ಒಂದು ನೈಜ ಘಟನೆ ಹೇಳ್ತಿನಿ….. ಇದು ನೀಲಿ ಕಂಗಳ ಗೆಳತಿಯ ಕಥೆ
ಹಾಗೆ ಸೌಮ್ಯಕ್ಕ ಳ ಬ್ಲಾಗ್ ನಲ್ಲಿ ಬರುವ ನೀಲಿ ಕಂಗಳ ಹುಡುಗನ ಪಾತ್ರ ನೆನಪಾಗಿ – ನನ್ನ ಜೀವನದಲ್ಲಿ ಆಕಸ್ಮಿಕವಾಗಿ ಬಂದು ಸ್ನೇಹವೆಂಬ ಹೆಸರಿಗೆ ಅರ್ಥ ನೀಡಿದ ನೀಲಿ ಕಣ್ಣಿನ ವಿದೇಶಿ ಮಹಿಳೆಯ ಬಗ್ಗೆ ಬರೆಯೋಣ ಅನಿಸಿತು.

ಮೊನ್ನೆ ರಷ್ಯಾ ದಿಂದ ಗೆಳತಿಯೊಬ್ಬಳು ವಾಟ್ಸಪ್ಪ್ ನಲ್ಲಿ ಮಗುವಿನ ಫೋಟೋ ಕಳಿಸಿದ್ದಳು. ಮಗುವಿನ ಹೆಸರು ಎಲಿಝವೆತ ಅಂತ ಇನ್ನು ಒಂದು ವರ್ಷ ತುಂಬಿಲ್ಲ ಅನಿಸುತ್ತೆ. ಮುಂದಿನ ಮೆಸೇಜ್ ನಲ್ಲಿ ಎಲಿಝವೆತ ಇಂಡಿಯಾ ಗೆ ಇಂಡಿಯನ್ ಅಂಕಲ್ ನ ಮದುವೆಗೆ ಬರುತ್ತಾಳೆ ಎಂದು….
ಸುಮಾರು 8 ವರ್ಷಗಳ ಹಿಂದೆ 2011 ಅನಿಸುತ್ತದೆ.
ಆವಾಗಲೇ ಕಾಲೇಜು ಮುಗಿದು ಸಾಫ್ಟ್ವೇರ್ ಕಂಪನಿ ಯಲ್ಲಿ ಕೆಲಸ ಸಿಕ್ಕ ಹೊಸತು. ನನ್ನ ಮೆಹಬೂಬ (ಹೊಸಬರಿಗೆ : ನನ್ನ ಬುಲೆಟ್) ಇನ್ನು ಬಂದಿರಲಿಲ್ಲ. ಆ ದಿನ ಸೋಮವಾರ ನಾನು ಊರಿನಿಂದ ಬೆಂಗಳೂರಿಗೆ ಬಸ್ಸಿನಲ್ಲಿ ಬಂದಿದ್ದೆ. ಆಫೀಸ್ ಕ್ಯಾಬ್ ಬೆಳಿಗ್ಗೆ 7:15 ಕ್ಕೆ ಡೇರಿ ಸರ್ಕಲ್ ಇಂದ ಮಿಸ್ ಆಗಿತ್ತು. ಬೇರೆ ದಾರಿಯಿಲ್ಲದೆ ನನ್ನ ರೂಮ್ ಮೇಟ್ ಪಲ್ಸರ್ ಬೈಕ್ ತಗೊಂಡು ಆಫೀಸ್ ಗೆ ಹೋಗಿದ್ದೆ. ಸ್ನೇಹಿತ ರವಿ ರಾವ್ (ಅವಾಗ ಹೊಸ ಗೆಳೆಯರು) ಆಫೀಸ್ ನ ಎಲ್ಲ ಬ್ಯಾಚ್ ಮೇಟ್ಸ್ ಗಳಿಗೆ ತನ್ನ ಊರು ಉಡುಪಿಯಿಂದ ಲೋಹದ ಕೃಷ್ಣನ ಚಿಕ್ಕ ಮೂರ್ತಿಯನ್ನು ತಂದು ಕೊಟ್ಟಿದ್ದ. ಅದನ್ನು ಹಾಗೆ ಜೇಬಿಗಿಳಿಸಿ ಆ ದಿನದ ಕೆಲಸ ಮುಗಿಸಿ ಮನೆಗೆ ಹೊರಟಿದ್ದೆ. ಶಾಂತಿನಗರದ ರೂಮ್ ಮೆಟ್ ಆಫೀಸ್ ಗೆ ಅವನ ಬೈಕ್ ಮರಳಿಸಿ ಬಸ್ ಹಿಡಿದು ಲಕ್ಕಸಂದ್ರ ದ ಮನೆಗೆ ಹೋಗುವುದು ಆ ವೇಳೆಯ ದಿನಚರಿ.
ಅದು ಲಾಲ್ಬಾಗ್ ನ ಸರ್ಕಲ್. ಬೈಕ್ ಕೊಟ್ಟು ಮರಳುವಾಗ ಒಂದು ವಿದೇಶಿ ಮಹಿಳೆ ದಾರಿಯಲ್ಲಿ ಹೋಗುವ ಎಲ್ಲರಿಗು ಯಾವುದೊ ಅಡ್ರೆಸ್ ಕೇಳುತ್ತಿದ್ದಳು.ಯಾರೂ ಸರಿಯಾಗಿ ಸ್ಪಂದಿಸುತ್ತಿರಲಿಲ್ಲ.
ಇದು ಸಂಭಾಷಣೆ ನನ್ನ ಅರೆ ಬರೇ ಇಂಗ್ಲಿಷ್ ನಲ್ಲಿ ಮತ್ತು ಅವಳದು ಸಹ ಅರೆ ಬರೇ ಇಂಗ್ಲಿಷ್ ನಲ್ಲಿ
ನಾನು : ನಾನು ಹೇಗೆ ಸಹಾಯ ಮಾಡಲಿ ?
ಅವಳು : (K N ಟ್ರಾವೆಲ್ಸ್ ಅಡ್ರೆಸ್ ಇರುವ ಚೀಟಿ ತೋರಿಸಿದಳು)
ನಾನು : ಇಲ್ಲೇ 200 ಮಿಟರ ದೂರ. ನಾನು ಸಹ ಅಲ್ಲಿಗೆ ಹೋಗುತ್ತಿದ್ದೇನೆ. ನೀವು ನನ್ನ ಜೊತೆ ನಡೆದುಕೊಂಡು ಬರಬಹುದು.
ಅವಳು : ನಗುವಿನೊಂದಿಗೆ ತಲೆಯಾಡಿಸಿದಳು.
ನಾನು : ನಿಮ್ಮ ಹೆಸರು ?
ಅವಳು : ನಥಾಲಿಯಾ . ನಿಮ್ಮದು ?
ನಾನು : ವಿಶ್ವ
ನಾನು : ಯಾವ ದೇಶ ?
ಅವಳು : ರಷ್ಯಾ
ನಾನು : ಎಲ್ಲಿಗೆ ಹೋಗುತ್ತಿರುವಿರಿ ?
ಅವಳು : ತಮಿಳುನಾಡಿನ ಯಾವುದೊ ಆಶ್ರಮಕ್ಕೆ
ನಾನು : ಏನು ಊಟ ಮಾಡಿದಿರಿ ?
ಅವಳು : ಏನು ತಿನ್ನಲಿ ಅಂತ ಗೊತ್ತಾಗಲಿಲ್ಲ. ಅದಕ್ಕೆ ಏನು ತಿನ್ನಲಿಲ್ಲ.
ನಾನು : ಎಷ್ಟು ಘಂಟೆಗೆ ನಿಮ್ಮ ಬಸ್ ?
ಅವಳು : ೮:೩೦
ನಾನು : ಬನ್ನಿ ನಾನು ನಿಮಗೆ ಏನು ತಿನ್ನಬೇಕು ಎಂದು ಹೇಳುತ್ತೇನೆ( ಎಂದು ಹೇಳಿ ಶಾಂತಿ ನಗರ ಬಸ್ ಸ್ಟಾಪ್ ಮುಂದೆ ಇರುವ ಪುಟ್ಟ ಹೋಟೆಲ್ ನಲ್ಲಿ ವೆಜ್ ಫ್ರೈಡ್ ರೈಸ್ ಕೊಡಿಸಿದೆ.- ಇಲ್ಲಿ ದೊಡ್ಡತನ ತೋರಿಸಿಕೊಳ್ಳುವ ಯಾವುದೇ ಇರಾದೆ ಇಲ್ಲ)
ಅವಳು : (ಅರ್ಧ ತಿಂದು ಅರ್ಧ ಪಾರ್ಸೆಲ್ ಮಾಡಿಸಿ) ಇಲ್ಲಿ ಡಸ್ಟ್ ಬಿನ್ ಎಲ್ಲಿದೆ? ಟಿಶ್ಯೂ ಪೇಪರ್ ಎಸೆಯಲು …
ನಾನು : ಮೂಢತನದ ಪರಮಾವಧಿ ಯಲ್ಲಿ – ಇದು ಇಂಡಿಯಾ ಮೇಡಂ. ಎಲ್ಲಿ ಬೇಕಾದರೂ ಎಸೆಯಿರಿ
ಅವಳು : ಸನ್ನೆಯಲ್ಲಿ ಇಲ್ಲ ಎನ್ನುತ್ತಾ ಟಿಶ್ಯೂ ಪೇಪರ್ ಜೇಬಿನಲ್ಲಿ ಇಟ್ಟುಕೊಂಡಳು.
ಮುಖಕ್ಕೆ ಹೊಡೆದಹಾಗೆ ಆಯಿತು. ಈ ಸ್ನೇಹ ಅನ್ನೋದು ನಂಬಿಕೆಯ ಮೇಲೆ ನಿಂತಿರುತ್ತದೆ. ಆ ನಂಬಿಕೆ ಹೇಗೆ ಒಲಿಯಿತು ಎಂದು ಗೊತ್ತಾಗಲಿಲ್ಲ ನಮ್ಮಿಬ್ಬರ ನಡುವೆ. ನಾನು ಅವಳನ್ನು ಬಸ್ ಸ್ಟಾಂಡ್ ಪಕ್ಕದ ಕೆ ಏನ್ ಟ್ರಾವೆಲ್ಸ್ ಹತ್ತಿರ ಬಿಟ್ಟು ಹೋರಾಡಲು ಬೈ ಅಂದಾಗ ಸುಮಾರು ಘಂಟೆ 6:30
ಅವಳು : ನಿಮಗೆ ಈವಾಗಲೇ ಹೋರಾಡಬೇಕಾ?
ನಾನು : ಹಾಗೇನಿಲ್ಲ
ಅವಳು : ನಂಗೆ ಬಸ್ ಹೋರಡಲು ಇನ್ನೂ 2 ಘಂಟೆ ಇದೆ. ನಿಮಗೆ ಸಮಯವಿದ್ದರೆ ಅಲ್ಲಿಯವರೆಗೂ ನನ್ನ ಜೊತೆ ಇರುವಿರಾ ?
ನಾನು : ಸರಿ ಪರ್ವಾಗಿಲ್ಲ ಅಂತ ಹೇಳಿ –
ಇಬ್ಬರು ಅಲ್ಲೇ ಪಕ್ಕದಲ್ಲಿರುವ ಕಾಫಿ ಡೇ ಗೆ ಹೋಗಿ ಕುಳಿತೆವು. ಹಾಗೆ ನಮ್ಮ ನಮ್ಮ ದೇಶದ ಬಗ್ಗೆ ಕೆಲವು ಮಾತು ಕಥೆ ಗಳು. ಅವಳ ಉದ್ದೇಶ -ನನ್ನ ಕನಸು, ಪ್ರಯಾಣ ಹೀಗೆ ಎಲ್ಲದರ ವಿನಿಮಯವಾಗಿ ಕೊನೆಗೆ ಫೇಸ್ಬುಕ್ ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಅಸ್ಸೆಪ್ಟ್ ಆಯಿತು ಕಾಫಿ ಡೇ ಅಲ್ಲೇ .
ಕೊನೆಗೂ ಅವಳು ಹೊರಡುವ ಸಮಯ ಬಂತು. ಅವಳನ್ನು ಬಸ್ ಹತ್ತಿಸಿ ಮತ್ತೆ ಎಂದಾದರೂ ಬೆಂಗಳೂರಿಗೆ ಬಂದರೆ ನನಗೆ ಕರೆ ಮಾಡು ಎಂದು ಫೋನ್ ನಂಬರ್ ಕೊಟ್ಟು ಹೊರಡುವಾಗ ಇನ್ನೇನೋ ಮತ್ತೆ ನೆನಪಾಗಿ ಗೆಳೆಯ ರವಿ ಕೊಟ್ಟ ಕೃಷ್ಣ ನ ವಿಗ್ರಹವನ್ನು ಅವಳ ಕೈ ಯಲ್ಲಿ ಇಟ್ಟು ಇದು ನನ್ನ ಕಾಣಿಕೆ ಎಂದು ಹೇಳಿ ಹೊರಟಿದ್ದೆ. (ಇದು ತಪ್ಪು – ಆದರೆ ಆ ಕ್ಷಣದಲ್ಲಿ ಮಾಡಿದ ನಿರ್ಧಾರಕ್ಕೆ ನಾನೇ ಹೊಣೆ- ಈ ಗಿಫ್ಟ್ ರಿಟರ್ನ್ ಗಿಫ್ಟ್ ಆಯಿತು ಅಂತಾರಲ್ಲ ಆ ಥರ )
3 ದಿನಗಳ ನಂತರ :
ಮನೆ ಪಕ್ಕದಲ್ಲಿರುವ ಮಸೀದಿಯ ಕೂಗಿಗೆ ಎಂದು ಎಚ್ಚರವಾಗದ ನಿದ್ರೆ – ಆ ದಿನ ಫೋನ್ ಕಾಲ್ ಗೆ ಎಚ್ಚರವಾಗಿತ್ತು. ಸಮಯ ರಾತ್ರಿ 3:15. ನಥಾಲಿಯಾ ಕಾಲ್ ಮಾಡಿದ್ಲು. ಅವಳ ಅದ್ರಷ್ಟ ನಾನು ಎಚ್ಚರಗೊಂಡಿದ್ದು.
ನಾನು : ಎಲ್ಲಿದಿರಾ ?
ಅವಳು : ಎಲ್ಲೋ ಗೊತ್ತಿಲ್ಲ . ಬೆಂಗಳೂರು . ಬಸ್ ಹೇಳಿದ ಟೈಮ್ ಗಿಂತ ಬೇಗ ಬಂದಿದೆ. ಎಲ್ಲಿ ಹೋಗಬೇಕು ಗೊತ್ತಿಲ್ಲ.
ನಾನು : ಪಕ್ಕದಲ್ಲಿ ಯಾರಿದ್ದಾರೆ ?
ಅವಳು : ಆಟೋ ಗಳಿವೆ .
ನಾನು : ಅಲ್ಲಿ ಯಾರಿಗಾದರೂ ಫೋನ್ ಕೊಡು
(ಅವಳು ಯಾವುದೊ ಆಟೋ ಡ್ರೈವರ್ ಗೆ ಫೋನ್ ಕೊಟ್ಟಳು )
ನಾನು : ಸರ್ ಅವರು ಎಲ್ಲಿದಾರೆ ?
ಆಟೋ ಗುರು : ಲಾಲ್ಭಾಗ್ ಶಾಂತಿನಗರ ಗೇಟ್
ನಾನು : ಸರಿ ಅವರಿಗೆ ಫೋನ್ ಕೊಡಿ
ಅವಳು : ಹಲೋ
ನಾನು : ಸರಿ. ಅಲ್ಲೇ ಇರಿ ನಾನು 10 ನಿಮಿಷದಲ್ಲಿ ಬರುತ್ತೇನೆ
ನಾನು ನನ್ನ ರೂಮ್ ಮೆಟ್ ಬೈಕ್ ತಗೊಂಡು ಹೋದೆ. ಹೋಟೆಲ್ ರೂಮ್ ಮಾಡಿಕೊಡುವುದು ಹೊಳೆಯಲಿಲ್ಲ. ಬೆಂಕಿ ಕಾಯಿಸುತ್ತಾ 2-3 ಆಟೋ ಡ್ರೈವರ್ಸ್ ಜೊತೆ ಒಬ್ಬಳೇ ನಿಂತಿದ್ದಳು. ಧೈರ್ಯ ಮೆಚ್ಚಲೇ ಬೇಕು . ಗಾಂಧೀಜಿ ಅವರ ರಾಮರಾಜ್ಯದಲ್ಲಿ ಮಧ್ಯ ರಾತ್ರಿ ಒಂಟಿ ವಿದೇಶಿ ಮಹಿಳೆ….
ರಾತ್ರಿ ನಾಯಿ ಕಾಟ ಬೇರೆ – ಅವಳಿಗೆ ಹೇಳಿದೆ. ನೀನು ಏನು ಅಭ್ಯಂತರವಿಲ್ಲ ಎಂದಾದರೆ ನಮ್ಮ ರೂಮ್ ಗೆ ಬರಬಹುದು.
ಅವಳು: ಮರು ಯೋಚಿಸದೆ ಸರಿ ಎಂದು ನಕ್ಕಳು.
ನಾನು ನಮ್ಮ ರೂಮ್ ಗೆ ಕರೆದುಕೊಂಡು ಹೋಗಿ ಅವಳಿಗೆ ಹಾಸಿಗೆ ಎಲ್ಲವನ್ನು ಕೊಟ್ಟು ಗುಡ್ ನೈಟ್ ಎಂದು ಹೇಳಿ ಮಲಗಿದೆ.
ಮರು ದಿನ :
ನಾನು ಹೊಸದಾಗಿ ಕೆಲಸ ಸೇರಿರುವುದರಿಂದ ರಜೆ ಹಾಕುವಂತಿರಲಿಲ್ಲ. ಅವಳಿಗೆ ಸಂಜೆ 4:30 ಕ್ಕೆ ದೆಹಲಿಗೆ ಫ್ಲೈಟ್ ಇರುವುದಾಗಿ ತಿಳಿಸಿದಳು.
ನಾನು ಬೆಳಿಗ್ಗೆ ಬೇಗ ಎದ್ದು ನನ್ನ ಕುಚಿಕು ಗೆಳೆಯ ಕೀರ್ತಿ ಗೆ ಕಾಲ್ ಮಾಡಿ – ವಿಷಯವನ್ನು ತಿಳಿಸಿ “ಅವಳಿಗೆ ಇಸ್ಕಾನ್ ತೋರಿಸಿ, ಎಲ್ಲಾದರೂ ಒಳ್ಳೆ ಹೋಟೆಲ್ ಅಲ್ಲಿ ಊಟ ಮಾಡಿಸಿ ಏರ್ಪೋರ್ಟ್ ಕಳುಹಿಸು ಎಂದು ತಿಳಿಸಿದೆ”. ಗೆಳೆಯ ಕೀರ್ತಿ ಎಂಥವನೆಂದರೆ- ಇಲ್ಲಿಯವರೆಗೂ ಯಾವುದಕ್ಕೂ ಆಗುವುದಿಲ್ಲ ಎಂದು ಹೇಳಿದವನೇ ಅಲ್ಲ.
ಅವಳಿಗೆ ಫ್ರೆಶ್ ಆಗಿ ರೆಡಿ ಆಗು.ನನ್ನ ಗೆಳೆಯೆ ಬರುತ್ತಾನೆ . ನಿಮಗೆ ಬೆಂಗಳೂರು ದರ್ಶನ ಮಾಡಿಸಿ ಏರ್ಪೋರ್ಟ್ ತಲುಪಿಸುತ್ತಾನೆ ಎಂದು ಹೇಳಿ ನನ್ನ ರೂಮ್ ಮೆಟ್ ಗಜು ಅಣ್ಣನಿಗೆ ಪರಿಚಯಿಸಿ , ನಡೆದ ಘಟನೆ ಸಂಕ್ಷಿಪ್ತ ವಾಗಿ ವಿವರಿಸಿದೆ .
ನಾನು ಹೋರಾಡಲು ರೆಡಿ ಆದಾಗ – ಅವಳು ಬ್ಯಾಗ್ ನಿಂದ ಏನೋ ತೆಗೆದು ನಾನು ಕೊಟ್ಟಂತಹ ಮೂರ್ತಿ ಹೋಲುವ ತಮಿಳುನಾಡಿನ ಆಶ್ರಮದಿಂದ ತಂದ ಇನ್ನೊಂದು ಮೂರ್ತಿಯನ್ನು ನನ್ನ ಕೈ ಗೆ ಕೊಟ್ಟು ಇದು ನನ್ನ ಗಿಫ್ಟ್ ಗೆಳೆಯ ನಿನಗೆ. ಮತ್ತೆ ಸಿಗೋಣ ಎಂದು ಹೇಳಿ ನಗುವಿನೊಂದಿಗೆ ಬೀಳ್ಕೊಟ್ಟಳು.. ಸ್ನೇಹದ ಕಡಲಲ್ಲಿ ಭಾವನೆಗಳ ಅಲೆ ಜೋರಾಗಿತ್ತು. ಅದೊಂದು ಆಕಸ್ಮಿಕ ಭಾವ-ಏನೋ ಸಂತೋಷ.
ನಾನು ನನ್ನ ಕ್ಯಾಬ್ ಬರುವ ಡೇರಿ ಸರ್ಕಲ್ ಕಡೆ ಹೊರಟೆ
ಕೀರ್ತಿ ಅವಳಿಗೆ ಕಾರ್ ಅಲ್ಲಿ ಕರೆದುಕೊಂಡು ಹೋಗಿ ಇಸ್ಕಾನ್ ತೋರಿಸಿ , ಊಟ ಮಾಡಿಸಿ ಏರ್ಪೋರ್ಟ್ ತಲುಪಿಸಿ ಬಂದ
ರಾತ್ರಿ ಮೆಸೇಜ್ ಮಾಡಿದ್ದಳು.”ದೆಹಲಿ ತಲುಪಿದ್ದೇನೆ. ಇಂಡಿಯಾ ತುಂಬಾ ಅದ್ಭುತವಾಗಿದೆ ನಾನು ನಿಮ್ಮ ಸಹಾಯವನ್ನು ಎಂದಿಗೂ ಮರೆಯುವುದಿಲ್ಲ. ನೀನು ಮತ್ತು ಕೀರ್ತಿ ತುಂಬಾ ಒಳ್ಳೆಯವರು ನನಗೆ ಹೊಸ ಸ್ನೇಹಿತರು . ಮತ್ತೆ ಭೇಟಿಯಾಗೋಣ ಗೆಳೆಯಾ …”
ಇಷ್ಟೇ – ಕಥೆ ಮುಗೀತು – ಸ್ನೇಹ ಇನ್ನು ಉಳಿದಿದೆ.


2 Comments
Chanda baraediddira vishwaravare. You are always helping, one of your best quality
Haha😊 thanx