ಸಂಜೆ 7 ಘಂಟೆಗೆ ಕತ್ತಲಾಗಿತ್ತು. ಶ್ರೀನಗರ ಅಷ್ಟೊಂದು ವಿಶೇಷವೆನಿಸಲಿಲ್ಲ. ನಮ್ಮ ಶಿವಾಜಿನಗರದೊಳಗೆ ಕಾಲಿಟ್ಟ ಅನುಭವ. ನಮ್ಮನ್ನು ನಿಲ್ಲಿಸಿದ ವ್ಯಕ್ತಿ ಬಂದು ಕರ್ನಾಟಕಾ? ಎಂದು ಕೇಳಿದ. ನಾನು ಅದಕ್ಕೆಹೌದು ಅಂದೆ.ಕನ್ನಡಾ? ಎಂದ. ಹೌದು ಅಂದೆ. ಸ್ವಲ್ಪ ಸ್ವಲ್ಪ ಬರತ್ತೆ ಎಂದ. ಎಲ್ಲೋ ಹೋಗಿ ಕನ್ನಡ ಕೇಳಿದ್ದಕ್ಕೆ ಖುಷಿಯಾಯಿತು. ಆ ವ್ಯಕ್ತಿ ಬೆಂಗಳೂರಿನಲ್ಲಿ 5 ವರ್ಷ ಕೆಲಸ ಮಾಡಿದ್ದು ಶಿವಾಜಿನಗರದಲ್ಲಿ ಅವನಅಣ್ಣ ಇಂದಿಗೂ ವ್ಯಾಪಾರಿಯಾಗಿದ್ದಾನೆಂದು ತಿಳಿಸಿದ. ನಾವು ಬುಕ್ ಮಾಡಿರುವ ಹೋಟೆಲ್ ಮುನವಾರಬಾದ್ ನಲ್ಲಿ ಇದ್ದು ಹೋಗುವ ದಾರಿ ಕೇಳಿದಾಗ ಆತನೇ ದಾರಿ ತೋರಿಸಿ, ತನ್ನ ಕಾರ್ಡ್ ಕೊಟ್ಟು ಏನೇಸಹಾಯ ಬೇಕಾದರೂ ಒಂದು ಕಾಲ್ ಮಾಡಿ ಎಂದು ಹೇಳಿ ಹೊರಟುಹೋದ. ಆ ಮಹಾನುಭಾವನ ಹೆಸರು ಆಥರ್ ಖಾನ್.
ಹೋಟೆಲ್ ಆಜ಼ಾದ್ ಹೊರಗಡೆ ಸಾಲಾಗಿ ಕರ್ನಾಟಕ ರೆಜಿಸ್ಟ್ರೇಶನ್ ಬುಲ್ಲೆಟ್‌ಗಳು ನಿಂತಿದ್ದವು.ಸುಮಾರು 7-8 ಜನರ ಗುಂಪು ಕನ್ನಡಿಗರದ್ದು. ಅವರೊಂದಿಗೆ ಮಾತನಾಡಿದಾಗ ಅವರು ಮನಾಲಿಯಿಂದ- ಲೇಹ್ಹೋಗಿ ಸುತ್ತಾಡಿ ಶ್ರೀನಗರ ಬಂದಿರುವುದಾಗಿ ತಿಳಿಸಿದರು.ನಾಳೆ ಶ್ರೀನಗರ ಸುತ್ತ ಮುತ್ತ ಪ್ರೇಕ್ಷಣೀಯ ಸ್ಥಳಗಳನ್ನು ನೋಡಿ ನಾಡಿದ್ದು ಮುಂಜಾನೆ ಬುಲ್ಲೆಟ್‌ಗಳನ್ನು ಕಾರ್ಗೋ ಗೆ ಕೊಟ್ಟು ಫ್ಲೈಟ್ ಅಲ್ಲಿಬೆಂಗಳೂರಿಗೆ ಹೋಗುವುದಾಗಿ ತಿಳಿಸಿದರು. ಸ್ನಾನ ಮುಗಿಸಿ ಮುನವಾರಬಾದ್ ನಾ ಗಲ್ಲಿಯಲ್ಲಿ ಊಟ ಕ್ಕೆ ಹೊರಟೆವು. ಎಲ್ಲೆಡೆ ನಮ್ಮ ಇಷ್ಟದ ಪರಿಮಳ. ಯಾವುದೋ ಒಂದು ಹೋಟೆಲ್ ಗೆ ಹೋಗಿ ಬಿರಿಯಾನಿಮತ್ತು ಶೀಕ್ ಕಬಾಬ್ ತಿಂದು ಹೋಟೆಲ್ ಗೆ ಬಂದೆವು.ಟೀವೀ ಆನ್ ಮಾಡಿದಾಗ ಕನ್ನಡ ಚ್ಯಾನೆಲ್ ಗಳು ಒಂದು ಸಿಗಲಿಲ್ಲ. ಕಾಶ್ಮೀರದಲ್ಲಿ ಪ್ರೀಪೇಡ್ ಸಿಮ್ ಕಾರ್ಡ್ ಗಳು ನಡೆಯುವುದಿಲ್ಲ ಎಂದು ಮುಂಚೆಗೊತ್ತಿದ್ದರಿಂದ ಪೋಸ್ಟ್ಪೇಡ್ ಸಿಮ್ ಇದ್ದರೂ ಮುಂಜಾಗ್ರತೆಯಾಗಿ ಅಲ್ಲಿ ಸೈನಿಕ ನಾಗಿರುವ ಆಕಾಶ್ ನ ಗೆಳೆಯನ ಹತ್ತಿರ ಹಲವು ದಿನಗಳ ಮುಂಚೆಯೇ ಕಾಶ್ಮೀರದ ಒಂದು ಪೋಸ್ಟ್ಪೇಡ್ ಸಿಮ್ ತರಿಸಿಇಟ್ಟುಕೊಂಡಿದ್ದೆವು.
ಮಲಗುವಾಗ ಘಾಟಿಯ (ಅಲ್ಲಿಯ ಜನ ಕಾಶ್ಮೀರವನ್ನು ಘಾಟಿ ಎಂದು ಕರೆಯುವುದು) ರಸ್ತೆಗಳು ಮತ್ತೆ ಕಾಡುತ್ತಿದ್ದವು. ಬಂದ ದಾರಿಯ ನೆನಪು ಮತ್ತೆ ರೋಮಾಂಚನ ಉಂಟುಮಾಡಿತ್ತು. ಒಂದೆಡೆ ಪ್ರಪಾತ,ಇನ್ನೊಂದೆಡೆ ಹಸಿರು ಹೊದ್ದು ನಿಂತಿರುವ ಬ್ರಹತ್ ಗುಡ್ಡಗಳು. ಅವುಗಳನ್ನು ಕೊರೆದು ನಿರ್ಮಿಸಿದ ತಿರುವು ಮರುವಾದ ರಸ್ತೆಗಳು. ಇಂದಿಗೆ ನನ್ನ ಬುಲೆಟ್ ಖರೀದಿಸಿ 4 ವರ್ಷಗಳಾಯಿತು. ಅವಳ 4ನೇ ವರ್ಷದಹುಟ್ಟು ಹಬ್ಬಕ್ಕೆ ಈ ಘಾಟಿಯ ಸೌಂದರ್ಯವೇ ಉಡುಗೊರೆ ಎಂದು ಹೋಟೆಲ್ wi-fi ಬಳಸಿ ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದೆ. ಅಂದುಕೊಂಡಷ್ಟು ಚಳಿ, ಹಸಿರು ಎರಡೂ ಇರಲಿಲ್ಲ. ಆದರೂ ಘಾಟಿಮನಸೆಳೆದಿತ್ತು. ನಮ್ಮ ಪಶ್ಚಿಮ ಘಟ್ಟವನ್ನು ನಾಚಿಸುವ ಸೌಂದರ್ಯ ಇನ್ನೊಂದು ಇದೆ ಎಂಬ ಮಾತಿಗೆ ಇಂದು ಪುರಾವೆ ದೊರೆತಿತ್ತು.

ಮರುದಿನ ಮುಂಜಾನೆ ಎದ್ದು ಆಲೂ ಪರೋಟ ತಿಂದು, ಗುಲ್ಮಾರ್ಗ್ ಕಡೆ ಹೊರಟೆವು. ದಾರಿಯುದ್ದಕ್ಕೂ ಅಂಗಡಿಗಳಲ್ಲಿ ಆಪಲ್ ಗಳು. ಕಾಶ್ಮೀರ್ ವಿಲ್ಲೊವ್ ಇಂದ ಮಾಡಿದ ಕ್ರಿಕೆಟ್ ಬ್ಯಾಟ್ ಗಳು. ಗುಲ್ಮಾರ್ಗ್ ದಾರಿಯ ಎರಡು ಬದಿಗೆ ಬಣ್ಣ ಬಣ್ಣದ ಗುಲ್ ಹೂವಿನ ಅಲಂಕಾರ. ಗುಲ್ಮರ್ಗ್ ನಲ್ಲಿರೋ ಜಗತ್ತಿನ ಎರಡನೇ ಎತ್ತರದ ಕೇಬಲ್ ಕಾರ್ ನಲ್ಲಿ ಹೊರಟು ಮೇಲೆ ತಲುಪಿ, ಊಟ ಮುಗಿಸಿ ಆಪಲ್ತಿಂದು,ಕುದುರೆಯ ಸವಾರಿ ಮಾಡಿ ಸ್ವಲ್ಪ ಹೊತ್ತು ಅಲ್ಲೇ ಕಳೆದು ಹೋಟೆಲ್ ಕಡೆ ಹೊರಟಾಗ ದಾರಿಯುದ್ದಕ್ಕೂ ಸೈನಿಕರು. ಎಲ್ಲ ವಾಹನಗಳನ್ನು ಚೆಕ್ ಮಾಡುತ್ತಿದ್ದರು. ಪ್ರತಿಯೊಬ್ಬರ ಐಡೆಂಟಿಟೀಕಾರ್ಡ್‌ಗಳನ್ನು ನೋಡಿ ಮುಂದೆ ಬಿಡುತ್ತಿದ್ದರು.
ಏನಾಯಿತು ಎಂದು ಕೇಳಿದ್ದಕ್ಕೆ ಸೈನಿಕನೊಬ್ಬ 3-4 ಜನ ಉಗ್ರವಾದಿಗಳು ನುಸುಳಿದ್ದಾರೆ ಎಂಬ ಸಂದೇಶವಿದೆ. ಅದಕ್ಕಾಗಿ ಇವೆಲ್ಲ ಎಂದು ಹೇಳಿದರು. ಹೋಗಿ ಹೋಟೆಲ್ ಸೇರಿದಾಗ 4 ಘಂಟೆಯಾಗಿತ್ತು. ಮೊಬೈಲ್ ಅನ್ನು ಚಾರ್ಜ್ ಗೆ ಇಟ್ಟು ಸ್ವಲ್ಪ ಹೊತ್ತು ಮಲಗಿ ಸಂಜೆ 6:30 ರ ಹೊತ್ತಿಗೆ ಪಕ್ಕದಲ್ಲೇ ಇರುವ ಧಾಲ್ ಲೇಕ್ ಕಡೆಗೆ ಹೊರಟೆವು. ಕತ್ತಲಾಗಿದ್ದ ಕಾರಣ ಜಗತ್ ಪ್ರಸಿದ್ದ ಶಿಖಾರಾ ರೈಡ್ ಮಾಡಲುಸಮಯ ಸಮಂಜಸ ಎನಿಸಲಿಲ್ಲ. ಧಾಲ್ ಲೇಕ್ ಹತ್ತಿರ ಪಾನಿ ಪುರಿ ತಿನ್ನುವಾಗ ಅಮರನಾಥ್ ಯಾತ್ರೆ ಗೆ ಬಂದ ಬೆಂಗಳೂರಿನ ಗುಂಪೊಂದು ಸಿಕ್ಕಿತು. ಅವರೊಂದಿಗೆ ಕೆಲವು ಹೊತ್ತು ಮಾತನಾಡಿ ಎಲ್ಲತರಹದ ತಿಂಡಿಗಳನ್ನು ಟ್ರೈ ಮಾಡಿದೆವು. ಸುತ್ತಾಡಿ, ಕಾಶ್ಮೀರದ ಶಾಲು ಗಳು ಹಾಗೂ ಕೇಸರಿಗಳನ್ನು ಖರೀದಿಸಿ ಅಲ್ಲಿಂದ ಹೊರಟು ಹೋಟೆಲ್ ಕಡೆ ಬರುವಾಗ ಎಲ್ಲ ಅಂಗಡಿ ಮುಂಗಟ್ಟುಗಳು ಮುಚ್ಚಿವೆ. ಎಲ್ಲೆಡೆಕತ್ತಲು. ಮೊಬೈಲ್ ಇಂಟರ್‌ನೆಟ್ ವರ್ಕ್ ಆಗುತ್ತಿಲ್ಲ. ಅಲ್ಲಲ್ಲಿ ಸೈನಿಕರ ತುಕಡಿಗಳು, ಹೊಟ್ಟೆ ಹಸಿಯುತ್ತಿತ್ತು. ನಿನ್ನೆ ರಾತ್ರಿ ಹೋದ ಸ್ಟ್ರೀಟ್ ಗೆ ಹೋದರೆ ಸ್ಮಶಾನ ಮೌನ. ಜನರ ಗುಂಪೊಂದು ” ಅಬೇಹೆಡ್‌ಲೈಟ್ ಆಫ್ ಕರನಾ…” ಎಂದು ಕಿರುಚುತ್ತಿತ್ತು. ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ನಮ್ಮ ಹೋಟೆಲ್ ಕಡೆ ಹೊರಟೆವು. ಎಲ್ಲ ಜನರು ಗುಂಪಾಗಿ ಹೊರಗಡೆ ನಿಂತಿದ್ದರು.

ಎಲ್ಲೆಡೆ ಪವರ್ ಕಟ್. ಅಷ್ಟರಲ್ಲಿ ಆಥರ್ ಖಾನ್ ನ ಕಾಲ್ ಬಂತು ಅವನು ಹೇಳಿದ.” ನಾನು ಹೇಳುವುದನ್ನು ಸರಿಯಾಗಿ ಕೇಳಿ. ಜನರು ಟೂರಿಸ್ಟ್ ಗಳಿಗೆ ಏನು ತೊಂದರೆ ಮಾಡಲ್ಲ. ಆದರೂ ಹುಷಾರಾಗಿರಿ. ಆರ್ಮಿ ಯವರು ಬುರ್ಹಾನ್ ವಾಣಿ ಎಂಬ ಮಿಲಿಟಂಟ್ ನನ್ನು ಎನ್‌ಕೌಂಟರ್ ಮಾಡಿದ್ದಾರೆ. ಅದಕ್ಕಾಗಿ ಜನರೆಲ್ಲರೂ ರೊಚ್ಚಿಗೆದ್ದಿದ್ದಾರೆ. ನಾಳೆ ಕರ್ಫ್ಯೂ ಆಗುವ ಸಾದ್ಯತೆ ಇದೆ. ದಯವಿಟ್ಟು ಆದಷ್ಟು ಹೋಟೆಲ್ಒಳಗಡೆ ಇರಿ ಮತ್ತು ನಿಮ್ಮ ಬುಲೆಟ್ ಹಿಂದೆ ಹಾಕಿಸಿರುವ “ಈ ಪ್ರಯಾಣ ಸೈನಿಕರಿಗೆ ಅರ್ಪಣೆ” ಎಂಬ ಬೋರ್ಡ್ ಅನ್ನು ಬಟ್ಟೆಯಿಂದ ಕವರ್ ಮಾಡಿ. ನಾನು ಕಾಲ್ ಮಾಡುತ್ತಿರುತ್ತೇನೆ, ಹುಶಾರಾಗಿರಿ” ಎಂದುಹೇಳಿ ಕಾಲ್ ಕಟ್ ಮಾಡಿದ.
ಹೋಟೆಲ್ ಓನರ್ ಹತ್ತಿರ ಕೇಳಿದಾಗ ಪವರ್ ಕಟ್ ಎಲ್ಲಿಯ ವರೆಗೆ ಇರುತ್ತದೋ ಹೇಳಲು ಅಸಾಧ್ಯ. ನಾಳೆ ಕರ್ಫ್ಯೂ ಇರುವ ಚಾನ್ಸ್ ಇದೆ ಎಂದಾಗ, ನಮ್ಮ ಸ್ಟೇ ಎಕ್ಸ್‌ಟೆಂಡ್ ಮಾಡಿ ಎಂದು ಕೇಳಿಕೊಂಡೆವು. ಎಲ್ಲರ ಬಾಯಲ್ಲಿ ಬುರ್ಹಾನ್ ವಾನಿ ಎಂಬ ಹೆಸರು. ಹಾಗೋ ಹೀಗೊ ಮಾಡಿ ಹೋಟೆಲ್ ಒಳಗಡೆ ಇರುವ ರೆಸ್ಟೋರೆಂಟ್ ನಲ್ಲಿ ಧಾಲ್ ಮತ್ತು ಪರೋಟ ದೊರೆಯಿತು. ಅದರೊಂದಿಗೆ ಬೆಳಿಗ್ಗೆ ತಂದಿದ್ದ ಆಪಲ್ತಿಂದಾಗ ನನ್ನ ಬುಲೆಟ್ ನಲ್ಲಿ ಪೆಟ್ರೋಲ್ ಇಲ್ಲದಿರುವುದು ನೆನಪಾಯಿತು. ಸ್ಥಳೀಯರಲ್ಲಿ ವಿಚಾರಿಸಿದಾಗ 2-3 ದಿನ ಪೆಟ್ರೋಲ್ ಬಂಕ್ ಅಂತೂ ಓಪನ್ ಆಗುವುದಿಲ್ಲ, ಎಂದರು. ಪಕ್ಕದ ಪೆಟ್ರೋಲ್ ಬಂಕ್ಕ್ಲೋಸ್ ಮಾಡಿರುವ ರೀತಿ ನೋಡಿದರೆ ನಮಗೂ ಹೌದು ಎನಿಸಿತು. ರೋಡ್ ನಲ್ಲೆಲ್ಲ ಟೈಯರ್ ಸುಟ್ಟ ಹೊಗೆ. ಕಾಶ್ಮೀರದ ಕತ್ತಲು ಭಯಾನಕವಾಗಿತ್ತು. ಮೊಬೈಲ್ ಇಂಟರ್‌ನೆಟ್, ಹೋಟೆಲ್ wifi ಕೂಡ ಕನೆಕ್ಟ್ಆಗುತ್ತಿಲ್ಲ. ಎಲ್ಲ ಹೋಟೆಲ್‌ಗಳಲ್ಲಿ ಅಮರ್‌ನಾಥ್ ಯಾತ್ರೆಗೆ ಬಂದು ಸಿಕ್ಕಿ ಹಾಕಿಕೊಂಡಿರುವವರ ಗೋಳು. ನಮ್ಮ ಬೆಂಗಳೂರಿನ ಬುಲೆಟ್ ಗ್ಯಾಂಗ್ ನಾಳೆ ಬೆಳಿಗ್ಗೆ ಏರ್‌ಪೋರ್ಟ್ ಗೆ ಹೋಗಲಾಗದ ಪರಿಸ್ಥಿತಿ. ನಮ್ಮ ಬುಲೆಟ್ ಹಿಂದೆ ಹಾಕಿಸಿರುವ ಬೋರ್ಡ್ ಅನ್ನು ಬಟ್ಟೆಯಿಂದ ಕವರ್ ಮಾಡಿ, ಹೋಟೆಲ್ ಒಳಗಡೆ ಪಾರ್ಕ್ ಮಾಡಿ ರೂಮ್ ಗೆ ಬಂದು, ಕಿಟಕಿ ಓಪನ್ ಮಾಡಿ ಮಲಗಿದೆವು. ಸೆಕೆಗೆ ನಿದ್ದೆ ಬರಲಿಲ್ಲ. ಅಷ್ಟರಲ್ಲಿಫೋನ್ ರಿಂಗಾಯಿತು. ಮತ್ತೆ ಅದೇ ಆಪತ್ಭಾಂದವ ಆಥರ್ ಖಾನ್….
(ಮುಂದುವರೆಯುವುದು)

