
ನಮ್ಮದು ಪಶ್ಚಿಮ ಘಟ್ಟ ದಟ್ಟವಾಗಿರುವ ಕಡೆ ಪುಟ್ಟದೊಂದು ಹಳ್ಳಿ. ವಾರ್ಷಿಕ ಜನಗಣತಿಯ ಪ್ರಕಾರ ಇಂದಿಗೂ ಅದು ತೀರಾ ಹಿಂದುಳಿದ ಪ್ರದೇಶ. ಅಲ್ಲಿನ ಜನರು ಎಷ್ಟೇ ಮುಂದುವರಿದರೂ ಮೂಲಭೂತ ಸೌಕರ್ಯಗಳ ವಿಚಾರ ಬಂದಾಗ ಒಂದು ಹೆಜ್ಜೆ ಹಿಂದೆ ಎನ್ನುವುದು ಹಲವು ಬುದ್ದಿಜೀವಿಗಳ ಅಪ್ಪಟ ಅಭಿಪ್ರಾಯ. ಅಂದಿನ ಕಾಲಕ್ಕೆ ಅದು ನಮ್ಮ ಸ್ವರ್ಗ.
ಓದಿದ ಶಾಲೆ ಮನೆಯಿಂದ ಸುಮಾರು ಮುಕ್ಕಾಲು ಮೈಲಿ ದೂರ ಇರಬಹುದೇನೋ. ಪ್ರತಿದಿನ ಅಮ್ಮನ ಜೊತೆ ಶಾಲೆಗೆ ಹೋಗುವಾಗ ಪ್ರತಿಯೊಂದು ಅಂಗಡಿಯೂ ಕೈ ಬೀಸಿ ಕರೆಯುತ್ತಿತ್ತು. ಅಲ್ಲಿ ಗಾಜಿನ ಬರಣಿಯಲ್ಲಿ ತುಂಬಿಟ್ಟ ಚಕ್ಕುಲಿ,ಚಿಕ್ಕಿ,ಪೇಪರ್ ಮಿಂಟ್ ಗಳು, ತೂಗಿ ಹಾಕಿದ ಫ್ರೂಟಿ,ಸಾಜನ್,ಉಲ್ಟಾ-ಪಲ್ಟಾ, ಹುಣಸೆ ಚಮಚ ಮುಂತಾದತಿಂಡಿ-ತಿನಿಸುಗಳು ಕೇವಲ ಮರೀಚಿಕೆಯಾಗಿದ್ದವು. ಸರ್ಕಾರಿ ಶಾಲೆಯ ಟೀಚರ್ ಆಗಿದ್ದ ನಮ್ಮಮ್ಮ ನೀಡುತ್ತಿದ್ದ ಏಟುಗಳು ಆ ಆಸೆಗಳಿಗೆಲ್ಲ ತಣ್ಣೀರೆರಚಿ ಕನಸುಗಳಿಗೆ ತಿಲಾಂಜಲಿ ಇಡುವಾಗ ಅಪ್ಪನ ಕಡೆ ಒಂದೆರಡು ರೂಪಾಯಿ ಸಾಲ ಮಾಡಿ ರಾಜನಂತೆ ಅವನ್ನು ಖರೀದಿಸಿದಾಗ ಆಗುವ ಸಂತೋಷಕ್ಕೆ ಪಾರವೇ ಇರುತ್ತಿರಲಿಲ್ಲ.
ಮಳೆಗಾಲದಲ್ಲಿ ಹೋಗುವ ದಾರಿಯಲ್ಲಿ ಇದ್ದ ಸಣ್ಣ ಹಳ್ಳ ತುಂಬಿ ರಸ್ತೆಯ ಮೇಲೆ ಹರಿದಾಗ ಶಾಲೆಗೆ ರಜಾ, ಊರಿನ ಮುಖಂಡರು ತೀರಿಕೊಂಡಾಗ ಸಿಗುವ ರಜೆ ಹೊಸ ಹೊಸ ಕ್ರಿಕೆಟ್ ಟೂರ್ನಮೆಂಟ್ ಗಳಿಗೆ ಮಹೂರ್ತ. ಆ ಹಣ್ಣು ತಿನ್ನಬೇಡ- ಮಂಗನ ಖಾಯಿಲೆ ಊರೆಲ್ಲ ಹರಡುತ್ತಿದೆ ಎಂದು ಗದರಿಸುವ ಶಿಕ್ಷಕ ವರ್ಗಗಳು ಅವನ್ನು ಮಕ್ಕಳ ಕೈಯಿಂದ ಕಿತ್ತುಕೊಂಡು ಬಚ್ಚಿಟ್ಟು ತಿಂದ ನಿದರ್ಶನಗಳಿವೆ. ಮಳೆಗಾಲದಲ್ಲಿ ಟೀಚರ್ ಕೇಳುವ ಮೊದಲ ಪ್ರಶ್ನೆ..”ಯಾರ್ಯಾರ ಕೊಡೆ ಅಣಬೆ ಆಯಿತು ಇವತ್ತು? ಎದ್ದು ನಿಲ್ಲಿ” ಎಂದಾಗ ಕೈ ಎತ್ತಿ ನಾನು ಎದ್ದು ನಿಂತ ಕೆಲವು ದಿನಗಳ ನೆನಪು ಪ್ರತಿ ಮಳೆಯಲ್ಲೂ ನೆನಪಾಗುತ್ತೆ. ಅದಕ್ಕೆಂದೇ ಮನೆಯಲ್ಲಿ ಹಳದಿ ಹಿಡಿಕೆ ಇರುವ ಬಂದೂಕಿನಂತ ಕೊಡೆ ಕೊಡಿಸಿದಾಗ ಅದರಲ್ಲಿ ಮನೆಯ ಹೊರಗಡೆ ಸ್ನೇಹಿತರೊಂದಿಗೆ ಹಾಕಿ ಆಡಿದ ನೆನಪು. ಸುನಗಿ ಪುಡಿ ಅಂದರೆ ನಿಮಗೆಲ್ಲ ಗೊತ್ತಿರಲಿಕ್ಕಿಲ್ಲ. ಅದು ಒಂದು ಜಾತಿಯ ತುರಿಕೆ ಗಿಡದ ಎಲೆಗಳು. ಅಂದಿನ ಕಾಲಕ್ಕೆ ಅದು ಅಪರಾಧ. ಅರವಿಂದ ಟೀಚರ್ ಗೆ ಸುನಗಿ ಪುಡಿ ಹಾಕಿದ ಅನ್ನೋ ಸುದ್ದಿ ಊರೆಲ್ಲ ಹರಡಿ ಅವನಿಗೆ ಮಂಗಳಾರತಿ ಮನೆಯಲ್ಲಿ. ಹೋಳಿ ಹಬ್ಬದ ದಿನ ರಾಘಣ್ಣ ಮಾಡುತ್ತಿದ್ದ ಭಾಂಘ್ ಕುಡಿದರೂ ಮನೆಗೆ ಬರುವಾಗ ಅಮ್ಮನ ಭಯಕ್ಕೆ ನಶೆ ಇಳಿದಿರುತ್ತಿತ್ತು.ದೂರದರ್ಶನ ಎಂಬ ಒಂಟಿ ಚಾನಲ್ಲಲ್ಲಿ ಬರುತ್ತಿದ್ದ ಆಲೀಫ್-ಲೈಲಾ , ಶಕ್ತಿಮಾನ್, ಸುರಾಗ್, ಸುರಭಿ, ಜುನೂನ್, ಚಂದ್ರಕಾಂತ, ಶಕಲಕಾ…, ಮಾಲ್ಗುಡಿ ಡೇಸ್,ಮಾರಿ ಕಣಿವೆ ರಹಸ್ಯ ಗಳು ಇಂದಿಗೂ ನನ್ನ ಮೆಚ್ಚಿನ ಕಾರ್ಯಕ್ರಮಗಳು. ಬಾಲಮಂಗಳ, ಚಂಪಕದ ಕೆಲವೊಂದು ಪಾತ್ರಗಳು ಇಂದಿಗೂ ನನ್ನ ಮಿತ್ರರು. ಕರೆಂಟು ಇರದ ಶುಕ್ರವಾರ ರಾತ್ರಿಗಳು ಅಂದರೆ ದ್ವೇಷ. ಮಳೆ ಬರುವಾಗ ದೀಪದ ಬೆಳಕಲ್ಲಿ ಮಳೆಯ ಚಿತ್ರ ಬಿಡಿಸಿದ ಕಲ್ಪನೆ. ಹಾಳೆಯಲಿ ಮಾಡಿದ ದೋಣಿಯಲ್ಲಿ ಬರೆದ ಹೆಸರುಗಳು ಮಳೆಯ ನೀರಿಗೆ ತೊಯ್ದು ಶಾಯಿ ಮಾಸಿದರೂ ನೀಲಿಬಣ್ಣ ಇನ್ನೊಮ್ಮೆ ಹೆಸರು ಹೇಳುತ್ತಿತ್ತು. ಹಕ್ಕಿಗಳ ಚಿಲಿಪಿಲಿ, ಕೋಳಿಗಳ ಕೂಗು, ಅಂಬೋ ಎಂದು ದಾರಿಯುದ್ದಕ್ಕೂ ನಿಲ್ಲುವ ದನಕರುಗಳು. ಗೋಲಿ ಆಟದ ಸದ್ದು ಮಾರನೆಯ ದಿನ ಶಾಲೆಯ ಪ್ರಾರ್ಥನಾ ಘಂಟೆ ಹೊಡೆಯುವ ವರೆಗೂ ಕಿವಿಯಲ್ಲಿರುತ್ತಿತ್ತು. ಸಂಜೆ 5 ಅಂದರೆ ಇಂದಿಗೂ ಖುಷಿಯಾಗತ್ತೆ. ಆಗ ನಮ್ಮ ಆಟ ಶುರುವಾಗುವ ಸಮಯ ಅದು. ನನಗೆ ಇಂದಿಗೂ ಅದು ಧ್ಯಾನ. ತಿರುಗದ ಕಾಡಿಲ್ಲ,ಅಲೆಯದ ಹಳ್ಳಿಗಳಿಲ್ಲ. ಆ ಊರು ನಮ್ಮ ಪುಟ್ಟ ಪ್ರಪಂಚ.
ಸುಮಾರು ವರ್ಷಗಳ ಹಿಂದೆ, ಅಂದರೆ ನಾನು 9-10 ವರ್ಷದವನಿರಬಹುದೇನೋ. ಊರಲ್ಲಿ ಏನೇನೋ ಉಹಾಪೋಹಗಳು. ಸ್ಥಳೀಯ ದಿನಪತ್ರಿಕೆಗಳಲ್ಲೆಲ್ಲ ಅವನದೇ ಸುದ್ದಿ. ಪಕ್ಕದ ಊರಿಗೆ ಬಂದಿದ್ದ ಅಂತೇ ಕಣೆ… ಅಂತ ಪಕ್ಕದ ಬೆಂಚಿನ ಹುಡುಗಿಯರು ಮಾತಾಡಿಕೊಳ್ಳುತ್ತಿದ್ದರು. ಮುಂದೆ ಸಿಗುವುದು ನಮ್ಮ ಊರು.
ಅವನು ಸಾಮಾನ್ಯನಲ್ಲ. ಗುಡ್ಡದ ಭೂತ ಧಾರಾವಾಹಿ ಯಲ್ಲಿ ಬರುವ ಅಂಗಾರನ ಮೈಕಟ್ಟು ಇರಬಹುದು ಅನ್ನುವುದು ಹಲವರ ಕಲ್ಪನೆ. ನೋಡಿದವರು ಯಾರು ಇಲ್ಲದಿದ್ದರೂ ಅವನ ವರ್ಣನೆ ಮಾಡುವವರಿಗೆ ಏನು ಕಡಿಮೆ ಇರಲಿಲ್ಲ. ಅವನು ನಮ್ಮ ಸೂಪರ್,ಸ್ಪೈಡರ್,ಬ್ಯಾಟ್ ಗಿಂತ ಒಂದು ಕೈ ಮೇಲೆ. ಹೆಸರು ಆಯಿಲ್-ಮ್ಯಾನ್… ಯಸ್ ಆಯಿಲ್-ಮ್ಯಾನ್ 😛 ಕೆಲವರಿಗೆ ಇದು ಕಾಲ್ಪನಿಕ ಅನಿಸಬಹುದು. ಕಾಲ್ಪನಿಕ ಆಗಿದ್ದರೂ ನಮ್ಮ ಬಾಲ್ಯದಲ್ಲಿ ನಮಗೆ ಕೆಲ ಕ್ಷಣ ನಡುಕ ಹುಟ್ಟಿಸಿದ ಒಂದು ಪಾತ್ರ.
ಆಯಿಲ್-ಮ್ಯಾನ್: ಇವನು ದಿನ ರಾತ್ರಿ ಎಲ್ಲರೂ ಮಲಗಿದ ಮೇಲೆ ಸಂಪೂರ್ಣ ನಗ್ನನಾಗೀ ಮೈಗೆಲ್ಲ ಏನೋ ಸುಗಂಧ ಪರಿಮಳ ಬೀರುವ ಕೆಟ್ಟ ಕಪ್ಪು ಬಣ್ಣದ ಎಣ್ಣೆ ಹಚ್ಚಿಕೊಂಡು ಮನೆಯ ಹೆಂಚು ತೆಗೆದು ಒಳಗಡೆ ಹೋಗಿ ದರೋಡೆ ಮಾಡುತ್ತಿದ್ದ. ಯಾರ್ ಕೈಗೂ ಸಿಗುವುದಿಲ್ಲ. ಎಣ್ಣೆ ಹಚ್ಚಿಕೊಂಡಿರುವುದರಿಂದ ತಪ್ಪಿಸಿಕೊಂಡು ಓಡಿಹೋದ. ನೋಡಲು ತುಂಬಾ ಭಯಾನಕ. ಬೆಕ್ಕಿನ ಓಟ, ಹುಲಿಯ ನೋಟ. ಅವನು ಕತ್ತಲೆಯಲ್ಲಿ ಹೊಳೆಯುತ್ತಾನೆ. ಯಾವುದೋ ದುಷ್ಟ ಆತ್ಮ. ಇನ್ನೂ ಕೆಲವರು ಯಾರೋ ಊರಿನವರೇ ವೇಷ ಹಾಕಿದ್ದಾರೆ ಅನ್ನುತ್ತಿದ್ದರು.ಇನ್ನೂ ಕೆಲವರು ಭೂತ-ಗೀತ ಅಂತ ಏನೋ ಕಥೆ ಹೇಳುತ್ತಿದ್ದರು.
ಅಬ್ಬಬ್ಬಾ… ಮನೆಯಲ್ಲಿ ಹೊರಗಡೆ ಹೋಗಬೇಡ ಮಕ್ಕಳು ಹಿಡಿಯುವವರು ಬಂದಿದ್ದಾರೆ ಎಂದು ಮರಕೆ-ಅಮ್ಮ ಹೊತ್ತುತರುವವರನ್ನ ನೆನಪಿಸಿ ಹೆದರಿಸುತ್ತಿದ್ದ ಪೋಷಕರು ಆಯಿಲ್-ಮ್ಯಾನ್ ಹೆಸರಲ್ಲಿ ಹೆದರಿಸತೊಡಗಿದರು. ರಾತ್ರಿ ಮಲಗುವಾಗ ಪ್ರತಿದಿನ “ಅಬ್ಬಾ ನಮ್ಮ ಮನೆ ಹಂಚಿನದಲ್ಲ,ತಗಡು” ಎಂದು ಸಮಾಧಾನ ಮಾಡಿಕೊಳ್ಳುತ್ತಿದ್ದೆ. ಆದರೂ ಪಕ್ಕದಲ್ಲಿ ದೊಡ್ಡ ಬೆತ್ತದಕೊಲು ಇಟ್ಟುಮಲಗುತ್ತಿದ್ದ ನೆನಪು ಇಂದಿಗೆ ಮುಖದಲ್ಲಿ ನಗು ತರಿಸುತ್ತದೆ. ಅವನ ಹವಾ ಕೆಲವು ದಿನ ಜೋರಾಗೇ ಇತ್ತು. ನಮ್ಮ ಹುಡುಗರು ಇದೆ ತಂತ್ರವನ್ನು ಕಬ್ಬಡ್ಡಿ ಆಟದಲ್ಲಿ ಬಳಸಲು ಶುರು ಮಾಡಿದರು. ಕಾಲಿಗೆ ಎಣ್ಣೆ ಹಚ್ಚಿಕೊಂಡು ಆಡುವುದು ಹೊಸ ಟ್ರೆಂಡ್ ಸ್ರಷ್ಟಿ ಆಗಿತ್ತು. ಕಬ್ಬಡ್ಡಿ… ಕಬ್ಬಡ್ಡಿ ಅನ್ನೋ ಪದ ಆಯಿಲ್-ಮ್ಯಾನ್… ಆಯಿಲ್-ಮ್ಯಾನ್ ಕೂಡ ಆಗಿತ್ತು. ಇದ್ದಕ್ಕಿದ್ದಂತೆ ಒಂದು ದಿನ ಯಾರೋ ಹೇಳಿದರು. “ಆಯಿಲ್ಮ್ಯಾನ್ ಒಬ್ಬ ಸುಶಿಕ್ಷಿತ ದೆವ್ವ. ಮೊದಲು ಬಂದು ಮನೆಯ ಬಾಗಿಲು ನೋಡುತ್ತಾನೆ. ನಾಳೆ ಬಾ ಎಂದು ಬರೆದರೆ ಓದಿ ಹೊರಟುಹೋಗುತ್ತಾನೆ”. ಇಷ್ಟು ಸಾಕಾಗಿತ್ತು. ನೇರವಾಗಿ ಮನೆಗೆ ಹೋಗಿ ಬಾಡಿಗೆ ಮನೆಯ ಬಾಗಿಲಿಗೆ ಚಾಕ್ಪೀಸ್ನಲ್ಲಿ “ನಾಳೆ ಬಾ” ಎಂದು ಬರೆದು ಮಂದಹಾಸ ಬೀರಿದಾಗ ಅಮ್ಮ ದೂರದಲ್ಲಿ ನಿಂತು ನಗುತ್ತಿದ್ದರು.

