“”ನಾಳೆ ಕರ್ಫ್ಯೂ ಇರುವುದಾಗಿ, ನೀವು ಒಂದೆರಡು ದಿನ ಹೋಟೆಲ್ ನಲ್ಲಿಯೇ ಉಳಿದುಕೊಳ್ಳಿ. ಜನರೆಲ್ಲ ರೊಚ್ಚಿಗೆದ್ದಿದ್ದಾರೆ.ಸೋನ್ ಮಾರ್ಗ್ ದಾರಿಯಲ್ಲಿ ಯಾವುದೋ ಸವಾರರ ಮೇಲೆ ಕಲ್ಲಿನ ದಾಳಿ ಮಾಡಲಾಯಿತಂತೆ. ಪರಿಸ್ಥಿತಿ ನಿಯಂತ್ರಣದಲ್ಲಿ ಬರುವವರೆಗೆ ಸ್ವಲ್ಪ ಹೋಟೆಲ್‌ನಲ್ಲೇ ರೆಸ್ಟ್ ತಗೋಳಿ, ನೀವು ಯಾವಾಗ ಹೊರಡುವುದು ಸೂಕ್ತ ಎಂದು ನಾನು ತಿಳಿಸುತ್ತೇನೆ” ಎಂದು ಹೇಳಿ ಫೋನ್ ಇಟ್ಟ.ರಾತ್ರಿ 12 ಆದರೂ ಕರೆಂಟ್ ಬಂದಿಲ್ಲ. ನಿದ್ದೆಯಂತೂ ದೂರದ ಮಾತು. ಹೇಗೋ ಒದ್ದಾಡಿ ಕಣ್ಣು ಮುಚ್ಚಿ ಒತ್ತಾಯಪೂರ್ವಕ ನಿದ್ದೆ ಮಾಡಿ ಬೆಳಿಗ್ಗೆ ಎದ್ದರೂ ವಿದ್ಯುತ್ ನ ಸುಳಿವಿರಲಿಲ್ಲ.
ಮೊಬೈಲ್ ಬ್ಯಾಟರೀ ಬೇರೆ ಲೋ ಎಂದು ತೋರಿಸುತ್ತಿತ್ತು. ಪವರ್ ಬ್ಯಾಂಕ್ ಇರುವುದು ಇವತ್ತಿಗೆಉಪಯೋಗವಾಯಿತು ಎನಿಸಿತು.ಕೆಳಗಡೆ ಇಳಿದು ಹೋದರೆ ಹೋಟೆಲ್ ರೂಮ್ ಸಿಗದೆ ಹೊರಗಡೆ ಕಾದು ಕುಳಿತಿರುವ ಕುಟುಂಬ, ಫ್ಲೈಟ್ ಅಲ್ಲಿ ಹೊರಟು ಇಷ್ಟೊತ್ತಿಗೆ ಬೆಂಗಳೂರಿನ ಟ್ರಾಫಿಕ್ ನಲ್ಲಿ ಸಿಕ್ಕುಹಾಕಿಕೊಂಡಿರಬೇಕಾದ ಬೈಕರ್ ಗಳ ಗುಂಪು,ಅಮರ್‌ನಾಥ್ ಯಾತ್ರೆಗೆ ಬಂದ ಅನೇಕ ಜನರು ಯಾವಾಗ ಕಾಶ್ಮೀರ ಬಿಟ್ಟು ಹೋಗುತ್ತಿವೋ ಎಂದು ಮಾತನಾಡಿಕೊಳ್ಳುತ್ತಿದ್ದರು. ಅಷ್ಟೊತ್ತಿಗೆ ಯಾರಿಗೋ ಬಂದ ಸುದ್ದಿಯಂತೆ ಪೋಲೀಸ್ ರು ಇನ್ನೂ 8 ಜನ ಪ್ರತಿಭಟನಾಕಾರರನ್ನು ಎನ್‌ಕೌಂಟರ್ ಮಾಡಿದ್ದಾರೆ ಎಂದು ತಿಳಿಯಿತು. ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ ಅನಿಸಿತು.
ರಂಜಾನ್ ಹಬ್ಬದ ಊಟ ಮಾಡಬೇಕು ಎಂದು ಕನಸು ಕಟ್ಟಿ ಕಾಶ್ಮೀರ ಸೇರಿದ್ದ ನಮಗೆ 2 ದಿನ ಹೊಟ್ಟೆಪಾಡಿಗಾಗಿ ಅದೇ ಪರೋಟ ಧಾಲ್ ತಿಂದು ನಾಲಿಗೆ ಹೆಪ್ಪುಗಟ್ಟಿತ್ತು.ಯಾವುದೋ ವಿದೇಶಿ ಮಹಿಳೆಯು ಕೇಳಿದ್ದಕ್ಕೆ, ಹೋಟೆಲ್ ನ ಹುಡುಗ ತರಕಾರಿ ಸಿಗುತ್ತಾ ಎಂದು ಹುಡುಕಲು ನನ್ನನ್ನು ಕರೆದುಕೊಂಡು ಹೋದ. ಪೂರ್ತಿ ಶ್ರೀನಗರ ಸುತ್ತಾಡಿದರೂ ಏನು ಸಿಗಲಿಲ್ಲ.ಎಲ್ಲೆಡೆ CRPF ಸರ್ಪಗಾವಲು. ಬೀದಿ ಬೀದಿ ಗಳು ಭೀಕೊ ಎನ್ನುತ್ತಿದ್ದವು.ಆ ಎರಡು ದಿನಗಳು ಜೈಲುವಾಸ ಎನ್ನಬಹುದು. ಕಾಶ್ಮೀರ ಹತ್ತಿ ಉರಿಯುತ್ತಿರುವಾಗ VIP ಏರಿಯಾ ದಾಲ್ ಲೇಕ್ ಮಾತ್ರಶಾಂತವಾಗಿ ಕನ್ನಡಿಯಂತೆ ಕಂಗೊಳಿಸುತ್ತಿತ್ತು. ಬರಿಗಯ್ಯಲ್ಲಿ ಮರಳಿ ಹೋಟೆಲ್ ಸೇರಿದಾಗ ರಿಸರ್ವ್ ಬಿದ್ದಿರುವ ಬೈಕ್ ಗೆ ಪೆಟ್ರೋಲ್ ನ ದಾಹ ವಾಗಿತ್ತು. ಯಾವುದೇ ಪೆಟ್ರೋಲ್ ಬಂಕ್ ಗಳುಕಾರ್ಯ ನಿರ್ವಹಿಸುತ್ತಿರಲಿಲ್ಲ. ಪುಣ್ಯಕ್ಕೆ 18 ಘಂಟೆಗಳ ಬಳಿಕ ಹೋಟೆಲ್ ವೈ-ಫೈ ಗೆ ಮೊಬೈಲ್ ಕನೆಕ್ಟ್ ಆಗಿತ್ತು. ನ್ಯೂಸ್ ಚ್ಯಾನೆಲ್ ಗಳೆಲ್ಲವೂ ಕಾಶ್ಮೀರದ ತುರ್ತು ಪರಿಸ್ಥಿತಿಯನ್ನುತೋರಿಸುತ್ತಿದ್ದವು ಘಂಟೆಗೆ ಒಂದರಂತೆ ಹತರಾದ ಮಿಲಿಟಂಟ್ಗಳ ಸಂಖ್ಯೆ ಏರುತ್ತಲೇ ಇತ್ತು.
ಸ್ಥಳೀಯರೊಬ್ಬರು ಹೇಳಿದ ಪ್ರಕಾರ “ಬುರ್ಹಾನ್ ವಾಣಿ ಕಾಶ್ಮೀರದ ಜನರ ಪಾಲಿಗೆ ಹೀರೊ. ಅವರ ತರ್ಕದ ಪ್ರಕಾರ ಪೋಲೀಸ್ ರ ದಬ್ಬಾಳಿಕೆ ಯನ್ನು ಇಷ್ಟು ದಿನ ಹಿಡಿತದಲ್ಲಿಡಲು ಅವನೇಕಾರಣನಾಗಿದ್ದನಂತೆ.ಅವನ ಪ್ರೇಯಸಿಯು, ಅವನ ಚಟಗಳಿಗೆ ಬೇಸತ್ತು ಗುಪ್ತಚರರಿಗೆ ಮಾಹಿತಿ ನೀಡಿ, ಅವನ್ನು ಸೆರೆಹಿಡಿಯಲು ಸಹಾಯ ಮಾಡಿದಳಂತೆ”. ಪ್ರತಿಯೊಬ್ಬರೂ ಅವನನ್ನುಜೀವಂತವಾಗಿ ಸೆರೆಹಿಡಿದಾಗ, ಎನ್‌ಕೌಂಟರ್ ಮಾಡುವ ಅವಶ್ಯಕತೆ ಏನಿತ್ತು? ಎಂಬ ಪ್ರಶ್ನೆಯನ್ನೇ ಎಲ್ಲರಿಗೂ ವಿವರಿಸುತ್ತಿದ್ದರು. ಯಾವುದು ಸತ್ಯ? ಯಾವುದು ಸುಳ್ಳು? ಎಂದುಅರ್ಥೈಸಿಕೊಳ್ಳುವ ಸಾಮರ್ಥ್ಯ ಆ ಕ್ಷಣ ನಮ್ಮ ತರ್ಕ ಕ್ಕೆ ನಿಲುಕದ್ದು.ನಮ್ಮ ಕಂಪನೀ ಮ್ಯಾನೇಜರ್ ಗೆ ಫೋನ್ ಮಾಡಿ, ಪರಿಸ್ಥಿತಿಯನ್ನು ವಿವರಿಸಿ ರಜೆಯನ್ನು ಇನ್ನೊಂದು ವಾರ ಕೇಳಿದಾಗಅವರು ಆದಷ್ಟು ಬೇಗ ಬನ್ನಿ ಎಂದರು.
ಆಥರ್ ಖಾನ್ ಮತ್ತೆ ಫೋನ್ ಮಾಡಿ ಇನ್ನೂ 2 ದಿನ ನೀವು ಹೊರಡುವುದು ಸೂಕ್ತವಲ್ಲ ಎಂದು ಹೇಳಿ, ನಮ್ಮ ಹೊರಡುವ ಅನಿವಾರ್ಯತೆ ತಿಳಿದು ಮಧ್ಯರಾತ್ರಿ 3 ಘಂಟೆಯ ಹೊತ್ತು ಹೋಟೆಲ್ನಿಂದ ಹೊರಡಿ ಎಂಬ ಸಲಹೆ ಕೊಟ್ಟ. ಅವನು ಹೇಳಿದ ದಾರಿ ನಮಗೆ ತಿಳಿಯಲಿಲ್ಲ. ಕಾಶ್ಮೀರ ಮುಳ್ಳಿನ ಗುಲಾಬಿಯಂತೆ ಎನಿಸಿತು.ಕಾಶ್ಮೀರದ ಬಗ್ಗೆ ನೀವು ಕೇಳಿ ತಿಳಿಯುವ ಬದಲು ಅಲ್ಲಿ ಹೋಗಿನೋಡಿ, ಅನುಭವಿಸಿ ಅರಿಯಬೇಕು.
ದಾಲ್ ಲೇಕ್ ಹತ್ತಿರ ಹೊರಟೆವು. ಅದು ಕಾಶ್ಮೀರದ ಭಾಗವೇ ಅಲ್ಲವೆಂಬಂತೆ ಕಂಗೊಳಿಸುತ್ತಿತ್ತು. ಶಿಖಾರಾ ರೈಡ್ ಗೆ ಹೋದಾಗ ನಮ್ಮ ಪರಿಸ್ಥಿತಿಯನ್ನು ಕೇಳಿ ತಿಳಿದ ದೋಣಿಯ ಚಾಲಕ,ಬೆಳಿಗ್ಗೆ ಬೇಗ ಎದ್ದು ಹೊರಡಬಹುದು ಎಂದಾಗ ನಮಗೆ ಹೌದು ಎಂದೆನಿಸಿತು. ಅವನು ಹೇಳಿದ, “ಈ ಸರೋವರದ ಪಕ್ಕದ ರಸ್ತೆಯಲ್ಲಿ ಸುಮಾರು 8KM ಚಲಿಸಿ ಒಂದು ಕೂಡು ರಸ್ತೆಬರುವುದು. ಅಲ್ಲಿ ಬಲಕ್ಕೆ ತಿರುಗಿ. ಎಡಕ್ಕೆ ತಿರುಗಿದರೆ ಮತ್ತೆ ಬಂದು ಮೊಹಲ್ಲ ಸೇರುತ್ತೀರಾ. ನೆನಪಿನಲ್ಲಿಡಿ. ಅಲ್ಲಿಂದ ನೇರವಾಗಿ ಹೊರಟು ವಯುಲ್ ಸೇರಿದರೆ ಸಾಕು, ಅಲ್ಲಿ ನಿಮಗೆ ಏನುತೊಂದರೆ ಇಲ್ಲ.”ಎಂದು ವಿವರಿಸಿದ. ನಾನು ಅದನ್ನು ಮೊಬೈಲ್ ನಲ್ಲಿ ಚಿತ್ರಿಸಿಕೊಂಡೆ. ಅವನು ಹೇಳುವ ಪ್ರಕಾರ ಅಲ್ಲಿಯ ಜನರಿಗೆ ಪ್ರವಾಸೋದ್ಯಮವೇ ದುಡಿಮೆ. ಅದಕ್ಕಾಗಿ ಪ್ರವಾಸಿಗರಿಗೆಯಾರು ತೊಂದರೆ ಕೊಡಲ್ಲ.ಆದರೂ ನಿಮ್ಮ ಜಾಗ್ರತೆಯಲ್ಲಿ ನೀವು ಇರಿ ಎಂದು ಮಗುವಿಗೆ ಹೇಳುವಂತೆ ಹೇಳಿ ದಡ ಸೇರಿಸಿದ. ಪಕ್ಕದ ರಸ್ತೆಯಲ್ಲಿರುವ ಲೈಯನ್ ಟೂರ್ಸ್ ಅಂಡ್ ಟ್ರ್ಯಾವೆಲ್ಸ್ ಗೆಹೋದಾಗ ಅಲ್ಲಿನ ಮಾಲೀಕರು ನಾವು ಬೆಂಗಳೂರಿನವರು ಎಂದು ತಿಳಿದು, ಅವರ ಕಾರ್ಡ್ ನೀಡಿ, ನಾಳೆ ಹೋಗುವಾಗ ದಾರಿಯಲ್ಲಿ ಏನೇ ತೊಂದರೆ ಯಾದರೂ ನಮಗೆ ಕರೆ ಮಾಡಿ ಎಂದುಅಭಯ ಹಸ್ತ ನೀಡಿದರು.ಅಲ್ಲಿಯ ಜನ ನಮ್ಮನ್ನು ಟ್ರೀಟ್ ಮಾಡುವ ರೀತಿ ನಿಜಕ್ಕೂ ಅತಿಥಿ ದೇವೋ ಭಾವ ಎಂಬ ವಾಕ್ಯದ ನಿಜವಾದ ಅರ್ಥ ಹೇಳುತ್ತಿತ್ತು.
ಅಲ್ಲೇ ಊಟ ಮಾಡಿ ನಮಗೆ ಸೂರು ನೀಡಿದ ಹೋಟೆಲ್ ಆಜ಼ಾದ್ ಗೆ ಬಂದೆವು. ಪಕ್ಕದ ಪೆಟ್ರೋಲ್ ಬಂಕ್ ನಲ್ಲಿ ಸಂಜೆ ಪೆಟ್ರೋಲ್ ಕೊಡಿಸುವುದಾಗಿ ಹೇಳಿದ್ದ ಹೋಟೆಲ್ ಮಾಲೀಕರು, ನಾನುತುಂಬಾ ಪ್ರಯತ್ನ ಮಾಡಿದೆ.ಸಾಧ್ಯವಾಗುತ್ತಿಲ್ಲ ಎಂದು ಹೇಳಿ ಕೈತೊಳೆದುಕೊಂಡರು.ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಕಸ್ಟಮರ್ ಕೇರ್ ನಂಬರ್ ಗೆ ಕಾಲ್ ಮಾಡಿದಾಗ ಸುಮಾರು
65 kmದೂರವಿರುವ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ದೊರೆಯುತ್ತಿದ್ದು,ನಾಳೆಯ ಪರಿಸ್ಥಿತಿಯ ಅನುಗುಣವಾಗಿ ಅಲ್ಲಿ ದೊರೆಯಬಹುದು ಎಂದು ತಿಳಿಸಿದರು. ಸದ್ಯಕ್ಕೆ 65ಕೇಯೆಮ್ ದೂರಚಲಿಸುವಷ್ಟು ಆಕಾಶ್ ನಾ ಬೈಕ್ ನಲ್ಲಿರುವ ಪೆಟ್ರೋಲ್ ತೆಗೆದು ನನ್ನ ಬೈಕ್ ಗೆ ಹಾಕಿಕೊಂಡೇ.ಸ್ನಾನ ಮಾಡಿ, ಎಲ್ಲ ಬ್ಯಾಗ್ ಗಳನ್ನು ಪ್ಯಾಕ್ ಮಾಡಿ ಮಲಗಿದೆವು.
ನಸುಕಿನ 2 ಘಂಟೆಗೆ ಎದ್ದು “ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ……ನಮ್ಮ ಸೈನಿಕರಿಗೆ ನಮನ” ಎಂದು ಬುಲೆಟ್ ಹಿಂದೆ ಬರೆಸಿದ ಬೋರ್ಡ್ ಬಟ್ಟೆಯಿಂದ ಮುಚ್ಚಿ, ಸೋನ್ ಮಾರ್ಗ್ರಸ್ತೆಯನ್ನು ಹುಡುಕುತ್ತಾ ಹೋಟೆಲ್‌ನಿಂದ ಹೊರಟಾಗ ದಾರಿಯುದ್ದಕ್ಕೂ ಸುಟ್ಟು ಬಿದ್ದ ಟೈಯರ್ ಗಳು ಭಯಾನಕ ಕಾಶ್ಮೀರದ ಕಥೆ ಹೇಳುತ್ತಿತ್ತು.
(ಮುಂದುವರೆಯುವುದು)





