Home / ಭಾವನೆಗಳ ಬಾಗಿಲು ತೆರೆದು / ಅಲೆಮಾರಿಗಳ ಜಗತ್ತಿನಲ್ಲಿ ಅಪರಿಚಿತರು ಯಾರು?(ಭಾಗ 15)

ಅಲೆಮಾರಿಗಳ ಜಗತ್ತಿನಲ್ಲಿ ಅಪರಿಚಿತರು ಯಾರು?(ಭಾಗ 15)

“ಯಾವ ಮೋಹನ ಮುರಳಿ ಕರೆಯಿತು…ದೂರ ತೀರಕೆ ನಿನ್ನನು….”ಹಾಡು ಕಿವಿಗೆ ಹಾಕಿಕೊಂಡಿರುವ ಇಯರ್ ಫೋನ್ ನಲ್ಲಿ ಗುನುಗುಡುತ್ತಿತ್ತು. ಪಾಂಗ್ ಹೋಗುವ ನಯ-ನಾಜೂಕಾದ ರಸ್ತೆಯಲ್ಲಿ ಬುಲೆಟ್ ನ ಮೀಟರ್ 100 ದಾಟಿದೆ. ಬೆಳಿಗ್ಗೆ ಎದ್ದು ಸ್ನಾನಮಾಡಿ , ಲಗೇಜ್ ಗಳನ್ನು ಪ್ಯಾಕ್ ಮಾಡಿಕೊಂಡು 7 ಘಂಟೆಗೆ ಕಟ್ಪಾ ರೆಸಿಡೆನ್ಸೀ ಗೆ ಅಲ್ವಿದಾ ಹೇಳಿ ಹೊರಟೆವು. ಲೇಹ್ ನಿಂದ ಸುಮಾರು 365 ಕೇಯೆಮ್ ವರೆಗೂ ಪೆಟ್ರೋಲ್ ಬಂಕ್ ಇಲ್ಲದಿರುವುದರಿಂದಾಗಿ, ಮುಂಚಿತವಾಗಿಯೇ ಬುಲ್ಲೆಟ್‌ಗಳು ಫುಲ್ಟ್ಯಾಂಕ್ ಆಗಿದ್ದವು. ಅದರೊಂದಿಗೆ ಮುಂಜಾಗ್ರತೆಯಾಗಿ ತಲಾ 10-10 ಲೀಟರ್ ಗಳಷ್ಟು ಪೆಟ್ರೋಲ್ ನಮ್ಮಿಬ್ಬರ ಬುಲೆಟ್ ಕರಿಯರ್ ನಲ್ಲಿರುವ ಕ್ಯಾನ್ ಗಳಲ್ಲಿ ತುಂಬಿಸಿ ಇಟ್ಟುಕೊಂಡಿದ್ದೆವು.

img_0606

ರಸ್ತೆಗಳು ದಿನಕ್ಕೊಂದು ಹೊಸ ಅನುಭವ ಕೊಡುವಂತೆ ಬೇರೆ ಬೇರೆಯಾಗಿದ್ದವು. ಲೇಹ್ ನಿಂದ ಪಾಂಗ್ ವರೆಗೂ ರಸ್ತೆ ಚೆನ್ನಾಗಿದೆ ಅಲ್ಲಿಂದ ಮುಂದೆ ಅಷ್ಟಕ್ಕಷ್ಟೇ ಎಂದು ಕೇಳಿ ತಿಳಿದಿದ್ದೆವು. ರಾಷ್ಟ್ರೀಯ ಹೆದ್ದಾರಿ 1 ಎಂದಾಗ ಮೊದಲು ಬಾರ್ಡರ್ ರೋಡ್ಆರ್ಗನೈಸೇಶನ್ ಬಗ್ಗೆ ಹೇಳಬೇಕು. ಗುಡ್ಡಗಳನ್ನು ಕೊರೆದು ನಿರ್ಮಿಸಿದ ಸುಸಜ್ಜಿತ ರಸ್ತೆಗಳಲ್ಲಿ ಪ್ರತಿಯೊಬ್ಬ ಪಯಣಿಗನಿಗೂ ಮನದಲ್ಲಿ ಅಚ್ಚಾಗುವ ಆ ಹೆಸರು ಬೀ. ಆರ್. ಒ. ಅದಕ್ಕೆ ಮುಖ್ಯ ಕಾರಣವೆಂದರೆ ಅಲ್ಲಲ್ಲಿ ಕಂಡುಬರುವ ಹಳದಿ ಬಣ್ಣದ ಸೂಚನಾಫಲಕಗಳು. ಕೆಲವೊಂದು ಸಂದೇಶಗಳನ್ನು ಭಾಷಾಂತರಿಸಲು ಪ್ರಯತ್ನಿಸಿದ್ದೇನೆ.

  • ನನ್ನ ತಿರುವು ಗಳನ್ನು ಅನುಭವಿಸು. ಪರೀಕ್ಷಿಸಬೇಡ.
  • ವಿಸ್ಕೀ ಯ ನಂತರ ಡ್ರೈವಿಂಗ್ ರಿಸ್ಕೀ.
  • ಗಾಸಿಫ್ ಮಾಡಬೇಡ…ಅವನು ಡ್ರೈವ್ ಮಾಡಲಿ.
  • ಡಾರ್ಲಿಂಗ್ ಐ ಲವ್ ಯೂ.. ಆದರೆ ಇಷ್ಟು ವೇಗವಲ್ಲ.
  • ನನ್ನ ತಿರುವು ಗಳಲ್ಲಿ ಮ್ರದುವಾಗಿರು.
  • ನೀನು ಮದುವೆಯಾಗಿದ್ದರೆ, ವೇಗಕ್ಕೆ ವಿಚ್ಛೇದನ ಕೊಡು.
  • ಗೇರ್ ಕಡಿಮೆ ಮಾಡು, ತಿರುವು ಹತ್ತಿರವಿದೆ.
  • ನರಕದಂತೆ ವಾಹನ ಚಲಾಯಿಸು.. ನೀನು ಅಲ್ಲಿ ತಲುಪುವೆ.
  • ಬೀ ಮಿಸ್ಟರ್ ಲೇಟ್ ದೆನ್ ಲೇಟ್ ಮಿಸ್ಟರ್.
  • ಉ..ಹಾ..ಔಚ್..ಗಳಿಗೆ ಕ್ಷಮೆಯಿರಲಿ. ಸಮಸ್ಯೆಗಾಗಿ ವಿಷಾದಿಸುತ್ತೇವೆ.

ಹೀಗೆ ಬೋರ್ಡ್ ಗಳನ್ನು ಓದುತ್ತಲೇ ಪಾಂಗ್ ತಲುಪಿದ್ದು ಗೊತ್ತಾಗಲಿಲ್ಲ. ಗುಡ್ಡಗಳ ಆಚೆ ಬಾಗಿರುವ ಹಿಮಶಿಖರ. ಮನಾಲಿ ಕಡೆಯಿಂದ ಲೇಹ್ ಕಡೆಗೆ ಬರುತ್ತಿರುವ ನೂರಾರು ಬೈಕರ್ ಗಳ ಗುಂಪುಗಳು. ಎಲ್ಲೋ ಮಳೆ ಬರುವ ಸೂಚನೆ ದೂರದಲ್ಲಿ. ಹಾವಿನಂತೆ ಸುತ್ತಿರುವ ರಸ್ತೆಗಳ ಹೇರ್ ಪಿನ್ ಕರ್ವ್ ಗಳನ್ನು ದಾಟಿಕೊಂಡು ಬಂದು ಮೇಲೆ ನಿಂತು, ಕೆಳಗಿನ ರಸ್ತೆಯ ಚಿತ್ತಾರವನ್ನು ವೀಕ್ಷಿಸಿದಾಗ ಸಿಗುವ ಮಜ಼ವೇ ಬೇರೆ. “ಇದೇ.. ಬೈಕರ್ ಗಳ ಸ್ವರ್ಗ…ದೀರ್ಘ ಧ್ಯಾನ…”

img_8682

ಕೆಲವು ಕ್ಷಣಗಳ ಆಫ್ ರೋಡಿಂಗ್ ನಂತರ ಡೇಬರಿಂಗ್ ಎಂಬ ಸ್ಥಳ ತಲುಪಿದೆವು. ಮನೆಯಂತಹ ಆ ಚಿಕ್ಕ ಹೋಟೆಲ್ ನಲ್ಲಿ ಬ್ರೆಡ್ ಆಮ್ಲೆಟ್ ಹಾಗೂ ಮ್ಯಾಗಿ ಆರ್ಡರ್ ಮಾಡಿದೆವು. ಅಡಿಗೆ ಮಾಡುವ ಮಹಿಳೆ ಉಪ್ಪು ಹೇಗಿರಬೇಕು? ಖಾರ ಹೇಗಿರಬೇಕು? ತರಕಾರಿ ಗಳು ಎಷ್ಟಿರಬೇಕು? ಎಂದೆಲ್ಲ ವಿವರವಾಗಿ ಕೇಳಿಕೊಂಡು ಹೋಗಿ ಒಂದು ಸ್ವಾದಿಷ್ಟ ಮ್ಯಾಗಿ ತಂದು ನಮ್ಮ ಮುಂದಿಟ್ಟಳು. ಅಷ್ಟರಲ್ಲಿ ವಿದೇಶಿ ಪ್ರಜೆಗಳಿಬ್ಬರನ್ನು ಲಡಾಖ್ ಟ್ರೆಕಿಂಗ್ ಗೆ ಕರೆದುಕೊಂಡು ಹೋಗಿ ಬಂದ ಸ್ಥಳೀಯಮಾರ್ಗದರ್ಶಕರೊಬ್ಬರು ಅದೇ ಹೋಟೆಲ್ ಗೆ ಬಂದು ಕುಳಿತರು. ಅವರ ಹೆಸರು ಪಸಂಗ್.. ಮಾತು ಬೆಳೆದು ಸ್ನೇಹವಾಗಲು ಸಮಯ ಹಿಡಿಯಲಿಲ್ಲ. ಅಲ್ಲಿನ ಸುತ್ತಮುತ್ತಲಿನ ಸೌಂದರ್ಯಗಳ ಬಗ್ಗೆ ವಿವರಿಸಿದರು. ಅವರ ಮಾತು ಕೇಳಿ ಮುಂದಿನ ಸಾರಿಬಂದಾಗ ಅವರೊಡನೆ ಹೋಗಬೇಕು ಎಂದು ನಿರ್ಧಾರ ಕೂಡ ಮಾಡಲಾಯಿತು.

img_0550

ಪರಸ್ಪರ ಮೊಬೈಲ್ ನಂಬರ್ ಚೇಂಜ್ ಮಾಡಿಕೊಂಡು ಅವರೊಂದಿಗೆ ಸೆಲ್ಫಿ ತೆಗೆಸಿಕೊಂಡು ಅಲ್ಲಿಂದ ಹೊರಟೆವು. ಆದಷ್ಟು ಬೇಗ ಮನಾಲಿ ತಲುಪಬೇಕು ಎಂದುಕೊಂಡು ಹೊರಟರೆ, ರಸ್ತೆ ಅಷ್ಟು ಚೆನ್ನಾಗಿರಲಿಲ್ಲ. ಮುಂಚೆ ಇದ್ದ ಪ್ಲಾನ್ ಪ್ರಕಾರವಾಗಿ ನಾವುಸರ್ಚುವಿನಲ್ಲಿ ಒಂದು ದಿನ ಉಳಿದುಕೊಂಡು ಮರುದಿನ ಮಾಣಲಿ ತಲುಪಬೇಕಿತ್ತು. ಕೆಲವೊಮ್ಮೆ ಸಂಜೆಯ ಹೊತ್ತು ತಾಪಮಾನ ತೀರಾ ಕಡಿಮೆಗೆ ಹೋಗುತ್ತದೆ ಎಂದು, ಅಲ್ಲಿ ತಂಗುವುದು ಸೂಕ್ತವಲ್ಲ ಎಂದು ನಮ್ಮ ಹಳೆಯ ಹೋಟೆಲ್ ನಲ್ಲಿ ಸಿಕ್ಕಗೆಳೆಯರೊಬ್ಬರು ಹೇಳಿರುವುದರಿಂದ ನೇರವಾಗಿ ಮನಾಲಿಗೆ ಹೋಗುವುದು ಒಳ್ಳೆಯದೆಂದು ನಿರ್ಧರಿಸಿದ್ದೆವು.

ಮನಾಲಿ ಇನ್ನೂ 150 km  ದೂರವಿತ್ತು. ನಮ್ಮ ದೈನಂದಿನ ಎಣಿಕೆಯ ಪ್ರಕಾರ ಅಬ್ಬಬ್ಬಾ ಎಂದರೆ 3 ರಿಂದ 4 ಘಂಟೆ. ಆದರೆ ಅಂದುಕೊಂಡಂತೆ ಯಾವುದು ಆಗಲಿಲ್ಲ. ಸಂಜೆ ಆಗುತ್ತಿದ್ದಂತೆ ಸೂರ್ಯ ಕೆಂಪಾದಂತೆ, ಬೆಳಿಗ್ಗೆಯಿಂದ ಬಿಸಿಲಿನ ಬೇಗೆಗೆ ಕಾದು , ಹಿಮಗಳು ನೀರಾಗಿ ರಸ್ತೆಯಲ್ಲೆಲ್ಲಾ ಹರಿಯುತ್ತಿದ್ದವು. ಅಲ್ಲಲ್ಲಿ ಸಿಗುವ ಚಿಕ್ಕ ತೊರೆಗಳನ್ನು ದಾಟಿ ಹೋಗುವುದೇ ದೊಡ್ಡ ಸಮಸ್ಯೆಯಾಗಿತ್ತು. ನಮಗೆ ಇದರ ಬಗ್ಗೆ ಅರಿವು ಇರಲಿಲ್ಲ  ಯಾರೂ ಕೂಡ ಹೇಳಿರಲಿಲ್ಲ. ಯಾವುದೇ ಬ್ಲಾಗ್ ಗಳಲ್ಲಿ ಓದಿರಲಿಲ್ಲ. ಅಲ್ಲಿಗೆಹಿಮಾಚಲದ ಗಡಿ ದಾಟಿದ್ದೆವು. ಲಡಾಖಿನ ಮಣ್ಣಿನ ಗುಡ್ಡ ಹಾಗೂ ಹಿಮಗಡ್ಡೆ ಯ ಅಲಂಕಾರ ಹಿಮಾಚಲದಲ್ಲಿ ಹಸಿರು ಹೊದ್ಡಿತ್ತು. ಹಿಮಾಚಲದ ಗಡಿಯಿಂದ ಶುರುವಾದ ಹಸಿರು -ಮಣ್ಣು – ಹಿಮದ ರಾಶಿಗಳು, ಹಿಮಾಚಲ ಪ್ರದೇಶವನ್ನು ವಿಭಿನ್ನವಾಗಿತೋರಿಸಿದವು.

img_0536

ಒಂದು ಕಡೆಯಂತೂ ನನ್ನ ಬುಲೆಟ್ ನಾ ಟೈಯರ್ ನೀರಿನ ಮಧ್ಯದಲ್ಲಿ ಯಾವುದೋ ಕಲ್ಲಿಗೆ ಸಿಕ್ಕಿ ಹಾಕಿಕೊಂಡಿದ್ದರಿಂದ ಇಳಿದು ಅದನ್ನು ಗೇರ್ ನಲ್ಲಿ ನಡೆಸಿಕೊಂಡು ದಾಟಿಸಿದಾಗ ಸುಸ್ತಾಗಿತ್ತು. ಶೂಸ್, ಸಾಕ್ಸ್ ಎಲ್ಲ ಒದ್ದೆಯಾಗಿ ಸ್ವಲ್ಪ ಸಮಯವ್ಯರ್ಥವಾಯಿತು. ಕೊನೆಗೂ 105km ದೂರವಿರುವ ಕೇಯ್ಲೊಂಗ್ ತಲುಪಲು ನಮಗೆ 4 ಘಂಟೆ ಬೇಕಾಯಿತು. ಸ್ಪಿತಿಯಲ್ಲಿ  ಬ್ರಿಡ್ಜ್ ದಾಟಿದ ಮೇಲೆ ಚಹಾ ಕುಡಿಯಲು ನಿಲ್ಲಿಸಿದೆವು. ಧಾಬಾಗಳಂತೆ ಇರುವ  ಎಲ್ಲ ಹೋಟೆಲ್‌ಗಳಲ್ಲೂ ಉಳಿಯುವ ವ್ಯವಸ್ಥೆಇತ್ತು. ತಲಾ 100 ರೂ ನಂತೆ ಚಾರ್ಜ್ ಮಾಡುತ್ತಿದ್ದರು. ಪಾರ್ಕಿಂಗ್ ವ್ಯವಸ್ಥೆ ಸರಿಯಾಗಿ ಇಲ್ಲದಿದ್ದ ಕಾರಣ , ಹಾಗೂ ಲಗೇಜ್ ತುಂಬಾ ಇರುವುದರಿಂದ ಕೇಯ್ಲೊಂಗ್ ನಗರದ ಒಳಗೆ ಹೋಗಿ ಯಾವುದಾದರೂ ಹೋಟೆಲ್‌ಗಳನ್ನು ಹುಡುಕೋಣ ಎಂದುನಿರ್ಧರಿಸಿದೆವು.

ಮುಖ್ಯ ರಸ್ತೆಯಿಂದ ಒಳಗಡೆ ಹೊರಟು, ಕೇಯ್ಲೊಂಗ್ ಶಹರದಲ್ಲಿ ಹೋಗಿ ನೋಡಿದರೆ ಅದಿಂದು ಪುಟ್ಟ ಗುಡ್ಡಗಾಡು ಪ್ರದೇಶ. ಇರುವ ಎರಡು ಹೋಟೆಲ್‌ಗಳು ಫುಲ್ ಆಗಿದ್ದವು. ಮೊಬೈಲ್ ನೆಟ್‌ವರ್ಕ್ ಕೂಡ ಸಿಗುತ್ತಿರಲಿಲ್ಲ.

(ಮುಂದುವರೆಯುವುದು………….)

Leave a Reply

Your email address will not be published. Required fields are marked *