅಲ್ಲಿಂದ ಮತ್ತೆ ಆಸ್ಪತ್ರೆಗೆ ಹೋಗುವಾಗ ನನಗೆ ಅನಿಸಿದ್ದು ಇದು –
“ಅಭಿಷೇಕ್ ನ ಜೀವನದ ಕೊನೆಯ ಎಸೆತ ಆಡಿದ್ದು ನಾನೆ ಅಲ್ವಾ…?”


One Comment
its really sad tragic . I feel like my own person who was there . In Bangalore so many accidents causes daily due to rash driving but no one is ready to think that opposite person also has a family and friends. They will suffer a lot through their life long. God will gave courage and strength to his family.🙏😪