ಪೆಂಗೊಂಗ್ ತ್ಸೋ….ಇದು ವಿಶ್ವ ವಿಖ್ಯಾತವಾದ ಸರೋವರ. ಅರ್ಥವಾಗೋ ತರ ಹೇಳಬೇಕೆಂದರೆ ಹಿಂದಿ ಚಿತ್ರ 3 ಈಡಿಯಟ್ಸ್ ಕ್ಲೈಮ್ಯಾಕ್ಸ್ ನಲ್ಲಿ ಆಮೀರ್ ಖಾನ್, ಗಾಳಿಪಟ, ಕರೀನಾ ಕಪೂರ್, ವೆಸ್ಪಾ ಬ್ಯಾಕ್ಗ್ರೌಂಡ್ ನಲ್ಲಿ ಅಧ್ಬುತವಾದ ಸರೋವರ ಇತ್ತಲ್ವಾ?? ಹಾ..ಅದೇ. ಸುಮಾರು 134 ಕಿಲೋಮೀಟರ್ ಉದ್ದವಿದ್ದು, 60% ಚೀನಾ-ಟಿಬೆಟ್ ಗಳಲ್ಲಿ.. ಉಳಿದದ್ದು ಭಾರತದಲ್ಲಿ ಹರಡಿರುವ ವಿಶಾಲವಾದ ಸ್ಪಟಿಕದಂತಿರುವ ಸರೋವರ. ಇಂದು ನಾವು ಹೋಗಬೇಕಾದ ಸ್ಥಳವಿದು. ಹೊರಡುವ ಮೊದಲೇ ಉತ್ಸಾಹಕ್ಕೆ ಮಿತಿಯಿರಲಿಲ್ಲ.
ಲೇಹ್ ನಿಂದ 175 ದೂರವಿರುವ ಪೆಂಗೊಂಗ್ ಲೇಕ್ ಗೆ ತಲುಪಲು 6 ಘಂಟೆ ಬೇಕು ಎಂದು ಕೇಳಿ ತಿಳಿದಾಗಲೇ ಅದರ ರಸ್ತೆಗಳ ಕುರಿತಾಗಿ ಒಂದು ಛಾಯಾಚಿತ್ರ ಮನಸಲ್ಲಿ ಮೂಡಿತ್ತು. ಬೆಳಿಗ್ಗೆ ಎದ್ದು ತಿಂಡಿ ತಿಂದು 6:45 ರ ಸುಮಾರಿಗೆ ಕಟ್ಪಾ ರೆಸಿಡೆನ್ಸೀ ಹೋಟೆಲ್ ನಿಂದ ಹೊರಟೆವು.
ಲೇಹ್ ನಿಂದ ಸುಮಾರು 45km ದೂರವಿರುವ ಕಾರು ಎಂಬ ಸ್ಥಳಕ್ಕೆ ತಲುಪಿದೆವು. ಇನ್ನೊಮ್ಮೆ ತಿಂಡಿ ತಿನ್ನುವ ಮನಸಾಗಿ ಅಲ್ಲಿಯೇ ಇದ್ದ ಹೋಟೆಲ್ ನಲ್ಲಿ ಬ್ರೆಡ್ ಆಮ್ಲೆಟ್ ಆರ್ಡರ್ ಮಾಡಿದಾಗ ನಮ್ಮ ಕಾಶ್ಮೀರಿ ಮಿತ್ರನ ಕರೆ ಬಂತು.
ನಾವು ಕ್ಷೇಮವಾಗಿ ಲೇಹ್ ತಲುಪಿದ್ದಾಗಿ ತಿಳಿದು ಖುಷಿ ಪಟ್ಟ ಆಥರ್ ಖಾನ್, ಕಾಶ್ಮೀರದ ಪರಿಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ಎಲ್ಲ ಸರಿ ಹೋದ ಮೇಲೆ ಇನ್ನೊಮ್ಮೆ ನಮ್ಮ ಕಾಶ್ಮೀರ ನೋಡಲು ಬನ್ನಿ ಎಂದು ತಿಳಿಸಿದ. ಕೊನೆಗೆ “ಲೇಹ್ ನಲ್ಲಿ ಒಂದು ಗುರುದ್ವಾರ ಇದೆ. ಅಲ್ಲಿ ಹೋಗಿ ಊಟ ಮಾಡಲು ಮರೆಯಬೇಡಿ.” ಎಂದು ಹೇಳಿದ. ದೂರದಲ್ಲಿ ಪೆಂಗೊಂಗ್ ಲೇಕ್.. ಎಡಕ್ಕೆ ಎಂದು ಬೋರ್ಡ್ ನೋಡಿ ದಾರಿ ಹಿಡಿದೆವು.
ರಸ್ತೆ ಕಾಮಗಾರಿ ನಡೆಯುತ್ತಿದ್ದ ಕಾರಣ 9:30 ರ ವರೆಗೆ ಗೇಟ್ ತೆರೆಯುವುದಿಲ್ಲ ಎಂದ ಸೆಕ್ಯೂರಿಟೀ ಗಾರ್ಡ್ ಬೇರೆ ದಾರಿ ತೋರಿಸಿದ. ತಿರುವುಮರುವಾದ ಕಿರಿದಾದ ರಸ್ತೆಗಳಲ್ಲಿ, ಅಲ್ಲಲ್ಲಿ ಸಿಗುವ ಮಿಲಿಟರೀ ಕ್ಯಾಂಟರ್ ಗಳು, ಹಳ್ಳ ಕೊಳ್ಳಗಳನ್ನು ದಾಟಿ 40km ಗಳ ಆಫ್ ರೋಡಿಂಗ್ ಅನುಭವದ ನಂತರ ತಲುಪಿದ್ದು ಚಾಂಗ್ಲಾ ಪಾಸ್. ಸಮಯ ಬೆಳಿಗ್ಗೆ 10:30.
ಈಗ ನಾವು ತಲುಪಿರುವುದು ಜಗತ್ತಿನ ಎರಡನೇ ಎತ್ತರದ ವಾಹನಗಳು ಚಲಿಸುವಂತಹ ರಸ್ತೆ. ಚಾಂಗ್ಲ ಬಾಬಾ ದೇಗುಲದ ಬಾಗಿಲಲ್ಲಿ ನಿಂದು ಕೈ ಮುಗಿದು, ಬರುವಾಗ ಇಲ್ಲೂ ಸಹ ಬೋರ್ಡ್ ಹತ್ತಿರ ಫೋಟೋ ತೆಗೆಸಿಕೊಳ್ಳಲು ಕೆಲವು ಸಮಯ ಕಾಯಬೇಕಾದದ್ದು ನಮ್ಮ ಅವಳ ಬೆಟ್ಟದ ಕಲ್ಲಿನ ಮೇಲೆ ಇರುವ ಸರದಿಯನ್ನು ನೆನಪಿಸಿತ್ತು. ಕೊನೆಗೆ “ಶರತ್ತು ಗಳು ಅನ್ವಯ” ಎಂದು ಆರ್ಮಿ ಅಧಿಕಾರಿಗಳೊಂದಿಗೆ ಫೋಟೋ ತೆಗೆಸಿಕೊಂಡು ಅಲ್ಲಿಂದ ದುರ್ಬುಕ್ ಕಡೆಗೆ ಹೊರಟೆವು.
ತಾಂಗ್ಸೆ ಮೂಲಕ ಪೆಂಗೊಂಗ್ ತಲುಪಿದಾಗ ದೂರದಲ್ಲಿ ಒಂದು ಬೋರ್ಡ್ ನಲ್ಲಿ “ನೀವು ಇಲ್ಲಿಂದ ನೋಡುತ್ತಿರುವುದು ಜಗತ್ಪ್ರಸಿದ್ದ ಪೆಂಗೊಂಗ್ ಸರೋವರದ ಮೊದಲ ನೋಟ” ಎಂದು ಓದಿದಾಗ ದೂರದಲ್ಲಿ, ಹಸಿರು-ನೀಲಿಯ ರಂಗೋಲಿಯಂತಹ ನಯನ ಮನೋಹರ ಸರೋವರ ಕಾಣಿಸುತ್ತಿತ್ತ್ತು. ತಡಮಾಡದೆ 2-3 ಹೋಗಿ ತಲುಪಿದಾಗ ನಮ್ಮ ಮುಂದೆ ಶುಭ್ರವಾಗಿ ತಳ ಕಾಣಿಸುವಂತೆ ಮಿಂಚುತ್ತಿತ್ತು ಸರೋವರ.
ಲಡಾಖ್ ನ ಭಾಷೆ ಕನ್ನಡವೋ? ಎಂಬ ಕಲ್ಪನೆ ತರುವಂತೆ ಎಲ್ಲಿ ಹೋದರೂ ಕನ್ನಡದ ಕಂಪು ಕಿವಿಗೆ ತಲುಪುತ್ತಿತ್ತು. ಕನ್ನಡಿಗರ ಗುಂಪೊಂದು ಬೇಟಿಯಾಯಿತು. ಸುತ್ತ ಎಲ್ಲಿ ನೋಡಿದರೂ 3-ಈಡಿಯಟ್ಸ್ ಚಿತ್ರಕ್ಕೆ ಸಂಬಂದಿಸಿದ ಹೆಸರುಗಳಿರುವ ಹೋಟೆಲ್ಗಳು. ದೂರದಲ್ಲಿ ಕರೀನಾ ಕಪೂರ್ ಆ ಚಿತ್ರದಲ್ಲಿ ಬಳಸಿರುವ ವೆಸ್ಪಾ ಸ್ಕೂಟರ್ ಹಾಗೂ ಹೆಲ್ಮೆಟ್. ಅದರೊಂದಿಗೆ ಫೋಟೋ ತೆಗೆಸಿಕೊಳ್ಳಲು ದೊಡ್ಡ ಸರದಿ. ನೀರಿನ ಹೊಸ ಬಣ್ಣ ಕಂಡು ಕಣ್ಣು ಮನ ತಂಪಾಗಿತ್ತು. ತಿಳಿ ಹಸಿರನ್ನು ಹೊದ್ದಿರುವ ಪಾರದರ್ಶಕ ನೀರಿಗೆ ನೀಲಿ ಮೋಡದ ಸ್ಪರ್ಶ. ಬಿಳಿಯ ಬಣ್ಣದ ಮೋಡಗಳು ಅಲ್ಲಲ್ಲಿ ಬಂದು ಸರೋವರದಲ್ಲಿ ನೆರಳನ್ನು ನೋಡುತ್ತಿವೆ ಎಂಬ ಸನ್ನಿವೇಶ.
ನೋಡಿದರೆ ಈಜಬೇಕು ಎನಿಸುವ ನೀರಿನಲ್ಲಿ ಕಾಲಿಟ್ಟರೆ ಮೈ ಕೊರೆಯುವ ತಂಪು. ಹಿಮ ಮುಟ್ಟಿದ ಅನುಭವ. ಎಷ್ಟೇ ಅಳವಿದ್ದರು ತಳ ಕಾಣುತ್ತಿತ್ತು. ಸ್ವಲ್ಪ ಹೊತ್ತು ನೀರಿನಲ್ಲಿ ಆಟವಾಡಿ,3 ಈಡಿಯಟ್ಸ್ ಎಂಬ ಹೋಟೆಲ್ ನಲ್ಲಿ ಊಟ ಮುಗಿಸಿ ಮತ್ತೆ ಲೇಹ್ ಕಡೆ ಹೊರಟೆವು. ಲೇಹ್ ತಲುಪಿದಾಗ ಸಂಜೆ 6 ಘಂಟೆ. ಹೋಗುವ ದಾರಿಯಲ್ಲಿ ಸಿಕ್ಕ ಶಾಲೆಯಿಂದ ಮನೆಗೆ ತೆರಳುತ್ತಿರುವ ಹಲವು ಚಿಕ್ಕ ಪುಟ್ಟ ಮಕ್ಕಳೊಂದಿಗೆ ಆಟವಾಡಿ, ಅವರೊಂದಿಗೆ ಸೆಲ್ಫಿ ತೆಗೆಸಿಕೊಂಡು ನಮ್ಮ ಹೋಟೆಲ್ ತಲುಪಿದೆವು.
ಕ್ರಮಿಸಿದ ದೂರ ಆಯಾಸವೆನಿಸಲಿಲ್ಲ. ಆಫ್ ರೋಡಿಂಗ್ ಮಾಡಿ ಬುಲೆಟ್ ಮತ್ತು ದೇಹ ರೋಮಾಂಚನಗೊಂಡಿದ್ದವು. ಅಲ್ಲಿಗೆ ಒಂದು ಬಿಸಿ ನೀರಿನ ಸ್ನಾನ ಅವಶ್ಯಕತೆಯಿದ್ದು, ಅದನ್ನು ಪೂರೈಸಲಾಯಿತು. ಕೆಲವು ಸಮಯ ಹೋಟೆಲ್ನಲ್ಲಿ ಕಳೆದು, ಹೋಟೆಲ್ ನವಾಬ್ ಎಂಬಲ್ಲಿಗೆ ಹೋಗಿ ಊಟ ಮುಗಿಸಿದೆವು. ನಾಳೆ ಮುಂಜಾನೆ ಬೇಗ ಎದ್ದು ಲೇಹ್ ನಗರಕ್ಕೆ ಟಾಟಾ- ಬೈ ಬೈ ಹೇಳಬೇಕು. ಪಾಂಗ್ ನಂತರ ಸುಮಾರು 350 ದೂರ ಪೆಟ್ರೋಲ್ ಬಂಕ್ ಇಲ್ಲದಿರುವುದರಿಂದ, ಹೊಸದಾಗಿ ಖರೀದಿಸಿದ ಕ್ಯಾನ್ ಗಳಲ್ಲಿ ತಲಾ 10 ಲೀಟರ್ ಗಳಂತೆ ಇಬ್ಬರೂ, ಪೆಟ್ರೋಲ್ ತುಂಬಿಸಿಕೊಂಡು , ಬುಲೆಟ್ ಗಳಿಗೆ ಫುಲ್ ಟ್ಯಾಂಕ್ ಪೆಟ್ರೋಲ್ ಹಾಕಿಸಿಕೊಂಡು ಬಂದು ನಮ್ಮ ವಸ್ತುಗಳನ್ನೆಲ್ಲ ಪ್ಯಾಕ್ ಮಾಡಿಕೊಂಡೆವು.

ಇಂದಿಗೆ ನಮ್ಮ ಹೋಗುವ ದೂರ ಸೀಮಿತವಾಗಿತ್ತು. ನಾಳೆಯಿಂದ ನಾವು ಬೇರೆ ದಾರಿಯಲ್ಲಿ ಮನೆಯ ಕಡೆಗೆ ಹೊರಡುತ್ತಿದ್ದೇವೆ ಎಂಬುವುದು ಮನಸಲ್ಲಿ ಕೊರೆಯುತ್ತಿತ್ತು. ಕನಸಿನ ಪಯಣದಿಂದ ಮನೆಯೆಡೆಗೆ ನಡೆಯುವುದು ತುಂಬಾ ಕಟೀಣವಾದ ಅನುಭವ ಎಂದು ಯಾವುದೋ ಅಲೆಮಾರಿ ಮಹಾನುಭಾವ ಹೇಳಿದ ಮಾತು ಸತ್ಯ ಎಂಬುದರ ಅರಿವು ಮೂಡಲಾರಂಬಿಸಿತ್ತು.
ಲೇಹ್ ನಗರ ಬಿಟ್ಟು ಹೋಗಲು ಮನಸಾಗಲಿಲ್ಲ. ಅಲ್ಲಿನ ಜನರ ಒಡನಾಟ, ಆ ಮುಗ್ಧತೆ ಎಲ್ಲೂ ಕಂಡಿರಲಿಲ್ಲ. ಆ ಜನಜೀವನವನ್ನು ಕೇವಲ ದ್ರಶ್ಯ ಮಾಧ್ಯಮಗಳಲ್ಲಿ ನೋಡಿ, ಇಂದಿಗೆ ಇಲ್ಲಿ ಬಂದು ಅವರೊಂದಿಗೆ ಬೆರೆತು ಆ ಬೆಟ್ಟಗಳನ್ನು ಮತ್ತೆ ಮತ್ತೆ ನೋಡಿ, ಆ ರಸ್ತೆಗಳ ಕರ್ವ್ ಗಳಲ್ಲಿ, ಇನ್ನೇನು ಥ್ರೋಟಲ್ ಕೇಬಲ್ ಕೈಗೆ ಬರುತ್ತದೆ ಎನಿಸುವಷ್ಟು ಎಳೆದು ಹಿಡಿದ ರಸ್ತೆಗಳಲ್ಲಿ ಓಡಾಡಿ, ಬುಲೆಟ್ ನಾ ಕನ್ನಡಿಯಲ್ಲಿ ಹೋಗದಿರು ನೀನು..ಎಂದು ಕರೆಯುವ ಹಿಮ ಪರ್ವತಗಳೊಂದಿಗೆ ಮಾತನಾಡಲಾರದೇ, ಪಯಣದ ದಿಕ್ಸೂಚಿ ಮನೆಯ ದಾರಿ ತೋರಿಸುತ್ತಿತ್ತು. ಬೆಳಿಗ್ಗೆ ಅಲಾರ್ಮ್ ಆದಾಗ 6 ಘಂಟೆ.
(ಮುಂದುವರೆಯುವುದು…….)



