ಕೈಕೊಟ್ಟ ಹುಡುಗ, ಬಿಟ್ಟುಹೋದ ಗೆಳತಿ ಇನ್ನೊಬ್ಬರನ್ನ ಮದುವೆಯಾದ ಮೇಲೂ ಒಂದಲ್ಲ ಒಂದು ದಿನ ನಮ್ಮನ್ನ ಮಿಸ್ ಮಾಡ್ಕೊತಾರೆ, ಮೆಸೇಜ್ ಮಾಡ್ತಾರೆ, ಕಾಲ್ ಮಾಡ್ತಾರೆ ಅಂತ ಎಷ್ಟೊಂದು ಜನ ಕನಸು ಕಾಣುವವರಿದ್ದಾರೆ ನಮ್ಮಲ್ಲಿ.ಆದರೆ ಇಲ್ಲಿ ನಮ್ಮ ಹುಡುಗನ ಮುಸ್ಸಂಜೆಯಲ್ಲಿ ಆಗಿದ್ದು ಅನಿರೀಕ್ಷಿತ.
office ನ ಬೊರಿಂಗ್ ಕೆಲಸ ಮುಗಿಸಿ,ಈ ಬೆಂಗಳೂರಿನ ಕಲರ್-ಕಲರ್ ಜನಸಂದಣಿಯಲ್ಲಿ ,BTM ಸಿಗ್ನಲ್ ಅಲ್ಲಿ ಜಾಮ್ ಆಗಿರೋ BMTC ಬಸ್ ನ ಕೊನೆಯ ಸೀಟಲ್ಲಿ ಅವನು ಮನೆಯಲ್ಲಿ ಮರೆತು ಬಂದ ear-phone ಅನ್ನ ತುಂಬಾ ಮಿಸ್ ಮಾಡ್ಕೊತಿದ್ದ.ಮಿಸ್ ಆದ ಹುಡುಗಿಗಿಂತ ಹೆಚ್ಚಾಗಿ. “Evening…!!” ಅನ್ನೋ ಮೆಸೇಜ್ ಬಂದಿತ್ತು.
ಎಂದೋ ಡಿಲೀಟ್ ಮಾಡಿದ ನಂಬರ್ ಮರೆಯಲು ಸಾದ್ಯವಾಗಿಲ್ಲ.ಅದು ಅವಳದು.ಲೆಕ್ಕ ಮಾಡಿ ಇಂದಿಗೆ ೧೫ ತಿಂಗಳು ೮ ದಿನ? ಅವಳ ನೋಡಿ,ಮಾತಾಡಿ,msg ಮಾಡಿ. ದಿಕ್ಕು ತೋಚದ ಹುಡುಗ ಅದೇ ಮೆಸೇಜ್ ನಾ copy-paste ಮಾಡಿ ಕಳಿಸಿದ್ದ.ಅಷ್ಟೇ……
ಇದು ನಮ್ಮ ಮರಾಠಿ ಹುಡುಗನ-ಘಟ್ಟದ ಮೇಲಿನ ಭಟ್ಟರ ಹುಡುಗಿಯ ಸುಸಂಸ್ಕ್ರತ ಜುಗಲ್ಬಂಧಿ.ಒಬ್ಬರನ್ನೊಬ್ಬರು ಬೇಟಿಯಾಗದೆ, ಯಾವುದೊ ಮಿಸ್ ಆಗಿರೋ ಕಾಲ್ ಇಂದ ಮೆಸೇಜ್ ಶುರುವಾಗಿ, ದಿನರಾತ್ರಿ ಸಂದೇಶಗಳ ವಿಲೇವಾರಿಯಾಗಿ ಒಬ್ಬರಿಗೊಬ್ಬರು ಚಿರ-ಪರಿಚಿತ!ರಾದರು.ಮಾತುಗಳು ಕನಸುಗಳ ಹೆಣೆದವು.ಸ್ನೇಹ ಎಂಬ ಕಪ್ಪೆಚಿಪ್ಪಿನ ಒಳಗೆ ಅದೂ ಇರಲೇಬೇಕು ಅಲ್ವಾ?
ಮದುವೆ,ಮಕ್ಕಳು… ಎಂದು ಕನಸು ಕಟ್ಟಿದ ಮಾತಿನ ಮನೆಯಲ್ಲಿ ಪ್ರೀತಿ ಗ್ರಹಪ್ರವೇಶ ಮಾಡಿತ್ತು.ಎಂದೂ ಹತ್ತಿರವಾಗದ PUC ಹುಡುಗಿ ಮತ್ತು ಕೆಲಸ ಹುಡುಕಲು ಬೆಂಗಳೂರಿಗೆ ಬಂದ ಹುಡುಗನ ನಡುವಿನ ಅಂತರ ವಾಸ್ತವವಾಗಿ ಬರೀ ಕಾಲ್ಪನಿಕವಾಗಿತ್ತು.
ಒಂದು ದಿನ “ಮನೇಲಿ ಜಾತಕ ಹಾಕಸ್ತಿದಾರೆ ಕಣೋ… L” ಅಂತ ಅವಳ ಮೆಸೇಜ್ ಓದಿದ ಅವನು ದಿಕ್ಕು ತೋಚದೆ ಊರಿನ ಬಸ್ ಹತ್ತಿದ್ದ.ಕಾರವಾರ ಬೀಚ್ ಅಲ್ಲಿ 12 ಘಂಟೆ ಎಂದು ಕಳುಹಿಸಿದ ಅವಳ ಮೆಸೇಜ್ ರಾತ್ರಿಯಿಡೀ ಓದಿದ್ದ. 1 ವರ್ಷದ M-ಪರಿಚಯ(ಮೊಬೈಲ್)ವನ್ನು upgrade ಮಾಡಿಸಿ ಬೇಟಿಯಾಗುವ ಸಮಯ ಬಂದಿತ್ತು.
ಪಿಂಕ್ ಬಣ್ಣದ ಚೂಡಿದಾರ- ಬಿಳಿ ಶರ್ಟ್ ಅಂತ ಎಲ್ಲ ಫೋನಿನಲ್ಲಿ ಮಾತಾಡಿದ ಮೇಲೆ ಕೆಲವೇ ಕ್ಷಣಗಳಲ್ಲಿ ಆ ಎರಡು ಜೀವಗಳು ಮುಖಾಮುಖಿ ಆಗಿದ್ದವು.ಅವರ ಮಾತಿನ ಪದಗಳ ಹುಡುಕಾಟಕ್ಕೆ ಅಲೆಗಳು ಬೆರಗಾಗಿದ್ದವು. ಮೌನವು ಮೆಲ್ಲನೆ ಮುಘುಳ್ನಕ್ಕಿತ್ತು.ಮೊದಲ ಬೇಟಿಯಲ್ಲಿ- ತೀರದಲ್ಲಿ ನಮ್ಮವರು ಅನಿಸಿಕೊಂಡವರ ಕೈ ಹಿಡಿದು ನಡೆಯುವ,ಭುಜಕ್ಕೆ ಒರಗಿದ ಅವರ ಉಸಿರನ್ನು ಕೇಳಿಸಿಕೊಳ್ಳುವ ಅದ್ರಷ್ಟ ಎಷ್ಟು ಜನರಿಗೆ ಇರತ್ತೆ ಹೇಳಿ??
ಆದರೆ ನಮ್ಮ ಹುಡುಗ ಅದ್ರಷ್ಟವಂಥ ಕೇವಲ ಆ ಕ್ಷಣಗಳಿಗೆ…..
ಮುಂದೇನು? ಒಂದೆರಡು ಘಂಟೆ, ಪ್ರಪಂಚವೇ ತಲೆಯ ಮೇಲೆ ಬಿದ್ದವರ ಥರ ಇಬ್ಬರೂ ಏನೋ ಮಾತಾಡಿಕೊಂಡರು.ಫಲಿತಾಂಶ: ಜಸ್ಟ್ ಫ್ರೆಂಡ್ಸ್ ಆಗಿ ಇರೋದು.ಒಲ್ಲದ ಮನಸ್ಸುಗಳು ”ಪ್ರೀತಿ ಮಧುರ..ತ್ಯಾಗ ಅಮರ” ಅನ್ನೋದನ್ನ ಒಪ್ಪುವುದು ಅನಿವಾರ್ಯವಾಗಿತ್ತು.
ಬಸ್ ಅಲ್ಲಿ ಅವಳ ಪಕ್ಕ ಕುಳಿತು ಪ್ರಯಾಣ ಮಾಡುವುದು ನಮ್ಮ ಹೀರೋ ನ ಕೊನೆಯ ಆಸೆ ಆಗಿತ್ತೋ ಗೊತ್ತಿಲ್ಲ.ಅವಳನ್ನ ಊರಿಗೆ ಬಿಡಲು ಹೊರಟ.ಕೊನೆಯ ಬಸ್ ಹೊರಡೋ ಸಮಯಕ್ಕೆ,ಏಟಿಎಂ ನೆನಪಾಗಿ,ಅವಳು 500Rs ಕೊಟ್ಟು,ನನಗೆ ಆಮೇಲೆ ಯಾವತ್ತಾದ್ರು ಕೊಡು ಅಂದಾಗ ಅವನಲ್ಲಿ ಉಳಿದ ಯಕ್ಷ ಪ್ರಶ್ನೆ “ಆ ಯಾವತ್ತಾದ್ರು ಅನ್ನೋದು ಯಾವತ್ತು?” ಅನ್ನೋದೊಂದೆ.
ಹುಡುಗಿ ಮದುವೆಯಾಯಿತು.”WISH U ಹ್ಯಾಪಿ MARRIED LIFE” ಅಂತ ಮೆಸೇಜ್ ಕಳಿಸಿ whatsapp ಸ್ಟೇಟಸ್ ನಾ “ನಮ್ಮವರು ಖುಷಿಯಗಿರುವುದನ್ನು ಕಂಡು ಖುಷಿ ಪಡೋದ್ರಲ್ಲಿ ಇರೋ ಖುಷಿನೇ ಬೇರೆ J” ಚೇಂಜ್ ಮಾಡಿದ ನೆನಪು.
ಅವಳಿಗೆ ಯಾವತ್ತಾದ್ರು ರಿಟರ್ನ್ ಮಾಡಬೇಕು ಎಂದು ಅವಳ ಹೆಸರು ಬರೆದಿಟ್ಟ 500ರ ನೋಟು ತೆಗೆದು ನೋಡಿದಾಗ ಹುಡುಗನಲ್ಲಿ ಮತ್ತೆ ಏನೋ ಕಳೆದುಕೊಂಡ ಅನುಭವ.
ಮಲೆನಾಡಿನ ಹುಡುಗಿಯರು ಮಳೆಯಷ್ಟೇ ಚಂದ.ನಮ್ಮ ಹುಡುಗನ ಬಾಳಲ್ಲಿ ಮಳೆಗಾಲ ಬರಲೇ ಇಲ್ಲ.


