Home / ಭಾವನೆಗಳ ಬಾಗಿಲು ತೆರೆದು / 2013 ರಾಂಗ್ ಟರ್ನ್ – ಯಾರೂ ನಡೆಯದ ದಾರಿ

2013 ರಾಂಗ್ ಟರ್ನ್ – ಯಾರೂ ನಡೆಯದ ದಾರಿ

ಕಾಡ್ ಬಾಯ್ಸ್ : ಒಂಬತ್ತು ಗುಡ್ಡದ ಸಾಹಸದ ನಂತರ ಹೇಳಿಕೊಳ್ಳಲು ನಾವು ಸಾಹಸಿ ಚಾರಣಿಗರಾಗಿದ್ದೆವು. ಒಂದಲ್ಲ ಎರಡಲ್ಲ ಸಮಯ ಸಿಕ್ಕಾಗಲೆಲ್ಲ ಹೊಸ ಹೊಸ ಹುಡುಗರನ್ನು ಸೇರಿಸಿಕೊಂಡು ಕಾಲೇಜಿನಿಂದ ಚಾರಣ ಹೊರಡುತ್ತಿದ್ದೆವು. ಅದೇ ಹಳೆಯ ಚಾಳಿ. ಮೆಜೆಸ್ಟಿಕ್ ಪ್ಲಾಟಫಾರ್ಮ್ ಭೇಟಿಯ ನಂತರ ಸಿಂಹ ಎಲ್ಲಿ ಹೋಗಬೇಕು ಎನ್ನುವುದನ್ನು ಹೇಳುತ್ತಿದ್ದ.

ಮತ್ತೆ ಅದೇ ಬಾಡಿಗೆಯ ಟೆಂಟುಗಳು , ಚಪಾತಿ / ಜೋಳದ ರೊಟ್ಟಿಯೊಂದಿಗೆ ಚಟ್ನಿ ಪುಡಿ , ಮ್ಯಾಗ್ಗಿ, ಒಂದು ಚಹಾ ಮಾಡುವ ಪಾತ್ರೆ , ಸಿಂಹನ ಡೊಮೇಕ್ಸ್ ಬಾತ್ರೂಮ್ ಕ್ಲೀನರ್ ಬಾಟಲಿಯಲ್ಲಿ ತುಂಬಿಟ್ಟ ಡೀಸೆಲ್ (ಬೆಂಕಿ ಹಾಕಲು ) ಇವೆಲ್ಲ ನಮ್ಮ ಕಾಯಂ ಸಂಗಾತಿಗಳು. ನಾನು ಮತ್ತು ನರಸಿಂಹ ಜೊತೆಗೆ ಉಳಿದವರು ಬದಲಾಗುತ್ತಿದ್ದರು.

ಒಂದು ಬಿಡದೆ ಪಶ್ಚಿಮ  ಘಟ್ಟದ ಸೌಂದರ್ಯವನ್ನು ಒಂದು ಜನ್ಮಕ್ಕೆ ಸಾಲುವಷ್ಟು ನೋಡಿಬಿಟ್ಟೆವು ಅನಿಸಿತ್ತು.

ಮತ್ತೆ ಮತ್ತೆ ಕೊಡಚಾದ್ರಿ

ಕುಮಾರಪರ್ವತ

ಕುರಿಂಜಾಲ

ಕುದುರೆಮುಖ

ದಾಂಡೇಲಿ – ನಮ್ಮೂರಿನ ಅದೆಷ್ಟೋ ಹೆಸರೇ ಇಲ್ಲದ ಗುಡ್ಡಗಳು

ತಡಿಯಂಡಮೋಳ್

ಎತ್ತಿನ ಭುಜ

ಅಮೆಡಿಕಲ್ಲು

ಸಕಲೇಶ್ ಪುರದ ಹಸಿರು ಹಾದಿ

ಬಲ್ಲಾಳ ರಾಯನ ದುರ್ಗಾ

ದುಧ್ಸಾಗರ್

ಹೀಗೆ ಅದೆಷ್ಟೋ ಚಾರಣ ಸ್ಥಾನ ಗಳು ನಮ್ಮ ಬತ್ತಳಿಕೆಯಲ್ಲಿ “ಬೀನ್ ದೇರ್…ಡನ್ ದಟ್” ಎಂಬ ಹಸ್ತಾಕ್ಷರ ದೊಂದಿಗೆ ಅಲಂಕರಿಸಿದ್ದವು.

ಎಂಜಿನಿಯರಿಂಗ್ ೬ ನೇ ಸೆಮಿಸ್ಟರ್ ಅಲ್ಲಿ ನಮ್ಮ ಕಾಲೇಜಿನ NCC ವತಿಯಿಂದ ಕುಮಾರ  ಪರ್ವತ ಚಾರಣವನ್ನು ನನ್ನ ಓಂಭತ್ತು ಗುಡ್ಡ ಸಾಧನೆ ನೋಡಿ ನಮ್ಮ ಸಿಗ್ನಲ್ & ಸಿಸ್ಟಮ್ಸ್  ರಾಜೇಶ್ ಸರ್ (NCC) ಸಾರ್ಜೆಂಟ್ ವಿಶ್ವಜಿತ್ ನಾಯಕ್ ೬೫ ಜನರ ಮುಂದಾಳತ್ವ ವಹಿಸುತ್ತಾನೆ ಎಂದು ನೋಟೀಸ್ ಕಳಿಸಿದ್ದರು. ಸಿಂಹ NCC ಸೇರಲಿಲ್ಲ. ಚಾರಣಕ್ಕಾಗಿ ಒಂದೆರಡು ಗೆಳೆಯರನ್ನು NCC ಸೇರಿಸಿದ್ದೆ. ಆ ಮುಂಗಾರಿನ ಚಾರಣ ಮುಗಿದು ನಮ್ಮ ಸಾಧನೆ ಕಾಲೇಜಿನ ಮ್ಯಾಗಜಿನ್ ನಲ್ಲಿ ರಾರಾಜಿಸುತ್ತಿತ್ತು. 

ಕ್ಲಾಸ್ ನ ಲಾಸ್ಟ ಬೆಂಚ್ ಅಲ್ಲಿ ಬೆಂಗಳೂರು ಮಿರರ್ ಓದುತ್ತಿದ್ದ ಸಿಂಹ, ಮ್ಯಾಗಜಿನ್ ಓದುತ್ತಿದ್ದ ನನಗೆ ಹೇಳಿದ – ಲೋ ಇವೆಲ್ಲಾ ಒಂದು ಟ್ರೆಕ್ ಏನ್ಲ ? LKG ಮಕ್ಕಳು ಹೋಗೋ ಟ್ರೆಕ್ ಮಾಡ್ಬಿಟ್ಟು ಮ್ಯಾಗಜಿನ್ ಅಲ್ಲಿ ಫೋಟೋ ಬೇರೆ ….!! ಭಟ್ಟರ ಮನೆಯಿಂದ ಕಾಡಲ್ಲಿ ಇಳಿದು ಬಿಸಿಲೆ ಘಾಟ್ ಹೋಗಣ ಬರ್ತಿಯಾ?

ಈ ಸಲ ಹಳೆ ತಪ್ಪು ಮಾಡಲಿಲ್ಲ ನಾನು. ಸರಿ ನೋಡೋಣ ಅಂದೆ. ಇಲ್ಲದಿದ್ದರೆ ಆ ದಿನ ರಾತ್ರಿನೇ ಮೆಜೆಸ್ಟಿಕ್ ಗೆ ಕರೀತಿದ್ದ.

ಎಂಜಿನಿಯರಿಯಿಂಗ್ ಮುಗಿದು ಎಲ್ಲರು ಕೆಲಸ , ಹೈಯರ್ ಸ್ಟಡೀಸ್ ಅಂತ ದಿಕ್ಕಾ- ಪಾಲು ಆಗಿ ಹಂಚಿ ಹರಿದು ಹೋದರು. ಆದರೆ ಈ ಸಾಹಸದ ಹಕ್ಕಿ ಮತ್ತೆ ರೆಕ್ಕೆ ಒಡೆದಿದ್ದು 2013 ಆರಂಭದಲ್ಲಿ ನರಸಿಂಹ ಹೈದರಾಬಾದ್ ನಿಂದ ಬೆಂಗಳೂರು ಶಿಫ್ಟ್ ಆದಾಗ.

ಒಂದು ಶುಕ್ರವಾರದ ಸಂಜೆ ಸಿಂಹ ಕಾಲ್ ಮಾಡಿದ. ಬಾ ಮಗಾ… ನಾಳೆ ಹೋಗಿ ಬಿಸಿಲೆ ಘಾಟಿ ಸರ್ವೇ ಮಾಡಿಕೊಂಡು ಬರೋದಾ?

ಬೆಳಿಗ್ಗೆ ಹೊರಟೆವು ಮಾರುತಿ ೮೦೦ ಕಾರಿನಲ್ಲಿ. ನಾನು ಸಿಂಹ ಮತ್ತು ಉದಯ್ ಬಕ್ಷಿ.

ದಾರಿಯಲ್ಲಿ ನಮ್ಮ ಇಂದಿನ ಬೇಟೆ ನೆಲಮಂಗಲ ದಲ್ಲಿರುವ ರಂಜಿತ್ ಗೌಡ ನಿಗೆ ಫೋನ್ ಮಾಡಿ

ಸಿಂಹ : ಬಾಬಾ ರೆಡಿ ಆಗು. ಕುಣಿಗಲ್ ಅಲ್ಲಿ ದಿಲೀಪ್ ನ ಮದುವೆ.. ಹೋಗಿ ಬರೋಣ.

ಬಾಬಾ : ಹೌದಾ ? ನಂಗೆ ಕರೆದೆ ಇಲ್ಲ.

ಸಿಂಹ : ನಮಗೂ ಕರೆದಿಲ್ಲ. ಲವ್ ಮ್ಯಾರೇಜ್ ಅಲ್ವಾ ಅದಿಕ್ಕೆ ಕೃಷ್ಣ ರೆಡ್ಡಿ ಗೆ ಹೇಳಿ ಎಲ್ಲರನ್ನು ಕರಕೊಂಡು ಬರಕ್ಕೆ ಹೇಳಿದಾನೆ. ನೀನು ರೆಡಿ ಆಗು. ಅರ್ಧ ಘಂಟೆ ಗೆ ಟೋಲ್ ಹತ್ತಿರ ಬಾ ಎಂದು ಹೇಳಿ ಫೋನ್ ಇಟ್ಟ.

ಅರ್ಧ ಘಂಟೆಯಲ್ಲಿ ಮದುಮಗನಂತೆ ರೆಡಿ ಆಗಿ ರಂಜಿತ್ ಅವರ ಮನೆಯ ಬಳಿ ಟೋಲ್ ಹತ್ತಿರ ನಿಂತಿದ್ದ.

ಕುಣಿಗಲ್ ತಲುಪಿದ ಮೇಲೆ ಹೇಳಿದ್ದು ಅವನಿಗೆ ನಾವು ಎಲ್ಲಿ ಹೊರಟಿರೋದು ಅಂತ .

ಅವಾಗ ಬಿಸಿಲೆ ಘಾಟಿ ರೋಡ್ ಮಾಡುತ್ತಿದ್ದ ಸಮಯ. ಮ0ಜರಾಬಾದ್ ಕೋಟೆ ನೋಡಿ ಸಿಂಹ ಬಿಸಿಲೆ ವ್ಯೂ ಪಾಯಿಂಟ್ ಹತ್ತಿರ ನಡೆದುಕೊಂಡು ಹೋಗುತ್ತಿದ್ದ ಕಾರ್ ನಿಲ್ಲಿಸಿದ.

ದೂರದ ಯಾವದೋ ಗುಡ್ಡದ ತೋಟದ ಸಾಲು ತೋರಿಸಿ – ಅಲ್ಲಿಂದ ಶುರು ಮಾಡಿ ಇಲ್ಲಿ ಬಂದು ತಲುಪಬೇಕು. ಈ ರಸ್ತೆ ಕಾಣುತ್ತೆ ಮಗಾ ಅಲ್ಲಿಂದ – ತಪ್ಪಿಸಿಕೊಳ್ಳೋ ಚಾನ್ಸ್ ಏ ಇಲ್ಲ.  ಅಂದ .

ಸರಿ ಆಯಿತು. ಯಾವಾಗ ಅಂತ ಹೇಳು ಬರ್ತೀನಿ ಎಂದು ಆ ರಾತ್ರಿ ಮೂಡಿಗೆರೆ ಹೋಗಿ ಹೋಟೆಲ್ ಅಲ್ಲಿ ಉಳಿದು ಬೆಂಗಳೂರು ಬಂದೆವು.

ಚಿತ್ರ ಕ್ರಪೆ : (ಹ್ಯಾಷ್ ಐಟಿನೇರರಿ)

ನವೆಂಬರ್ 2013 ರ ಮೊದಲ ವಾರ :

ಸಿಂಹ ಫೋನ್ ಮಾಡಿ 15 ರಂದು ಹೊರಡೋಣ ಎಂದು ಹೇಳಿದ. ಕೇಳಿದವರೆಲ್ಲರೂ ಕಾರಣ ಕೊಡುವವರೇ.

ಕೊನೆಗೆ ಉಳಿದಿದ್ದು ನಾನು , ನರಸಿಂಹ ಮತ್ತು ಆಕಾಶ್ 3 ಜನ.

ಈ ಚಾರಣ ಮಾಡೋಣ ಎಂದು ನಿರ್ಧರಿಸಿದೆವು.

ಕಾಡಲ್ಲಿ ಕಳೆದುಹೋದರೆ ಒಂದು ವಾರಕ್ಕೆ ಸಾಲುವಷ್ಟು ಆಹಾರ, MTR ರೆಡಿ ಮಿಕ್ಸ್ ಎಲ್ಲದರೊಂದಿಗೆ ಸುಸಜ್ಜಿತ ಪ್ಲಾನ್ ನೊಂದಿಗೆ ನವೆಂಬರ್ 15,2013 ರ ಸಂಜೆ ನಾವು ಮೂವರು ಮತ್ತದೇ ಮೆಜೆಸ್ಟಿಕ್ ನಿಲ್ದಾಣದ ಚಿಕ್ಕಮಗಳೂರು ಫ್ಲಾಟ್ ಫಾರ್ಮ್ ನಲ್ಲಿ ಬೇಟಿಯಾದೇವು.

ಮೊದಲಿಗೆ ಈ ತಪ್ಪು ದಾರಿ ಹಿಡಿದ ಮೂರು ಜನರನ್ನು ನೋಡಿಕೊಳ್ಳಿ. ನಿಮ್ಮ ಇಮ್ಯಾಜಿನೇಶನ್ ಗೆ ಹೆಲ್ಪ್ ಆಗಬಹುದು.

ರಾತ್ರಿ 9:30 ರ ಸುಬ್ರಮಣ್ಯ ಕೆಂಪು ಬಸ್ ಹತ್ತಿ ಕುಳಿತೆವು. ಮತ್ತೆ ಅದೇ ಕೊನೆಯ ಸೀಟು. ಒಂದು ವಾರಕ್ಕೆ ಆಗುವ ಸರಂಜಾಮುಗಳನ್ನು ಹೊತ್ತ ಬ್ಯಾಗ್ ಗಳು ಸುಮಾರು ಭಾರವಾಗಿದ್ದವು.

ಇದು ಮತ್ತೆ ಹೊಸತರಹದ ಅನುಭವ. ನಮಗನಿಸುವಂತೆ ಬಹುಷಃ ಯಾರು ನಡೆಯದ ದಾರಿ ಅದು. ಭಟ್ಟರು ಯವ್ವನದಲ್ಲಿ ಕಾಡು ಮೇಡು ಅಲೆದು ನಡೆದಿರಬಹುದೇನೋ. ಈ ಅರಣ್ಯ ಸಿಬ್ಬಂದಿಗಳು ಎಂದಾದರೂ ನಡೆದಿರಬಹುದೇ ? ಆ ಹಾದಿಯಲ್ಲಿ. ನಮ್ಮ ತರಹದ ಅದೆಷ್ಟೋ ಚಾರಣಿಗರು ಇದನ್ನು ಮುಂಚೆ ಮಾಡಿರಬಹುದೇ? ಮಾಡಿದರು ಅದರ ಉಲ್ಲೇಖ ಎಲ್ಲೂ ಇಲ್ಲ. ನಾವೇ ಮೊದಲಿಗರಿರಬಹುದೇ ? ಹೀಗೆ ಅದೆಷ್ಟೋ ಪ್ರಶ್ನೆಗಳ ಸರಮಾಲೆ ಕಾಡುತ್ತಿತ್ತು. ಉತ್ತರ ಯಾರಲ್ಲಿ ಹುಡುಕುವುದು ? ಹೀಗೆ ಅದೆಷ್ಟೋ ಯಕ್ಷ ಪ್ರಶ್ನೆ ಗಳಿಗೆ ನಮ್ಮ ಚಾರಣವೇ ಉತ್ತರವಾಗಬೇಕಿತ್ತು.

ಸಕಲೇಶಪುರ ದಾಟಿ ಗುಂಡ್ಯದ ಕಡೆ ಬಸ್ಸು ಹೊರಟಾಗಲೇ ಎಚ್ಚರ ವಾಗಿತ್ತು. ಒಂದು  ತರಹದ ಹೊಸ ಉತ್ಸಾಹ, ಏನೋ ಸಾಧಿಸುವಂತೆ. ಆ ಒಂದು ಮನಸ್ಥಿತಿಯೇ ವಿಭಿನ್ನ.

ನನ್ನ ಟ್ರಾವೆಲ್ ಪಾರ್ಟ್ನರ್  ಹೇಳುವಂತೆ ಈ ಮೌಂಟ್ ಎವರೆಸ್ಟ್ ಹತ್ತುವಾಗ ಸುಮಾರು ಎರಡು ತಿಂಗಳುಗಳ ಕಾಲ ಕ್ಯಾಂಪ್ 1 ರಿಂದ ಹಿಡಿದು ಕ್ಯಾಂಪ್ 4 ರ ವರೆಗೂ ಅದೆಷ್ಟೋ ಸಾರಿ ಹೋಗಿ ಬರುತ್ತಾರಂತೆ . ಕೊನೆಯಲ್ಲಿ ಒಂದು ದಿನ ಹವಾಮಾನ ಮತ್ತು ಇತರೆ ಲಕ್ಷಣಗಳನ್ನು  ನೋಡಿ ಮಧ್ಯರಾತ್ರಿ ಕ್ಯಾಂಪ್ 4 ರಿಂದ ಸಮ್ಮಿಟ್ ಅಟೆಂಪ್ಟ್ ಮಾಡುತ್ತಾರೆ. ಈ ಸಮ್ಮಿಟ್ ಮುಂಚಿನ ದಿನದ ಆ ಎದೆಬಡಿತ ಇದೆ ನೋಡಿ ಅದಕ್ಕೆ ಸರಿಸಾಟಿಯಾದ ಇನ್ನೊಂದು ನಮ್ಮದಾಗಿತ್ತು ಆ ರಾತ್ರಿ.

ಸುಬ್ರಮಣ್ಯ ದಲ್ಲಿ ಬಸ್ಸು ಇಳಿದಾಗ ಮುಂಜಾನೆ 6 ಘಂಟೆ. ನಾಗ ಕಾರ್ತಿಕ ಎಂಬ ಒಂದು ಚಿಕ್ಕ ಲಾಡ್ಜ್ ನ ಮನೆಯಲ್ಲಿ ಒಂದು ಪುಟ್ಟ ವಿರಾಮ.

ಸ್ನಾನ ಮುಗಿಸಿ ತಿಂಡಿ ತಿಂದು ದೇವಸ್ಥಾನಕ್ಕೆ ಹೋಗಿ ದರ್ಶನ ಮುಗಿಸಿ ಬರುವಷ್ಟರಲ್ಲಿ ಘಂಟೆ 9.

ತಡ ಮಾಡದೇ ಒಂದು ಬಾಡಿಗೆ ಆಟೋ ನಲ್ಲಿ ಕುಮಾರ ಪರ್ವತದ ಸ್ಟಾರ್ಟ್ ಪಾಯಿಂಟ್ ಗೆ ಹೊರಟೆವು. ವಿಶಾಲವಾದ ಕಾಡು ತನ್ನೊಳಗೆ ಸ್ವಾಗತಿಸಲು ಸಜ್ಜಾಗಿತ್ತು. ಭಟ್ಟರ ಮನೆಯ ಉಪ್ಪಿನ್ಕಾಯಿ ಮಜ್ಜಿಗೆ ಆಗಲೇ ಬಾಯಲ್ಲಿ ನೀರೂರಿಸಲು ಶುರುವಾಗಿತ್ತು.

ಆಟೋ ದವನು ನಮ್ಮನ್ನುಚಾರಣದ ಸ್ಟಾರ್ಟಿಂಗ್ ಪಾಯಿಂಟ್ ಗೆ  ಬಿಟ್ಟು ಹೊರಟುಹೋದ.

ನಾವು ಮೊದ ಮೊದಲು ಚಾರಣ ಶುರುಮಾಡಿದಾಗ ಭಟ್ಟರ ಮನೆಯಲ್ಲಿ ವಸತಿ ಉಚಿತವಾಗಿತ್ತು. ಅಡುಗೆಗೆ ಸಾಮಾನುಗಳನ್ನು ನಾವು ತೆಗೆದುಕೊಂಡು ಹೋದಲ್ಲಿ ಊಟ ತಿಂಡಿ ಕೂಡ ಉಚಿತವೇ. ಕಾಲ ಕಳೆದಂತೆ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದ್ದಂತೆ ಒಂದು ಊಟಕ್ಕೆ ಇಷ್ಟು ಅಂತ  ಮೆನು ಮಾಡಿದ್ದಾರೆ. ಅದಲ್ಲದೆ ಈಗ ಅರಣ್ಯ ಇಲಾಖೆ ಎಂಟ್ರಿ ಫೀಸ್ ಹೆಸರಲ್ಲಿ ಅದೆಷ್ಟೋ ಚಾರ್ಜ್ ಮಾಡುತ್ತಿದೆ.

ಭಟ್ಟರ ಮನೆಯ ಕೆಲಸದವನು ಪ್ರತಿದಿನ ಹಾಲು ಕೊಡಲು ಸುಬ್ರಮಣ್ಯಕ್ಕೆ ಬರುತ್ತಾನಂತೆ. ಒಂದು ಬದಿ ದಾರಿ ಅವರಿಗೆ ಸರಾಸರಿ 45 ನಿಮಿಷಗಳು ಅಂತೇ. ನಮಗೆ ಮಾತ್ರ ಕಡಿಮೆ ಅಂದರೂ 4 ರಿಂದ 5 ಘಂಟೆ ಬೇಕು.

ಏನೇ ಹೇಳಿದರು ಭಟ್ಟರ ಮನೆಯ ಉಪ್ಪಿನಕಾಯಿ ಜೊತೆ ಮಜ್ಜಿಗೆ ಕುಡಿಯುವ ಅಮಲೇ ಬೇರೆ. ಆ ದಣಿವು , ಬಿಸಿಲು , ನೀರಡಿಕೆ ಉತ್ತುಂಗದಲ್ಲಿರುವಾಗ ಮಜ್ಜಿಗೆಯಲ್ಲಿಉಪ್ಪಿನಕಾಯಿ ಸೇರಿಸಿ ಕುಡಿಯುವ ಮಜವೇ ಸ್ವರ್ಗ.(ನೀವೂ ಪ್ರಯತ್ನಿಸಿ). ಅದೆಷ್ಟೋ ಜನ ಭಟ್ಟರ ಮನೆಯಿಂದ  ಉಪ್ಪಿನಕಾಯಿ ಖರೀದಿ ಮಾಡಿ ಕೊಂಡೊಯ್ಯುತ್ತಾರೆ.

ಕಾಡಿನ ಕಾಲು ದಾರಿಯಲ್ಲಿ ತಿರುವು ಗಳು ಸಮಯ ಕಳೆದಂತೆ ಕಷ್ಟ ಎನಿಸ ತೊಡಗುತ್ತವೆ. ತಂಪು ಸಹಾಯ ಮಾಡುತ್ತದೆ. ಸುಮಾರು ಒಂದೂವರೆ ಘಂಟೆ ನಡೆದ ಕೂಡಲೇ ಒಂದು ನೀರಿಗೆ ದಾರಿ ಎಂಬ ಕಲ್ಲಿನ ಮೇಲೆ ಬರೆದ ಬರಹ ಕಾಣ ಸಿಗುತ್ತದೆ. ಎಂದಿನಂತೆ ಅಲ್ಲಿ ತಲುಪುವಾಗ ನಮ್ಮ ನೀರಿನ ಬಾಟಲಿಗಳು ಖಾಲಿಯಾಗಿರಲೇ  ಬೇಕು. ನಿಯಮವಿರಬಹುದೇನೋ ?

ಉಪದಾರಿಯಲ್ಲಿ ಇಳಿದು ನೀರಿನಲ್ಲಿ ಆಡಿ ಮಧ್ಯಾಹ್ನದ ಮಿತ ಭೋಜನ ಮುಗಿಸಿ ನೀರು ತುಂಬಿಸಿಕೊಂಡು ಮತ್ತೆ ಹೊರಡಲು ಅಣಿಯಾದೆವು.

ಕಾಡು ಕಳೆದು ಬರುವ ಹುಲ್ಲಿನ ಗುಡ್ಡಗಳಲ್ಲಿ ಬಿಸಿಲ ಹೊರತಾಗಿ ಎಲ್ಲವೂ ಸರಾಗವೇ. ಒಂದು ಉದ್ದನೆಯ ಕೋಲಿಗೆ ಬಾರವಿರುವ ಬ್ಯಾಗ್ ಗಳು , ಟೆಂಟ್ ಹಾಗೂ ಸ್ಲೀಪಿಂಗ್ ಬ್ಯಾಗ್ ಗಳನ್ನೂ ಸಿಕ್ಕಿಸಿ ಆದಿ ಮಾನವರು ಪ್ರಾಣಿಗಳನ್ನು ಹೊರುವಂತೆ ಹೊತ್ತು ನಡೆಯುತ್ತಾ ಸೂರ್ಯ ಕೆಂಪಗಾಗಿದ್ದ.

ಸಂಜೆ ೪ ರ ಸಮಯ – ಭಟ್ಟರ ಮನೆ ತಲುಪಿ ವಾಡಿಕೆಯಂತೆ ಭಟ್ಟರ ಯೋಗಕ್ಷೇಮ ವಿಚಾರಿಸಿ ಕಾಫಿ ಕುಡಿದು ರಾತ್ರಿ ಊಟಕ್ಕೆ ಬರುವುದಾಗಿ ಹೇಳಿ ಮೊದಲ ವ್ಯೂ ಪಾಯಿಂಟ್ ಹತ್ತಿರ ಹೊರಟೆವು. ಒಂದು ಕಡೆಗೆ ಮೋಡ ಕವಿದ ವಾತಾವರಣ, ಇನ್ನೊಂದೆಡೆ ಸಂಜೆ ಸೂರ್ಯನ ತಿಳಿಯಾದ ಬಿಸಿಲು ಆ ಸ್ಥಳಕ್ಕೆ ಹೊಸತಲ್ಲ. ಮಲೆನಾಡ ಪ್ರಿಯರಿಗೂ ಹೊಸತಲ್ಲ.

ವ್ಯೂ ಪಾಯಿಂಟ್ ಇಂದ ದೂರದಲ್ಲಿ ಯಾವುದೂ ದೊಡ್ಡ ಸಾಲು ಭಟ್ಟರ ಮನೆ ಕಡೆಗೆ ಬರುವುದು ಕಾಣಿಸಿತು.

ಕೆಲವು ಹೊತ್ತಿನಲ್ಲಿ ಸುಮಾರು ಮಕ್ಕಳ ಗುಂಪನ್ನು ಶಾಲಾ ವತಿಯಿಂದ ಸೋಮವಾರ ಪೇಟೆ ಕಡೆಯಿಂದ ಶಿಕ್ಷಕರು ಕರೆದುಕೂಂಡು ಬಂದಿದ್ದರು. ಸಿಂಹ ಹೇಳಿದ ಮಾತು ” LKG  ಮಕ್ಕಳು ….” ಮತ್ತೆ ನೆನಪಾಯಿತು.

ಶಿಕ್ಷಕರನ್ನು ಮಾತನಾಡಿಸಿದೆವು. ಅವರು ರಾತ್ರಿ ಭಟ್ಟರ ಮನೆಯಲ್ಲಿ ಉಳಿದು ನಾಳೆ ಸುಬ್ರಮಣ್ಯ ಕಡೆಗೆ ಹೋಗುವವರು.

ಸೂರ್ಯಾಸ್ತ ಮುಗಿದು ಸಂಜೆಯಾಗುತ್ತಿದ್ದಂತೆ ಗಾಳಿ ಬೀಸಲು ಶುರುವಾಯಿತು .ಚಳಿ ಕಾಯಿಸಲು ವ್ಯೂ ಪಾಯಿಂಟ್ ಹತ್ತಿರ ಹಾಕಿದ ಬೆಂಕಿ ನಿಲ್ಲಲಿಲ್ಲ, ಗಾಳಿಯ ರಭಸಕ್ಕೆ ಹಾಕಿದ ಟೆಂಟು ಹಾರಿ ಹೋಯಿತು. ಕೊನೆಗೆ ಭಟ್ಟರ ಮನೆಯ ಬಳಿಯೇ ಟೆಂಟ್ ಹಾಕಿ ಮಲಗೋಣ ಎಂದು ನೀರ್ಧರಿಸಿ , ಅಲ್ಲೇ ಅರ್ಧ ಮರ್ಧ ಉರಿಯುತ್ತಿದ್ದ ಬೆಂಕಿಯೊಂದಿಗೆ ಕತ್ತಲಾದಾಗಲೇ ನಮಗೆ ಅರಿವಾಗಿದ್ದು ನಾವು ಟಾರ್ಚ್ ಮರೆದು ಬಂದಿರುವುದು ಅನ್ನುವುದಕ್ಕಿಂತ ತರದೇ ಇರುವುದು.

ಮತ್ತೊಮ್ಮೆ ಒಂಬತ್ತು ಗುಡ್ಡದಂತೆ ಮೂರ್ಖತನದ ಪರಮಾವಧಿ ? ಎಂದು ಕೊಳ್ಳುವಾಗಲೇ ಸಿಂಹನ ಉತ್ತರ.

ಮಗಾ ಎಲ್ಲ ಪ್ರಿಪೇರ್ ಆಗಿ ಹೋದರೆ ಏನು ಮಜಾ ? ಅಡ್ವೆಂಚರ್ ಅನ್ನೋದು ವೈಲ್ಡ್ದ್ ಆಗಿರಬೇಕೋ …!! ಏನಾಗುತ್ತೆ ನೋಡೋಣಾ ನಡಿಯೋ. ಚಂದ್ರನ ಬೆಳಕೇ ಸಾಕು ಬಿಡೋ ….

ಹುಣ್ಣಿಮೆಯ ಚಂದ್ರ ಹೊಳೆಯುತ್ತಿದ್ದ

ಅಷ್ಟರಲ್ಲಿ ಕುಮಾರ ಪರ್ವತ ಮುಗಿಸಿ ಬಂದ ಬೆಂಗಳೂರಿನ ಇಬ್ಬರು ಭೇಟಿಯಾದರು. ಹೇಳಬೇಕಂದರೆ ಅವರ ಕಯ್ಯಲ್ಲಿ ಟಾರ್ಚ್ ನೋಡಿ ನಮಗೆ ನೆನಪಾಗಿದ್ದು.

ಅವರು ಭಟ್ಟರ ಮನೆಯಲ್ಲಿ ಉಳಿದು ನಾಳೆ ಕೆಳಗೆ ಇಳಿಯುವವರಿದ್ದರು.ನಾವು ಎಲ್ಲಿಗೆ ಹೋಗುತ್ತಿದ್ದೇವೆ ಎಂಬುದನ್ನು ಅವರಿಗೆ ಹೇಳುವುದು ಸಮಂಜಸ ಎನಿಸಲಿಲ್ಲ. ಟ್ರೈ ಮಾಡೋಣ ಎಂದು ನಾನು ಅವರಿಗೆ ಕೇಳಿದೆ. “ಸರ್ ನಾವು ಟಾರ್ಚ್ ಮರೆದು ಬಂದಿದ್ದೇವೆ. ನೀವು ಕೊಡುವಿರಾ ? ಬೇಕಿದ್ದರೇ  ಅದೆಷ್ಟು ಚಾರ್ಜ್ ಆಗುತ್ತೆ ತಗೋಳಿ . ಇಲ್ಲ ಟಾರ್ಚ್ ಏ ಬೇಕಿದ್ದರೆ ಬೆಂಗಳೂರಿಗೆ ಬಂದು ತಂದು ಕೊಡುತ್ತೇವೆ. ” ಅಂದಾಗ ಅವರು ಏನೂ ಉತ್ತರ ಕೊಡಲಿಲ್ಲ. ಸಿಂಹ ಮುಖ ನೋಡಿ ನಕ್ಕ .

ರಾತ್ರಿ ಬಂದು ಭಟ್ಟರ ಮನೆಯಲ್ಲಿ ಊಟ ಮುಗಿಸಿ ಪಕ್ಕದ ತೋಟದಲ್ಲಿ ಟೆಂಟ್ ಹಾಕಿದೇವು. ಕೊಟ್ಟಿಗೆಯಿಂದ ದನ ಕರುಗಳ ಆರ್ತನಾದ. ಮೋಡದಲ್ಲಿ ಆಗಾಗ ಇಣುಕಿ ನೋಡುವ ಚಂದ್ರ. ಅಲ್ಲಲ್ಲಿ ಕಾಣುವ ನಕ್ಷತ್ರಗಳು, ಜಿರಲೆಗಳ ಆ ಕೂಗು, ಕಾಡಿನ ಮೌನ. ಮಳೆ ಜಿನುಗುಡುತ್ತಿತ್ತು.

ರಾತ್ರಿ 12 ಘಂಟೆಗೆ ಆಕಾಶ್ ಮತ್ತು ನಾನು ಹೋಗಿ  ಘಾಡ ನಿದ್ರೆಯಲ್ಲಿದ್ದ ಸಿಂಹ ನನ್ನ ಎಬ್ಬಿಸಿ , ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಅಂದಾಗ – ಲೋ ಯಾವ್ ಹಾರ್ದಿಕ ನೋ ? ವಯಸ್ಸಾಗ್ತಿದೆ ಬಾರೋ ಎಂದು ಹೇಳಿ ನಕ್ಕು ಮಲಗಿಕೊಂಡ.

NOV 17 2013 :

ಸಿಂಹ ಬೆಳಿಗ್ಗೆ 6 ಘಂಟೆಗೆ ಎಬ್ಬಿಸಿದ. ಎದ್ದೇಳೋ ಚೆಕ್ ಪೋಸ್ಟ್ ಅವರು 8 ಕ್ಕೆ ಭಟ್ಟರ  ಮನೆಗೆ ತಿಂಡಿ ತಿನ್ನಲು ಬರುತ್ತಾರೆ. ಅಷ್ಟರಲ್ಲಿ ನಾವು ಕಾಡಿಗೆ ಇಳಿಯಬೇಕು. ಸಿಕ್ಕಾಕಿಕೊಂಡರೆ ಆಮೇಲೆ KP ನೇ ಗತಿ ಅಂದಾಗ ನಾವು ಆದಷ್ಟು ಬೇಗ ಎದ್ದು ಹೊರಡಲು ರೆಡಿ ಆದೆವು.

7 ಘಂಟೆಗೆ ಭಟ್ಟರ ತಿಂಡಿ ರೆಡಿ ಆಗಿತ್ತು.  ನಾವು ತರಾತುರಿಯಲ್ಲಿ ತಿಂಡಿ ಮುಗಿಸಿ ಭಟ್ಟರ ಮನೆಯ ಹಿಂಬಾಗಿಲಿನಿಂದ ಗದ್ದೆಯಲ್ಲಿ ಇಳಿದು ಯಾರಿಗೂ ಕಾಣದಂತೆ ರಾಂಗ್ ಟರ್ನ್ ತಗೊಂಡಿದ್ದೆವು. ಒಂದು ಚಿಕ್ಕ ಗುಡ್ಡವನ್ನು ಏರಿ ಅಲ್ಲಿ ಕಲ್ಲಿನ ಮೇಲೆ  ಕುಳಿತು ಫೋಟೋ ತೆಗೆಸಿಕೊಂಡು ಯಾವ ಕಡೆ ಇಳಿಯುವುದು ಎಂದು ಹುಡುಕುತ್ತಿರುವಾಗ ಸಿಂಹ ದೂರದ ಗುಡ್ಡದ ಮೇಲೆ ಹಾದು ಹೋಗಿರುವ ರಸ್ತೆಯ ತಿರುವನ್ನು ತೋರಿಸಿ ಅದೇ ನಮ್ಮ ಡೆಸ್ಟಿನೇಷನ್ ಅಂದ.

ಗುರಿ ಕಾಣುತ್ತಿರುವಾಗ ಗುರು ಜೊತೆಯಿರುವಾಗ ಏನೂ ಭಯ ?

ಹುಲ್ಲಿನ ಹಾಸಿನ ಮೇಲೆ ಸಾಗಿ ಕಾಡಿನಲ್ಲಿ ಇಳಿದೆ ಬಿಟ್ಟೆವು. ಭಟ್ಟರ ಮನೆಯ ನಾಯಿ ಇಳಿಯುವ ವರೆಗೆ ಬಂದು ಗುಡ್ ಬೈ ಹೇಳಿ ಹೊರಟು ಹೋಯಿತು.

ನೀವು ಒಂದು ಚಿಕ್ಕ ಜರಿಯ ನೀರು ಹರಿದು ನದಿ ಸೇರುವುದನ್ನು ನೋಡಿದ್ದೀರಾ ? ಈಗ ತಾನೇ  ಹುಟ್ಟಿದ ಮಗುವನ್ನು ನೋಡಿದ ಹಾಗೆ ….!!

ನಾವು ಗುಡ್ಡವನ್ನು ಇಳಿದು ನೆಲ ತಲುಪಿದಾಗ ನಮಗೆ ಸಿಕ್ಕಿದ್ದು ಒಂದು ಚಿಕ್ಕ ಜರಿ. ಒಂದು ಗೇಣಿನ ಅಳತೆಯಲ್ಲಿ ಹರಿಯುತ್ತಿರುವ ಸಣ್ಣ ತೊರೆ. ಸಿಂಹನ ಎಣಿಕೆ ಮತ್ತು ಅಧ್ಯಾತ್ಮದ ಪ್ರಕಾರ ಆ ಝರಿಯೇ ಹೋಗಿ ಕುಮಾರಧಾರ ನದಿಯನ್ನು ಸೇರುವುದು. ನಮ್ಮ ಪಯಣ ಆ ಜರಿಯ ಜೊತೆಗೆ… ಬಿಸಿಲೆ ಘಾಟಿ ಸಿಗುವ ವರೆಗೆ …….

ಸುತ್ತಲೂ ದಟ್ಟ ಕಾಡು ಜೊತೆಗೆ ಹರಿಯುವ ನೀರು. ಆಯಾಸವೇ ಇರದ ಪಯಣ. ಕಾಲ್ನಡಿಗೆ ವೇಗ ಕಳೆದುಕೊಂಡರೂ ದೂರ ಗೊತ್ತಿರದ ಗುರಿ. ಹೀಗೆ ಸಾಗಿತ್ತು ಪಯಣ ಸಮಯ 12:42 ವರೆಗೂ.

ಹರಿವ ಸಣ್ಣ ತೊರೆಯ ಮೊದಲ ಜಿಗಿತ. ಒಂದು ಪುಟ್ಟ ಜಲಪಾತ. ಅಲ್ಲೇ ಪಕ್ಕದಲ್ಲಿ ಬೆಂಕಿ ಹಾಕಿ , ಮ್ಯಾಗಿ ಮತ್ತು MTR  ತಿಂದು ಸ್ನಾನ ಮಾಡಿ ಅರ್ಧ ಗಂಟೆ ವಿಶ್ರಾಂತಿ ತೆಗೆದುಕೂಂಡೆವು.

ಆ ಜಲಪಾತಕ್ಕೆ “ಕಾಣೆ ಫಾಲ್ಸ್ ” ಎಂಬ ನಾಮಕರಣ ಮಾಡಲಾಯಿತು.

ಮತ್ತೆ ಶುರುವಾಯಿತು ಪಯಣ ಬಿಸಿಲೆ ಘಾಟಿ ಹುಡುಕುತ್ತ. ಮುಗಿಲೆತ್ತರದ ಮರಗಳು, ಅಲ್ಲಲ್ಲಿ ಹಾವುಗಳು, ಆನೆಯ ಲದ್ದಿ, ದೂರದಲ್ಲಿ ಯಾವುದೊ ಪ್ರಾಣಿ ಕಿರುಚಿದಂತಹ ಶಬ್ದಗಳು, ಮರ ಕುಟುಕಗಳು, ಹರಿಯುತ್ತ ಬೆಳೆಯುತ್ತಿರುವ ನೀರಿನ ನಾದ, ಕುಂಟೆ ಬಿಲ್ಲೆ ಆಟದಂತೆ ಕಲ್ಲಿನಿಂದ ಕಲ್ಲಿಗೆ ಜಿಗಿದು ಪಯಣಿಸುತ್ತಿರುವ ನಾವು 3 ಜನ.

ಸುತ್ತ ಕಾಡಲ್ಲಿಸಂಜೆ 4 ಕ್ಕೆ ಕತ್ತಲಿನ ಅನುಭವ. ಒಂದು ಒಳ್ಳೆಯ ಸಮತಟ್ಟಾದ ಜಾಗ ಹುಡುಕಿ ರಾತ್ರಿ ತಂಗೋಣ ಎಂದು ನಿರ್ಧರಿಸಿದೆವು.

ಕೊನೆಗೆ ಒಂದು ಮೊಣಕಾಲಷ್ಟು ಸುತ್ತ ನೀರಿನ ನಡುವೆ ಒಂದೇ ಒಂದು ಟೆಂಟ್ ಹಾಕುವಷ್ಟು ಅಳತೆಯ ಕಲ್ಲು ಬಂಡೆ. ಏಳಡಿ ಉದ್ದ ಆರಡಿ ಅಗಲ ಇರಬಹುದೇನೋ. ಆ ಬಂಡೆ ಒಂದು ಕಡೆ ಜಾರು ವಂತೆ  15 ಡಿಗ್ರಿ ಇರಬಹುದೇನೋ.

ಟೆಂಟ್ ಹಾಕಿ ಪಕ್ಕದ ಇನ್ನೊಂದು ಕಲ್ಲಿನ ಮೇಲೆ ಬೆಂಕಿ ಮಾಡಿದೆವು.  ಅಡುಗೆ ಮಾಡಿ, ಸೂಪ್ ಕುಡಿದು, ಮ್ಯಾಗಿ ತಿಂದು ಸ್ವಲ್ಪ ಹೊತ್ತು ಹರಟೆ ಹೊಡೆದು ಮಲಗಿದಾಗ ಸಮಯ ನೋಡಿದರೆ ಇನ್ನೂ ೭ ಘಂಟೆ.

ಮತ್ತೆ ಅದೇ ಕಾಡಿನ ಕನಸಿನ ರಾತ್ರಿ. ಮಿಂಚು ಹುಳಗಳು, ಮಿಡತೆಯ ಸದ್ದು, ತಿಳಿಯಾದ ಹೊಗೆಯ ವಾಸನೆ, ನಕ್ಷತ್ರಗಳ ಅಲಂಕಾರ, ಬೆಚ್ಚನೆಯ ಚಳಿ, ಜೊತೆಗೆ ನೀರಿನ ಜುಳು ಜುಳು ಸದ್ದು.

ಆಯಾಸಕ್ಕೊ, ಭಯಕ್ಕೋ ಗೊತ್ತಿಲ್ಲ. ಸ್ವಲ್ಪ ಮೈ ಬಿಸಿಯಾಗಿ ಮೆಡಿಸಿನ್ ಕಿಟ್ ನಿಂದ ಒಂದು DOLO 650 ತಗೊಂಡೆ. ಯಾಕೋ ಮನಸ್ಸು ನಾಳೆ ಬೆಳೀಗ್ಗೆ ಬಿಸಿಲೆ ಸಿಗದಿದ್ದರೆ ಮತ್ತೆ ತಿರುಗಿ ಭಟ್ಟರ ಮನೆಯ ಕಡೆಗೆ ಬಂದ ದಾರಿಯಲ್ಲೇ ಹೊರಟು ಬಿಡೋಣ ಅನಿಸುತ್ತಿತ್ತು.

ರಾತ್ರಿ ಸಿಂಹ ಟೆಂಟ್ ಇಂದ ಏನನ್ನೋ ತೋರಿಸಿ – ಮಗಾ ನೋಡೋ , ಎರಡು ರೇಡಿಯಂ ಥರ ಕಣ್ಣು ಕಾಣಸ್ತಿಲ್ವಾ ? ಚಿರತೆ ಇರ್ಬೇಕು ಎಂದ. ಅದೇ ಸಮಯಕ್ಕೆ ದೂರದಲ್ಲಿ ಆನೆ ಉಸಿರಾಡಿದಂತಹ ಸದ್ದು.

ಇಷ್ಟೆಲ್ಲಾ ಇದ್ದರು ನಿದ್ದೆಗೆ ಬರವಿಲ್ಲ.

ಒಂದೇ ಟೆಂಟ್ ನಲ್ಲಿ 3 ಜನ ಮಲಗಿದ್ದೆವು. ನಿದ್ದೆಯಿಂದ ಅವಾಗವಾಗ ಎಚ್ಚರ ಆಗಿ ನೋಡಿದರೂ ಸಮಯವೇ ಕಳೆಯುತ್ತಿರಲಿಲ್ಲ. ಪ್ರತಿ ಅರ್ಧ ಘಂಟೆಗೆ ಒಮ್ಮೊಮ್ಮೆ ಎಚ್ಚರ ಆಗುತ್ತಿತ್ತು. ಬಂಡೆಯ ಜಾರಿಕೆಗೆ ನಮ್ಮ ಟೆಂಟು ಜಾರಿ ನೀರನ್ನು ಸ್ಪರ್ಶಿಸುತ್ತಿತ್ತು. ಮತ್ತೆ ಮೂವರೂ ಎದ್ದು ಎಳೆದು ಮೇಲೆ ಹಾಕಿ ಮತ್ತೆ ಮಲಗುತ್ತಿದ್ದೆವು.

ವರ್ಷದ ಉದ್ದನೆಯ ರಾತ್ರಿ ಎಂದರೆ ಅದೇ ಇರಬೇಕು ನವೆಂಬರ್ 17.

ಹೀಗೆ ಎಳೆದು ಎಳೆದು ಬೆಳಿಗ್ಗೆಯವರೆಗೂ ಕಳೆದೆವು. 6 ಘಂಟಗೆ ಎದ್ದು, ಮತ್ತೆ  ಅದೇ ಮ್ಯಾಗಿ , MTR ಮತ್ತು ಚಹಾ. ಜೋಳದ ರೊಟ್ಟಿಯೊಂದಿಗೆ….

18 Nov  2013:

ಬೆಳಿಗ್ಗೆ ಎದ್ದು ಮತ್ತೆ ಅದೇ ನೀರಿನ್ನ ದಾರಿ ಹಿಡಿದು ಹೊರಟೆವು. ಸ್ವಲ್ಪ ದೂರದಲ್ಲೇ ಫ್ರೆಶ್  ಆನೆಯ ಲದ್ದಿ ನೋಡಿ ನಿನ್ನೆ ಉಸಿರಾಟದ ಸದ್ದು ನಿಜ ಎನಿಸಿತು.

ಕೆಲವೇ ಸಮಯದಲ್ಲಿ ಸುಮಾರು 7:35 ಸುಮಾರಿಗೆ ನಮ್ಮ ಜರಿ ಇನ್ನೊಂದು ತೊರೆಯನ್ನು ಸೇರಿ ನಮ್ಮ ದಾರಿಗೆ ಅಡ್ಡಿಯಾಯಿತು. ನಮ್ಮ ಪ್ಲಾನ್ ಪ್ರಕಾರ ನಾವು ಹೋಗಬೇಕಾದ ದಿಕ್ಕಿಗೆ ನಮಗೆ ನೀರು ದಾಟಲು ಆಗಲಿಲ್ಲ.

ನೀರು ದಾಟಬಹುದಿತ್ತೇನೋ ? ಆದರೆ ದಾಟಿ ಆ ಕಲ್ಲು ಬಂಡೆ ಏರುವ ಸಾಹಸ ಇಂದಿಗೆ ಅಸಾಧ್ಯ. ಅಲ್ಲೇ ಕೆಲ ಹೊತ್ತು ಕುಳಿತು ಎಡಕ್ಕೆ ಆ ನೀರನ್ನು ಫಾಲೋ ಮಾಡಿ ಎಲ್ಲಿ ಸಾಧ್ಯವೋ ಅಲ್ಲಿ ದಾಟೋಣ ಎಂದು ನಿರ್ಧರಿಸಿ ಸುಮಾರು 3 ತಾಸು ನಡೆದರೂ ದಾಟಲಾಗಲಿಲ್ಲ.

ಶುಭ್ರವಾದ ಬಿಸಿಲು, ನದಿಯ ತೀರದಂತೆ ನಾಜೂಕು ದಾರಿ, ನೀರಿನ ಪಕ್ಕ ನಡೆದುಕೊಂಡು ಹೋದರೆ ಯಾವುದಾದರು ಒಂದು ಹಳ್ಳಿ ಅಥವಾ ಊರು ಸೇರುತ್ತೇವೆ ಎಂಬ ಭರವಸೆ .

ಮಧ್ಯಾಹ್ನ1 ಘಂಟೆಗೆ ಒಂದು ಸ್ಥಳದಲ್ಲಿ ಅಡುಗೆ ಮಾಡಿ ಊಟ ಮುಗಿಸಿ ಸ್ವಲ್ಪ ದೂರ ಹೋಗುತ್ತಿದ್ದಂತೆ ಒಂದು ಪ್ಲಾಸ್ಟಿಕ್ ಚೀಲದಲ್ಲಿ ಯಾರೋ ಮೀನು ಹಿಡಿಯಲು ಬಂದು ಬಿಟ್ಟು ಹೋದ ಕೊಳೆತು ನಾರುತ್ತಿರುವ ಏರೆ ಹುಳುಗಳು ಮತ್ತು ಮಾಂಸ ಕಂಡು- ಅಬ್ಬಾ ಇಲ್ಲಿ ಮುಂಚೆ ಯಾರೋ ಬಂದಿದ್ದಾರೆ ಎಂದು ಸಮಾಧಾನ ಆಯಿತು. ಅಲ್ಲೇ ಮುಂದೆ ಬಿದ್ದ ಒಂದು ದಿನಪತ್ರಿಕೆಯ ತುಂಡನ್ನು ಹೆಕ್ಕಿ ಅದರ ದಿನಾಂಕ ನೋಡಲು, ಅದು ಒಂದು ತಿಂಗಳ ಹಿಂದಿನ ಪತ್ರಿಕೆ ಆಗಿದ್ದು (ಆ ಪತ್ರಿಕೆಯ ತುಂಡನ್ನು ಹೆಕ್ಕಿ ಇಟ್ಟುಕೊಂಡಿದ್ದೆ. ದುರಾದ್ರಷ್ಟವತ್ ಕಳೆದು ಹೋಗಿದೆ. ಇಲ್ಲದಿದ್ದರೆ ಇಂದು ಲಗತ್ತಿಸುತ್ತಿದ್ದೆ) ಸದ್ಯದಲ್ಲೇ ಯಾರೋ ಬಂದಿದ್ದಾರೆ ಎಂದು ನಿಟ್ಟುಸಿರು ಬಿಟ್ಟು ಮತ್ತೆ ನೀರಿನ ದಿಕ್ಕಿಗೆ ನಡೆಯತೊಡಗಿದೆವು.

ಸುಮಾರು 3 : 30 ಸಮಯ ಯಾರೋ ಕಟ್ಟಿಗೆ ಕಡಿಯುತ್ತಿರುವ ಸದ್ದು. ಖುಷಿಯಲ್ಲಿ ಕುಹೂ ಎಂದು ಕಿರುಚಿದಾಗ ಆ ಕಡೆಯಿಂದಲೂ ಉತ್ತರ

ಖುಷಿಗೆ ಪಾರವೇ ಇರಲಿಲ್ಲ. ಮತ್ತೆ ಹದಿನೈದು ನಿಮಿಷ ನಡೆದಾಗ ಅವರೂ ನಮ್ಮ ಕಡೆ ಬರುತ್ತಿದ್ದರು. ಇಬ್ಬರು ಗಂಡಸರು ಬಂದು ನೋಡಿ ಬೆರಗಾಗಿ ತುಳು ಭಾಷೆಯಲ್ಲಿ

 “ಅಲ್ಪರ ದಾಯೆ ಬತ್ತೀನಿ ? ಬನ್ನಗ  ನಿಕಲೆಗ್ ಆನೆ ಥಿಕ್ಧಜ ?”

ಅಂದರೆ ಈ ಕಡೆಯಿಂದ ಯಾಕೆ ಬಂದೀರಿ ? ನಿಮಗೆ ಆನೆ ಸಿಗಲಿಲ್ಲವೇ ? ಎಂದು ಕೇಳಿದರು. ನಾವು ನಮ್ಮ ದಾರಿಯ ಬಗ್ಗೆ ಹೇಳಿದಾಗ – ನಾವೇ ಆನೆಗೆ ಹೆದರಿ ಆ ಕಡೆ ಹೋಗುವುದಿಲ್ಲ ಎಂದರು. ಅವರನ್ನು ಜೊತೆಯಾದ ಇನ್ನಿಬ್ಬರು ಹೆಂಗಸರು

 ನಿಮ್ಮನ್ನು ಈ ಕಾಡಿನ ದೇವತೆಯೇ ಕಾಪಾಡಿರಬೇಕು ಎಂದ್ದು ಗುಸುಗುಟ್ಟಿದರು.

“ಅಯ್ಯೋ ನಾವೂ ಯಾರೋ ಡಿಪಾರ್ಟ್ಮೆಂಟ್ ಅವರು ಇರಬೇಕು ಎಂದು ಹೆದರಿಕೊಂಡೆವು ” ಎಂದು ಮಾತಾಡಿದ್ದು ಕೇಳಿಸಿತು. (ಜೊತೆಗೆ ಫೋಟೋ ತೆಗೆಸಿಕೊಳ್ಳಲು ಹಿಂಜರಿದ ಕಾರಣ ಅವರ ಮುಖಗಳನ್ನು ಬ್ಲರ್ ಮಾಡಲಾಗಿದೆ )

ನೀರನ್ನು ದಾಟಿ  ಆಚೆ ಹೋಗಲು ದಾರಿ ಕೇಳಿದಾಗ ಅವರು ಮಾರ್ಗದರ್ಶನ ಮಾಡಿದರು. ನಮ್ಮ ಉಳಿದ ಎಲ್ಲ ಆಹಾರಗಳನ್ನು ಅವರಿಗೆ ಕೊಟ್ಟು, ಮತ್ತೊಮ್ಮೆ ಕೊನೆಯ ಬಾರಿ ಬೆಂಕಿ ಮಾಡಿ ಮ್ಯಾಗಿ ಮತ್ತು ಸೂಪ್ ಕುಡಿದು , ಅವರಿಗೂ ಕೊಟ್ಟು ಅವರು ತೋರಿಸಿದ ಹಾಗೆ ಸೊಂಟದಾಳದ ನೀರಿನಲ್ಲಿ ನದಿ ದಾಟಿ ಸ್ವಲ್ಪ ದೂರ ನಡೆದು ರಸ್ತೆ ಸೇರಿದೆವು. ಮುಂದಿನ ಸಲ ಹೊಸ ಬಾಟಲಿ ತಗೊಳೋಣ ಎಂದು ಅರ್ಧ ಡೀಸೆಲ್ ತುಂಬಿದ ಡೊಮೇಕ್ಸ್ ಬಾಟಲಿಯನ್ನು ಸಿಂಹ ಅವರಿಗೆ ಕೊಟ್ಟ.

ಏನೋ ಸಾದಿಸಿದ ಹುಮ್ಮಸ್ಸು. ರಸ್ತೆಯಲ್ಲಿ ಒಂದು ಮೈಲಿ ನಡೆದು  ಮುಂದೆ ಸಿಕ್ಕ ಊರು ಕುಲಕುಂದ.

ಎಲ್ಲಿನ್ನ ಯಾವುದೊ ಮನೆಗೆ ಹೋಗಿ ಬಾವಿ ಯಲ್ಲಿ ಮತ್ತೆ ನೀರು ಸೇದಿ ಅವರು ಕೊಟ್ಟ ಬೆಲ್ಲ ದೊಂದಿಗೆ ನೀರು ಕುಡಿದು ನಿಟ್ಟುಸಿರು ಬಿಟ್ಟಾಗ ಏನೋ ರೋಮಾಂಚನ.

ಮತ್ತೆ ಅದೇ ಸಮ್ಮಿಟ್ ಮುಂಚೆಯಿನ ರಾತ್ರಿಯ ಅನುಭವ. ಆ ಮನೆಯವರೇ ಯಾವುದೊ ಆಟೋ ಗೆ ಫೋನ್  ಮಾಡಿ ಕರೆಸಿ ನಮ್ಮನ್ನು ಕಳುಹಿಸಿ ಕೊಟ್ಟರು.

ಸುಬ್ರಮಣ್ಯ ಬಂದು ಮತ್ತೆ ದರ್ಶನ  ಮಾಡಿ ರಾತ್ರಿ ಐರಾವತ ಬಸ್ ಹತ್ತಿ ಕುಳಿತಾಗ ಹೊಳೆದ ಟೈಟಲ್ ಇದು ” ರಾಂಗ್ ಟರ್ನ್ – ಯಾರೂ ನಡೆಯದ ಹಾದಿ “

Tagged:

Leave a Reply

Your email address will not be published. Required fields are marked *